ಕತಾರ್ ಮೂಲದ ಖ್ಯಾತ ಸುದ್ದಿ ನೆಟ್‌ವರ್ಕ್ ಅಲ್-ಜಝೀರಾದ ವೆಸ್ಟ್ ಬ್ಯಾಂಕ್‌ನ ರಾಮಲ್ಲಾಹ್ ನಗರದಲ್ಲಿರುವ ಕಚೇರಿ ಮೇಲೆ ಭಾನುವಾರ ದಾಳಿ ನಡೆಸಿರುವ ಇಸ್ರೇಲಿ ಪಡೆಗಳು, ಮುಂದಿನ 45 ದಿನಗಳೊಳಗೆ ಕಚೇರಿ ಮುಚ್ಚುವಂತೆ ಆದೇಶಿಸಿರುವುದಾಗಿ ವರದಿಯಾಗಿದೆ.
ಸುದ್ದಿ ಸಂಸ್ಥೆ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದಾಗಿ ಆರೋಪಿಸಿ ಮುಚ್ಚಲು ಆದೇಶಿಸಿದ್ದಾರೆ ಎಂದು ಅಲ್-ಜಝೀರಾದ ವೆಸ್ಟ್ ಬ್ಯಾಂಕ್ ಬ್ಯೂರೋ ಮುಖ್ಯಸ್ಥ ವಾಲಿದ್ ಅಲ್-ಒಮರಿ ತಿಳಿಸಿದ್ದಾರೆ.
ಮುಂದಿನ 45 ದಿನಗಳೊಳಗೆ ಕಚೇರಿ ಮುಚ್ಚಲು ನ್ಯಾಯಾಲಯದ ಆದೇಶವಿದೆ. ತಾವು ತಕ್ಷಣ ಕ್ಯಾಮರಾ ಸೇರಿದಂತೆ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಇಲ್ಲಿಂದ ತೆರಳಬೇಕು ಎಂದು ಇಸ್ರೇಲಿ ಪಡೆಗಳು ವಾಲಿದ್ ಒಮರಿ ಅವರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಇಸ್ರೇಲಿ ಪಡೆಗಳು ನಮ್ಮ ಕ್ಯಾಮರಾಗಳನ್ನು ವಶಪಡಿಸಿಕೊಂಡಿವೆ ಎಂದು ಅಲ್-ಜಝೀರಾ ವರದಿಗಾರ ಜಿವಾರಾ ಬುಡೆರಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಲ್-ಜಝೀರಾ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕಚೇರಿ ಮುಂಭಾಗದಲ್ಲಿದ್ದ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರ ಫೋಟೋಗಳನ್ನು ಇಸ್ರೇಲಿ ಪಡೆಗಳು ಹರಿದು ಹಾಕುವುದನ್ನು ನೋಡಬಹುದು.
جنود الاحتلال يمزقون صورة الزميلة شيرين أبو عاقلة على واجهة مكتب رام الله ويخربون محتوياته#حرب_غزة #الأخبار pic.twitter.com/NMwPsMS1l2
— قناة الجزيرة (@AJArabic) September 22, 2024
ಮೇ 2022ರಲ್ಲಿ ವೆಸ್ಟ್ ಬ್ಯಾಂಕ್‌ನ ಜೆನಿನ್‌ನಲ್ಲಿ ಇಸ್ರೇಲಿ ದಾಳಿಯನ್ನು ಸುದ್ದಿ ಮಾಡುವಾಗ ಅಕ್ಲೆಹ್ ಅವರ ತಲೆಗೆ ಗುಂಡು ಹಾರಿಸಲಾಗಿತ್ತು. ಅವರು ಸಾವನ್ನಪ್ಪಿದ್ದರು.
ಈ ಹಿಂದೆ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿದ್ದ ಅಲ್-ಜಝೀರಾದ ಕಚೇರಿಯನ್ನೂ ಅಲ್ಲಿನ ಸರ್ಕಾರ ಮುಚ್ಚಿಸಿದೆ. ಈ ಸಂಬಂಧ ಇಸ್ರೇಲ್ ಸಂಸತ್‌ನಲ್ಲಿ ನಿರ್ಣಯವನ್ನೂ ಅಂಗೀಕರಿಸಲಾಗಿದೆ.
ಗಾಝಾ ಮೇಲೆ ಇಸ್ರೇಲ್ ಆಕ್ರಮಣ ಆರಂಭಿಸಿ ಮುಂದಿನ ಅಕ್ಟೋಬರ್‌ಗೆ 1 ವರ್ಷ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ಇಸ್ರೇಲ್ ದಾಳಿಗೆ ಗಾಝಾದ 40 ಸಾವಿರಕ್ಕೂ ಅಧಿಕ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ಇಸ್ರೇಲ್ ಇನ್ನೂ ಕೂಡ ಆಕ್ರಮಣ ಮುಂದುವರಿಸುವುದಾಗಿ ಹೇಳಿದೆ. ವಿಶ್ವಸಂಸ್ಥೆಯ ಹಲವು ನಿರ್ಣಯಗಳು, ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶ ಮತ್ತು ಅನೇಕ ರಾಷ್ಟ್ರಗಳ ಕದನ ವಿರಾಮ ಆಗ್ರಹವನ್ನು ಲೆಕ್ಕಿಸದೆ ಇಸ್ರೇಲ್ ಜನರ ಹತ್ಯೆಯನ್ನು ಮುಂದುವರೆಸಿದೆ.
ಇದನ್ನೂ ಓದಿ : ದಾವುದ್ ಇಬ್ರಾಹಿಂ ಜೊತೆ ಲಿಂಕ್ ಎಂದ ಎಎನ್‌ಐ | ಸುಳ್ಳು ಸುದ್ದಿಗೆ ಕ್ಷಮೆಯಾಚಿಸಲು ಸಲ್ಮಾನ್ ಖಾನ್ ಒತ್ತಾಯ


