(ಇದು ನ್ಯಾಯಪಥ ಆಗಸ್ಟ್ 16-31 ಸಂಚಿಕೆಯಲ್ಲಿ ಪ್ರಕಟವಾದ ಬರಹ)
ಕೃಷಿಪ್ರಧಾನ ಸಮಾಜ ಎಂದರೆ ಭಾರತೀಯ ಸಂದರ್ಭದಲ್ಲಿ ಗ್ರಾಮಗಳೆಂದೇ ಅರ್ಥ. ಗ್ರಾಮಗಳಲ್ಲಿ ಜಾತಿಪದ್ಧತಿಯ ಆಚರಣೆ ಹಸಿ ಮತ್ತು ಕ್ರೂರವಾಗಿರುತ್ತದೆ. ಮಹಿಳೆಯರ ಮೇಲಾದರೆ ಬೆತ್ತಲೆ ಮೆರವಣಿಗೆ, ಅವಾಚ್ಯ ಬೈಗುಳ, ಆತ್ಯಾಚಾರದಲ್ಲಿ ಕೊನೆಗೊಳ್ಳುತ್ತದೆ. ಪುರುಷರ ಮೇಲಾದರೆ ತೀವ್ರ ದೈಹಿಕ ಹಲ್ಲೆ, ಅಂಗಾಂಗಗಳ ಊನಗೊಳಿಸುವಿಕೆ ಮತ್ತು ಹತ್ಯೆಯಲ್ಲಿ ಪರ್ಯವಸಾನವಾಗುತ್ತದೆ. ಪ್ರಬಲ ಜಾತಿಗಳು ತಮಗಿಂತ ದುರ್ಬಲ ಜಾತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ನಿರಂತರವಾಗಿ ಶೋಷಿಸುತ್ತಾ ಭಯೋತ್ಪಾದನೆಯನ್ನು ಉಂಟುಮಾಡುತ್ತವೆ. ಸತತ ಮಾನಸಿಕ ಕ್ರೌರ್ಯ ಮತ್ತು ದೈಹಿಕ ದಂಡನೆಯಿಂದ ಕುಗ್ಗಿಹೋದ ಜಾತಿಗಳು ಪ್ರಬಲ ಜಾತಿಗಳ ಮಾನಸಿಕ, ಆಧ್ಯಾತ್ಮಿಕ ಮತ್ತು ದೈಹಿಕ ಅಧೀನಕ್ಕೆ ಒಳಗಾಗುತ್ತವೆ ಮತ್ತು ಒಳಗಾಗಿವೆ. ತಳಸಮುದಾಯಗಳ ಸಣ್ಣ ಸಕಾರಾತ್ಮಕ ಪ್ರತಿರೋಧ- ಅಂದರೆ ಒಳ್ಳೆಯ ಬಟ್ಟೆ ಮತ್ತು ಒಡವೆ ಧರಿಸುವುದು, ಆತ್ಮವಿಶ್ವಾಸ ಅಥವಾ ಸ್ವಾಭಿಮಾನದಿಂದ ವರ್ತಿಸುವುದನ್ನೂ ಪ್ರಬಲ ಜಾತಿಗಳು ಸಹಿಸುವುದಿಲ್ಲ. ಆರ್ಥಿಕ, ಸಾಮಾಜಿಕ ಚಲನೆ ಒಂದು ಕಡೆಗೆ ಇರಲಿ, ಮಾನಸಿಕ, ಆಧ್ಯಾತ್ಮಿಕ ಚಲನೆ ಸಹ ಸಾಧ್ಯವಾಗದಂತೆ ನೋಡಿಕೊಳ್ಳುತ್ತವೆ. ಅದನ್ನು ಮೀರಿದರೆ ಕ್ರೂರವಾಗಿ ಶಿಕ್ಷಿಸುತ್ತವೆ. ಹಾಗಾಗಿ ಪ್ರತಿರೋಧವೆನ್ನುವುದು ಸಂಪೂರ್ಣವಾಗಿ ಗೈರುಹಾಜರಾಗಿರುತ್ತದೆ. ಜಾತಿನೆಲೆಯ ಮೃಗೀಯ ನ್ಯಾಯ ಸಹಜವೆಂಬಂತೆ ಸ್ವೀಕರಿಸಲ್ಪಡುತ್ತದೆ.
