ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ದರೊಬ್ಬರ ಮುಖಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೋರ್ವ ಸ್ನೋ ಫೋಮ್ ಸ್ಪ್ರೇ ಮಾಡಿದ ವಿಡಿಯೋವೊಂದು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದ್ದು, ಝಾನ್ಸಿಯ ನವಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಓರ್ವ ಆರೋಪಿಯನ್ನೂ ಬಂಧಿಸಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಂಧಿತ ಆರೋಪಿ ಮುಸ್ಲಿಂ ಎಂದು ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಲಾಗಿದೆ.
ನಾಗೇಶ್ ಪ್ರೀತಮ್ ಎಂಬವರು ಸೆಪ್ಟೆಂಬರ್ 24ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ” ಸೈಕಲ್ ಅಲ್ಲಿ ಹೋಗುತ್ತಿದ್ದ ಅಮಾಯಕ ವೃದ್ದನಿಗೆ ಮುಸ್ಲಿಂ ಯುವಕ ಅನುಚಿತ ವರ್ತನೆ ಯುಪಿ ಪೊಲೀಸರಿಗೆ ಭರ್ಜರಿ ಬ್ಯಾಟಿಂಗ್” ಎಂದು ಬರೆದುಕೊಂಡಿದ್ದರು.

ಅರುಣ್ ಕುಮಾರ್ ಹಿಂದೂ ಎಂಬ ಎಕ್ಸ್ ಖಾತೆಯಲ್ಲೂ ಸೆಪ್ಟೆಂಬರ್ 26ರಂದು ವಿಡಿಯೋ ಹಂಚಿಕೊಂಡು ” ತನ್ನ ಪಾಡಿಗೆ ಹೋಗುತ್ತಿದ್ದ ಅಮಾಯಕ ವೃದ್ಧನಿಗೆ ಪುಂಡ ಮುಸ್ಲಿಂ ಯುವಕರಿಂದ ಅನುಚಿತ ವರ್ತನೆ. ಆದರೆ ನಂತರ ನಡೆದಿದ್ದು ಯುಪಿ ಪೊಲೀಸರ ಕಾರ್ಯಾಚರಣೆ. ಈ ರೀತಿ ಕರ್ನಾಟಕದಲ್ಲೂ ಆಗಬೇಕು. ಆಗ ಈ ವೀಲಿಂಗ್ ಮಾಡುವ ಮುಸ್ಲಿಂ ಯುವಕರಿಗೆ ಬಿಸಿ ಮುಟ್ಟುತ್ತದೆ” ಎಂದು ಬರೆದುಕೊಂಡಿದ್ದರು.

ಫ್ಯಾಕ್ಟ್‌ಚೆಕ್ : ಮುಸ್ಲಿಂ ಯುವಕ ವೃದ್ದನಿಗೆ ಮುಖಕ್ಕೆ ಸ್ಪ್ರೇ ಮಾಡಿದ್ದಾನೆ ಎಂಬ ವಿಡಿಯೋ ಕುರಿತು ನಾವು ಸತ್ಯಾಸತ್ಯತೆ ಪರಿಶೀಲನೆ ನಡೆಸಿದ್ದೇವೆ.
ಪ್ರಕರಣದ ಕುರಿತು ನಾವು ಮಾಹಿತಿ ಹುಡುಕಿದಾಗ ಅದಕ್ಕೆ ಸಂಬಂಧಿಸಿದಂತೆ ಅನೇಕ ವರದಿಗಳು ನಮಗೆ ಲಭ್ಯವಾಗಿದೆ.
