‘ಕಂದಹಾರ್ ಹೈಜಾಕ್’ ಎಂದೇ ಕುಖ್ಯಾತಿ ಪಡೆದಿರುವ 1999ರಲ್ಲಿ ನಡೆದ ಭಾರತದ ವಿಮಾನ ‘ಐಸಿ-814’ರ ಅಪಹರಣ ಘಟನೆ ಆಧರಿಸಿ ಒಟಿಟಿ ಫ್ಲ್ಯಾಟ್ ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ‘ಐಸಿ-814’ಎಂಬ ವೆಬ್ ಸೀರಿಸ್ ಆಗಸ್ಟ್ 29ರಂದು ಬಿಡುಗಡೆಯಾಗಿದೆ. ಅನುಭವ್ ಸಿನ್ಹಾ ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರು.
ವೆಬ್ ಸೀರಿಸ್‌ನಲ್ಲಿ ವಿಮಾನ ಅಪಹರಿಸಿದ್ದ ಇಬ್ಬರು ಭಯೋತ್ಪಾದಕರನ್ನು ‘ಭೋಲಾ ಮತ್ತು ಶಂಕರ್’ ಎಂದು ಗುರುತಿಸಿರುವುದಾಗಿ ವರದಿಗಳು ಹೇಳಿವೆ. ಈ ‘ಭೋಲಾ ಮತ್ತು ಶಂಕರ್’ ಹೆಸರುಗಳು ಅನೇಕರ ವಿರೋಧಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕ ಅನುಭವ್ ಸಿನ್ಹಾ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಬಲಪಂಥೀಯ ಎಕ್ಸ್ ಬಳಕೆದಾರ ರಿಶಿ ಬಗ್ರೀ (@rishibagree) ಆಗಸ್ಟ್ 31ರಂದು ಪೋಸ್ಟ್ ಒಂದನ್ನು ಹಾಕಿದ್ದು, ಅದರಲ್ಲಿ “ಕಂದಹಾರ್ ವಿಮಾನ ಅಪಹರಣಕಾರರ ಮೂಲ ಹೆಸರುಗಳು: ಇಬ್ರಾಹಿಂ ಅಥರ್, ಶಾಹಿದ್ ಅಖ್ತರ್, ಸನ್ನಿ ಅಹಮದ್, ಜಹೂರ್ ಮಿಸ್ತ್ರಿ, ಶಾಕಿರ್. ಆದರೆ, ಅನುಭವ್ ಸಿನ್ಹಾ ಅವರ ಹೈಜಾಕರ್ ವೆಬ್ ಸರಣಿ ‘ಐಸಿ-814’ ಪ್ರಕಾರ, ಭೋಲಾ ಮತ್ತು ಶಂಕರ್. ಸಿನಿಮೀಯವಾಗಿ ವೈಟ್‌ವಾಶ್ ಮಾಡುವುದು ಹೀಗೆ” ಎಂದು ಬರೆದುಕೊಂಡಿದ್ದರು.
ಸುಪ್ರೀಂ ಕೋರ್ಟ್ ವಕೀಲ ಶಶಾಂಕ್ ಶೇಖರ್ ಝಾ (@shashank_ssj) ಅವರು ಆಗಸ್ಟ್ 31ರಂದು ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ನಲ್ಲಿ “ಇಸ್ಲಾಮಿ ಭಯೋತ್ಪಾದನೆಯನ್ನು ವೈಟ್ ವಾಶ್ ಮಾಡುವುದು ಹೇಗೆ?! ‘ಐಸಿ-814’ರ ಅಪಹರಣಕಾರರು : ಇಬ್ರಾಹಿಂ ಅಖ್ತರ್, ಶಾಹಿದ್ ಅಖ್ತರ್ ಸಯೀದ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಮಿಸ್ತ್ರಿ, ಶಾಕಿರ್. ‘ಐಸಿ 814’ರ ಅನುಭವ್ ಸಿನ್ಹಾ ಪ್ರಕಾರ ಅಪಹರಣಕಾರರು ‘ಭೋಲಾ, ಶಂಕರ್, ಬರ್ಗರ್, ಡಾಕ್ಟರ್. @NetflixIndia ನಾಚಿಕೆಯಾಗಬೇಕು” ಎಂದು ಬರೆದುಕೊಂಡಿದ್ದರು.
