“ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರು ಅಂತಾ ಇತಿಹಾಸದಲ್ಲಿ ಬರೆಯಲಾಗಿತ್ತು!! ಆದ್ರೆ ಅಲ್ಲಿ ಇರುವ ಕಬ್ಬಿಣದ ಕಂಬದ ಮೇಲೆ ಯಾರ ಹೆಸರಿದೆ ಎಂದೂ ಸ್ವಲ್ಪ ಜೂಮ್ ಮಾಡಿ ನೋಡಿದರೆ ನೈಜ ಸತ್ಯ ಸಂಗತಿ ತಿಳಿಯಲಿದೆ. ಇದು 1500 ವರ್ಷಗಳ ಹಿಂದಿನ ವರಾಹಮಿಹಿರನ ಕಾಲದ ವಿಷ್ಣು ಸ್ಥಂಭ.. ನಮ್ಮ ದೇಶದ ಇತಿಹಾಸವನ್ನು ಬರೆದ ಇತಿಹಾಸ ತಜ್ಞರ ಕಣ್ಣುಗಳಿಗೆ ಇದು ಕಾಣಲಿಲ್ಲ ಕಣ್ಣು ಕುರುಡಾಗುವಷ್ಟು ಮೊಘಲರು ಎಂಜಲು ತಿನ್ನಿಸಿರಬೇಕು ಡೋಂಗಿ ಇತಿಹಾಸ ತಜ್ಞರಿಗೆ ಯಾರೋ ಸ್ಥಾಪಿಸಿದ ಪರಂಪರೆಯನ್ನು ತಮ್ಮದು ಎಂದೂ ಇಲ್ಲಿವರೆಗೆ ಹೇಳಿಕೊಂಡ ನಕಲಿಗಳಿಗೆ ನಾಚಿಕೆಯಾಗಬೇಕು” ಎಂಬ ಸಂದೇಶವೊಂದು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಜೊತೆಗೆ, ಕುತುಬ್ ಮಿನಾರ್ ಪ್ರದೇಶದಲ್ಲಿ ಇರುವ ಕಬ್ಬಿಣದ ಸ್ತಂಭದಲ್ಲಿ ಹಿಂದೂ ಹೆಸರುಗಳಿವೆ ಇದರಿಂದ ಸತ್ಯ ತಿಳಿಯುತ್ತದೆ ಎಂದು ಪ್ರತಿಪಾದಿಸಿದ ಕಂಬವೊಂದರ ಫೋಟೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ, ವೈರಲ್ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದಾಗ, ಹಲವು ವೆಬ್‌ಸೈಟ್‌ಗಳಲ್ಲಿ ಆ ಫೋಟೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ.
ಈ ಪೈಕಿ ಫ್ಲಿಕ್ಕರ್ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 19, 2009ರಂದು ಡೇವಿಡ್ ರಾಸ್ ಎಂಬವರು ಅಪ್ಲೋಡ್ ಮಾಡಿರುವ ಫೋಟೋವನ್ನು ಪರಿಶೀಲಿಸಿದಾಗ ಐರನ್ ಪಿಲ್ಲರ್ ಭರತ್‌ಪುರ ಫೋರ್ಟ್, ಭರತ್‌ಪುರ ಇಂಡಿಯಾ ಎಂದು ಬರೆದಿರುವುದು ಕಂಡು ಬಂದಿದೆ. ಆ ಫೋಟೋ ಮತ್ತು ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಫೋಟೋವನ್ನು ಹೋಲಿಕೆ ಮಾಡಿ ನೋಡಿದಾಗ ಅವೆರಡು ಒಂದೇ ಫೋಟೋ ಎಂದು ಗೊತ್ತಾಗಿದೆ.