ಬಂಡವಾಳಶಾಹಿ ಅಥವಾ ಬಂಡವಾಳಶಾಹಿಯೋತ್ತರ ಸಮಾಜದಲ್ಲಿ ಭಾರತೀಯ ಗ್ರಾಮಗಳ ಮೃಗೀಯ ನ್ಯಾಯವನ್ನು ಆದರ ಮೂಲ ರೂಪದಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ. ಸ್ವತಂತ್ರ ಭಾರತ ಸಂವಿಧಾನ ನೀಡಿದ ಅವಕಾಶಗಳಿಂದ ತಳಸಮುದಾಯಗಳು ಆರ್ಥಿಕ, ಸಾಮಾಜಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಚಲನೆಯನ್ನು ಕಂಡುಕೊಂಡವು. 90ರ ದಶಕದ ನಂತರ ಪ್ರವಧಮಾನಕ್ಕೆ ಬಂದ ಬಂಡವಾಳಶಾಹಿ ಬಂಡವಾಳಶಾಹಿಯೋತ್ತರ ಸಮಾಜ ಈ ಚಲನೆಯನ್ನು ತೀವ್ರಗೊಳಿಸಿತು. ಈ ವಿದ್ಯಮಾನಗಳಿಂದ ಪ್ರಬಲ ಜಾತಿಗಳು ಗೊಂದಲಗೊಂಡವು. ಏಕೆಂದರೆ ಅವು ಎದುರಿಸಬೇಕಾದ ಎರಡು ಸವಾಲುಗಳಿದ್ದವು.
ಒಂದು, ಗ್ರಾಮಗಳಲ್ಲಿರುವಂತೆ ಗಟ್ಟಿಯಾಗಿ ಜಾತಿಪದ್ಧತಿಯನ್ನು ನೆಲೆಗೊಳಿಸುವುದು.
ಎರಡನೆಯದು, ತಳಸಮುದಾಯಗಳಲ್ಲಿ ’ಭಯೋತ್ಪಾದನೆ’ ಉಂಟುಮಾಡಿ ಅವುಗಳನ್ನು ಅಧೀನದಲ್ಲಿಟ್ಟುಕೊಳ್ಳುವುದು.
ನಗರಪ್ರದೇಶಗಳಲ್ಲಿನ ಭೂಮಿ, ವಸತಿ ಮತ್ತು ವಾಣಿಜ್ಯದ ಮೇಲೆ ಹತೋಟಿಯನ್ನು ಸಾಧಿಸಿ ಜಾತಿಪದ್ಧತಿಯನ್ನು ಗ್ರಾಮ ರೂಪದಲ್ಲಿ ಉಳಿಸಿಕೊಳ್ಳದಿದ್ದರೂ, ಅದರ ಮೂಲ ಲಕ್ಷಣಗಳನ್ನು ಉಳಿಸಿಕೊಂಡು ಮೊದಲ ಉದ್ದೇಶವನ್ನು ಈಡೇರಿಸಿಕೊಂಡವು. ಉದಾಹರಣೆ ಜಾತಿ ಆಧಾರಿತ ಲೇಔಟ್‌ಗಳ ನಿರ್ಮಾಣ, ಬಾಡಿಗೆ ಮನೆ ನೀಡುವಾಗ ತಾರತಮ್ಯ, ಉದ್ಯೋಗಾವಕಾಶದ ವಂಚನೆ ಹೀಗೆ.
ಪ್ರಬಲ ಜಾತಿ ಸೂಚಕ ಪ್ರತಿಮೆ, ಹೆಸರು, ಕಟ್ಟಡ, ಹೋಟೆಲ್ ಮತ್ತು ಆಯಕಟ್ಟಿನ ಜಾಗಗಳಲ್ಲಿ ಶಾಲಾಕಾಲೇಜು ಮತ್ತು ಮಠಗಳ ನಿರ್ಮಾಣದಿಂದ ಜಾತಿವ್ಯವಸ್ಥೆಯ ಗೋಚರ/ಅಗೋಚರ ಪ್ರಭಾವಳಿಯನ್ನು ಸೃಷ್ಟಿಸಿ ಮೊದಲ ಉದ್ದೇಶವನ್ನು ಈಡೇರಿಸಿಕೊಂಡವು.
