“ನೀವು ಭಾರತದ ಯಾವುದೇ ಭಾಗವನ್ನು ‘ಪಾಕಿಸ್ತಾನ’ ಎಂದು ಕರೆಯಲು ಸಾಧ್ಯವಿಲ್ಲ. ಅದು ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ಮೂಲಭೂತವಾಗಿ ವಿರುದ್ಧವಾಗಿದೆ” ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿವೈ ಚಂದ್ರಚೂಡ್ ಅವರು ಇಂದು (ಸೆ.25) ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಪಟ್ಟಂತೆ ಸಿಜೆಐ ಪ್ರತಿಕ್ರಿಯಿಸಿದ್ದಾರೆ.
“ನ್ಯಾಯಾಧೀಶರು ಯಾವುದೇ ಸಮುದಾಯದ ಕುರಿತು ಪೂರ್ವಾಗ್ರಹಪೀಡಿತ ಮತ್ತು ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಬಾರದು” ಎಂದೂ ಸಿಜೆಐ ತಾಕೀತು ಮಾಡಿದ್ದಾರೆ.
ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀಶಾನಂದ ಅವರು ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರಿನ ಮುಸ್ಲಿಂ ಬಾಹುಳ್ಯದ ಪ್ರದೇಶ ಗೋರಿಪಾಳ್ಯವನ್ನು ‘ಪಾಕಿಸ್ತಾನ’ ಎಂದಿರುವುದು ಮತ್ತು ಮಹಿಳಾ ವಕೀಲರೊಬ್ಬರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.
ಹೈಕೋರ್ಟ್ ನ್ಯಾಯಮೂರ್ತಿಯ ಹೇಳಿಕೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ.
ತನ್ನ ಹೇಳಿಕೆಗೆ ಹೈಕೋರ್ಟ್ ನ್ಯಾಯಮೂರ್ತಿ ವಿಷಾದ ವ್ಯಕ್ತಪಡಿಸಿರುವ ಹಿನ್ನೆಲೆ, ಪ್ರಕರಣ ಮುಂದುವರೆಸದಿರಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಇಂದು ವಿಚಾರಣೆ ವೇಳೆ ನ್ಯಾಯಾಧೀಶರುಗಳ ವರ್ತನೆಯ ಕುರಿತು ಹಲವಾರು ಮಹತ್ವದ ಅವಲೋಕನಗಳು ನಡೆದಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ವ್ಯಾಪಕವಾಗಿರುವ ಈ ಯುಗದಲ್ಲಿ ನ್ಯಾಯಾಧೀಶರು ಸಂಯಮ ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿ ಶ್ರೀಶಾನಂದ ಅವರು ನೀಡಿರುವ ಹೇಳಿಕೆಗಳು ವಿಷಯಕ್ಕೆ ಸಂಬಂಧಿಸಿದಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ವರದಿಯಿಂದ ನ್ಯಾಯಾಲಯವು ಗಮನಿಸಿದೆ. ನ್ಯಾಯಮೂರ್ತಿಯ ಲಿಂಗ ಮತ್ತು ಸಮುದಾಯದ ವಿರುದ್ಧದ ಹೇಳಿಕೆಗೆ ಅಸಮ್ಮತಿ ಸೂಚಿಸಿದೆ.
ಇದನ್ನೂ ಓದಿ : ‘ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ..’; ಬಿಜೆಪಿ ವಾಗ್ದಂಡನೆ ಬಳಿಕ ಯೂ-ಟರ್ನ್ ಹೊಡೆದ ಬಿಜೆಪಿ ಸಂಸದೆ ಕಂಗನಾ