ಈ ಸುದ್ದಿ ಬರೆಯುವ ಹೊತ್ತಿಗೆ ವಕೀಲ ಶಶಾಂಕ್ ಅವರ ಪೋಸ್ಟ್ 3 ಲಕ್ಷದ 42 ಸಾವಿರ ವೀಕ್ಷಣೆ ಪಡೆದಿತ್ತು.
ಮತ್ತೊಬ್ಬ ಬಲಪಂಥೀಯ ಎಕ್ಸ್ ಬಳಕೆದಾರ ಮಿ.ಸಿನ್ಹಾ ಅಥವಾ ರೌಶನ್ ಸಿನ್ಹಾ(Mrsinha) ಆಗಸ್ಟ್ 31ರಂದು ಹಾಕಿದ್ದ ಪೋಸ್ಟ್‌ನಲ್ಲಿ “ಕಂದಹಾರ್ ವಿಮಾನ ಅಪಹರಣವನ್ನು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಮಾಡಿದೆ. ಆದರೆ, ಅನುಭವ್ ಸಿನ್ಹಾ ಭಯೋತ್ಪಾದಕರಿಗೆ ಭೋಲಾ ಮತ್ತು ಶಂಕರ್ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಭಗವಾನ್ ಮಹಾದೇವನ ನಂತರ, ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ. ಸೆನ್ಸಾರ್ ಮಂಡಳಿ ಇದನ್ನು ಹೇಗೆ ಅನುಮೋದಿಸಿತು?” ಎಂದು ಬರೆದುಕೊಂಡಿದ್ದರು.
ಇದೇ ರೀತಿಯ ಪೋಸ್ಟ್‌ಗಳನ್ನು ಅನೇಕ ಬಲಪಂಥೀಯ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದರು. ಕೆಲ ಮಾಧ್ಯಮಗಳು ಕೂಡ ಈ ವಿಚಾರದ ಕುರಿತು ಸುದ್ದಿ ಪ್ರಕಟಿಸಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಭಾರತದ ನೆಟ್‌ಫ್ಲಿಕ್ಸ್ ಕಂಟೆಂಟ್ ಚೀಫ್ ಮೋನಿಶಾ ಶೇರ್ಗಿಲ್ ಅವರಿಗೆ ಸಮನ್ಸ್ ನೀಡಿದೆ. ಸೆಪ್ಟೆಂಬರ್ 3 ಮಂಗಳವಾರದಂದು ವೆಬ್ ಸರಣಿಯ ವಿವಾದಾತ್ಮಕ ಅಂಶಗಳ ಕುರಿತು ವಿವರಣೆಯನ್ನು ನೀಡಲು ಹಾಜರಾಗುವಂತೆ ಸೂಚಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಹಾಗಾದರೆ, ‘ಐಸಿ-814′ ವೆಬ್ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ ಮಾಡಿರುವುದು ನಿಜಾನಾ? ಭಯೋತ್ಪಾದಕರನ್ನು’ಭೋಲಾ ಮತ್ತು ಶಂಕರ್’ ಎಂಬ ಹೆಸರಿನಿಂದ ಗುರುತಿಸಿದ್ದು ಏಕೆ? ಎಂಬುವುದನ್ನು ನೋಡೋಣ.
ಫ್ಯಾಕ್ಟ್‌ಚೆಕ್ : ವಿವಾದಕ್ಕೆ ಒಳಗಾಗಿರುವ ವೆಬ್ ಸೀರಿಸ್‌ನ ಕುರಿತು ನಾವು ಮಾಹಿತಿ ಹುಡುಕಿದಾಗ ಡಿಸೆಂಬರ್ 24, 2020ರಂದು ಟೈಮ್ಸ್ ಆಫ್ ಇಂಡಿಯಾ “21 Years on, Kandahar hijack still haunts Bhopal couple” ಎಂಬ ಶೀರ್ಷಿಕೆಯಲ್ಲಿ ಪ್ರಟಿಸಿದ ವಿಶೇಷ ವರದಿಯೊಂದು ಲಭ್ಯವಾಗಿದೆ. ಆ ವರದಿ ‘ದುರ್ಗೇಶ್ ಮತ್ತು ರೇಣು ಗೋಯೆಲ್’ ಎಂಬ ದಂಪತಿಯನ್ನು ಸಂದರ್ಶನ ಮಾಡಿ ಪ್ರಕಟಿಸಲಾಗಿತ್ತು. ‘ದುರ್ಗೇಶ್ ಮತ್ತು ರೇಣು ಗೋಯೆಲ್’ ದಂಪತಿ ಕಂದಹಾರ್ ವಿಮಾನ ಅಪಹರಣದ ವೇಳೆ ಅದರೊಳಗಿದ್ದವರಾಗಿದ್ದಾರೆ. ಸರ್ಕಾರ ಬಳಿಕ ಅವರನ್ನು ರಕ್ಷಣೆ ಮಾಡಿತ್ತು.
