ನರೇಂದ್ರ ಮೋದಿ ನೇತೃತ್ವದ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ತರಬೇಕೆಂಬ ಸಂಸದೆ ಕಂಗನಾ ರಣಾವತ್ ಹೇಳಿಕೆ ಬಿಜೆಪಿಯೇ ವಿರೋಧ ವ್ಯಕ್ತಪಡಿಸಿದೆ.
ಕಂಗನಾ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ” ಆಕೆಗೆ ಪಕ್ಷದ ಪರವಾಗಿ ಹೇಳಿಕೆ ಕೊಡಲು ಯಾವುದೇ ಅಧಿಕಾರ ಕೊಟ್ಟಿಲ್ಲ. ಆಕೆಯ ಹೇಳಿಕೆ ಪಕ್ಷದ ನಿಲುವು ಅಲ್ಲ” ಎಂದಿದ್ದಾರೆ
ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಭಾಟಿಯಾ “ಕೇಂದ್ರ ಸರ್ಕಾರ ಹಿಂಪಡೆದಿರುವ ಕೃಷಿ ಕಾನೂನುಗಳ ಕುರಿತು ಕಂಗನಾ ರಣಾವತ್ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಅದು ಆಕೆಯ ವೈಯಕ್ತಿಕ ಹೇಳಿಕೆ ಎಂದು ನಾನು ಈ ಮೂಲಕ ಸ್ಪಷ್ಟಪಡಿಸುತ್ತೇನೆ” ಎಂದಿದ್ದಾರೆ.
#WATCH | BJP leader Gaurav Bhatia says, "On the social media platforms, BJP MP Kangana Ranaut's statement on the farm bills that was withdrawn by central govt, is going viral. I want to make it clear that this statement is a personal statement of her. Kangana Ranaut is not… pic.twitter.com/hZmJ8j7Qf8
— ANI (@ANI) September 24, 2024
“ಮೂರು ಕೃಷಿ ಕಾನೂನುಗಳು ರೈತರಿಗೆ ಪ್ರಯೋಜನಕಾರಿಯಾಗಿವೆ. ಆದರೆ, ಕೆಲ ರಾಜ್ಯಗಳಲ್ಲಿ ರೈತ ಗುಂಪುಗಳ ಪ್ರತಿಭಟನೆಯಿಂದಾಗಿ ಸರ್ಕಾರ ಅದನ್ನು ರದ್ದುಗೊಳಿಸಿದೆ. ರೈತರು ರಾಷ್ಟ್ರದ ಆಧಾರ ಸ್ತಂಭವಾಗಿದ್ದಾರೆ. ಅವರ ಒಳಿತಿಗಾಗಿ ಕಾನೂನುಗಳನ್ನು ವಾಪಾಸು ಪರಿಚಯಿಸುವಂತೆ ನಾನು ಮನವಿ ಮಾಡುತ್ತೇನೆ” ಎಂದು ಕಂಗನಾ ಹೇಳಿಕೆ ಕೊಟ್ಟಿದ್ದರು.
ಕಂಗನಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಮೂರು ಕೃಷಿ ಕಾನೂನುಗಳನ್ನು ವಾಪಸ್ ತರಲು ನಾವು ಎಂದಿಗೂ ಅನುಮತಿಸುವುದಿಲ್ಲ. ಕರಾಳ, ರೈತ ವಿರೋಧಿ ಕಾನೂನುಗಳನ್ನು ವಿರುದ್ದ ಹೋರಾಡಿ ಹಲವು ರೈತರು ಹುತಾತ್ಮರಾಗಿದ್ದಾರೆ” ಎಂದಿದೆ.
ಕಂಗನಾ ಸಂಸದೆಯಾದ ಬಳಿಕ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಸ್ವತಃ ಬಿಜೆಪಿಗೇ ತಲೆ ನೋವಾದಂತಿದೆ. ದೆಹಲಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ರೈತ ಹೋರಾಟವನ್ನು ಬಾಂಗ್ಲಾದೇಶದ ಹಿಂಸಾಚಾರಕ್ಕೆ ಹೋಲಿಸಿ ಕೆಲ ದಿನಗಳ ಹಿಂದೆ ಕಂಗನಾ ಹೇಳಿಕೆ ಕೊಟ್ಟಿದ್ದರು. ಇದು ಕೂಡ ಆಕ್ರೋಶಕ್ಕೆ ಕಾರಣವಾಗಿತ್ತು. ಆಗಲೂ ಕಂಗನಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ಆಕೆಯ ಹೇಳಿಕೆ ಪಕ್ಷದ ನಿಲುವಲ್ಲ ಎಂದಿತ್ತು. ಅಲ್ಲದೆ, ಈ ಸಂಬಂಧ ಸ್ಪಷ್ಟನೆ ಕೋರಿ ಬಿಜೆಪಿ ಹೈಕಮಾಂಡ್ ಕಂಗನಾಗೆ ನೋಟಿಸ್ ನೀಡಿದೆ ಎಂದೂ ವರದಿಯಾಗಿತ್ತು.
ಇದನ್ನೂ ಓದಿ : 3 ಕೃಷಿ ಕಾನೂನುಗಳನ್ನು ವಾಪಾಸು ತರಬೇಕು: ಬಿಜೆಪಿ ಸಂಸದೆ ಕಂಗನಾ ರಣಾವತ್ ಆಗ್ರಹ