ತಳಸಮುದಾಯಗಳಲ್ಲಿ ’ಭಯೋತ್ಪಾದನೆ’ ಉಂಟುಮಾಡುವ ಎರಡನೇ ಉದ್ದೇಶ ನಿಜವಾಗಿಯೂ ಕಷ್ಟಕರವಾಗಿತ್ತು. ಆದರೆ ಮಾಹಿತಿ ಮತ್ತು ತಂತ್ರಜ್ಞಾನದ ಬೆಳವಣಿಗೆ ಆ ಉದ್ದೇಶ ಈಡೇರಿಸಿಕೊಳ್ಳಲು ಸುವರ್ಣಾವಕಾಶ ಒದಗಿಸಿತು. ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಮೀಡಿಯಾದ ಅನಾಮಿಕತೆ, ಮುಖ ಮರೆಸಿಕೊಳ್ಳುವಿಕೆ ಅವುಗಳಿಗೆ ಮತ್ತಷ್ಟು ಕಸುವನ್ನು ಒದಗಿಸಿತು. ತಳಸಮುದಾಯಗಳನ್ನು ಅಧೀನಕ್ಕೆ ತೆಗೆದುಕೊಳ್ಳಲು ಪ್ರಬಲ ಜಾತಿಗಳು ಸಂದರ್ಭಾನುಸಾರ ಅನೇಕ ವಿಷಯಗಳನ್ನು ಬಳಸಿಕೊಳ್ಳಲಾರಂಭಿಸಿದವು. ಪ್ರಬಲ ಜಾತಿಗಳು ಅದರಲ್ಲೂ ಬ್ರಾಹ್ಮಣ ಜಾತಿಯ ಮುದ್ದಿನ ಪರಿಕರವೆಂದರೆ “ಮೀಸಲಾತಿ ವಿರೋಧ”. ಮೀಸಲಾತಿ ವಿರುದ್ಧ ನಕಾರಾತ್ಮಕ ನಿರೂಪಣೆ-ಡಿಸಕೋರ್ಸ್ ಒಂದನ್ನು ಯಶಸ್ವಿಯಾಗಿ ಕಟ್ಟುವುದು; ಹೀಗೆ ಮಾಡುತ್ತಾ ಬಂಡವಾಳಶಾಹಿಯೋತ್ತರ ಸಮಾಜದಲ್ಲಿ ಸಾಂಕೇತಿಕ ಹಿಂಸೆಯ ದಾರಿಗಳನ್ನು ಹುಡುಕುವುದು.
ಪ್ರೆಂಚ್ ಸಮಾಜಶಾಸ್ತ್ರಜ್ಞ ಪಿಯರಿ ಬೋರ್ದ್ಯು ಪ್ರಕಾರ ಸಾಂಕೇತಿಕ ಹಿಂಸೆ ಎಂದರೆ ಸಂಕೇತ, ಚಿಹ್ನೆ, ಭಾಷೆ ಮತ್ತು ಸಾಂಸ್ಕೃತಿಕ ನಿಯಮಗಳು/ಮೌಲ್ಯಗಳ ಮೂಲಕ ಸಮಾಜದ ಪ್ರಬಲ ಗುಂಪುಗಳು, ಅಧೀನ ಗುಂಪುಗಳ ಮೇಲೆ ಅಧಿಕಾರ ಮತ್ತು ಹತೋಟಿಯನ್ನು ಸಾಧಿಸುವುದು. ಈ ಹಿಂಸೆಯು ಸೂಕ್ಷ್ಮವಾಗಿ ಮತ್ತು ಮೃದುವಾಗಿ ಕಂಡರೂ ಅದು ದೈಹಿಕ ಹಿಂಸೆಯಷ್ಟೆ ಅಪಾಯವನ್ನು ಉಂಟುಮಾಡಬಲ್ಲದು. ಸಾಂಕೇತಿಕ ಹಿಂಸೆಯು ಪ್ರಬಲ ಗುಂಪುಗಳ ಅಧಿಕಾರ ಮತ್ತು ಅಂತಸ್ತನ್ನು ದೃಢಪಡಿಸುತ್ತದೆ. ಮರೆಮಾಚಿದ ಸ್ವರೂಪದಲ್ಲಿ ಎರಗುವ ಇದು ಅಧಿಕಾರ ಸಂಬಂಧಗಳಿಗೆ ಮುಸುಕುಹಾಕಿ, ಅತಿ ಸಹಜವೇನೋ, ಇರಬೇಕಾದ್ದು ಹೀಗೆಯೇ ಏನೋ ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ. ಜನರ ಅರಿವಿಗೆ ಬರದಂತೆಯೇ ಅವರ ಗ್ರಹಿಕೆ, ನಂಬಿಕೆ ಮತ್ತು ಭಾವನೆಗಳನ್ನು ಪ್ರಭಾವಿಸುತ್ತಿರುತ್ತದೆ. ಪ್ರಬಲ ಗುಂಪುಗಳ ಮೌಲ್ಯ ಮತ್ತು ನಂಬಿಕೆಗಳನ್ನು ಅಧೀನ ಗುಂಪುಗಳ ಮೇಲೆ ಸಾಧಿಸುವುದರ ಜೊತೆಗೆ ಅಧೀನ ಗುಂಪುಗಳನ್ನು ಮೌನವಾಗಿಸಿ ಅವರ ನಂಬಿಕೆಗಳನ್ನು ಅಪಮೌಲ್ಯಗೊಳಿಸುತ್ತಿರುತ್ತದೆ. ಪ್ರಬಲ ಜಾತಿಗಳು ಇಂತಹ ಸಾಂಕೇತಿಕ ಹಿಂಸೆಯನ್ನು ಎಸಗಲು ಸಾಮಾಜಿಕ ಮತ್ತು ಸಮೂಹ ಮಾಧ್ಯಮಗಳನ್ನು ಬಳಸಲಾರಂಭಿಸಿವೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮವೊಂದರಲ್ಲಿ ’ಅನುರಾಧ ತಿವಾರಿ’ ಎಂಬ ಬ್ರಾಹ್ಮಣ ಮಹಿಳೆ ’ಬ್ರಾಹ್ಮೀನ್ ಜೀನ್ಸ್’ ಎಂಬ ಶೀರ್ಷಿಕೆಯಡಿ ತನ್ನ ತೋಳ್ಬಲ ಪ್ರದರ್ಶಿಸುವ ಪೋಟೋ ಹಂಚಿಕೊಂಡರು. ಅವರೇ ಹೇಳಿಕೊಳ್ಳುವಂತೆ ಅವರು ’ಅತ್ಯಂತ ಹೆಮ್ಮೆ ಪಡುವ ಬ್ರಾಹ್ಮಣ ಮಹಿಳೆ’; ಟೆಡ್‌ಎಕ್ಸ್ ವೇದಿಕೆಯಲ್ಲಿ ಭಾಷಣಗಾರ್ತಿ, ಕೋರಾಡೈಜೆಸ್ಟ್ ಮೊದಲಾದ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯರಾಗಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಸದರಿ ಚರ್ಚೆಯಲ್ಲಿರುವ ಪೋಸ್ಟ್ ಬಂದಕೂಡಲೆ, ಆಕೆ ಜಾತಿವಾದವನ್ನು ಬೆಳೆಸುತ್ತಿದ್ದಾರೆ. ಜೊತೆಗೆ ಫಿಟ್ ಆಗಿರುವುದು ಒಳ್ಳೆಯದು ಆದರೆ ಅದನ್ನು ಮೇಲರಿಮಿಗೆ ಅಥವಾ ನಿರ್ದಿಷ್ಟ ಜೀನ್ಸ್‌ಗೆ (ವಂಶವಾಹಿನಿಗೆ) ಆರೋಪಿಸುವುದು ಒಂದು ಕುಟುಂಬ ಅಥವಾ ಒಂದು ದೇಶವಾಗಿ ಭಾರತದ ಒಳ್ಳೆ ಲಕ್ಷಣವಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಭಾರತದಲ್ಲಿ ಸಮಾನತೆ ಸಾರ್ವತ್ರಿಕವಾದಾಗ ಮೀಸಲಾತಿ ರದ್ದುಗೊಳಿಸುವ ಬಗ್ಗೆ ಯೋಚಿಸುತ್ತೇವೆ: ರಾಹುಲ್ ಗಾಂಧಿ
ಆ ವಿಮರ್ಶೆಯ ಬಗೆಗೆ ಕಿಂಚಿತ್ತು ಯೋಚಿಸದೆ, ಅನುರಾಧ ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡರು. ನಾನು ನಿರೀಕ್ಷಿಸಿದಂತೆಯೇ ಆಯಿತು. “ಬ್ರಾಹ್ಮಿನ್” ಎನ್ನುವ ಪದವೇ ಕೀಳಾದ ಜನರನ್ನು ಕೆರಳಿಸಿದೆ: ಇದೇ ಯಾರು ಜಾತಿವಾದಿಗಳೆಂಬುದನ್ನು ಸಾಕಷ್ಟು ಹೇಳುತ್ತದೆ ಎಂದು ಮತ್ತೆ ಬರೆದರು.
