ಪಶ್ಚಿಮ ಬಂಗಾಳದಲ್ಲಿ ಹಾಡಹಗಲೇ ಮುಸ್ಲಿಂ ಯುವಕನೋರ್ವ ಹಿಂದೂ ಬಾಲಕಿಗೆ ಇರಿದಿದ್ದಾನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ನಾಝಿಯಾ ಇಲಾಹಿ ಖಾನ್ (@naziaelahikhan) ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡು “ಮುಸ್ಲಿಂ ಯುವಕ ಹಿಂದೂ ಯುವತಿಗೆ ಹಾಡಹಗಲೇ ಹೇಗೆ ಇರಿದಿದ್ದಾನೆ ಒಮ್ಮೆ ನೋಡಿ. ಮಮತಾ ರಾಜ್‌ನಲ್ಲಿ ಹಿಂದೂಗಳು ಸುರಕ್ಷಿತರಲ್ಲ. ಪಶ್ಚಿಮ ಬಂಗಾಳದ ಈ ಆಘಾತಕಾರಿ ಪರಿಸ್ಥಿತಿ ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ರಾಜ್ಯಗಳಿಗೆ ಹರಡಲಿದೆ. ಟಿಎಂಸಿ ಮತ ಪಡೆಯುವ ಸಲುವಾಗಿ ಬಾಂಗ್ಲಾದೇಶ, ಮ್ಯಾನ್ಮಾರ್‌ನಿಂದ ಬರುವ ಮುಸ್ಲಿಮರಿಗೆ ಹಣ ಪಡೆದು ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಡುತ್ತಿದೆ. ಇದು ಯಾವ ಸಂದರ್ಭದಲ್ಲಾದರೂ ನನಗೂ ಸಂಭವಿಸಬಹುದು. ಮಮತಾ ಬ್ಯಾನರ್ಜಿಯವರೇ, ಕೋಲ್ಕತ್ತಾ ಪೊಲೀಸರೇ ದಯವಿಟ್ಟು ಸರಿಯಾದ ಕ್ರಮ ಕೈಗೊಳ್ಳಿ. ಪಶ್ಚಿಮ ಬಂಗಾಳ ಇಸ್ಲಾಮಿಕ್ ರಾಜ್ಯವಲ್ಲ. ಕೋಲ್ಕತ್ತಾ ಪೊಲೀಸರೇ ದಯವಿಟ್ಟು ಅರ್ಥ ಮಾಡಿಕೊಳ್ಳಿ” ಎಂದು ಬರೆದುಕೊಂಡಿದ್ದರು.

ಇನ್ನೂ ಕೆಲ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಖಾತೆಗಳಲ್ಲೂ ವಿಡಿಯೋ ಹಂಚಿಕೊಂಡು ಇದೇ ರೀತಿಯ ಪ್ರತಿಪಾದನೆ ಮಾಡಲಾಗಿದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಪರಿಶೀಲಿಸಿದ್ದೇವೆ. ಈ ವೇಳೆ ಸೆಪ್ಟೆಂಬರ್ 5, 2024ರಂದು ಟೈಮ್ಸ್ ಆಫ್ ಇಂಡಿಯಾ ವಿಡಿಯೋ ಕುರಿತು ವರದಿ ಪ್ರಕಟಿಸಿರುವುದು ಕಂಡು ಬಂದಿದೆ.
ವರದಿಯಲ್ಲಿ “ಪಶ್ಚಿಮ ಬಂಗಾಳದ ಬೆಲ್ಘರಿಯಾದ ಪ್ರಫುಲ್ಲಾ ನಗರದ ಅಭಿಜಿತ್ ದತ್ತಾ ಎಂಬ ಯುವಕ 14 ವರ್ಷದ ಶಾಲಾ ಬಾಲಕಿಗೆ ರಸ್ತೆ ಮಧ್ಯೆ ಸುಮಾರು ಮೂರು ಬಾರಿ ಹರಿತವಾದ ಆಯುಧದಿಂದ ಇರಿದಿದ್ದಾನೆ ಎಂದು ಹೇಳಲಾಗಿದೆ.
ಅಭಿಜಿತ್ ದತ್ತಾ ಬಾಲಕಿಗೆ ಪ್ರೇಮ ನಿವೇದನೆ ಮಾಡಿದ್ದ. ಆಕೆ ತಿರಸ್ಕರಿಸಿದ್ದಳು. ಸೆಪ್ಟೆಂಬರ್ 4,2024ರಂದು ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಅಭಿಜಿತ್ ಮತ್ತೊಮ್ಮೆ ಪ್ರೇಮ ನಿವೇದನೆ ಮಾಡಿದ್ದಾನೆ. ಆಗಲೂ ಬಾಲಕಿ ತಿರಸ್ಕರಿಸಿದ್ದಾಳೆ. ಆಗ ಆತ ಬಾಲಕಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ವೇಳೆ ಬಾಲಕಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕುಪಿತಗೊಂಡ ಅಭಿಜಿತ್ ದತ್ತಾ ಬಾಲಕಿಗೆ ಇರಿದಿದ್ದಾನೆ ಎಂದು ವರದಿ ವಿವರಿಸಿದೆ.
ಬಾಲಕಿಗೆ ಇರಿಯುತ್ತಿದ್ದಂತೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ. ಇದರಿಂದ ಆತ ಪ್ರಜ್ಞಾಹೀನನಾಗಿ ಬಿದ್ದಿದ್ದ. ಸ್ಥಳಕ್ಕೆ ಆಗಮಿಸಿದ ಬೆಲ್ಘರಿಯಾ ಠಾಣೆಯ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಮನೆಯವರ ದೂರಿನ ಅನ್ವಯ ಆತನ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೆಲ್ಘರಿಯಾ ಪೊಲೀಸ್ ಅಧಿಕಾರಿ ಸುಭ್ರಜಿತ್ ಮಜುಂದರ್ ಅವರಲ್ಲಿ ಈ ಕುರಿತು ಮಾತನಾಡಿದಾಗ “ಘಟನೆಯ ಹಿಂದೆ ಯಾವುದೇ ಕೋಮು ಆಯಾಮಗಳಿಲ್ಲ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಸಮುದಾಯದವರು ಎಂಬುದಾಗಿ ಹೇಳಿದ್ದಾರೆ ಎಂದು ಕನ್ನಡ ಫ್ಯಾಕ್ಟ್ ಚೆಕ್.ಕಾಂ ವರದಿ ಮಾಡಿದೆ.
ಇದನ್ನೂ ಓದಿ : FACT CHECK : ಆಂಧ್ರ ಪ್ರದೇಶದ ಹಳೆಯ ವಿಡಿಯೋವನ್ನು ಮಣಿಪುರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ


