ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿದ ನಡೆದ ಪ್ರತಿಭಟನೆ ಎಂದು ಡ್ರೋನ್‌ನಲ್ಲಿ ಚಿತ್ರೀಕರಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಡಿಯೋ ಹಿನ್ನೆಲೆಯಲ್ಲಿ ದ್ವಿಜೇಂದ್ರಲಾಲ್ ರಾಯ್ ಬರೆದ ದೇಶ ಭಕ್ತಿಯ ಬಂಗಾಳಿ ಹಾಡು “ಧನ ಧನ್ಯೋ ಪುಷ್ಪೇ ಭೋರಾ” ಹಾಕಿರುವುದು ಕೇಳಿಸುತ್ತದೆ. ಅಲ್ಲದೆ, ಸಾವಿರಾರು ಜನರು ಮೇಣದ ದೀಪ ಹಿಡಿದು ನಿಂತಿರುವುದು ಇದೆ.
ಬಿಜೆಪಿ ಯುವಮೋರ್ಚಾ, ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಹಿಂದುತ್ವವಾದಿ ದೇಬಜಿತ್ ಸರ್ಕಾರ್ (@debajits3110) ಸೆಪ್ಟೆಂಬರ್ 5ರಂದು ವೈರಲ್ ವಿಡಿಯೋ ಹಂಚಿಕೊಂಡು, “ಇತಿಹಾಸ ಸೃಷ್ಟಿಯಾಗಿದೆ! ಇಡೀ ಕೋಲ್ಕತ್ತಾದ ಜನರು ಇಂದು ಬೀದಿಗಿಳಿದಿದ್ದಾರೆ. ತಿಲೋತ್ತಮನಿಗೆ ನ್ಯಾಯ ಸಿಗುವವರೆಗೂ ಈ ಚಳವಳಿಯನ್ನು ನಿಲ್ಲಿಸುವುದು ಅಸಾಧ್ಯ” ಎಂದು ಬರೆದುಕೊಂಡಿದ್ದರು.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೆಪ್ಟೆಂಬರ್ 5ರಂದು ವಿಡಿಯೋ ಹಂಚಿಕೊಂಡು “ಕಳೆದ ರಾತ್ರಿ ಪಶ್ಚಿಮ ಬಂಗಾಳದಲ್ಲಿ ದ್ವಿಜೇಂದ್ರಲಾಲ್ ರಾಯ್ ಅವರ ದೇಶ ಭಕ್ತಿಯ ಕ್ಲಾಸಿಕ್ ಹಾಡು ‘ಧನ್ ಧನ್ಯ ಪುಷ್ಪೇ ವ್ರಾ’ದೊಂದಿಗೆ ಆರ್‌ಜಿ ಕರ್ ಘಟನೆಯ ನ್ಯಾಯಕ್ಕಾಗಿ ಪ್ರತಿಭಟನೆ ಸ್ಪೋಟಗೊಂಡಿತು” ಎಂದು ಬರೆದುಕೊಂಡಿದ್ದರು.

ಬಿಜೆಪಿ ವಕ್ತಾರ ಪ್ರತ್ಯೂಷ್ ಕಾಂತ್ ಸೆಪ್ಟೆಂಬರ್ 5ರಂದು ವಿಡಿಯೋ ಹಂಚಿಕೊಂಡು “ಕಳೆದ ರಾತ್ರಿ, ಪಶ್ಚಿಮ ಬಂಗಾಳದಲ್ಲಿ ದ್ವಿಜೇಂದ್ರಲಾಲ್ ರಾಯ್ ಅವರ ದೇಶಭಕ್ತಿಯ ಕ್ಲಾಸಿಕ್, ‘ಧನ್ ಧನ್ಯ ಪುಷ್ಪೇ ವ್ರಾ’ ನೊಂದಿಗೆ #JUSTCAforrogkar ಪ್ರತಿಭಟನೆ ಸ್ಫೋಟಿಸಿತು” ಎಂದು ಬರೆದುಕೊಂಡಿದ್ದರು.

