ಹರ್ಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಿಕೊಂಡಿವೆ. ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮತ್ತು ಜೆಜೆಪಿ ಎರಡೂ ಸಮಾನ ಅಧಿಕಾರ ಹಂಚಿಕೆಯ ಬಗ್ಗೆ ಹೇಳಿವೆ. ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಬಿಜೆಪಿಗೆ ಸಿಎಂ ಸ್ಥಾನ ಮತ್ತು ಜೆಜೆಪಿಗೆ ಡಿಸಿಎಂ ಸ್ಥಾನ ಹಂಚಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮನೋಹರ್ ಲಾಲ್ ಖಟ್ಟರ್, ಜೆಜೆಪಿಯ ದುಷ್ಯಂತ್ ಚೌತಾಲಾ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿಯ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್, ನಿರ್ಮಲಾ ಸೀತಾರಾಮನ್ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು. ಹರ್ಯಾಣ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಬಗ್ಗೆ ಮನವಿ ಪತ್ರ ನೀಡಿದ್ದೇವೆ ಎಂದು ಮನೋಹರ್ ಲಾಲ್ ಖಟ್ಟರ್ ತಿಳಿಸಿದರು. ನಾಳೆ ಮನೋಹರ್ ಲಾಲ್ ಖಟ್ಟರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ದುಷ್ಯಂತ್ ಚೌತಾಲಾ ಪಕ್ಷ ಜೆಜೆಪಿ, ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸಿದೆ. ಹೀಗಾಗಿ ಹರ್ಯಾಣದಲ್ಲಿ ಎರಡೂ ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚಿಸುತ್ತಿವೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. ಅಲ್ಲದೇ ವಿವಾದಿತ ಹೇಳಿಕೆ ನೀಡಿದ್ದ ಎಂಎಲ್ಎ ಗೋಪಾಲ್ ಕಂದಾ ಅವರಿಗೆ ಬಿಜೆಪಿ ಬೆಂಬಲ ನೀಡುವುದಿಲ್ಲ. ಅವರ ಸಹಕಾರವನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.
ಬಿಜೆಪಿ ಮತ್ತು ಜೆಜೆಪಿ ಚುನಾವಣೆಯಲ್ಲಿ ಗೆದ್ದ ಸ್ಥಾನಗಳ ಬಲಾಬಲ ಸರ್ಕಾರ ರಚಿಸಲು ಸಹಾಯಕವಾಗಿದೆ. ಅಲ್ಲದೇ ಬಿಜೆಪಿಗೆ ಸ್ವತಂತ್ರ ಅಭ್ಯರ್ಥಿಗಳೂ ಸಹ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈಗ ಬಿಜೆಪಿ ಮತ್ತು ಜೆಜೆಪಿ ಸರ್ಕಾರದ ಬಲ 57 ಆಗಿದೆ.