ವಿಮಾನ ಅಪಹರಣದ ಸಂದರ್ಭವನ್ನು ಟೈಮ್ಸ್ ಆಫ್ ಇಂಡಿಯಾ ಜೊತೆ ನೆನಪು ಮಾಡಿಕೊಂಡಿರುವ ದುರ್ಗೇಶ್ ಮತ್ತು ರೇಣು ಗೋಯೆಲ್ ದಂಪತಿ “ಬರ್ಗರ್, ಡಾಕ್ಟರ್, ಚೀಫ್, ಭೋಲಾ ಮತ್ತು ಶಂಕರ್” ಎಂಬ ಹೆಸರುಗಳು ಇಂದಿಗೂ ನಮಗೆ ಒಂದು ಕೆಟ್ಟ ಕನಸಾಗಿ (ದುಃಸ್ವಪ್ನ) ಕಾಡುತ್ತಿದೆ ಎಂದಿದ್ದರು. ಈ ಹೆಸರುಗಳು ವಿಮಾನ ಅಪಹರಿಸಿದ್ದ ಐವರು ಅಪಹರಣಕಾರರದ್ದು ಎಂದು ಅವರು ಹೇಳಿದ್ದರು.
ವಿಮಾನ ಅಪಹರಣಕ್ಕೊಳಗಾಗುವಾಗ ಅದರಲ್ಲಿದ್ದ 176 ಪ್ರಯಾಣಿಕರಲ್ಲಿ ಮಧ್ಯ ಪ್ರದೇಶದ ಭೋಪಾಲ್ ನಿವಾಸಿಗಳಾದ ದುರ್ಗೇಶ್ ಮತ್ತು ರೇಣು ದಂಪತಿ ಇದ್ದರು. ಅವರು ನೇಪಾಳದ ಕಠ್ಮಂಡುವಿನಲ್ಲಿ ಹನಿಮೂನ್ ಮುಗಿಸಿ ಭಾರತಕ್ಕೆ ವಾಪಸ್ ಹೊರಟಿದ್ದರು. ಅವರ ಜೊತೆ ಸುಮಾರು 17 ಮಂದಿ ಭೋಪಾಲ್‌ನವರು ಇದ್ದರು.
ವಿಮಾನ ಅಪಹರಣಕ್ಕೊಳಗಾದಾಗ ಭೋಲಾ ಮತ್ತು ಬರ್ಗರ್ ಪ್ರಯಾಣಿಕರಿಗೆ ಥಳಿಸುತ್ತಿದ್ದರು. ಇನ್ನಿಬ್ಬರು ಡಾಕ್ಟರ್ ಮತ್ತು ಚೀಫ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು ಎಂದು ದುರ್ಗೇಶ್ ಮತ್ತು ರೇಣು ದಂಪತಿ ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದರು.
ನೇಪಾಲ್ ಟೈಮ್ಸ್ ಎಂಬ ಮತ್ತೊಂದು ಸುದ್ದಿ ವೆಬ್‌ಸೈಟ್ ಡಿಸೆಂಬರ್ 31, 2019ರಂದು “Remembering IC814” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ವಿಶೇಷ ವರದಿಯಲ್ಲಿ “ಐವರು ವಿಮಾನ ಅಪಹರಣಕಾರಲ್ಲಿ ಎಲ್ಲರೂ ‘ಮ್ಯಾನೇಜರ್, ಶಂಕರ್, ಭೋಲಾ, ಬರ್ಗರ್ ಮತ್ತು ಡಾಕ್ಟರ್’ ಕೋಡ್ ಹೆಸರುಗಳನ್ನು ಹೊಂದಿದ್ದರು ಎಂದು ಪ್ರಯಾಣಿಕರಲ್ಲಿ ಒಬ್ಬರಾದ ಸಂಜಯ್ ಧಿತಾಲ್ ಎಂಬವರು ತಿಳಿಸಿರುವುದಾಗಿ ಹೇಳಿದೆ.
