ಕೇಂದ್ರ ಸರ್ಕಾರ ತೆರಿಗೆ ಹಂಚಿಕೆ ಅನ್ಯಾಯದ ವಿರುದ್ದ ಎಂಟು ರಾಜ್ಯಗಳಿಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅವರು ” ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಅನ್ಯಾಯದ ಕುರಿತು ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ” ಎಂದು ಹೇಳಿದ್ದಾರೆ.
“ಕರ್ನಾಟಕ ಸೇರಿದಂತೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಹೆಚ್ಚಿರುವ ರಾಜ್ಯಗಳು ತಮ್ಮ ಆರ್ಥಿಕ ಕಾರ್ಯಕ್ಷಮತೆಗಾಗಿ ಹಿನ್ನಡೆ ಅನುಭವಿಸುತ್ತಿದೆ. ಈ ರಾಜ್ಯಗಳು ಕಡಿಮೆ ತೆರಿಗೆ ಹಂಚಿಕೆಯನ್ನು ಪಡೆಯುತ್ತಿದೆ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುತ್ತಿದೆ” ಎಂದಿದ್ದಾರೆ.
I have written to the Chief Ministers of Kerala, Tamil Nadu, Andhra Pradesh, Telangana, Maharashtra, Gujarat, Haryana, and Punjab regarding the unfair devolution of taxes by the Union government.
States with higher GSDP per capita, like Karnataka and others, are being penalized… pic.twitter.com/SLqpNwVPDA
— Siddaramaiah (@siddaramaiah) September 11, 2024
“ಹಣಕಾಸು ಆಯೋಗ ಈ ಬಗ್ಗೆ ಯೋಚಿಸಿ, ತೆರಿಗೆ ಸಂಗ್ರಹಿಸಲು ಉತ್ತೇಜನ ನೀಡುವ ಮಾರ್ಪಾಡುಗಳನ್ನು ಮಾಡಬೇಕು. ಒಕ್ಕೂಟ ವ್ಯವಸ್ಥೆಯಲ್ಲಿನ ಈ ಸಮಸ್ಯೆಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ನೆರೆಯ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ತಾರತಮ್ಯ ಅಥವಾ ರಾಜ್ಯಗಳಿಂದ ಸಂಗ್ರಹಿಸಿರುವ ತೆರಿಗೆ ಪಾಲನ್ನು ವಾಪಸ್ ಕೊಡುವಲ್ಲಿ ಮಾಡುತ್ತಿರುವ ಅನ್ಯಾಯದ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಧ್ವನಿಯೆತ್ತಿವೆ.
ಮೊಟ್ಟ ಮೊದಲ ಬಾರಿಗೆ ಕಳೆದ ಫೆಬ್ರವರಿ 7ರಂದು ಕರ್ನಾಟಕ ಸರ್ಕಾರ ‘ದೆಹಲಿ ಚಲೋ’ ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಹೆಸರಿನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸಿತ್ತು.
ಅದರ ಮರುದಿನವೇ ಕೇರಳ ಸರ್ಕಾರ ಕೂಡ ದೆಹಲಿಯಲ್ಲಿ ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆಯಲ್ಲಿ ತಮಿಳುನಾಡು ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.
ಕರ್ನಾಟಕ ಮತ್ತು ಕೇರಳ ಸರ್ಕಾರ ತಮ್ಮ ತೆರಿಗೆ ಪಾಲು ನೀಡಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ, ಕೇಂದ್ರ ಅಲ್ಪ ಮೊತ್ತದ ತೆರಿಗೆ ಪಾಲು ಬಿಡುಗಡೆ ಮಾಡಿದೆ.
ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ನಡುವೆ ಹಲವು ಭಾರೀ ವಾಗ್ದಾಳಿಗಳು ನಡೆದಿದೆ. ಅತ್ತ ಆಂಧ್ರ ಪ್ರದೇಶದಲ್ಲಿ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕೂಡ ಕೇಂದ್ರ ನಮ್ಮ ತೆರಿಗೆ ಪಾಲು ಸರಿಯಾಗಿ ಕೊಡುತ್ತಿಲ್ಲ ಎಂದಿದ್ದರು.
ಇದನ್ನೂ ಓದಿ : ‘ಸಿಎಂ ಬದಲಾವಣೆ ಚರ್ಚೆಯಿಂದ ಆಡಳಿತಕ್ಕೆ ತೊಡಕಾಗಿದೆ; ಜನ ಭರವಸೆ ಕಳೆದುಕೊಳ್ಳುತ್ತಿದ್ದಾರೆ..’; ರಾಹುಲ್‌ಗೆ ಕಾಂಗ್ರೆಸ್ ನಾಯಕರಿಂದ ಪತ್ರ


