ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದು ಬೃಹತ್ ಪ್ರತಿಭಟನೆ ನಡೆಯಿತು. ಬಹುಶಃ ಸಮ್ಮಿಶ್ರ ಸರ್ಕಾರದ ವಿರುದ್ಧ ನಡೆದ ಮೊದಲ ಜನಪರ ಪ್ರತಿಭಟನೆ ಇದು ಅನ್ನಿಸುತ್ತೆ. ಆದರೆ ಈ ಪ್ರತಿಭಟನೆ ನಡೆಯಲು ಕಾರಣವಾದದ್ದು, ಇವೆರಡೂ ಪಕ್ಷಗಳಲ್ಲ. ಬದಲಿಗೆ ಇವುಗಳ ಕಾಮನ್ ಎದುರಾಳಿಯಾದ ಬಿಜೆಪಿ ಸೃಷ್ಟಿಸಿಹೋದ ಶೈಕ್ಷಣಿಕ ನೀತಿ. ಅಂದಹಾಗೆ, ಆ ಪ್ರತಿಭಟನೆ ನಡೆಸುತ್ತಿರೋದು ಕೃಷಿ ವಿಜ್ಞಾನ ವಿದ್ಯಾರ್ಥಿಗಳು.
ನಮ್ಮ ನೆಲದ ಕೃಷಿಗೆ ಪೂರಕವಾದ ಕ್ಷೇತ್ರಗಳು ಈಗಾಗಲೇ ಖಾಸಗಿಯವರ ತೆಕ್ಕೆ ಸೇರಿವೆ. ಕೃಷಿ ಸಂಶೋಧನೆಯ ಹಲವು ವಿಭಾಗಗಳೂ ಪರೋಕ್ಷವಾಗಿ ಖಾಸಗಿಯವರ ನಿಯಂತ್ರಣದಲ್ಲಿವೆಯಾದರು ಕೃಷಿ ಶಿಕ್ಷಣವನ್ನು ಸಾರಾಸಗಟಾಗಿ ಖಾಸಗಿಯವರು ಆಕ್ರಮಿಸಿಕೊಂಡಿರಲಿಲ್ಲ. ಆದರೆ 2009ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿದ ಒಂದು ತಿದ್ದುಪಡಿಯಿಂದಾಗಿ ಇವತ್ತು ಕೃಷಿ ಶಿಕ್ಷಣ ಸಂಸ್ಥೆಗಳೂ ಖಾಸಗಿಯವರ ಪಾಲಾಗುವ ಅಪಾಯದಲ್ಲಿವೆ. ಇದರ ವಿರುದ್ಧವೇ ರಾಜ್ಯದ ಎಲ್ಲಾ ಕೃಷಿ ವಿದ್ಯಾರ್ಥಿಗಳು ಕಳೆದ ಹತ್ತು ದಿನಗಳಿಂದ ಹೋರಾಟ ಮಾಡುತ್ತಿರೋದು.
ರಾಜ್ಯದಲ್ಲಿ 1963ರ ಕೃಷಿ ವಿಶ್ವವಿದ್ಯಾಲಯಗಳ ಕಾಯ್ದೆಯ ಮೂಲಕ ಅಸ್ತಿತ್ವಕ್ಕೆ ಬಂದ ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲಕೋಟೆ, ಬೀದರ್ ಕೃಷಿ ಮತ್ತು ಪಶುಸಂಗೋಪನೆಯ ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಜಿಲ್ಲೆಗಳಲ್ಲಿರುವ ಅವುಗಳ ವಿಸ್ತರಣಾ ಕೇಂದ್ರಗಳು ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿವೆ. ಲಕ್ಷಾಂತರ ರೈತರ, ಬಡವರ ಮಕ್ಕಳು ಇದರ ಉಪಯೋಗ ಪಡೆದಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ಐ.ಸಿ.ಎ.ಆರ್.) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಇಂತಹ ಎಲ್ಲಾ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿಯೆ ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳು ಶಿಕ್ಷಣ ಮತ್ತು ಸಂಶೋಧನೆಗೆ ಹೆಸರುವಾಸಿಯಾಗಿವೆ.
ಆದರೆ ರಾಜ್ಯ ಸರ್ಕಾರವು 2009ರಲ್ಲಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು ಮೊದಲ ಬಾರಿಗೆ ಖಾಸಗಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡಿತು. ಇದರ ಪರಿಣಾಮವಾಗಿ ಸದ್ಯ ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಖಾಸಗಿ ಕೃಷಿ ಕಾಲೇಜುಗಳು ತಲೆ ಎತ್ತಿ ನಿಂತಿವೆ. ಲಾಭವನ್ನೇ ಉದ್ದೇಶ ಮಾಡಿಕೊಂಡಿರುವ ಈ ಖಾಸಗಿ ಕೃಷಿ ಕಾಲೇಜುಗಳು ಐ.ಸಿ.ಎ.ಆರ್.ನ ನಿಯಮಗಳನ್ನು ಪಾಲಿಸುತ್ತಿಲ್ಲ. ಐ.ಸಿ.ಎ.ಆರ್. ನಿಯಮದ ಪ್ರಕಾರ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಕನಿಷ್ಠ 75 ಎಕರೆ ಭೂಮಿ ಇರಬೇಕು. ಆದರೆ ಯಾವ ಖಾಸಗಿ ಕೃಷಿ ಕಾಲೇಜುಗಳು ಇಷ್ಟು ಭೂಮಿಯನ್ನು ಹೊಂದಿಲ್ಲ ಮತ್ತು ನುರಿತ ಶಿಕ್ಷಕರಿಲ್ಲ, ಸಮರ್ಪಕ ಪ್ರಯೋಗಾಲಯಗಳಿಲ್ಲ, ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಗೆ ಮಿತಿ ಇಲ್ಲ, ಐ.ಸಿ.ಎ.ಆರ್.ಇಂದ ಮಾನ್ಯತೆ ಹೊಂದಿಲ್ಲ, ಅನಿಯಮಿತ ಶುಲ್ಕಗಳು, ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ, ಮೂಲಭೂತ ಸೌಕರ್ಯಗಳಿಲ್ಲ….. ಸರ್ಕಾರಿ ಕೃಷಿ ವಿ.ವಿ.ಯ ವಿದ್ಯಾರ್ಥಿಗಳು ಸಿಇಟಿ ರ್ಯಾಂಕ್ ಆಧಾರದ ಮೇಲೆ ಪ್ರವೇಶವನ್ನು ಪಡೆದಿರುತ್ತಾರೆ. ಈ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಸಿಇಟಿಯ ಅಗತ್ಯವೂ ಇಲ್ಲ. ಅವರು ಕೇಳಿದಷ್ಟು ಡೊನೇಷನ್ ಕೊಟ್ಟರೆ ಸಾಕು.
ಈ ಖಾಸಗಿ ಕೃಷಿ ಕಾಲೇಜುಗಳು ಯಾವ ಪರಿ ಆವರಿಸಿಕೊಂಡಿವೆಯೆಂದರೆ ಅಜಮಾಸು ಐದು ಸರ್ಕಾರಿ ಕಾಲೇಜುಗಳಲ್ಲಿ ಇರಬೇಕಾದಷ್ಟು ವಿದ್ಯಾರ್ಥಿಗಳನ್ನ ದೊಡ್ಡಬಳ್ಳಾಪುರ ಬಳಿಯ ರೈಟೆಕ್ ಎಂಬ ಒಂದೇ ಒಂದು ಖಾಸಗಿ ಕಾಲೇಜು ಭರ್ತಿ ಮಾಡಿಕೊಂಡಿದೆ. ಐ.ಸಿ.ಎ.ಆರ್. ಮತ್ತು ಕೃಷಿ ವಿವಿಗಳ ಅಫಿಲಿಯೇಷನ್ ಪಡೆಯದೆ ನೀಡಲಾಗುತ್ತಿರುವ ಇವರ ಪದವಿಗಳನ್ನು ಕೃಷಿ ಇಲಾಖೆಯು ಯಾವ ಹುದ್ದೆಗಳಿಗೂ ಪರಿಗಣಿಸುವಂತಿಲ್ಲ. ಈ ರೀತಿ ಮಾನ್ಯತೆ ಹೊಂದಿರದ ಪದವಿ ಪತ್ರಗಳ ವಿರುದ್ಧ ಅಲ್ಲಿನ ವಿದ್ಯಾರ್ಥಿಗಳು ಮತ್ತು ಪೋಷಕರು ದೂರು ದಾಖಲಿಸಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಖಾಸಗಿಯವರು ನಡೆಸುತ್ತಿರುವ ಚೆಲ್ಲಾಟವಲ್ಲದೇ ಮತ್ತಿನ್ನೇನು.
