ನ್ಯಾಯಮೂರ್ತಿಗಳ ಹುದ್ದೆಗೆ ಕೊಲಿಜಿಯಂ ಪುನರುಚ್ಚರಿಸಿದ್ದ ಹೆಸರುಗಳ ಪಟ್ಟಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಇಂದು (ಸೆ.20) ತಾಕೀತು ಮಾಡಿರುವ ಸುಪ್ರೀಂ ಕೋರ್ಟ್, ಆ ಹೆಸರುಗಳನ್ನು ಇನ್ನೂ ಏಕೆ ಅಂಗೀಕರಿಸಿಲ್ಲ ಎಂಬುವುದನ್ನು ವಿವರಿಸುವಂತೆಯೂ ಸೂಚಿಸಿದೆ ಎಂದು ಬಾರ್ &ಬೆಂಚ್ ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಎರಡು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿದೆ.
ಮೊದಲನೆಯದು ನ್ಯಾ. ಎಂ ಎಸ್ ರಾಮಚಂದ್ರ ರಾವ್ ಅವರನ್ನು ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಕೊಲಿಜಿಯಂ ಮಾಡಿದ್ದ ಶಿಫಾರಸನ್ನು ಅಂಗೀಕರಿಸದ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೋರಿ ಜಾರ್ಖಂಡ್ ಸರ್ಕಾರ ಸಲ್ಲಿಸಿದ್ದಾಗಿದೆ.
ಇನ್ನೊಂದು ಅರ್ಜಿಯನ್ನು ಕೊಲಿಜಿಯಂ ನಿರ್ಣಯಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಅಂಗೀಕರಿಸಲು ನಿಗದಿತ ಗಡುವು ವಿಧಿಸುವಂತೆ ಕೋರಿ ವಕೀಲ ಹರ್ಷ್ ವಿಭೋರ್ ಸಿಂಗಲ್ ಅವರು ಸಲ್ಲಿಸಿದ್ದಾರೆ.
ಇಂದು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾದ ವಕೀಲ ಸಿಂಗಲ್ ಅವರು “ಶಿಫಾರಸು ಮುಂದೂಡುವುದರಿಂದ ಕೇಂದ್ರಕ್ಕೆ ಏನು ಸಿಗುತ್ತದೆ ಎಂಬುವುದು ಅರ್ಥವಾಗುತ್ತಿಲ್ಲ ಎಂದರು.
ವಾದ ಮಂಡಿಸಿದ ಇನ್ನೋರ್ವ ವಕೀಲ ಪ್ರಶಾಂತ್ ಭೂಷಣ್ ಅವರು “ಸೌರಭ್ ಕಿರ್ಪಾಲ್ ಮುಂತಾದವರ ಹೆಸರುಗಳನ್ನು ಅಂಗೀಕರಿಸದ ಪ್ರಕರಣಗಳಿವೆ. ಕೊಲಿಜಿಯಂ ಶಿಫಾರಸುಗಳ ಬಗ್ಗೆ ವರ್ಷಗಳ ಕಾಲ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿರುವ ಅನೇಕ ನಿದರ್ಶನಗಳಿವೆ” ಎಂದು ಹೇಳಿದರು.
ಜಾರ್ಖಂಡ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ನ್ಯಾ. ಬಿ ಆರ್ ಸಾರಂಗಿ ಅವರ ಹೆಸರನ್ನು ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಡಿಸೆಂಬರ್ 2023ರಲ್ಲಿ ಶಿಫಾರಸು ಮಾಡಲಾಗಿತ್ತು. ಆದರೂ, ಅವರು 6 ತಿಂಗಳವರೆಗೆ ಹುದ್ದೆ ಅಲಂಕರಿಸಲು ಸಾಧ್ಯವಾಗಲಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ “ಇಂತಹ ಹೆಸರುಗಳು ಬಾಕಿ ಉಳಿದಿರುವುದಕ್ಕೆ ಹಲವಾರು ಕಾರಣಗಳಿವೆ ಮತ್ತು ನಮಗೆ ಯಾವುದೇ ಹಿಂಜರಿಕೆಯಿಲ್ಲ. ನ್ಯಾಯಾಲಯಕ್ಕೆ ಬಂದು (ಅರ್ಜಿದಾರರು) ಇದೆಲ್ಲವನ್ನೂ ಹೇಳುವುದು ತುಂಬಾ ಸುಲಭ” ಎಂದರು.
ಆಗ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರನ್ನು ಉದ್ದೇಶಿಸಿ ಸಿಜೆಐ ಚಂದ್ರಚೂಡ್ ಅವರು, ನ್ಯಾಯಾಲಯ ಪುನರುಚ್ಚರಿಸಿದ ನ್ಯಾಯಮೂರ್ತಿಗಳ ಪಟ್ಟಿ ತಯಾರಿಸಿ ಅವರ ನೇಮಕಾತಿ ಏಕೆ ಬಾಕಿ ಉಳಿದಿದೆ ಎಂಬುದನ್ನು ತಿಳಿಸುವಂತೆ ಸೂಚಿಸಿದರು.
ಇದನ್ನೂ ಓದಿ : ನ್ಯಾಯಾಧೀಶರ ಹೇಳಿಕೆ ವೈರಲ್ : ಅನುಮತಿ ಇಲ್ಲದೆ ಕಲಾಪದ ವಿಡಿಯೋ ಬಳಕೆಗೆ ಹೈಕೋರ್ಟ್ ನಿರ್ಬಂಧ


