ರಾಜ್ಯಪಾಲರು ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳಿದರೆ ಹೇಗೆ? ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಮನೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವುದು ರಾಜ್ಯಪಾಲರ ಜವಾಬ್ದಾರಿ. ಪ್ರತಿನಿತ್ಯದ ಆಡಳಿತ ನಡೆಸಲು ಮುಖ್ಯಮಂತ್ರಿ. ಸರ್ಕಾರ ಇದ್ದಾರೆ. ಹಾಗಾಗಿ, ರಾಜ್ಯಪಾಲರು ಸರ್ಕಾರದ ಪ್ರತಿನಿತ್ಯದ ಆಡಳಿತದ ಮಾಹಿತಿ ಕೇಳುವುದಾಗಲಿ, ಮಧ್ಯಪ್ರವೇಶಿಸುವುದಾಗಲಿ ಮಾಡುವುದು ಸರಿಯಲ್ಲ. ಈ ರೀತಿ ನಾನು ಎಲ್ಲೂ ಕೇಳಿಲ್ಲ” ಎಂದು ಹೇಳಿದ್ದಾರೆ.
“ಕಳೆದ 35 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಇಲ್ಲಿಯವರೆಗೆ ಅನೇಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಇಂತಹ ಸಂದರ್ಭ ಯಾವತ್ತೂ ಬಂದಿಲ್ಲ. ರಾಜ್ಯಪಾಲರು ಸರ್ಕಾರದ ಪ್ರತಿನಿತ್ಯದ ಕೆಲಸಗಳು ಮತ್ತು ತೀರ್ಮಾನಗಳ ಮಾಹಿತಿ ಕೊಡಿ ಎಂದು ಕೇಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಯಾವಾಗಲಾದರು ಮುಖ್ಯಮಂತ್ರಿ, ಸರ್ಕಾರದ ಕಾರ್ಯದರ್ಶಿ ಅಥವಾ ಕಾನೂನು ಸುವ್ಯವಸ್ಥೆಯ ವಿಷಯ ಇದ್ದರೆ ಗೃಹ ಸಚಿವರು ಹೋಗಿ ರಾಜ್ಯಪಾಲರಿಗೆ ಮಾಹಿತಿ ಕೊಡುತ್ತಾರೆ. ಸಂಬಂಧಪಟ್ಟ ಸಚಿವರನ್ನು ಕರೆಸಿ ಕೇಳುವುದಕ್ಕೆ ರಾಜ್ಯಪಾಲರಿಗೆ ಹಕ್ಕಿದೆ. ಆದರೆ, ದಿನನಿತ್ಯ ಪತ್ರ ಬರೆದು ಮಾಹಿತಿ ಕೊಡಿ ಎನ್ನುವುದು ಸಂವಿಧಾನಕ್ಕೆ ವಿರುದ್ದ” ಎಂದಿದ್ದಾರೆ.
ಎಲ್ಲದಕ್ಕೂ ಉತ್ತರ ಕೊಡುವ ಅಗತ್ಯವಿಲ್ಲ :
“ರಾಜ್ಯಪಾಲರಿಗೆ ಎಲ್ಲದಕ್ಕೂ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಖಂಡಿತವಾಗಿಯೂ ಕೊಡುತ್ತೇವೆ. ಯಾವುದಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲವೋ, ಉತ್ತರಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅರ್ಕಾವತಿ ಬಡಾವಣೆ | ಸಿದ್ದಾಮಯ್ಯ v/s ತಾವರ್‌ಚಂದ್ ಸಂಘರ್ಷಕ್ಕೆ ಮತ್ತೊಂದು ವೇದಿಕೆ ಸಿದ್ಧ!


