ರಾಜ್ಯದ ವೈದ್ಯರುಗಳು ರೋಗಿಗಳಿಗೆ ನೀಡುವ ಔಷಧ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕು ಎನ್ನುವ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋಷೋತ್ತಮ ಬಿಳಿಮಲೆ ಅವರ ಪ್ರಸ್ತಾಪಕ್ಕೆ ಖ್ಯಾತ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ‘ಅಸಂಬದ್ಧ’ ಮತ್ತು ‘ಅನಗತ್ಯ’ ಪ್ರಸ್ತಾಪ ಎಂದು ಹೇಳಿದ್ದಾರೆ. ”ವೈದ್ಯರುಗಳಿಗೆ ರೋಗಿಗಳ ಶುಶ್ರೂಷೆ ಮಾಡುವುದು ಆದ್ಯ ಕರ್ತವ್ಯವಾಗಿದೆ, ಕನ್ನಡ ಬೆಳೆಸುವುದಲ್ಲ. ಒಂದು ವೇಳೆ ಕನ್ನಡ ಬೆಳೆಸುವುದು ವೈದ್ಯರುಗಳ ಕೆಲಸ ಎಂದು ಪ್ರಾಧಿಕಾರ ಹೇಳುವುದಾದರೆ, ಪ್ರಾಧಿಕಾರದಲ್ಲಿ ಕನ್ನಡ ಬೆಳೆಸುವ ಮತ್ತು ಉಳಿಸುವ ಯಾವುದೆ ಹೊಸ ಚಿಂತನೆ ಇಲ್ಲ ಎಂದರ್ಥ” ಎಂದು ಅವರು ಹೇಳಿದ್ದಾರೆ. ಕನ್ನಡದಲ್ಲಿ ಔಷಧ ಚೀಟಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕನ್ನಡ ಪ್ರಾಧಿಕಾರದ ಪ್ರಸ್ತಾಪದ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಡಾಕ್ಟರ್ ಶ್ರೀನಿವಾಸ ಕಕ್ಕಿಲ್ಲಾಯ ಅವರು, ಕನ್ನಡ ಬೆಳೆಸುವುದು ವೈದ್ಯರ ಕೆಲಸವಲ್ಲ ಎಂದು ಹೇಳಿದರು. “ನನಗೆ ಪ್ರೊಫೆಸರ್ ಬಿಳಿಮಲೆ ಮೇಲೆ ತುಂಬಾ ಗೌರವಿದೆ, ಅವರು ಮಾಡಿರುವ ಕೆಲಸಗಳ ಬಗ್ಗೆ ಹೆಮ್ಮೆಯಿದೆ. ಆದರೆ ಅವರ ಇಂತಹ ಸಲಹೆಗಳನ್ನು ನಾನು ಒಪ್ಪಬೇಕೆಂದಿಲ್ಲ. ಒಂದು ವೇಳೆ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆದರೆ ಅದು ಭಾರಿ ಗೊಂದಲಕ್ಕೆ ದಾರಿ ಮಾಡಿಕೊಡುತ್ತದೆ. ರೋಗಿಗಳಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ, ಅದಕ್ಕೆ ಹೊಣೆ ಯಾರು” ಎಂದು ಕೇಳಿದರು.
“ಮೊದಲನೆಯದಾಗಿ ಈಗಾಗಲೆ ಲಕ್ಷಾಂತರ ಔಷಧಿ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಇವೆ. ಔಷಧಗಳ ಹೆಸರಿನಲ್ಲಿ ಒಂದು ಅಕ್ಷರ ಬದಲಾದರೂ ಅದು ಬೇರೆಯೆ ಆಗಿಬಿಡುತ್ತದೆ. ಅಲ್ಲದೆ, ಕನ್ನಡದಲ್ಲಿ ಔಷದ ಬರೆದರೆ ಔಷಧ ಅಂಗಡಿಗಳಲ್ಲಿ ಔಷಧ ಕೊಡುವವರು ಕನ್ನಡಿಗರೆ ಆಗಿರುವುದಿಲ್ಲ. ಅದನ್ನು ಓದಲು ತಿಳಿಯದೆ ಮತ್ತೆ ನಮಗೆ ಕರೆ ಮಾಡಿ ಅದರ ಬಗ್ಗೆ ಕೇಳುತ್ತಾರೆ. ನಾವು ರೋಗಿಗಳನ್ನು ಬಿಟ್ಟು ಅವರಿಗೆ ಉತ್ತರಿಸುವುದೆ ಕೆಲಸ ಮಾಡಿಕೊಂಡಿರಲು ಸಾಧ್ಯವಿಲ್ಲ. ಕನ್ನಡ ಕಟ್ಟುವ ಕೆಲಸ ಎಂದರೆ ಇದಲ್ಲ” ಎಂದು ಅವರು ತಿಳಿಸಿದರು.
