ರಾಜಸ್ಥಾನದಲ್ಲಿ ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಮುಂಭಾಗ ಎಸೆದ ಮುಸ್ಲಿಂ ಯುವಕರಿಗೆ ಪೊಲೀಸರು ಥಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.
“ರಾಜಸ್ಥಾನದ ಭಿಲ್ವಾರದಲ್ಲಿ 25 ಆಗಸ್ಟ್ 24ರಂದು ಹಸುವಿನ ಬಾಲ ಕತ್ತರಿಸಿ ದೇವಸ್ಥಾನ ಬಾಗಿಲಿಗೆ ಎಸೆದ ಮುಸ್ಲಿಂ ಸಮುದಾಯದ 8 ದಾರಿ ತಪ್ಪಿದ ಯುವಕರಿಗೆ ರಾಜಸ್ಥಾನ ಪೊಲೀಸರು ಆತಿಥ್ಯವನ್ನು ನೀಡಿದರು” ಎಂದು ಆಗಸ್ಟ್ 31ರಂದು ಮಲ್ಲಿಕಾರ್ಜುನ (@Mallika52160729) ಎಂಬ ಎಕ್ಸ್ ಬಳಕೆದಾರ ವಿಡಿಯೋ ಹಂಚಿಕೊಂಡಿದ್ದರು.
ಅದೇ ವಿಡಿಯೋವನ್ನು ಜ್ಞಾನ್ ಪ್ರಕಾಶ್ ಓಜಾ (@gyanprakashoj) ಎಂಬ ಎಕ್ಸ್ ಬಳಕೆದಾರ ಆಗಸ್ಟ್ 31, 2024ರಂದು ಹಂಚಿಕೊಂಡು “ರಾಜಸ್ಥಾನದ ಭಿಲ್ವಾರಾದಲ್ಲಿ ಆಗಸ್ಟ್ 25, 2024 ರಂದು ಪೊಲೀಸರು ಹಸುವಿನ ಬಾಲವನ್ನು ಕತ್ತರಿಸಿ ದೇವಾಲಯದ ಬಾಗಿಲಿಗೆ ಎಸೆದ ‘ಶಾಂತಿದೂತ’ ಸಮುದಾಯದ 8 ಜಿಹಾದಿ ಯುವಕರಿಗೆ ವಿಶೇಷ ಆತಿಥ್ಯ ನೀಡಿದರು. ಈ ಟ್ರೀಟ್‌ಮೆಂಟ್ ಸರಿಯಾಗಿದೆ ಅಲ್ಲವೇ?” ಎಂದು ಬರೆದುಕೊಂಡಿದ್ದರು.
ವಿಡಿಯೋದಲ್ಲಿ ಪೊಲೀಸ್ ಸಮವಸ್ತ್ರ ತೊಟ್ಟವರು ಕೆಲ ವ್ಯಕ್ತಿಗಳನ್ನು ಕೊಠಡಿಯೊಳಗೆ ಕೂಡಿ ಹಾಕಿ ಲಾಠಿಯಿಂದ ಹೊಡೆಯುತ್ತಿರುವ ದೃಶ್ಯವಿದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಇದು ಉತ್ತರ ಪ್ರದೇಶದ ಹಳೆಯ ವಿಡಿಯೋ ಎಂದು ಗೊತ್ತಾಗಿದೆ.
ವಿಡಿಯೋ ಸ್ಕ್ರೀನ್ ಶಾಟ್ ಅನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ಜುಲೈ 5, 2022ರಂದು ಎನ್‌ಡಿಟಿವಿಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ.
“ಕಳೆದ ತಿಂಗಳು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ಪ್ರತಿಭಟನೆಯ ನಂತರ ವೈರಲ್ ವಿಡಿಯೋದಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದ ಎಂಟು ಮಂದಿಯನ್ನು ಆರೋಪ ಮುಕ್ತಗೊಳಿಸಲಾಗಿದೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪೊಲೀಸರು ಹೇಳಿದ ನಂತರ ಸ್ಥಳೀಯ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದೆ. ಅವರು ನಿನ್ನೆ ಜೈಲಿನಿಂದ ಹೊರ ಬಂದಿದ್ದಾರೆ. ಇದರರ್ಥ ಈಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದರ ವಿರುದ್ಧ ನೀಡಿದ ಹೇಳಿಕೆಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ 85 ಜನರ ವಿರುದ್ಧ ಆರಂಭದಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಇವರ ಹೆಸರುಗಳಿಲ್ಲ ಎಂದಾಗಿದೆ. ಎನ್‌ಡಿಟಿವಿಯ ವರದಿಯ ನಂತರ ಪೊಲೀಸ್ ದೌರ್ಜನ್ಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ” ಎಂದು ವಿಡಿಯೋ ಕುರಿತು ಎನ್‌ಡಿಟಿವಿ ವಿವರಿಸಿದೆ.
