“ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಅಕ್ರಮ ರಾಷ್ಟ್ರವೆಂದು ಘೋಷಿಸಿದೆ. ಅದನ್ನು ವಿಶ್ವದಾದ್ಯಂತ ಸಾರ್ವಭೌಮ ರಾಷ್ಟ್ರವೆಂದು ಗುರುತಿಸಬಾರದು ಎಂದು ನಿರ್ಧರಿಸಲಾಯಿತು. ಕೊನೆಗೂ ನ್ಯಾಯವೇ ಮೇಲುಗೈ ಸಾಧಿಸಿತು. ಅಲ್ ಹಮ್ದುಲಿಲ್ಲಾಹ್ ದಯವಿಟ್ಟು ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಿ. ಧನ್ಯವಾದಗಳು” ಎಂಬ ಸಂದೇಶವೊಂದು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.
ಸಂದೇಶದ ಜೊತೆಗೆ ಟಿಆರ್‌ಟಿ ವರ್ಲ್ಡ್ ಸುದ್ದಿ ಸಂಸ್ಥೆಯ ವಿಡಿಯೋ ಒಂದಿದ್ದು, ಅದರಲ್ಲಿ ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಾಲಿಕಿ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ಕುರಿತು ಮಾತನಾಡಿರುವುದು ಇದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾವು ಅದರ ಮೂಲ ವಿಡಿಯೋವನ್ನು ಹುಡುಕಿದ್ದೇವೆ. ಈ ವೇಳೆ ಜುಲೈ 19,2024ರಂದು ಟಿಆರ್‌ಟಿ ವರ್ಲ್ಡ್ ಸುದ್ದಿ ಸಂಸ್ಥೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಆಗಿರುವ ವಿಡಿಯೋ ದೊರೆತಿದೆ. ವಿಡಿಯೋದ ಶೀರ್ಷಿಕೆಯಲ್ಲೇ “Palestinian Foreign Minister Riyad al Maliki briefs media after ICJ ruling on Israel’s occupation (ಇಸ್ರೇಲ್ ಆಕ್ರಮಣದ ಬಗ್ಗೆ ಐಸಿಜೆ ತೀರ್ಪಿನ ನಂತರ ಪ್ಯಾಲೇಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಾಲಿಕಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು) ಎಂದಿದೆ.
ವಿಡಿಯೋದಲ್ಲಿ ರಿಯಾದ್ ಅಲ್ ಮಾಲಿಕಿಯವರು “ಅಂತಾರಾಷ್ಟ್ರೀಯ ನ್ಯಾಯಾಲಯ ಪ್ಯಾಲೆಸ್ತೀನ್‌ನಲ್ಲಿ(ಗಾಝಾದಲ್ಲಿ) ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ಕಾನೂನುಬಾಹಿರ, ಅಂತಾರಾಷ್ಟ್ರೀಯ ಕಾನೂನುಗಳು ಹಾಗೂ ಮಾನವ ಹಕ್ಕುಗಳ ವಿರುದ್ದ ಎಂದಿದೆ. ಅಲ್ಲದೆ, ತಕ್ಷಣ ದಾಳಿ ನಿಲ್ಲಿಸುವಂತೆ ಸೂಚಿಸಿದೆ. ಆಕ್ರಮಿತ ಪ್ಯಾಲೆಸ್ತೀನ್ ಭೂ ಪ್ರದೇಶಗಳಲ್ಲಿ (ಪಶ್ಚಿಮ ದಂಡೆ, ಜೆರುಸಲೇಂ) ನಡೆಸುತ್ತಿರುವ ಕಾರ್ಯಚರಣೆಯನ್ನೂ ಅಕ್ರಮ ಎಂದಿದೆ. ಇದು ಪ್ಯಾಲೆಸ್ತೀನ್‌ಗೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಸಿಕ್ಕ ಅಭೂತಪೂರ್ವ ಜಯ” ಎಂದು ಹೇಳಿರುವುದು ಇದೆ.
ಪ್ಯಾಲೆಸ್ತೀನ್ ಭೂ ಪ್ರದೇಶಗಳಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯ ವಿರುದ್ದ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು ಮತ್ತು ಅದಕ್ಕೆ ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಾಲಿಕಿ ಪ್ರತಿಕ್ರಿಯಿಸಿರುವ ಕುರಿತು ಜುಲೈ 20, 2024ರಂದು palestinechronicle.com ವರದಿ ಪ್ರಕಟಿಸಿತ್ತು.
ಒಟ್ಟಿನಲ್ಲಿ, ಗಾಝಾ ಸೇರಿದಂತೆ ಪ್ಯಾಲೆಸ್ತೀನ್ ಭೂ ಪ್ರದೇಶಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ವಿರುದ್ದ ಅಂತಾರಾಷ್ಟ್ರೀಯ ನ್ಯಾಯಾಲಯ ಜುಲೈ ತಿಂಗಳಲ್ಲಿ ತೀರ್ಪು ನೀಡಿತ್ತು. ಆ ಬಗ್ಗೆ ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಾಲಿಕಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಅದರ ವಿಡಿಯೋವನ್ನು ಹಂಚಿಕೊಂಡು “ಅಂತಾರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್ ಅನ್ನು ‘ಅಕ್ರಮ ರಾಷ್ಟ್ರ’ವೆಂದು ಘೋಷಿಸಿದೆ” ಎಂಬುವುದಾಗಿ ಸಂದೇಶ ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಅಕ್ರಮ, ಕಾನೂನುಬಾಹಿರ ಎಂದಿದೆಯೇ ಹೊರತು, ಸಂಪೂರ್ಣ ಇಸ್ರೇಲ್ ಅನ್ನೇ ಅಕ್ರಮ ರಾಷ್ಟ್ರ ಎಂದಿಲ್ಲ.
ಇದನ್ನೂ ಓದಿ : FACT CHECK : ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಮುಂದೆ ಎಸೆದ ಮುಸ್ಲಿಂ ಯುವಕರಿಗೆ ಪೊಲೀಸರು ಥಳಿಸಿದ್ದಾರೆ ಎಂಬುವುದು ಸುಳ್ಳು