ಫಿನಾನ್ಶಿಯಲ್ ಎಕ್ಸ್ ಪ್ರೆಸ್ ಸುದ್ದಿ ವೆಬ್‌ಸೈಟ್ ಮಾರ್ಚ್ 6, 2019ರಂದು “IC 814 hijack: How Jaish-e-Mohammed chief Masood Azhar’s brother planned Indian Airlines hijack in 1999” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ವರದಿಯಲ್ಲಿ, ವಿಮಾನ ಅಪಹರಣದ ವೇಳೆ ನಾಲ್ವರು ಅಪಹರಣಕಾರರು ಕೋಡ್ ಹೆಸರುಗಳನ್ನು ಬಳಸಿದ್ದರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವರದಿಯ ಪ್ರಕಾರ ಆ ಹೆಸರುಗಳು ಹೀಗಿವೆ…
ಸನ್ನೀ ಅಹ್ಮದ್ ಖಾಝಿ -ಬರ್ಗರ್
ಶಾಹಿರ್ ಅಖ್ತರ ಸಯೀದ್-ಡಾಕ್ಟರ್
ಜಹೂರ್ ಇಬ್ರಾಹಿಂ ಮಿಸ್ತ್ರಿ-ಭೋಲಾ
ಶಾಕಿರ್-ಶಂಕರ್
ಅಪಹರಣಕಾರರು ಕೋಡ್ ಹೆಸರುಗಳು ಬಳಸಿರುವುದನ್ನು “ಐಸಿ-814ರ ಫ್ಲೈಟ್ ಇಂಜಿನಿಯರ್ ಅನಿಲ್ ಕೆ ಜಗ್ಗಿಯಾ ಅವರು ದೃಢೀಕರಿಸಿದ್ದಾರೆ. ಅವರು 2021ರಲ್ಲಿ ಪ್ರಕಟಗೊಂಡ ಕಂದಹಾರ್ ವಿಮಾನ ಅಪಹರಣದ ‘IC 814 Hijacked:The Inside Story’ ಎಂಬ ಪುಸ್ತಕದ ಸಹ-ಲೇಖಕರಾಗಿದ್ದಾರೆ. ಈ ಪುಸ್ತಕದಲ್ಲಿ ವಿಮಾನ ಅಪಹರಣದ ಸಂದರ್ಭದ ಅನುಭವವನ್ನು ಸಂಪೂರ್ಣವಾಗಿ ಅವರು ವಿವರಿಸಿದ್ದಾರೆ.
ವಿಮಾನ ಅಪಹರಣ ನಡೆದು, ಬಳಿಕ ಅದನ್ನು ರಕ್ಷಿಸಿದ ವಾರಗಳ ಬಳಿಕ (ಜನವರಿ 6,2000) ಕೇಂದ್ರ ಗೃಹ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ವಿಚಾರಣೆ ವೇಳೆ ಬಂಧಿತ ನಾಲ್ವರು ‘ಹರ್ಕತ್-ಉಲ್-ಅನ್ಸಾರ್’ ಸಂಘಟನೆ ಕಾರ್ಯಕರ್ತ ಹೆಸರು ಬಹಿರಂಗೊಂಡಿದೆ ಎಂದು ಹೇಳಿತ್ತು. ಆ ಹೆಸರುಗಳು ಹೀಗಿವೆ…
ಇಬ್ರಾಹಿಂ ಅಥರ್-ಬಹವಲ್ಪುರ್
ಶಾಹಿದ್ ಅಖ್ತರ್ ಸಯೀದ್- ಗುಲ್ಶನ್ ಇಕ್ಬಾಲ್, ಕರಾಚಿ
ಸನ್ನಿ ಅಹ್ಮದ್ ಖಾಜಿ- ರಕ್ಷಣಾ ಪ್ರದೇಶ, ಕರಾಚಿ
ಮಿಸ್ತ್ರಿ ಜಹೂರ್ ಇಬ್ರಾಹಿಂ-ಅಖ್ತರ್ ಕಾಲೋನಿ, ಕರಾಚಿ
ಶಾಕಿರ್ಸು-ಕ್ಕೂರು ನಗರ
ಈಗಲೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಗೃಹ ಇಲಾಖೆಯ ಹೇಳಿಕೆ ಇದೆ ಓದಬಹುದು
ಅದೇ ಜನವರಿ 6, 2000 ದಂದು ದಿ ಟ್ರಿಬ್ಯೂನ್ ಮಾಡಿದ್ದ ವರದಿಯಲ್ಲಿ “ಕೇಂದ್ರ ಗೃಹ ಸಚಿವರಾದ ಎಲ್.ಕೆ ಅಡ್ವಾಣಿಯವರು ಬಿಡುಗಡೆಗೊಂಡ ಭಯೋತ್ಪಾದಕ ಮೌಲಾನಾ ಮಸೂದ್ ಅಝರ್‌ನ ಸಹೋದರ ಸೇರಿದಂತೆ ಐವರು ಅಪಹರಣಕಾರರ ಗುರುತು ಪತ್ತೆಯಾಗಿದೆ ಎಂದು ಹೇಳಿದ್ದಾರೆ” ಎಂದು ತಿಳಿಸಲಾಗಿತ್ತು.