ಮೇಲ್ಜಾತಿಗಳು ವ್ಯವಸ್ಥೆಯಿಂದ ಏನನ್ನೂ ಪಡೆಯುತ್ತಿಲ್ಲ. ಮೀಸಲಾತಿಯಿಲ್ಲ, ಉಚಿತ ಸೌಲಭ್ಯಗಳಿಲ್ಲ, ಪ್ರತಿಯೊಂದನ್ನೂ ನಾವು ದುಡಿದೇ ಗಳಿಸುತ್ತೇವೆ ಆದುದರಿಂದ ನಮ್ಮ ವಂಶ ಮೂಲದ ಬಗೆಗೆ ಹೆಮ್ಮೆ ಇದೆ. ಇದರ ಜೊತೆ ಡೀಲ್ ಮಾಡಿ ಎಂದು ಸವಾಲು ಹಾಕಿದರು. ಒಂದು ಇನ್‌ಸ್ಟಾಗ್ರಾಂ ಪೋಸ್ಟ್ ಬಗ್ಗೆ ಇಷ್ಟೆಲ್ಲಾ ಬರೆಯುವ ವಿಶ್ಲೇಷಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೌದು, ಏಕೆಂದರೆ ಇದು ಕೆಲವು ಮನುವಾದಿ ಬ್ರಾಹ್ಮಣರ ನಾಯಕತ್ವದಲ್ಲಿ ಪ್ರಬಲ ಜಾತಿವಾದಿಗಳು ತಳಸಮುದಾಯಗಳ ಮೇಲೆ ನಡೆಸುತ್ತಿರುವ ಹೊಸರೂಪದ ಹಿಂಸೆ ಮತ್ತು ಜಾತಿ ದಬ್ಬಾಳಿಕೆಯಾಗಿದೆ.
ಅನುರಾಧ ತಿವಾರಿಯವರು ಇನ್‌ಸ್ಟಾಗ್ರಾಂದ ಫೋಟೋ ಅದರ ಜೊತೆಗೆ ಟ್ಯಾಗ್ ಮಾಡಿರುವ ಹೇಳಿಕೆಯನ್ನು ಸೂಕ್ಷ್ಮವಾಗಿ ಚಿಕಿತ್ಸಕ ದೃಷ್ಟಿಯಿಂದ ಗಮನಿಸಿದರೆ ಅದರಲ್ಲಿರುವ ಸಾಂಕೇತಿಕ ಹಿಂಸೆ ಮತ್ತು ಜಾತಿ ದಬ್ಬಾಳಿಕೆಯನ್ನು ಗುರುತಿಸಬಹುದು.
ತಿವಾರಿಯವರು ತಮ್ಮ ಪೋಸ್ಟ್‌ನಲ್ಲಿ ತೋಳಿನ ಸ್ನಾಯುಗಳನ್ನು ಸಾಂಕೇತಿಕವಾಗಿ ಬಳಸಿದ್ದಾರೆ. ಅದು ಯಾರನ್ನು ಅವರು ಹಂಗಿಸುತ್ತಿದ್ದಾರೋ ಅವರನ್ನು ಯಾವಾಗ ಬೇಕಾದರೂ ದೈಹಿಕವಾಗಿ ಬಗ್ಗುಬಡಿಯಬಲ್ಲವೆಂಬ ಸಾಮರ್ಥ್ಯ ಎಂದು ಹೇಳುತ್ತದೆ. ಅಷ್ಟು ಮಾತ್ರವಲ್ಲದೆ ಅವರ ಜೀನ್ಸ್ ಬ್ರಾಹ್ಮಣರದಾಗಿರುವುದರಿಂದ ಪರಂಪರಾನುಗತವಾಗಿ ನಾವು ಬಲಶಾಲಿಗಳು ಎಂಬ ಸೂಚನೆಯನ್ನು ನೀಡುತ್ತದೆ.
