Homeನ್ಯಾಯ ಪಥಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ - ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ – ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ಇವತ್ತು ಕೆಲವು ವಿಷಯಗಳನ್ನು ಪಾಯಿಂಟ್ ಶೀರ್ ಕಲಿಯೋಣು.

ಒಂದನೇ ಪಾಯಿಂಟು- ಸಂಖ್ಯೆ
ಕರ್ನಾಟಕ ರಾಜ್ಯದೊಳಗ 30 ಜಿಲ್ಲೆ ಅವ. 32 ಅಲ್ಲ. 34 ನೂ ಅಲ್ಲ. ಕೆಲವರು 34 ಏನು 43 ಮಾಡಬೇಕು ಅಂತ ಹೊಂಟಾರ. ಅದು ಬೇರೆ ವಿಷಯ.

ಎರಡನೇ ಪಾಯಿಂಟು-ಜಿಲ್ಲೆಗಳ ಪಟ್ಟಿ
ಕರ್ನಾಟಕದ ಜಿಲ್ಲೆಗಳ ಹೆಸರು ಈ ರೀತಿ ಇವೆ – ಬಾಗಲಕೋಟಿ, ಬೆಳಗಾವಿ, ವಿಜಯಪುರ (ಬಿಜಾಪುರ), ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ(ಕಾರವಾರ), ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಕಲಬುರ್ಗಿ (ಗುಲಬರ್ಗಾ), ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ (ಮಂಗಳೂರು), ಹಾಸನ, ಕೊಡಗು (ಕೂರ್ಗು, ಮಡಿಕೇರಿ, ಮರಕೇರಾ), ಮಂಡ್ಯ, ಮೈಸೂರು, ಉಡುಪಿ

ಮೂರನೇ ಪಾಯಿಂಟು – ಆ ಪದಾ ಈ ಪದಾ
‘ಜಿಲ್ಲೆ’ ಎನ್ನುವುದು ಕನ್ನಡ ಪದವಾಗಲು ಅದೇನು ಕಬ್ಬಿನ ಜಲ್ಲೆ ಅಲ್ಲ. ಅದು ಜಿಲಾಃ ಎನ್ನುವ ಪರ್ಶಿಯನ್ ಅಥವಾ ಪಾರ್ಸಿ ಪದದಿಂದ ಬಂದ ಶಬ್ದ.

ನಮಗೆ ಗೊತ್ತಿಲ್ಲದಂಗನ ನಮ್ಮ ಅರಮನೀ ಕಂಬದಾಗ ನರಸಿಂಹಸ್ವಾಮಿ ಹೆಂಗ ಅವತಾರ ಹೆಂಗ ಇರತಾನೋ, ಹಂಗ ನಮ್ಮ ಖನ್ನಡ ಬಾಸೆಯೊಳಗ ಅಸಂಖ್ಯ ಪರ್ಶಿಯನ್ ಅಥವಾ ಪಾರ್ಸಿ ಪದಾ ಅವ. ಹಂಗನ ಇದೂ ಒಂದು ಪಾರ್ಸಿ ಪದ. “ಗಂಡಸರ ಲುಂಗಿ, ಹೆಂಗಸರು ಲುಂಗಿ, ಲಂಗೋಟಿ ಇವು ಯಾವುವೂ ಕನ್ನಡದವಲ್ಲ. ಅವೆಲ್ಲವೂ ಪಾರ್ಸಿ ಅಂತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳ್ಯಾರಲ್ಲ, ಅದು ಖರೇನ. ಕನ್ನಡದ ಕಸ್ತೂರಿ ತೇಯುವಾಗ ಕೊರಡಿಗೆ ಅಂಟಿಕೊಂಡ ಗಂಧದ ವಾಸನಿಯ ಹಂಗ ಅವು ನಮ್ಮ ಭಾಷಾ ಸೇರಿಕೊಂಡು ಅದರ ಘಮಲು ಹೆಚ್ಚು ಆಗೇದ.

ನಮ್ಮ ಕಲ್ಪನಾ ಇಲ್ಲದಂಗ ಅವು ನಮ್ಮ ಮ್ಯಾಲೆ ಪ್ರಭಾವ ಬೀರ್ಯಾವು. ಬ್ಯಾರೆ ಎಲ್ಲಾ ಹೋಗಲಿ ಬಿಡಲಿ. ನಮ್ಮ ಜೀವನಾಧಾರ ಆಗಿರೋ `ನೀರು’ ಸಹಿತ ಫಾರ್ಸಿ. ಹೋಗಲಿ ಬಿಡ್ರಿ, ಅವು ಯಾವಾವು ಶಬ್ದಾ ಅನ್ನುವುದನ್ನು ಇನ್ನೊಮ್ಮೆ ನೋಡೋಣ.

