ಇಬ್ಬರು ಬಾಲಕರನ್ನು ಕಳ್ಳರೆಂದು ಶಂಕಿಸಿ ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಆರೋಪದಲ್ಲಿ 22 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆದಿದೆ ಎಂದು ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಸೂರಜ್ ಪಟ್ವಾ ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ, 17 ವರ್ಷ ಮತ್ತು 14 ವರ್ಷ ವಯಸ್ಸಿನ ಇಬ್ಬರು ಸಹೋದರರು ಜುಹು ಪ್ರದೇಶದಲ್ಲಿ ಅಡ್ಡಾಡುತ್ತಿರುವುದನ್ನು ಕೆಲವು ಸ್ಥಳೀಯ ಜನರು ಕಂಡು ಅನುಮಾನಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳ್ಳತನ ಮಾಡಲು ಅಥವಾ ಮನೆ ಒಡೆಯಲು ಯೋಜಿಸುತ್ತಿದ್ದಾರೆ ಎಂದು ಭಾವಿಸಿ, ಪಟ್ವಾ ಮತ್ತು ಇತರರು ಅವರನ್ನು ಸರಪಳಿಯಿಂದ ಕಟ್ಟಿ, ಅವರ ಕೂದಲನ್ನು ಕತ್ತರಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅವರನ್ನು ಥಳಿಸಿದರು ಎಂದು ಅವರು ಹೇಳಿದರು.
ಯಾರೋ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಚಿತ್ರಹಿಂಸೆ ಬಳಿಕ ಹುಡುಗರನ್ನು ಬಿಡಲಾಯಿತು. ವಿಡಿಯೋ ವೈರಲ್ ಆದ ನಂತರ ಬಾಲಕರ ಅಜ್ಜಿ ಜುಹು ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಪಟ್ವಾ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಹಲ್ಲೆ ಮತ್ತು ಇತರ ಸಂಬಂಧಿತ ಅಪರಾಧಗಳಿಗಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ; ಕೃಷಿ ಕಾನೂನು : ಸಂಸದೆ ಕಂಗನಾ ರಣಾವತ್ ಹೇಳಿಕೆಯನ್ನು ಖಂಡಿಸಿದ ಬಿಜೆಪಿ


