ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿಯನ್ನು ಶೇಕಡಾ 18% ರಿಂದ ಶೇಕಡಾ 5 % ಕ್ಕೆ ಇಳಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ತೆಗೆದು ಹಾಕುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಅವರಿಗೆ ಕೆಲ ದಿನಗಳ ಹಿಂದೆ ಪತ್ರ ಬರೆದಿದ್ದರು. ಹಾಗಾಗಿ, ಜಿಎಸ್‌ಟಿ ಇಳಿಸಲಾಗಿದೆ ಎಂದು ಪೋಸ್ಟ್ ಹಾಕಿದವರು ಸಚಿವ ನಿತಿನ್ ಗಡ್ಕರಿಯವರಿಗೂ ಧನ್ಯವಾದ ಹೇಳಿದ್ದಾರೆ.
ಹಾಗಿದ್ದರೆ, ನಿಜವಾಗಿಯೂ ಕೇಂದ್ರ ಸರ್ಕಾರ ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿ ಶೇಕಡಾ 18% ರಿಂದ ಶೇಕಡಾ 5 % ಕ್ಕೆ ಇಳಿಸಿದೆಯೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಲಾಗಿದೆಯೇ? ಎಂದು ಪರಿಶೀಲಿಸಲು ನಾವು ಮಾಹಿತಿ ಹುಡುಕಿದಾಗ, ಜಿಎಸ್‌ಟಿ ಕೌನ್ಸಿಲ್ ಜಿಎಸ್‌ಟಿ ದರವನ್ನು ಶೇ.18ರಿಂದ ಶೇ. 5ಕ್ಕೆ ಕಡಿತಗೊಳಿಸಿದೆ ಎಂದು ಆದೇಶ ಹೊರಡಿಸಿದಿರುವುದರ ಕುರಿತು ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಲಭ್ಯವಾಗಿಲ್ಲ.
ಸೆಪ್ಟೆಂಬರ್ 12ರಂದು ಪ್ರಜಾವಾಣಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ “ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದರ ವಿರುದ್ಧ ಕೇಳಿ ಬಂದಿರುವ ಮಾತುಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಸಚಿವರ ತಂಡವನ್ನು ರಚಿಸಿದೆ. ತಂಡವು ವಸ್ತುಸ್ಥಿತಿ ಅಧ್ಯಯನ ಮಾಡಿ ಜಿಎಸ್‌ಟಿ ಕೌನ್ಸಿಲ್‌ಗೆ ವರದಿ ನೀಡಲಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಮಂಡಳಿಯು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಜಿಎಸ್‌ಟಿಯನ್ನು ಪೂರ್ಣವಾಗಿ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದಂತೆ ಕಾಣುತ್ತಿಲ್ಲ. ತೆರಿಗೆ ಕಡಿತಕ್ಕೆ ಮಾತ್ರ ಒಲವು ತೋರಿದಂತಿದೆ” ಎಂದು ಹೇಳಿತ್ತು.

“ಕೆಲವು ವರ್ಷಗಳಿಂದೀಚೆಗೆ ಆರೋಗ್ಯ ಸೇವೆ ದುಬಾರಿಯಾಗುತ್ತಿದೆ. ರೋಗಿಗಳ ಆಸ್ಪತ್ರೆ ವೆಚ್ಚ ಜಾಸ್ತಿಯಾಗುತ್ತಿದೆ. ಕಳೆದ ವರ್ಷ ವೈದ್ಯಕೀಯ ಹಣದುಬ್ಬರ ಶೇ 14ರಷ್ಟಿತ್ತು. ಇದು ವಿಮಾ ಕಂಪನಿಗಳಿಗೆ ಹೊರೆಯಾಗುತ್ತಿದೆ. ಇದರೊಂದಿಗೆ ಜಿಎಸ್‌ಟಿ ಜಾಸ್ತಿ ಇರುವುದರಿಂದ ವಿಮಾ ಕಂತುಗಳ ಮೊತ್ತ ಹೆಚ್ಚಳವಾಗಿದೆ. ಹೀಗಾಗಿ ಜಿಎಸ್‌ಟಿಯಲ್ಲಿ ಕಡಿತ ಮಾಡಬೇಕು ಎಂಬುವುದು ವಿಮಾ ಕ್ಷೇತ್ರದಲ್ಲಿ ತೊಡಗಿಕೊಂಡವರ ಹೇಳಿಕೆ. ಭಾರತೀಯ ಸಾಮಾನ್ಯ ವಿಮಾ ಏಜೆಂಟರ ಮಹಾ ಒಕ್ಕೂಟವು ಜೂನ್ ತಿಂಗಳಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಸಾಮಾನ್ಯ ವಿಮೆಗಳ ಮೇಲಿನ ಜಿಎಸ್‌ಟಿಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿತ್ತು” ಎಂದು ಪ್ರಜಾವಾಣಿ ಲೇಖನ ತಿಳಿಸಿದೆ.
ವಿಮೆ ಮೇಲೆ ಜಿಎಸ್‌ಟಿ ವಿಧಿಸಬಾರದು ಎಂಬ ಒತ್ತಾಯ ಹಲವು ಸಮಯದಿಂದ ಕೇಳಿಬರುತ್ತಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜುಲೈ 31ರಂದು ಪತ್ರ ಬರೆದ ನಂತರ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.

ಒಟ್ಟಿನಲ್ಲಿ, ಆರೋಗ್ಯ ವಿಮೆ ಮೇಲೆ ಜಿಎಸ್‌ಟಿ ವಿಧಿಸಬಾರದು ಎಂಬ ಒತ್ತಾಯ ಹಲವು ಸಮಯದಿಂದ ಕೇಳಿಬರುತ್ತಿದೆಯಾದರೂ ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿಯನ್ನು ಶೇಕಡ 18% ರಿಂದ ಶೇಖಡ 5% ಇಳಿಸಲಾಗಿದೆ ಎಂಬುವುದು ಸುಳ್ಳು. ಈ ಬಗ್ಗೆ ನವೆಂಬರ್ 2024ರಲ್ಲಿ ನಡೆಯುವ ಜಿಎಸ್‌ಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