ಇನ್ನೂ ಅನೇಕ ಫೇಸ್‌ಬುಕ್ ಮತ್ತು ಎಕ್ಸ್ ಬಳಕೆದಾರರು ವೈರಲ್ ವಿಡಿಯೋ ಹಂಚಿಕೊಂಡು “ಕೋಲ್ಕತ್ತಾದಲ್ಲಿ ಪ್ರತಿಭಟನೆ ನಡೆದಿದೆ” ಎಂದಿದ್ದರು.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ವಿಡಿಯೋ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದಾಗ ‘ANICUR ROHOMAN M‘ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 11ರಂದು ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ವಿಡಿಯೋಗೆ ಕೊಟ್ಟಿದ್ದ ಬೆಂಗಾಲಿ ಭಾಷೆಯ ಕ್ಯಾಪ್ಶನ್ ಅನ್ನು ಭಾಷಾಂತರಿಸಿ ನೋಡಿದಾಗ “24ರ ಹುತಾತ್ಮರ ಸ್ಮರಣಾರ್ಥ ಇಂದು ಉತ್ತರದಲ್ಲಿ ಮೇಣದ ಬತ್ತಿ ಬೆಳಗಳಾಯಿತು. ನಾವು ನಿಮ್ಮನ್ನು ಮರೆಯುವುದಿಲ್ಲ” ಎಂದು ಬರೆದಿರುವುದು ಗೊತ್ತಾಗಿದೆ. ಉತ್ತರ ಎಂಬುವುದು ಎಲ್ಲಿ ಎಂದು ನೋಡಿದಾಗ, ಅದು ಬಾಂಗ್ಲಾದೇಶದ ರಾಜಧಾನಿ ಢಾಕಾದ ಸಮೀಪದ ಪ್ರದೇಶದ ಎಂದು ತಿಳಿದು ಬಂದಿದೆ.

ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ, ಆಗಸ್ಟ್ 9ರಂದು ಫೇಸ್‌ಬುಕ್ ಖಾತೆಯೊಂದರಲ್ಲಿ ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ವಿಡಿಯೋಗೆ “ಹುತಾತ್ಮರಿಗೆ ಗೌರವ ಸಲ್ಲಿಸುವ ಸಲುವಾಗಿ ಆಗಸ್ಟ್ 9, 2024ರಂದು ಉತ್ತರದಲ್ಲಿ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಯಿತು” ಎಂದು ಕ್ಯಾಪ್ಶನ್ ಕೊಡಲಾಗಿದೆ.

faiyaz (@catstits) ಎಂಬ ಎಕ್ಸ್ ಖಾತೆಯಲ್ಲಿ ಆಗಸ್ಟ್ 9, 2024ರಂದು ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, “ಇಂದು ಉತ್ತರ ಫ್ರೆಂಡ್ಸ್ ಕ್ಲಬ್‌ನಲ್ಲಿ ಹುತಾತ್ಮರನ್ನು ಸ್ಮರಿಸಲು ಇಡೀ ದೇಶ ಒಗ್ಗೂಡಿ, ಕ್ಯಾಂಡಲ್ ಲೈಟ್ ಹಚ್ಚಲಾಯಿತು” ಎಂದು ಬರೆದುಕೊಂಡಿದ್ದರು.

ಬಾಂಗ್ಲಾದೇಶದ ಉತ್ತರದಲ್ಲಿ ಕ್ಯಾಂಡಲ್ ಮಾರ್ಚ್ ನಡೆದಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿತ್ತು. ಈ ಕುರಿತು ಬಂಗಾಳಿ ಭಾಷೆಯ ಸುದ್ದಿ ವಾಹಿನಿ ಎನ್‌ಟಿವಿ ಮಾಡಿರುವ ವರದಿಯ ಲಿಂಕ್ ಇಲ್ಲಿದೆ.
‘Rajuk College Photography Club – RCPC’ ಫೇಸ್‌ಬುಕ್ ಖಾತೆಯಲ್ಲಿ ಆಗಸ್ಟ್ 7ರಂದು ಕ್ಯಾಂಡಲ್ ಮಾರ್ಚ್ ಕುರಿತು ಪೋಸ್ಟರ್ ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಪ್ರತಿಭಟನಾ ಸ್ಥಳ ಫ್ರೆಂಡ್ಸ್ ಕ್ಲಬ್ ಫೀಲ್ಡ್ ಸೆಕ್ಟರ್ 3, ಉತ್ತರ, ಢಾಕಾ ಎಂದು ಬರೆಯಲಾಗಿತ್ತು.

ಒಟ್ಟಿನಲ್ಲಿ ಬಾಂಗ್ಲಾದೇಶದ ಢಾಕಾ ಸಮೀಪದ ಉತ್ತರ ಎಂಬ ಸ್ಥಳದಲ್ಲಿ ಹುತಾತ್ಮರನ್ನು ಸ್ಮರಿಸಿ ಕ್ಯಾಂಡಲ್ ಲೈಟ್ ಮಾರ್ಚ್ ಮಾಡಿರುವುದನ್ನು ಕೋಲ್ಕತ್ತಾದ ಪ್ರತಿಭಟನೆಯ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : FACT CHECK : ಹಿಂದೂ ಬಾಲಕನ ತಾಯತವನ್ನು ಮುಸ್ಲಿಮರು ಬಲವಂತದಿಂದ ತೆಗೆದಿದ್ದಾರೆ ಎಂಬುವುದು ಸುಳ್ಳು