ನಾನು ಮತ್ತು ಮೇಲ್ಜಾತಿಗಳು ಮೀಸಲಾತಿಯನ್ನು ಅಥವಾ ಇತರ ಸೌಲಭ್ಯಗಳನ್ನು ಪಡೆಯುವುದಿಲ್ಲ ಎಂಬ ಹೇಳಿಕೆಯ ಮೂಲಕ ಅದು ಮೀಸಲಾತಿಯನ್ನು ಪಡೆಯುತ್ತಿರುವವರ ವಿರುದ್ಧ ಪ್ರಬಲ ಜಾತಿಗಳನ್ನು ಎತ್ತಿಕಟ್ಟಿ ಹಿಂಸೆಗೆ ಪ್ರಚೋದಿಸುತ್ತದೆ. ಪದೇಪದೇ ಪ್ರಬಲ ಜಾತಿಯವರ ಮೀಸಲಾತಿ ವಿರೋಧಿ ನಿರೂಪಣೆಯನ್ನು ದೃಢಗೊಳಿಸಿ, ಮೀಸಲಾತಿ ನೀಡುವುದು ತಪ್ಪು ಎಂದು ಪ್ರತಿಪಾದಿಸುವುದು, ತಾನು ಪರಿಶ್ರಮ ಮತ್ತು ಪ್ರತಿಭೆಯಿಂದ ಮೇಲೆ ಬಂದಿದ್ದೇನೆ ಎನ್ನುತ್ತಲೇ ಪರೋಕ್ಷವಾಗಿ ತಳಸಮುದಾಯಗಳು ಆದರಲ್ಲೂ ಮುಖ್ಯವಾಗಿ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಜನರು ಸೋಮಾರಿಗಳು ಮತ್ತು ಪ್ರತಿಭಾಹೀನರು ಎಂದು ಪ್ರಾಪಗಾಂಡ ಮಾಡುವುದು.
ಎಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಈಗ ಒಂದಲ್ಲ ಒಂದು ರೀತಿ ಎಲ್ಲಾ ಜಾತಿಗಳಿಗೂ (ಬ್ರಾಹ್ಮಣರಿಗೆ 10% ಮೀಸಲಾತಿಯನ್ನು ಒಳಗೊಂಡಂತೆ) ಮೀಸಲಾತಿಯಿದೆ. ಅದನ್ನು ಮುಚ್ಚಿಡುವುದರ ಜೊತೆ ಬ್ರಾಹ್ಮಣ ಮತ್ತು ಇತರ ಮೇಲ್ಜಾತಿಗಳು ಮೀಸಲಾತಿಯಿಂದ ತೊಂದರೆಗೊಳಗಾದ ಬಲಿಪಶುಗಳು ಎಂದು ಸ್ವಮರುಕ ವ್ಯಕ್ತಪಡಿಸಿಕೊಂಡು ತಮ್ಮ ಈ ಸ್ಥಿತಿಗೆ ಅನುಸೂಚಿತ ಜಾತಿ/ಬುಡಕಟ್ಟುಗಳು ಕಾರಣ ಎಂದು ತೋರುತ್ತಾ ಅವರನ್ನು ಮತ್ತಷ್ಟು ’ಅನ್ಯ’ರಾಗಿಸಿ ಮೇಲ್ಜಾತಿಗಳಲ್ಲಿ ಶತ್ರುತ್ವ ಮೂಡಿಸುವುದು. ಇಂತಹ ಡಿಸ್‌ಕೋರ್ಸ್‌ನ ಮುಂದುವರಿದ ಪರಿಣಾಮವೇನೆಂದರೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ.ಜಾ ಮತ್ತು ಪ.ಪಂ ವಿದ್ಯಾರ್ಥಿಗಳಿಗೆ ಹಿಂಸೆ ನೀಡಲಾಗುತ್ತದೆ. ಅವರನ್ನು ಅಲ್ಲಿಂದ ಹೋಗುವಂತೆ ಅಥವಾ ತಮ್ಮ ಬದಕನ್ನು ಅಂತ್ಯಗೊಳಿಸಿಕೊಳ್ಳುವಂತೆ ಮಾಡಲಾಗುತ್ತದೆ. ಮೀಸಲಾತಿ ವಿರೋಧದ ಹಿಂದೆ ಅಡಗಿರುವ ಮತ್ತೊಂದು ಅಂಶ ಎಂದರೆ ಇಡೀ ಸಂವಿಧಾನವನ್ನೆ ಅಪ್ರಸ್ತುತಗೊಳಿಸುವುದು. ವಂಶವಾಹಿ ಅಥವಾ ಜೀನ್ಸ್‌ಅನ್ನು ಸಮರ್ಥಿಸುವ ಮನುಸ್ಮೃತಿಯೇ ಸರಿ ಎಂಬ ನಿಲುವಿಗೆ ಬರುವಂತೆ ಜನರ ಗ್ರಹಿಕೆ ಬದಲಿಸುವುದು.