“ಜಗತ್ತುಈಗ ಕಿರಿದಾಗುತ್ತಿದೆ. ನಾವು ಆಧುನಿಕ ವೈದ್ಯರು ಜಗತ್ತಿನಾದ್ಯಂತ ವೈದ್ಯರು ಬರೆಯುವ ಹಾಗೆ ಔಷಧಿ ಚೀಟಿಯನ್ನು ಬರೆಯುತ್ತೇವೆ. ಮಂಗಳೂರಿನಲ್ಲಿ ಒಬ್ಬ ವೈದ್ಯ ಬರೆದ ಔಷಧ ಚೀಟಿ ಜಗತ್ತಿನ ಮತ್ತು ದೇಶದ ಬೇರೆ ವೈದ್ಯರಿಗೂ ಓದುವಂತೆ ಇದ್ದು ರೋಗಿಯ ಶುಶ್ರೂಷೆ ಮಾಡುವಂತೆ ಇರಬೇಕು. ಒಂದು ವೇಳೆ ನಾನು ಕನ್ನಡದಲ್ಲಿ ಔಷಧ ಚೀಟಿ ಬರೆದು ಕೊಟ್ಟ ರೋಗಿಯು ಕೇರಳದಲ್ಲಿ ಅನಾರೋಗ್ಯ ಪೀಡಿತನಾದರೆ, ಆತನಿಗೆ ಕನ್ನಡ ಬಾರದ ಮಲಯಾಳಂ ವೈದ್ಯರು ರೋಗ ನಿರ್ಣಯ ಮಾಡಿ ಹೇಗೆ ಚಿಕಿತ್ಸೆ ನೀಡುತ್ತಾರೆ?. ಔಷಧ ಚೀಟಿ ಎಂದರೆ ಕೇವಲ ಭಾಷೆಯ ಭಾವನಾತ್ಮಕ ವಿಚಾರ ಅಲ್ಲ, ಅದು ರೋಗಿಗಳ ರೋಗ ನಿರ್ಣಯದ ದಾಖಲೆ ಕೂಡಾ ಆಗಿದೆ” ಎಂದು ಅವರು ಹೇಳಿದರು.
ಇದನ್ನೂಓದಿ:ಪರಶುರಾಮ ಪ್ರತಿಮೆ | ಕಂಚಿಗೆ ಬದಲಾಗಿ ಹಿತ್ತಾಳೆ, ತಾಮ್ರ ಬಳಕೆ : ಜನರ ಹಣ ಲೂಟಿ ಹೊಡೆಯಲಾಗಿದೆ ಎಂದ ಹೈಕೋರ್ಟ್
“ಅಷ್ಟೆ ಅಲ್ಲದೆ, ವೈದ್ಯರು ಹೇಗೆ ಔಷಧ ಚೀಟಿ ಬರೆಯಬೇಕು ಎಂದು ನಮಗೆ ವೈದ್ಯ ಪರಿಷತ್ತು ಆದೇಶಿಸುತ್ತದೆ. ಅದನ್ನು ವೈದ್ಯರು ಪಾಲಿಸಬೇಕಿದೆ. ಅದು ಬಿಟ್ಟು ಕನ್ನಡ ಪ್ರಾಧಿಕಾರ ಇದನ್ನು ಹೇಳುವ ಹಾಗೆಯೆ ಇಲ್ಲ. ಇತ್ತಿಚೆಗೆ ಆರೋಗ್ಯ ಸಚಿವರು ಕೂಡಾ ಇದನ್ನೇ ಹೇಳಿದ್ದಾರೆ. ಭಾಷೆ ತಳಮಟ್ಟದಿಂದ ಬೆಳೆಯುವುದಕ್ಕೆ ವೈದ್ಯರು ಆಯಾ ಭಾಷೆಗಳಲ್ಲಿ ಚೀಟಿ ಬರೆಯುವುದೇ ಮುಖ್ಯ ಕಾರಣ ಎಂದಾದರೆ ಅಭಿವೃದ್ಧಿ ಪ್ರಾಧಿಕಾರವು ಕೂಡ ಬೇಕಾಗಿಲ್ಲ ಅಲ್ಲವೆ. ಭಾಷೆ ಬೆಳೆಸುವ ಜವಾಬ್ದಾರಿಯನ್ನೂ ವೈದ್ಯರುಗಳಿಗೆ ಚೀಟಿ ಬರೆಯಲು ವಹಿಸಿಕೊಟ್ಟರಾಯಿತು” ಎಂದು ಅವರು ಹೇಳಿದರು.