“ಜೂನ್ 21, 2022ರಂದು ಇಂಡಿಯಾ ಟುಡೇ ಪ್ರಕಟಿಸಿದ ವರದಿಯಲ್ಲೂ ವೈರಲ್ ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ವರದಿಯಲ್ಲಿ “ಉತ್ತರ ಪ್ರದೇಶದಲ್ಲಿ ನೂಪುರ್ ಶರ್ಮಾ ಅವರ ಪ್ರವಾದಿಯ ಕುರಿತ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಅಮಾನವೀಯ ವರ್ತನೆಯ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಹೆಚ್‌ಆರ್‌ಸಿ) ಎಸ್‌ಎಸ್‌ಪಿ ಸಹರಾನ್‌ಪುರದಿಂದ ಪ್ರತಿಕ್ರಿಯೆ ಕೇಳಿದೆ” ಎಂದು ಹೇಳಲಾಗಿದೆ.
“ವಕೀಲ ಮಹ್‌ರೂಫ್ ಅನ್ಸಾರಿ ಅವರು ನೀಡಿದ ದೂರಿನ ಪ್ರಕಾರ, ಜೂನ್ 10 ರಂದು, ಸಹರಾನ್‌ಪುರದ ಠಾಣಾ ಕೊತ್ವಾಲಿ ನಗರದ ಪೊಲೀಸ್ ಅಧಿಕಾರಿಗಳ ತಂಡವು ಕೆಲವು ಪ್ರತಿಭಟನಾಕಾರರನ್ನು ಬಂಧಿಸಿತ್ತು. ನಂತರ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ನಿರ್ದಯವಾಗಿ ಥಳಿಸಲಾಗಿದೆ” ಎಂದು ವರದಿ ವಿವರಿಸಿದೆ.
ಹಸುವಿನ ಬಾಲ ಕತ್ತರಿಸಿದ ಆರೋಪಿಯ ಬಂಧನ
ಹಸುವಿನ ಬಾಲ ಕತ್ತರಿಸಿ ದೇವಸ್ಥಾನ ಬಾಗಿಲಿಗೆ ಎಸೆದ ಘಟನೆ ಆಗಸ್ಟ್ 25, 2024ರಂದು ರಾಜಸ್ಥಾನದ ಬಿಲ್ವಾರದಲ್ಲಿ ನಡೆದಿರುವುದು ನಿಜ. ಎಬಿಪಿ ಲೈವ್ ವರದಿಯ ಪ್ರಕಾರ, ಹಸುವಿನ ಬಾಲ ಕತ್ತರಿಸಿ ಬಿಲ್ವಾರದ ಗಾಂಧಿ ಸಾಗರದ ಬಳಿ ಇರುವ ವೀರ್ ಹನುಮಾನ್ ದೇವಸ್ಥಾನ ಮುಂಭಾಗ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ವಾಲಿ ಪೊಲೀಸರು ಹುಸೇನ್ ಕಾಲೋನಿ ಶಾಸ್ತ್ರಿನಗರ ನಿವಾಸಿ ನಿಸಾರ್ ಮೊಹಮ್ಮದ್ ಅವರ ಮಗ ಬಬ್ಲು ಶಾ (40 ವರ್ಷ) ಎಂಬಾತನನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.
ಆದರೆ, ಪೊಲೀಸರು ಥಳಿಸಿರು ವಿಡಿಯೋ ಹಸುವಿನ ಬಾಲ ಕತ್ತರಿಸಿದ ಘಟನೆಗೆ ಸಂಬಂಧಿಸಿದ್ದಲ್ಲ. ಅದು ನೂಪೂರ್ ಶರ್ಮಾ ಹೇಳಿಕೆ ವಿರುದ್ದ ಪ್ರತಿಭಟಿಸಿದ್ದ ಯುವಕರನ್ನು ಪೊಲೀಸರು ಕೂಡಿ ಹಾಕಿ ಅಮಾನುಷವಾಗಿ ಥಳಿಸಿದ ಘಟನೆಯದ್ದಾಗಿದೆ.
ಇದನ್ನೂ ಓದಿ : FACT CHECK : ಕಂದಹಾರ್ ವಿಮಾನ ಅಪಹರಣದ ವೆಬ್ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ? ಸತ್ಯಾಸತ್ಯತೆ ಏನು?