“ತಂದೆ ಇಲ್ಲದ ಮಕ್ಕಳ ಖಾತೆಗೆ ಒಂದು ವರ್ಷ 24,000 ರೂ.ಗಳ ಸ್ಕಾಲರ್ ಶಿಪ್ ಸೌಲಭ್ಯವಿದ್ದು, ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಗು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ. ಇದು ಆನ್ಲೈನ್ ಮೂಲಕ ಅಂದರೆ ಯಾವುದೇ ಸೈಬರ್ ಮೂಲಕ ಸಲ್ಲಿಕೆ ಇರುವುದಿಲ್ಲ. ಮಗುವಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸು ಇರಬೇಕು. ಅರ್ಜಿ ಫಾರಂನ್ನು ಖುದ್ದಾಗಿ ಡಿಸಿ ಕಛೇರಿಯಿಂದ ತಂದು ಬೇಕಾಗುವ ದಾಖಲೆಗಳನ್ನು ಇಟ್ಟು ಶಾಲೆ ಅಥವಾ ಕಾಲೇಜು ಮುಖ್ಯೋಪಾಧ್ಯಾಯ/ ಪ್ರಾಂಶುಪಾಲರ ಸಹಿ ಮತ್ತು ಸೀಲ್ ಮಾಡಿದ ಮೇಲೆ ಪುನಃ ಡಿಸಿ ಆಫೀಸಿಗೆ ಸಲ್ಲಿಸಬೇಕು. ನಂತರ ಅವರ ಸಿಬ್ಬಂದಿಗಳು ಮನೆ ಭೇಟಿ ನೀಡಿ ಪರಿಶೀಲನೆ ಮಾಡಿದ ಮೇಲೆ ಯೋಜನೆ ಪ್ರಾರಂಭವಾಗುತ್ತದೆ”
ಈ ರೀತಿಯ ಸಂದೇಶವೊಂದು ವಿವಿಧ ಜಿಲ್ಲೆಗಳ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗಳ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.

ಈ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ.
ಫ್ಯಾಕ್ಟ್‌ಚೆಕ್ : ಆರಂಭದಲ್ಲಿ ಉತ್ತರ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯ ಹೆಸರಿನಲ್ಲಿರುವ ಸಂದೇಶ ನಮಗೆ ವಾಟ್ಸಾಪ್‌ನಲ್ಲಿ ಲಭ್ಯವಾಗಿತ್ತು. ಆದ್ದರಿಂದ ನಾವು ಉತ್ತರ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಲ್ ಅವರಿಗೆ ಕರೆಮಾಡಿ ಮಾಹಿತಿ ಪಡೆದಿದ್ದೇವೆ.
ಸೋನಲ್ ಐಗಲ್ ಅವರು ನೀಡಿರುವ ಮಾಹಿತಿ ಪ್ರಕಾರ, “ಕೇಂದ್ರ ಸರ್ಕಾರದ ಶೇ.60 ಅನುದಾನ ಮತ್ತು ರಾಜ್ಯ ಸರ್ಕಾರದ ಶೇ. 40 ಅನುದಾನೊಂದಿಗೆ ಪ್ರಾಯೋಜಕತ್ವ ಯೋಜನೆಯೊಂದು ಜಾರಿಯಲ್ಲಿದೆ. ಈ ಯೋಜನೆಯಡಿ ಅನಾಥ ಮಕ್ಕಳು, ಪೋಷಕರು ಜೈಲಿನಲ್ಲಿರುವ ಮಕ್ಕಳು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿ ಪದ್ದತಿಗೆ ಒಳಗಾಗಿರುವವ ಮಕ್ಕಳು, ಏಕ ಪೋಷಕ (ತಂದೆ ಅಥವಾ ತಾಯಿ) ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳು, ಭಿಕ್ಷುಕರ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮಕ್ಕಳು ಮತ್ತು ಶಿರೂರು ದುರಂತದಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವವರ ಮಕ್ಕಳಿಗೆ ಧನ ಸಹಾಯ ನೀಡಲಾಗುತ್ತದೆ. ಮೇಲೆ ಉಲ್ಲೇಖಿಸಿದ ಮಕ್ಕಳ ಶಿಕ್ಷಣ, ಆರೋಗ್ಯ ಸುಧಾರಣೆ ಮತ್ತು ಅವರನ್ನು ಬಾಲ ಕಾರ್ಮಿಕ ಪದ್ದತಿಯಿಂದ ತಡೆಯುವ ಉದ್ದೇಶದಿಂದ ಈ ಪ್ರಾಯೋಜಕತ್ವ ಯೋಜನೆ ರೂಪಿಸಲಾಗಿದೆ.
ಗಮನಿಸಿ : ವೈರಲ್ ಸಂದೇಶದಲ್ಲಿ ‘ತಂದೆ ಇಲ್ಲದ ಮಕ್ಕಳಿಗೆ ‘ಎಂದು ಉಲ್ಲೇಖಿಸಲಾಗಿದೆ. ಆದರೆ, ಅದು ತಪ್ಪು ಮಾಹಿತಿ. ಈ ಯೋಜನೆಯ ಅರ್ಹರು ಯಾರೆಂದು ನಾವು ಮೇಲೆ ತಿಳಿಸಿದ್ದೇವೆ.
