ಒಕ್ಕೂಟ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಮತ್ತು ಸುಳ್ಳು ವಿಷಯವನ್ನು ಗುರುತಿಸುವ ಮತ್ತು ನಿಯಂತ್ರಿಸುವ ಉದ್ದೇಶದಿಂದ ತಿದ್ದುಪಡಿ ಮಾಡಲಾದ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಬಾಂಬೆ ಹೈಕೋರ್ಟ್ ಗುರುವಾರ ಅಧಿಕೃತವಾಗಿ ರದ್ದುಗೊಳಿಸಿದ್ದು, ಅವುಗಳನ್ನು “ಅಸಂವಿಧಾನಿಕ” ಎಂದು ಬಣ್ಣಿಸಿದೆ.
ನ್ಯಾಯಮೂರ್ತಿ ಎಎಸ್ ಚಂದೂರ್ಕರ್ ಅವರ ಏಕ ಪೀಠವು ಸೆಪ್ಟೆಂಬರ್ 20 ರಂದು, ತಿದ್ದುಪಡಿ ಮಾಡಿದ ನಿಯಮಗಳು ಅಸ್ಪಷ್ಟ ಮತ್ತು ವಿಶಾಲವಾಗಿದ್ದು, ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗಳ ಮೇಲೂ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಗಮನಿಸಿತು.
ಈ ವರ್ಷದ ಆರಂಭದಲ್ಲಿ ವಿಭಾಗೀಯ ಪೀಠವು ಈ ವಿಷಯದ ಕುರಿತು ತೀರ್ಪು ನೀಡಿದ ಬಳಿಕ ನ್ಯಾಯಮೂರ್ತಿ ಚಂದೂರ್ಕರ್ ಅವರು ಟೈ ಬ್ರೇಕರ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
ಪ್ರಕರಣದ ಕುರಿತು ಮೂರನೇ ನ್ಯಾಯಾಧೀಶರ ತೀರ್ಪಿನ ಬಳಿಕ, ನ್ಯಾಯಮೂರ್ತಿಗಳಾದ ಎಎಸ್ ಗಡ್ಕರಿ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ಗುರುವಾರ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್‌ಕಾಸ್ಟ್ ಮತ್ತು ಡಿಜಿಟಲ್ ಅಸೋಸಿಯೇಷನ್, ಅಸೋಸಿಯೇಷನ್ ಆಫ್ ಇಂಡಿಯನ್ ಸಲ್ಲಿಸಿದ ಅರ್ಜಿಗಳ ಗುಂಪಿಗೆ ಔಪಚಾರಿಕವಾಗಿ ತೀರ್ಪು ಪ್ರಕಟಿಸಿತು.
“ಬಹುಮತದ ಅಭಿಪ್ರಾಯದ ದೃಷ್ಟಿಯಿಂದ, ನಿಯಮ 3 (1) (ವಿ) ಅನ್ನು ಅಸಂವಿಧಾನಿಕ ಎಂದು ಘೋಷಿಸಿ, ಅದನ್ನು ರದ್ದುಗೊಳಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣವನ್ನು ಆರಂಭದಲ್ಲಿ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ (ಈಗ ನಿವೃತ್ತ) ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ಪರಿಶೀಲಿಸಿತ್ತು, ಅವರು ಜನವರಿಯಲ್ಲಿ ವಿಭಜಿತ ತೀರ್ಪು ನೀಡಿದ್ದರು.
ನಿಯಮಗಳು ಸಾಮಾಜಿಕ ಜಾಳತಾಣದಲ್ಲಿ ಸೆನ್ಸಾರ್‌ಶಿಪ್ ಅನ್ನು ರೂಪಿಸುತ್ತವೆ ಎಂದು ನ್ಯಾಯಮೂರ್ತಿ ಪಟೇಲ್ ವಾದಿಸಿದರು. ಆದರೆ, ನ್ಯಾಯಮೂರ್ತಿ ಗೋಖಲೆ ಅವರು ವಾಕ್ ಸ್ವಾತಂತ್ರ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರದ ನಿಯಮಗಳನ್ನು ಸಮರ್ಥಿಸಿಕೊಂಡರು.
ನ್ಯಾಯಮೂರ್ತಿ ಚಂದೂರ್ಕರ್ ಅವರು ತಮ್ಮ ಅಭಿಪ್ರಾಯವನ್ನು ನ್ಯಾಯಮೂರ್ತಿ ಪಟೇಲ್ ಅವರ ಅಭಿಪ್ರಾಯದೊಂದಿಗೆ ಜೋಡಿಸಿದರು, ಮುಕ್ತ ಅಭಿವ್ಯಕ್ತಿಗೆ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು.
ವಿವಾದದ ಕೇಂದ್ರವು ಫ್ಯಾಕ್ಟ್ ಚೆಕಿಂಗ್ ಯುನಿಟ್ (ಎಫ್‌ಸಿಯು) ಸ್ಥಾಪನೆಯಾಗಿದೆ. ಇದು ಸರ್ಕಾರಕ್ಕೆ ಸಂಬಂಧಿಸಿದಂತೆ ತಪ್ಪುದಾರಿಗೆಳೆಯುವ ಅಥವಾ ತಪ್ಪು ಎಂದು ಪರಿಗಣಿಸಲಾದ ಆನ್‌ಲೈನ್ ವಿಷಯವನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ. ನಿಯಮಗಳು ಮೂಲಭೂತ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿತು.
ಐಟಿ ನಿಯಮಗಳಿಗೆ ವಿವಾದಾತ್ಮಕ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರವು ಏಪ್ರಿಲ್ 6, 2023 ರಂದು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ಭಾಗವಾಗಿ ಪರಿಚಯಿಸಿತು.
ಸರ್ಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ನಕಲಿ ಅಥವಾ ತಪ್ಪುದಾರಿಗೆಳೆಯುವ ಯಾವುದೇ ವಿಷಯವನ್ನು ಮೇಲ್ವಿಚಾರಣೆ ಮಾಡಲು ನಿಯಮಗಳು ‘ಎಫ್‌ಯುಸಿ’ ಅನ್ನು ಕಡ್ಡಾಯಗೊಳಿಸಿದೆ.
ಇದನ್ನೂ ಓದಿ; ಮಾನನಷ್ಟ ಮೊಕದ್ದಮೆ ಪ್ರಕರಣ; ಶಿಕ್ಷೆ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದ ಸಂಜಯ್ ರಾವತ್