ಅಲ್ಲದೆ, “ಬಂಧಿತ ಅಪಹರಣಕಾರಲ್ಲಿ ಮೌಲಾನಾ ಅಝರ್‌ನ ಸಹೋದರ ಎಂದು ಗುರುತಿಸಲ್ಪಟ್ಟ ಇಬ್ರಾಹಿಂನನ್ನು “ಚೀಫ್”, ಸಯೀದ್ ಅನ್ನು “ಡಾಕ್ಟರ್”, ಖಾಜಿಯನ್ನು “ಬರ್ಗರ್”, ಇಬ್ರಾಹಿಂ ಅನ್ನು “ಭೋಲಾ” ಮತ್ತು ಶಾಕಿರ್ ಅನ್ನು “ಶಂಕರ್” ಎಂದು ಕರೆಯಲಾಗುತ್ತಿತ್ತು. ಅಪಹರಣಕಾರರು ವಿಮಾನದಲ್ಲಿ ಪರಸ್ಪರ ಈ ಹೆಸರುಗಳಿಂದ ಕರೆಯುತ್ತಿದ್ದರು” ಎಂದು ಸಚಿವರು ಹೇಳಿರುವುದಾಗಿ ವರದಿಯಲ್ಲಿ ವಿವರಿಸಲಾಗಿತ್ತು.
ಬ್ರಿಗೇಡಿಯರ್ ಸಮೀರ್ ಭಟ್ಟಾಚಾರ್ಯ ಅವರ 2014 ರ ಪುಸ್ತಕ ‘ನಥಿಂಗ್ ಬಟ್!’ ಇದನ್ನು ದೃಢೀಕರಿಸುತ್ತದೆ. ಪುಸ್ತಕದ ಪುಟ ಕೆಳಗಿದೆ.
ಒಟ್ಟಿನಲ್ಲಿ ವಿಮಾನ ಅಪಹರಣಕಾರರು ತಮ್ಮನ್ನು ಪರಸ್ಪರ ಅಡ್ಡ ಹೆಸರುಗಳಿಂದ ಕರೆಯುತ್ತಿದ್ದರು. ಆ ಪೈಕಿ ಭೋಲಾ ಮತ್ತು ಶಂಕರ್ ಎಂಬುವುದು ಅವುಗಳಲ್ಲಿ ಸೇರಿದೆ. ಇದನ್ನು ಕೇಂದ್ರ ಸರ್ಕಾರ ಕೂಡ ದೃಢೀಕರಿಸಿದೆ. ಅದಲ್ಲದೆ, ಭಯೋತ್ಪಾದಕರಿಗೆ ಈ ಭೋಲಾ ಮತ್ತು ಶಂಕರ್ ಎಂಬ ಹಿಂದೂ ಹೆಸರುಗಳನ್ನು “ಐಸಿ 814” ವೆಬ್ ಸೀರಿಸ್ ನಿರ್ದೇಶಕ ಅನುಭವ್ ಸಿನ್ಹಾ ಇಟ್ಟಿದ್ದಲ್ಲ.
Courtesy : altnews.in
ಇದನ್ನೂ ಓದಿ : FACT CHECK : ಮುಸ್ಲಿಂ ಮಕ್ಕಳು ರೈಲ್ವೆ ಹಳಿಗೆ ಹಾನಿ ಮಾಡಿದ್ದಾರೆ ಎಂದು ಸುಳ್ಳು ವಿಡಿಯೋ ಹಂಚಿಕೆ