Homeಕರ್ನಾಟಕತಾವಾಡಿದ ಮಾತುಗಳಿಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್; 'ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ' ಎಂದ ಸಿಎಂ

ತಾವಾಡಿದ ಮಾತುಗಳಿಗೆ ಕ್ಷಮೆ ಕೋರಿದ ಅರವಿಂದ್ ಬೆಲ್ಲದ್; ‘ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ’ ಎಂದ ಸಿಎಂ

- Advertisement -
- Advertisement -

ಕಳೆದ ಶನಿವಾರ ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ಜಿಂದಾಲ್ ಕಂಪನಿಯ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿಧಾನಸಭೆ ವಿರೋಧ ಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, “ಜಿಂದಾಲ್ ಅವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ” ಎಂದು ಪದ ಬಳಕೆ ಮಾಡಿದ ನಂತರ ಇಂದು ಕ್ಷಮೆಯಾಚಿಸಿದ್ದಾರೆ. ‘ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಕೂಡಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅರವಿಂದ ಬೆಲ್ಲದ, “ಜಿಂದಾಲ್ ಅವರಿಗೆ ಕಡಿಮೆ ದರದಲ್ಲಿ ಭೂಮಿ ಕೊಡುವುದಕ್ಕೆ ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆ ಆಸ್ತಿನಾ ಎಂದು ವೇಗವಾಗಿ ಹೇಳಿರುತ್ತೇನೆ. ಆ ಸಂದರ್ಭದಲ್ಲಿ ಮಾತ್ರ ಬಳಸಿದ ಈ ಪದದ ಬಳಕೆಯು ನನಗೆ ಶೋಭೆ ತಂದಿರುವುದಿಲ್ಲ. ತಮಗೆ ನಾನು ಈ ಪತ್ರದ ಮುಖಾಂತರ ಕ್ಷಮೆಯಾಚಿಸುತ್ತಿದ್ದೇನೆ” ಎಂದು ಕೋರಿದ್ದಾರೆ.

ಈ ಬಗ್ಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಕೆಲವೊಮ್ಮೆ ಉದ್ವೇಗದಲ್ಲಿ ಮತ್ತೊಬ್ಬರ ಘನತೆಗೆ ಚ್ಯುತಿ ತರುವಂತಹ ಹೇಳಿಕೆ ಅರಿವಿಗೆ ಬಾರದೆಯೇ ಬಂದು ಬಿಡುತ್ತದೆ” ಎಂದು ಹೇಳಿದ್ದಾರೆ.

“ಜಿಂದಾಲ್‌ ಕಂಪನಿಗೆ ಭೂಮಿ ನೀಡಿರುವ ನಮ್ಮ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಮಾತನಾಡುವಾಗ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ್‌ ಅವರು ವೈಯಕ್ತಿಕವಾಗಿ ನನ್ನನ್ನು ನಿಂದನೆ ಮಾಡಿದ್ದರು. ತಮ್ಮ ತಪ್ಪಿನ ಅರಿವಾಗಿ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ. ಅವರ ಈ ನಡೆಯನ್ನು ನಾನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ, ಜೊತೆಗೆ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ದ್ವೇಷವಾಗಲೀ, ಬೇಸರವಾಗಲೀ ಯಾವುದು ಇಲ್ಲವೆಂಬುದನ್ನು ಈ ಮೂಲಕ ತಿಳಿಸಬಯಸುತ್ತೇನೆ” ಎಂದಿದ್ದಾರೆ.

“ನಾನು ಒಂದೆರಡು ಬಾರಿ ಬಾಯ್ತಪ್ಪಿನಿಂದ ಏಕವಚನ ಬಳಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದ್ದೇನೆ, ಆ ತಪ್ಪು ಮರುಕಳಿಸದಂತೆ ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ. ನನ್ನ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ವಿಪಕ್ಷಗಳ ಹಲವು ಕಿರಿಯ, ಹಿರಿಯ ನಾಯಕರಿಂದ ವೈಯಕ್ತಿಕ ನಿಂದನೆ, ಚಾರಿತ್ರ್ಯಹನನ ಮಾಡುವಂತಹ ಪದಬಳಕೆ ಎಲ್ಲವನ್ನೂ ಕೇಳಿದ್ದೇನೆ, ಎದುರಿಸಿದ್ದೇನೆ. ಮೊದಲ ಬಾರಿಗೆ ಅರವಿಂದ ಬೆಲ್ಲದ್‌ ಅವರು ತಾವು ಬಳಸಿದ ಪದದ ಬಗ್ಗೆ ಸ್ವತಃ ಅವರೇ ಬೇಸರ ವ್ಯಕ್ತಪಡಿಸಿ, ಪತ್ರದ ಮೂಲಕ ಕ್ಷಮೆ ಕೇಳಿ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ” ಎಂದು ಬೆಲ್ಲದ್ ಕ್ಷಮೆಯಾಚನೆಯನ್ನು ಸಿಎಂ ಒಪ್ಪಿಕೊಂಡಿದ್ದಾರೆ.

“ಅರವಿಂದ್ ಅವರ ತಂದೆ ಚಂದ್ರಕಾಂತ ಬೆಲ್ಲದ್ ಅವರು ನನ್ನ ದೀರ್ಘಕಾಲದ ಸ್ನೇಹಿತರು. ಅವರೊಬ್ಬ ಸಜ್ಜನ ರಾಜಕಾರಣಿ. ಅವರ ಸಜ್ಜನಿಕೆಯ ಪರಂಪರೆಯನ್ನು ಅರವಿಂದ್ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸುತ್ತೇನೆ. ರಾಜಕೀಯವು ಬರೀ ಟೀಕೆ, ಆರೋಪ-ಪ್ರತ್ಯಾರೋಪಗಳಿಂದಲೇ ತುಂಬಿಹೋಗುತ್ತಿರುವ ಈ ಕಾಲದಲ್ಲಿ ಅರವಿಂದ ಬೆಲ್ಲದ್‌ ಅವರ ನಡೆ ಮೌಲ್ಯಯುತ ರಾಜಕಾರಣದ ಜೀವಂತಿಕೆಯ ಸಂಕೇತವಾಗಿ ಕಾಣುತ್ತಿದೆ. “ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ” ಎಂಬ ಮಾತು ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವೆನಿಸುತ್ತಿದೆ” ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ; ‘ಒಳಮೀಸಲಾತಿ ವಿರೋಧಿಸುವ ಮಾಯಾವತಿ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯವಿದೆ..’; ರಾಜೀನಾಮೆ ನೀಡಿದ ರಾಜ್ಯ ಬಿಎಸ್‌ಪಿ ನಾಯಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...