“ಕನ್ನಡ ಬೆಳೆಯಬೇಕು, ಬೆಳೆಸಬೇಕು ಎಂಬ ಬಿಳಿಮಲೆ ಅವರ ಚಿಂತನೆಯ ಬಗ್ಗೆ ನನಗೆ ಸಮ್ಮತಿಯಿದೆ. ನಾನು ಅದರ ವಿರೋಧಿಯು ಅಲ್ಲ. ಆದರೆ ಅದನ್ನು ವೈದ್ಯರ ಮೇಲೆ ಹಾಕುವುದು ಸರಿಯಲ್ಲ. ಅದಕ್ಕಾಗಿ ಬೇರೆ ದಾರಿಯನ್ನು ಕನ್ನಡ ಪ್ರಾಧಿಕಾರ ಹುಡುಕಬೇಕು. ಈ ರಾಜ್ಯಕ್ಕೆ ಬಂದು ವೈದ್ಯಕೀಯ ಶಾಸ್ತ್ರ ಕಲಿಯುವ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಬಗ್ಗೆ ಪ್ರಾಧಿಕಾರ ಚಿಂತಿಸಲಿ. ಪ್ರೊಫೆಸರ್ ಬಿಳಿಮಲೆ ಅವರಲ್ಲಿ ಕನ್ನಡ ಕಲಿಸುವ ಇಂತಹ ಹಲವು ಮಾದರಿಗಳು ಇವೆ. ಇದರಲ್ಲಿ ಅವರು ತಜ್ಞರು ಕೂಡಾ ಆಗಿದ್ದಾರೆ” ಎಂದು ತಿಳಿಸಿದರು.
“ಬೇರೆ ರಾಜ್ಯದ ವಿದ್ಯಾರ್ಥಿಗಳು ಕನ್ನಡ ಕಲಿತು ರೋಗಿಗಳೊಂದಿಗೆ ಸಂವಹನ ನಡೆಸಿದರೆ ಅದು ಕನ್ನಡ ಕಟ್ಟುವ ಕೆಲಸ ಆಗಲಿದೆ. ಜೊತೆಗೆ ಕನ್ನಡದ ರೋಗಿಗಳಿಗೆ ಇದರಿಂದ ಲಾಭವೂ ಆಗಲಿದೆ. ಅಷ್ಟೆ ಅಲ್ಲದೆ, ವೈದ್ಯಕೀಯ ಸಾಹಿತ್ಯ ಬರೆಯುವರಿಗೆ ಪ್ರಾಧಿಕಾರ ಪ್ರೋತ್ಸಾಹ ನೀಡಿ ಅವರನ್ನು ಬೆಳೆಸಬೇಕಿದೆ. ಜೊತೆಗೆ ವೈದ್ಯಕೀಯ ಭಾಷೆಯಲ್ಲಿ ಇರುವ ಹಲವು ಪದಗಳನ್ನು ಕನ್ನಡೀಕರಣ ಮಾಡುವಲ್ಲಿ ಮತ್ತು ಅದನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ಕೆಲಸವನ್ನು ಮಾಡಬೇಕಿದೆ. ಅದು ಬಿಟ್ಟು ವೈದ್ಯರ ಮೇಲೆ ಕನ್ನಡ ಉಳಿಸುವ ಭಾರ ಹಾಕುವುದು ಸರಿಯಲ್ಲ” ಎಂದು ಡಾಕ್ಟರ್ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.
ವಿಡಿಯೊ ನೋಡಿ: ರಾಜ್ಯಗಳ ಅಸ್ಮಿತೆ ಹಕ್ಕು ಮತ್ತು ಪಾಲಿನ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನ ಚಾಲನಾ ಸಭೆ