ನಾಲ್ಕನೆಯ ಪಾಯಿಂಟು – ಇತಿಹಾಸ
ಸಾವಿರಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯೇ ಭಾರತದಲ್ಲಿ ಆಡಳಿತದ ಕೇಂದ್ರವಾಗಿತ್ತು. ಸರಿ ಸುಮಾರು ಒಂದು ಸಾವಿರ ವರ್ಷದ ಹಿಂದೆ ಘುರಿಡ್ ರಾಜ ಮನೆತನದವರು ಭಾರತದ ಆಡಳಿತ ವನ್ನು ಕೈಗೆ ತೆಗೆದುಕೊಂಡಾಗ ಪ್ರತಿ ಪ್ರದೇಶಕ್ಕೊಬ್ಬ ಸರದಾರನನ್ನು ನೇಮಿಸಿದರು. ಇವರಲ್ಲಿ ಒಬ್ಬನಾದ ಕುತುಬ್ದೀನ ಐಬಕ್‍ನ ಅಧಿಕಾರಿಗಳು ಕೈಕೊಂಡ ಆಡಳಿತ ಸುಧಾರಣೆ ಅಂಗವಾಗಿ ಹುಟ್ಟಿದ್ದವೇ ಜಿಲಾಃ ಗಳು. ಇವುಗಳನ್ನು ನಂತರ ದೆಹಲಿ ಸುಲ್ತಾನರು, ದಖನ್ನಿನ ಬಹಮನಿಗಳು, ಮುಘಲರು, ಹಾಗೂ ಹೈದರಾಬಾದು ನಿಜಾಮರು ಆಡಳಿತ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡರು. ಹೈದರಾಬಾದಿನಲ್ಲಿ, `ನಿಜಾಮರು ಜಿಲ್ಲಾಗಳಿಂದ ರಾಜಧಾನಿಯವರೆಗೆ ಕೇಳಬೇಕಾದ್ದು ಸಂಗೀತದ ದನಿಯೊಂದೇ, ಷಿಕಾಯತ್ (ದೂರು) ಇಲ್ಲಿಗೆ ಬರಬೇಕಿಲ್ಲ. ಅಲ್ಲಲ್ಲಿಯೇ ಪರಿಹರಿಸಿಕೊಳ್ಳಬಹುದು’ ಎಂದು ಹೇಳುತ್ತಿದ್ದರು ಎಂಬ ಮಾತಿದೆ.

ಬ್ರಿಟಿಷರ ಕಾಲದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರಿಗಳನ್ನು ಜಿಲ್ಲೆಗಳಲ್ಲಿ ನೇಮಿಸಲಾಯಿತು. ಅವರಿಗೆ ಹೆಚ್ಚಿನ ಅಧಿಕಾರಗಳನ್ನು ಕೊಟ್ಟದಕ್ಕನ, ದೂರದ ಒಂಬತ್ತು ಸಾವಿರ ಕಿಲೋಮೀಟರು ದೂರದ ಲಂಡನ್ನಿನಿಂದ ಅವರಿಗೆ ಅಧಿಕಾರ ಚಲಾಯಿಸಲಿಕ್ಕೆ ಸಾಧ್ಯ ಆತು. ಸಿಂಗಾಪುರದ ಗಡಿಯಿಂದ ಆಫ್ಘಾನಿಸ್ತಾನದವರೆಗೂ ಹಬ್ಬಿದ್ದ ಅಂದಿನ ಭಾರತವನ್ನು ಆಳಲಿಕ್ಕೆ ಕೇವಲ ಎರಡು ಸಾವಿರ ಬಿಳಿಯ ಅಧಿಕಾರಿಗಳು ಇದ್ದರು. (ಸೇನೆ ಹಾಗೂ ಐಸಿಎಸ್ ಆಡಳಿತ ಸೇವೆ ಸೇರಿ).

ಐದನೆಯ ಪಾಯಿಂಟು- ಜಿಲ್ಲೆಯಲ್ಲಿ ಏನುಂಟು, ಏನಿಲ್ಲ?
ಜಿಲ್ಲೆ ಎನ್ನುವುದು ಒಂದು ಪ್ರದೇಶದ ಆಡಳಿತಾತ್ಮಕ ಮುಖ್ಯ ಕಚೇರಿಗಳನ್ನು ಹೊಂದಿರೋ ಊರು. ಅದರಾಗ ನಮ್ಮ ತೆರಿಗೆ ಹಣದಿಂದ ಕಟ್ಟಿದ ಇಟ್ಟಂಗಿ – ಸಿಮಿಂಟ್ ಕಟ್ಟಡಗಳಲ್ಲಿ ಇರುವ ಕಲ್ಲಿನ ಹೃದಯದ ಅಧಿಕಾರಿಗಳು ಕೂತಿರತಾರ. ಇವರು ಜನರ ಕೆಲಸ ಮಾಡೋಕಿಂತ ಜಾಸ್ತಿ ಜನರ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಪುಢಾರಿಗಳ ಕೆಲಸಾ ಮಾಡೋದ ಜಾಸ್ತಿ.

ಇಂತಿಪ್ಪ ಪುಢಾರಿಗಳು ಜನಾಸಕ್ತಿಗಾಗಿ ಹೆಚ್ಚಿನ ಜಿಲ್ಲೆ ಮಾಡಬೇಕು, ನಾನು ಇರೋ ಊರೇ ಜಿಲ್ಲೆ ಮುಖ್ಯ ಸ್ಥಾನ ಆಗಬೇಕು. ನಮ್ಮ ಮನಿ ಹಿಂದನ, ನಮ್ ಭಾವಮೈದುನನೇ ಜಿಲ್ಲಾಧಿಕಾರಿ ಆಗಬೇಕು ಅಂತ ಹೇಳಲಿಕ್ಕೆ ಹತ್ಯಾರಲ್ಲ, ಏನದರ ಮರ್ಮ? ಇದರ ಉತ್ತರ ಈ ಖೋಲಿಯೊಳಗ ಸಿಗೋದಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...