ವಾರ್ಷಿಕ 24 ಸಾವಿರ ಸ್ಕಾಲರ್ ಶಿಪ್ ಸಿಗುತ್ತಿದೆ ಎಂದೂ ವೈರಲ್ ಸಂದೇಶದಲ್ಲಿದೆ. ಆದರೆ, ಅದು ತಪ್ಪು ಮಾಹಿತಿ, ಸೋನಲ್ ಐಗಲ್ ಅವರು ಹೇಳಿರುವಂತೆ ಮಾಸಿಕ 4 ಸಾವಿರ ರೂಪಾಯಿಯಂತೆ ವಾರ್ಷಿಕ 48 ಸಾವಿರ ರೂಪಾಯಿ ಧನ ಸಹಾಯ ಸಿಗುತ್ತದೆ. 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಹರು. ಅರ್ಹರು ಅವರಾಗಿಯೇ ಅರ್ಜಿ ಸಲ್ಲಿಸಬಹುದು ಅಥವಾ ಸಿಬ್ಬಂದಿಯ ಮೂಲಕ ಇಲಾಖೆಯೇ ಅರ್ಹರನ್ನು ಪತ್ತೆ ಮಾಡುತ್ತದೆ.
ಅರ್ಜಿಗಳನ್ನು ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು ಅಥವಾ ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೂಲಕವೂ ನೀಡಬಹುದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಯಿಲ್ಲ, ಕೇವಲ ಆಫ್‌ಲೈನ್ ಮೂಲಕ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಸ್ಟೇಟ್‌ಮೆಂಟ್, ಮಗುವಿನ ಜನನ ಪ್ರಮಾಣ ಪತ್ರ, ತಂದೆ ತಾಯಿ ನಿಧರಾಗಿದ್ದರೆ ಅವರ ಮರಣ ಪ್ರಮಾಣ ಪತ್ರ ಬೇಕಿದೆ. ಸಲ್ಲಿಕೆಯಾದ ಅರ್ಜಿಯನ್ನು ಮಕ್ಕಳ ರಕ್ಷಣಾ ಇಲಾಖೆ ಆಂತರಿಕವಾಗಿ ಪರಿಶೀಲನೆ ಮಾಡುತ್ತದೆ ಮತ್ತು ಅರ್ಜಿ ಸಲ್ಲಿಸಿದವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಾರೆ. ಬಳಿಕ ಅರ್ಹರನ್ನು ಯೋಜನೆಗೆ ಆಯ್ಕೆ ಮಾಡಲಾಗುತ್ತದೆ.
ಈ ಹಿಂದೆ ಯೋಜನೆಯ ಅವಧಿ ಮೂರು ವರ್ಷ ಇತ್ತು. ಈಗ ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಪ್ರಸ್ತುತ ಒಂದು ಮಗುವಿಗೆ ಒಂದು ವರ್ಷದವರೆಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ. ತೀರ ಅನಿವಾರ್ಯವಿದ್ದರೆ ಮೂರು ವರ್ಷದವರೆಗೆ ಮುಂದುವರೆಸಲಾಗುತ್ತದೆ.
ವರ್ಷಕ್ಕೆ ಒಂದು ಬಾರಿ ಮಾತ್ರ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ 200 ಮತ್ತು ಈ ವರ್ಷ 300 ಮಕ್ಕಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ ಎಂದು ಸೋನಲ್ ಐಗಲ್ ಹೇಳಿದ್ದಾರೆ.
ಒಟ್ಟಿನಲ್ಲಿ, ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸಂದೇಶಲ್ಲಿ ಹೇಳಿರುವಂತೆ 18 ವರ್ಷದೊಳಗಿನ ಮಕ್ಕಳಿಗೆ ಧನ ಸಹಾಯ ನೀಡುವ ಯೋಜನೆ ಜಾರಿಯಲ್ಲಿರುವುದು ನಿಜ. ಆದರೆ, ಅದು ತಂದೆಯಿಲ್ಲದ ಮಕ್ಕಳಿಗೆ ಮಾತ್ರ ಇರುವ ಯೋಜನೆಯಲ್ಲ. ಹಲವು ಅರ್ಹರು ಯೋಜನೆಯ ಲಾಭ ಪಡೆಯಬಹುದು. ಅಲ್ಲದೆ, ವಾರ್ಷಿಕವಾಗಿ 48 ಸಾವಿರ ರೂ. ಧನ ಸಹಾಯ ಸಿಗುತ್ತದೆ.
ಇದನ್ನೂ ಓದಿ : FACT CHECK : ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ‘ಅಕ್ರಮ ರಾಷ್ಟ್ರ’ವೆಂದು ಘೋಷಿಸಿರುವುದು ನಿಜಾನಾ?



Please check
This schemes is only for Uttara kannada district or All districts of Karnataka?
ಈ ಯೋಜನೆ ಎಲ್ಲಾ ಜಿಲ್ಲೆಗಳಿಗೆ ಅನ್ವಯಿಸುತ್ತದೆ (For All Districts)
Mahesh v
My father is death
Heart attack
My father name is parasappa
Plese my education pee I needed in college education
🥹🙏