ಪೋಷಕರ ಇಂತಹ ದೂರುಗಳಿಗೆ ಬೆದರಿಯೇ ಇವತ್ತು ಖಾಸಗಿ ಕಾಲೇಜುಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಅಫಿಲಿಯೇಷನ್ ನೀಡುವಂತೆ ಒತ್ತಡ ತರುತ್ತಿವೆ. ಆದರೆ ಈ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. 2016ರಲ್ಲಿ ಜಿಕೆವಿಕೆಯಲ್ಲಿ ನಡೆದ ಕೃಷಿ ವಿದ್ಯಾರ್ಥಿಗಳ ಹೋರಾಟದ ಸ್ಥಳಕ್ಕೆ ಬಂದ ಹೆಚ್.ಡಿ.ಕುಮಾರಸ್ವಾಮಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಖಾಸಗಿ ಕೃಷಿ ಕಾಲೇಜುಗಳನ್ನು ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಹೇಳಿದ್ದರು. ಅಂದಿನ ಕೃಷಿ ಮಂತ್ರಿಗಳಾದ ಕೃಷ್ಣ ಭೈರೇಗೌಡರು ಸಹ ಖಾಸಗಿ ಕೃಷಿ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸಮಿತಿ ರಚಿಸಿದ್ದರು. ಆದರೆ ಆ ಸಮಿತಿ ಕಾರ್ಯನಿರ್ವಹಿಸಲೇ ಇಲ್ಲ. ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಈ ನೀತಿಯನ್ನು ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರವಾದರೂ, ಅದನ್ನು ಪಕ್ಕಕ್ಕೆ ಸರಿಸುವಲ್ಲಿ ವಿಫಲವಾಗುತ್ತಿರುವ ಉಳಿದ ಪಕ್ಷಗಳ ನೀತಿಗಳ ಮೇಲೂ ಸಂದೇಹ ಬಾರದಿರದು.
ಖಾಸಗಿ ಕಾಲೇಜುಗಳು ಕೃಷಿ ವಿಶ್ವವಿದ್ಯಾಲಯದ ಅಫಿಲಿಯೇಷನ್ ಕೇಳುತ್ತಿರುವುದರಿಂದ ಈಗ ಕೃಷಿ ವಿದ್ಯಾರ್ಥಿಗಳು ಕಳೆದ ಹತ್ತು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ರಾಜ್ಯದಲ್ಲಿ ಹೋರಾಟ ಶುರು ಮಾಡಿರೋದು ಇಂತಹ ಖಾಸಗಿ ಕಾಲೇಜುಗಳ ಅಫಿಲಿಯೇಷನ್ ಒತ್ತಡದ ವಿರುದ್ಧ. ಜೂನ್ 19ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಬಳಿ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಂತ್ವನದ ಮಾತಾಡಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿದ್ಯಾರ್ಥಿ ಮುಖಂಡರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಾದ 2009ರ ಕೃಷಿ ಕಾಲೇಜು ಕಾಯ್ದೆ ತಿದ್ದುಪಡಿಯನ್ನು ರದ್ದು ಮಾಡಬೇಕು, ಖಾಸಗಿ ಕಾಲೇಜುಗಳಿಗೆ ಕೃಷಿ ವಿಶ್ವವಿದ್ಯಾಲಯದ ಅಪಿಲಿಯೇಷನ್ ನೀಡಬಾರದು, ರೈಟೆಕ್ ಖಾಸಗಿ ಕಾಲೇಜನ್ನು ಮುಚ್ಚಬೇಕು ಎಂಬ ಬೇಡಿಕೆಗಳೇ ಪ್ರತಿಧ್ವನಿಸಿದವು. ಇದನ್ನು ಚರ್ಚಿಸಲು ಅಧಿವೇಶನ ಶುರುವಾಗುವವರೆಗೆ ಕಾಯಬೇಕಾಗುತ್ತೆ ಅಂತ ಸರ್ಕಾರ ನೆಪ ಹೇಳಿ ನುಣುಚಿಕೊಳ್ಳೋದಕ್ಕೆ ಯತ್ನಿಸಿತ್ತು. ಜಗ್ಗದ ವಿದ್ಯಾರ್ಥಿಗಳು ಈಗ ಹೋರಾಟ ಮುಂದುವರೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ನಾಡಿನ ರೈತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು ಈ ಹೋರಾಟವನ್ನು ಬೆಂಬಲಿಸಿ ನಿಂತಿದ್ದಾರೆ. ಸದ್ಯದಲ್ಲೇ ಮಂಡ್ಯದಲ್ಲಿ ರೈತಸಂಘ, ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಹಲವರು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು ಕಾರ್ಯಕ್ರಮ ರೂಪಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಒಟ್ಟಿನಲ್ಲಿ ಇವತ್ತಿನ ವಿದ್ಯಾರ್ಥಿ ಸಮೂಹಕ್ಕೆ ಸಾಮಾಜಿಕ ಜವಾಬ್ಧಾರಿ ಇಲ್ಲ ಎಂಬ ಮೂದಲಿಕೆಯನ್ನೂ ಈ ಹೋರಾಟ ಹುಸಿಗೊಳಿಸಿದೆ. ಇನ್ನೇನಿದ್ದರು, ಹೊಸ ಸರ್ಕಾರ ಶಿಕ್ಷಣದ ಖಾಸಗಿಯವರ ಲಾಬಿಗೆ ಮಣಿಯದೆ ತನ್ನ ದಿಟ್ಟತೆಯನ್ನು ತೋರಬೇಕಿದೆ.
ಅವರಿಗಿಂತ ಇವರು ಭಿನ್ನವೇ?
ಹೌದು, ಬಿಜೆಪಿ ಪಕ್ಷವು ಖಾಸಗೀಕರಣದ ಪರ. ಹೆಚ್ಚೆಚ್ಚು ಕಾರ್ಪೊರೇಟ್ ಸಂಸ್ಥೆಗಳ ಕೈಗೆ ದೇಶವನ್ನೊಪ್ಪಿಸುವುದು ಪ್ರಧಾನಿ ಮೋದಿಯವರ ಸಿದ್ಧಾಂತದ ಭಾಗವೇ ಆಗಿದೆ. ಮೋದಿಯವರು ದೇಶಪ್ರೇಮದ ಮಾತಾಡುತ್ತಲೇ ಇಡೀ ದೇಶವನ್ನು ಕಾರ್ಪೊರೇಟ್ ಸಂಸ್ಥೆಗಳ ಪಾಲು ಮಾಡುತ್ತಿರುವುದನ್ನು ಉಳಿದ ಪಕ್ಷಗಳು ವಿರೋಧಿಸುವ ಮಾತನಾಡುತ್ತಿವೆ. ಆದರೆ, ಅದನ್ನು ಸಾಬೀತು ಪಡಿಸಲು ಇದೊಂದು ಅವಕಾಶ. ಆ ಮೂಲಕ ತಮ್ಮದೇ ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಲೂ ಆಗುತ್ತದೆ. ಏಕೆಂದರೆ, ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಕಾನೂನು ತಿದ್ದುಪಡಿಯ ಪ್ರಸ್ತಾಪ ಮೊದಲು ಹೊರಟಿದ್ದೇ ಕುಮಾರಸ್ವಾಮಿಯವರು ಮೊದಲ ಸಾರಿ ಮುಖ್ಯಮಂತ್ರಿಯಾಗಿದ್ದಾಗ. 2007ರಲ್ಲಿ ಅವರ ಕ್ಯಾಬಿನೆಟ್ಟೇ ಇದನ್ನು ಆರಂಭಿಸಿದ್ದು. ಜಾರಿ ಮಾಡಿದವರು ಬಿಜೆಪಿಯವರು, ಮುಂದುವರೆಸಿಕೊಂಡು ಹೋದವರು ಕಾಂಗ್ರೆಸ್ಸಿನವರು.
ಈಗ ಸಮ್ಮಿಶ್ರ ಸರ್ಕಾರವು ವಿದ್ಯಾರ್ಥಿಗಳ ಹೋರಾಟದ ಪರ ನಿಂತರೆ ಮಾತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೋದಿಯವರ ಮೋಸದ ನೀತಿಯ ವಿರುದ್ಧ ನಿಜವಾಗಲೂ ಇದ್ದಾರೆ ಎಂದು ನಂಬಬಹುದು.
– ಸಂಜಯ್,
ಕರ್ನಾಟಕ ವಿದ್ಯಾರ್ಥಿ ಸಂಘಟನೆ