ಹಿಸ್ಟರಿ ಎನ್ಸೈಕ್ಲೋಪೀಡಿಯಾ ಎಂಬ ಎಕ್ಸ್ ಖಾತೆಯಲ್ಲೂ ನವೆಂಬರ್ 3, 2021ರಂದು ಹಾಕಿರುವ ಪೋಸ್ಟ್‌ನಲ್ಲಿ ವೈರಲ್ ಫೋಟೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ಅದರಲ್ಲಿ “ರಾಜಸ್ಥಾನದ ಭರತ್‌ಪುರ ಕೋಟೆಯಲ್ಲಿ (ಕಬ್ಬಿಣದ ಕೋಟೆ) ಕಬ್ಬಿಣದ ಕಂಬವನ್ನು ಭರತ್‌ಪುರದ ಜಾಟ್ ಆಡಳಿತಗಾರರು ನಿರ್ಮಿಸಿದ್ದಾರೆ. ಮಹಾರಾಜ ಸೂರಜ್ ಮಾಲ್ (1707-1763) ರ ಅಡಿಯಲ್ಲಿ ಜಾಟ್ ಸಾಮ್ರಾಜ್ಯವು ತನ್ನ ಉತ್ತುಂಗವನ್ನು ತಲುಪಿತ್ತು. ಅವರು ಸಾಮ್ರಾಜ್ಯದಾದ್ಯಂತ ಹಲವಾರು ಕೋಟೆಗಳು ಮತ್ತು ಅರಮನೆಗಳನ್ನು ನಿರ್ಮಿಸಿದರು. ಈ ಪೈಕಿ ಲೋಹಗಢ್ ಕೋಟೆಯು ಪ್ರಬಲವಾಗಿದೆ” ಎಂದು ಬರೆಯಲಾಗಿದೆ.
Iron Pillar from Bharatpur Fort (Iron fort) in Rajasthan was constructed by Jat rulers of Bharatpur. Jat kingdom reached its zenith under Maharaja SurajMal (1707–1763) who built numerous forts & palaces across the kingdom & Lohagarh fort is one of strongest.#HistoryEncyclopedia pic.twitter.com/AUM4VCGRId
— History Encyclopedia (@History_Mystery) November 3, 2021
ಡಿಸೆಂಬರ್ 25, 2021ರಂದು ದೈನಿಕ್ ಭಾಸ್ಕರ್ ಮಾಡಿರುವ ಫೇಸ್‌ಬುಕ್ ಪೋಸ್ಟ್‌ನಲ್ಲಿ ವೈರಲ್ ಫೋಟೋದಲ್ಲಿರುವ ಲೋಹಸ್ತಂಭದಲ್ಲಿ ಬರೆದಿರುವ ರಾಜರ ಹೆಸರುಗಳ ಬಗ್ಗೆಯೂ ವಿವರಗಳನ್ನು ನೀಡಲಾಗಿದೆ.

ಭರತ್‌ಪುರದ ಲೋಹಸ್ತಂಭದ ಬಗ್ಗೆ ನವೆಂಬರ್ 26, 2018ರಂದು ನೇಹಾ ವಿಡಿಯೋ ಫಿಲ್ಮ್ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ “ಜವಾಹರ್ ಬುರ್ಜ್ ಭರತ್‌ಪುರವನ್ನು ಮಹಾರಾಜ ಸೂರಜ್ ಮಾಲ್ ನಿರ್ಮಿಸಿದನು. ಆದರೆ, ಅದರ ಮೇಲಿನ ರಚನೆಗಳನ್ನು ಮಹಾರಾಜ ಜವಾಹರ್ ಸಿಂಗ್ ಅವರು ದೆಹಲಿಯ ವಿಜಯದ ಸ್ಮಾರಕದಲ್ಲಿ ರಚಿಸಿದರು” ಎಂದು ವಿವರಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕುತುಬ್ ಮಿನಾರ್ ನಿರ್ಮಿಸಿದ್ದು ಮೊಘಲರಲ್ಲ ಎಂದು ರಾಜಸ್ಥಾನದ ಕಬ್ಬಿಣದ ಕಂಬದ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ವೈರಲ್ ಫೋಟೊದಲ್ಲಿರುವ ಸ್ತಂಭವು ಕುತುಬ್ ಮಿನಾರ್ ಅಲ್ಲ, ಅದು ರಾಜಸ್ಥಾನದ ಭರತ್‌ಪುರದ ಜವಾಹರ್ ಭುರ್ಜ್ ಎಂಬ ಲೋಹಸ್ತಂಭದ್ದಾಗಿದೆ. ಹಾಗಾಗಿ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : ಪಾವಗಡದಲ್ಲಿ ಸಿಂಹ ಎಂದು ಸುಳ್ಳು ವಿಡಿಯೊ ಪ್ರಸಾರ ಮಾಡಿದ ‘ಝೀ ಕನ್ನಡ ನ್ಯೂಸ್’