ಸೆಪ್ಟೆಂಬರ್ 24,2024ರಂದು ನ್ಯೂಸ್ 18 ಈ ಕುರಿತು ವರದಿ ಪ್ರಕಟಿಸಿತ್ತು. ವರದಿಯಲ್ಲಿ “ಝಾನ್ಸಿಯ ನವಾಬಾದ್ ಪ್ರದೇಶದ ಎಲೈಟ್ -ಚಿತ್ರಾ ರಸ್ತೆಯ ಮೇಲ್ಸೇತುವೆ ಬಳಿ ಇಬ್ಬರು ಬೈಕ್ ಸವಾರರು ವೃದ್ದರೊಬ್ಬರ ಮುಖಕ್ಕೆ ನೊರೆ ಎರಚಿ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದನ್ನು ಲೈಕ್ಸ್‌ಗೋಸ್ಕರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ವಿನಯ್ ಯಾದವ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆತ ಯೂಟ್ಯೂಬರ್” ಎಂದು ಪೊಲೀಸರು ತಿಳಿಸಿರುವುದಾಗಿ ಹೇಳಲಾಗಿತ್ತು.
ಸೆಪ್ಟೆಂಬರ್ 24ರಂದು ಹಿಂದುಸ್ತಾನ್ ಟೈಮ್ಸ್ ಕೂಡ ವಿಡಿಯೋ ಕುರಿತು ವರದಿ ಪ್ರಕಟಿಸಿತ್ತು. ಅದರಲ್ಲಿ ವೃದ್ದನ ಮುಖಕ್ಕೆ ಫೋಮ್ ಸ್ಪ್ರೇ ಮಾಡಿ ವಿಕೃತಿ ಮೆರೆದ ಯೂಟ್ಯೂಬರ್ ವಿನಯ್ ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಝಾನ್ಸಿ ಪೊಲೀಸರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೊಲೀಸ್ ಅಧೀಕ್ಷರ ಸ್ಪಷ್ಟನೆಯ ವಿಡಿಯೋ ಕೂಡ ಅಪ್ಲೋಡ್ ಮಾಡಲಾಗಿತ್ತು. ವಿಡಿಯೋದಲ್ಲಿ ಪೊಲೀಸ್ ಅಧೀಕ್ಷರು ಆರೋಪಿ ವಿನಯ್ ಯಾದವ್ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 24ರಂದು ನವಭಾರತ್ ಟೈಮ್ಸ್ ಪ್ರಕಟಿಸಿದ ವರದಿಯಲ್ಲಿ ” ನಂದನಪುರ ನಿವಾಸಿ ಕಾನ್ಶಿರಾಂ ಪ್ರಜಾಪತಿ ಎಂಬವರ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ಒಟ್ಟು ಮೂವರು ಆರೋಪಿಗಳಾದ ಖೋಡಾನ್ ಗ್ರಾಮದ ವಿನಯ್ ಯಾದವ್, ಪಾಲಿ ಪಹಾರಿ ಗ್ರಾಮದ ರಿತೇಶ್ ಕೇವತ್ ಮತ್ತು ಡೈಲಿ ಗ್ರಾಮದ ಆರ್ಯನ್ ಶ್ರೀವಾಸ್ತವ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಓರ್ವ ಆರೋಪಿ ವಿನಯ್ ಯಾದವ್‌ನನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ” ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ದನ ಮುಖಕ್ಕೆ ಸ್ಪ್ರೇ ಮಾಡಿದ ಆರೋಪಿಗಳು ಮುಸ್ಲಿಮರಲ್ಲ ಎಂಬುವುದು ವರದಿಗಳಿಂದ ತಿಳಿದು ಬಂದಿದೆ.
ಈ ಫ್ಯಾಕ್ಟ್‌ಚೆಕ್ ಮೂಲಕ ಆರೋಪಿಗಳನ್ನು ಧರ್ಮದ ಆಧಾರದಲ್ಲಿ ಗುರುತಿಸುವ ಪ್ರಯತ್ನ ನಮ್ಮದಲ್ಲ. ಕೆಲವರು ಪ್ರಕರಣಕ್ಕೆ ಕೋಮು ಬಣ್ಣ ಬಳಿದ ಕಾರಣ ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮಾಡಿದ್ದೇವೆ.
ಇದನ್ನೂ ಓದಿ : FACT CHECK | ಮಹಾಲಕ್ಷ್ಮಿ ಕೊಲೆ : ಅಶ್ರಫ್‌ನನ್ನು ಕಟಕಟೆಯಲ್ಲಿ ನಿಲ್ಲಿಸಿದ ಸುಳ್ಳು ಸುದ್ದಿ ಜಾಲ


