ಏನಾದರು ಘಟನೆ ನಡೆದಾಗ ಏಕಾಏಕಿ ಆರೋಪಿಗಳ ಮನೆ ಕೆಡವುವ ರಾಜ್ಯ ಸರ್ಕಾರಗಳ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ರಾಷ್ಟ್ರ ಮಟ್ಟದಲ್ಲಿ ಏಕರೂಪದ ಮಾರ್ಗಸೂಚಿ ರೂಪಿಸಲು ಮುಂದಾಗಿದೆ.
ಆರೋಪಿಗಳ ಮನೆಗಳನ್ನು ಕೆಡವುವ ‘ಬುಲ್ಡೋಝರ್ ಕಾರ್ಯಾಚರಣೆ’ಯ ವಿರುದ್ದ ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ, ರಾಷ್ಟ್ರ ಮಟ್ಟದಲ್ಲಿ ಮಾರ್ಗಸೂಚಿಗಳನ್ನು ರೂಪಿಸಲು ನ್ಯಾಯಾಲಯವು ಪರಿಗಣಿಸಬಹುದಾದ ಕರಡು ಸಲಹೆಗಳನ್ನು ಸಲ್ಲಿಸುವಂತೆ ಕಕ್ಷಿದಾರರನ್ನು ಕೇಳಿದೆ. ಸಲಹೆಗಳನ್ನು ಹಿರಿಯ ವಕೀಲ ನಚಿಕೇತ ಜೋಶಿ ಅವರಿಗೆ ಸಲ್ಲಿಸಬೇಕಿದ್ದು, ಅವರು ಅವುಗಳನ್ನು ಕ್ರೋಡೀಕರಿಸಿ ನ್ಯಾಯಾಲಯಕ್ಕೆ ನೀಡಬೇಕು ಎಂದು ಆದೇಶಿಸಿದೆ.
ವಿಚಾರಣೆಯನ್ನು ಎರಡು ವಾರದ ಅವಧಿಗೆ ಮುಂದೂಡಿರುವ ನ್ಯಾಯಪೀಠ, ನಾವು ರಾಷ್ಟ್ರ ಮಟ್ಟದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸೋಣ ಎಂದಿದೆ.
“ಆರೋಪಿಯಾದ ಮಾತ್ರಕ್ಕೆ ಮನೆ ಕೆಡವಲು ಹೇಗೆ ಸಾಧ್ಯ? ಅಪರಾಧಿಯಾಗಿದ್ದರೂ ಮನೆ ಕೆಡವಲು ಸಾಧ್ಯವಿಲ್ಲ. ನ್ಯಾಯಾಲಯವು ಅನಧಿಕೃತ ನಿರ್ಮಾಣಗಳನ್ನು ರಕ್ಷಿಸುವುದಿಲ್ಲ. ಆದರೆ, ಅದನ್ನು ಕೆಡವಲು ಕೆಲವು ಮಾರ್ಗಸೂಚಿಗಳು ಅಗತ್ಯವಿದೆ” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೇಶದಾದ್ಯಂತ ‘ಬುಲ್ಡೋಝರ್ ಕಾರ್ಯಚರಣೆ’ ನಡೆಯದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಕೋರಿದರು.
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಆರೋಪಿ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಸ್ಥಿರ ಆಸ್ತಿಯನ್ನು ನೆಲಸಮ ಮಾಡಲಾಗುವುದಿಲ್ಲ. ಕಟ್ಟಡವು ಕಾನೂನು ಬಾಹಿರವಾಗಿದ್ದರೆ ಮಾತ್ರ ನೆಲಸಮ ಮಾಡಲಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.