ತಿವಾರಿಯವರು ನಾನು ಬ್ರಾಹ್ಮಣತಿ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿರುವುದು ನ್ಯಾಯವೆಂದೂ ಅದರ ಬಗ್ಗೆ ಕಿಂಚಿತ್ ವಿಷಾದವಿಲ್ಲವೆಂದೂ ಹೇಳುತ್ತಾರೆ. ಹಾಗೆ ಹೇಳುತ್ತಲೇ ತನ್ನ ಜಾತಿಯವರಿಂದ ಇತರ ಜಾತಿಗಳಿಗೆ ಹಿಂದೆ ಆಗಿರಬಹುದಾದ ಜಾತಿಹಿಂಸೆಯನ್ನು ಸಮರ್ಥಿಸುತ್ತಾರೆ. ಬ್ರಾಹ್ಮಣರು ಮೇಲು ಎಂದು ಇತರರತನ್ನು ಕೀಳು ಎಂದು ಪ್ರತಿಪಾದಿಸಿ ಭಾರತದಲ್ಲಿ ಜಾರಿಯಲ್ಲಿರುವ ’ಬ್ರಾಹ್ಮಿನ್ ಹೆಜಮನಿ’ಯನ್ನು ಮತ್ತಷ್ಟು ಕಠಿಣವಾಗಿ ಅಗತ್ಯಬಿದ್ದರೆ ತೋಳುಬಲ ಬಳಸಿ ಮುಂದುವರಿಸುವ ಸೂಚನೆಯನ್ನು ಫೋಟೋ ಸಮೇತ ನೀಡುತ್ತಾರೆ. ಅನುರಾಧ ತಿವಾರಿಯಂತಹರು ಅಣುಬಾಂಬಿನಷ್ಟೆ ಅಪಾಯಕಾರಿ ಮತ್ತು ಭೀಕರ ಪರಿಣಾಮ ಬೀರಬಲ್ಲ ಬಾಂಬ್‌ಗಳನ್ನು ಭಾಷೆ ಮತ್ತು ಸಂಕೇತಗಳ ಮೂಲಕ ತಳಸಮುದಾಯಗಳ ಮೇಲೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಾಕುತ್ತಲೇ ಇರುತ್ತಾರೆ.
ಇಂತಹ ಮಾನಸಿಕ ದಾಳಿಯು ಅಂತಿಮವಾಗಿ ತಳಸಮುದಾಯಗಳಲ್ಲಿ ಭಯ ಹುಟ್ಟಿಸಿ ಅವರನ್ನು ಬ್ರಾಹ್ಮಣರು ಮತ್ತಿತರ ಪ್ರಬಲ ಜಾತಿಗಳ ಅಧೀನಕ್ಕೆ ಒಳಪಡಿಸುತ್ತದೆ. ಜಾತಿಯ ಮರು ಉತ್ಪಾದನೆ ಅಥವಾ ಮುಂದುವರಿಕೆ ಅಡೆತಡೆಯಿಲ್ಲದಂತೆ ಸಾಗುತ್ತದೆ.

ಡಾ. ಸಿ.ಜಿ. ಲಕ್ಷ್ಮೀಪತಿ
ಸಮಾಜಶಾಸ್ತ್ರಜ್ಞರು. ಕ್ಯಾಸ್ಟ್ ಕೆಮಿಸ್ಟ್ರಿ, ಅಂಬೇಡ್ಕರ್‌ವಾದದ ಆಚರಣೆ, ಲೋಕದೃಷ್ಟಿ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ.


