Homeನ್ಯಾಯ ಪಥ'ದೇಶವಿರೋಧಿ' ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

‘ದೇಶವಿರೋಧಿ’ ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

- Advertisement -
- Advertisement -

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು,
ಬದುಕು ಬೆಳಗುವ ದೀಪದಂತಿರಲಿ ಹೇ ದೇವದೇವ
ಕಳೆದು ಹೋಗಲಿ ಇಳೆಯ ಕತ್ತಲೆ,
ಹೊಳೆದು ಬೆಳಗಲಿ ಎಲ್ಲ ತಾವುಗಳು
ನನ್ನ ಕಾಂತಿಯಿಂದ.
ಸುಮಕುಸುಮಗಳು ಉದ್ಯಾನವ ಸಿಂಗರಿಸಿದಂತೆ
ಸೊಗಸಿಬಿಡಲೇ ನಾನೆನ್ನ ತಾಯ್ನೆಲವ ತಬ್ಬಿ ಹಬ್ಬಿ..
ಎನ್ನ ಜೀವದುಸಿರು ನೀನಾಗು ಎಲೆ ದೇವ,
ತಿಳಿವಿನ ದೀಪಕ್ಕೆಳೆಸುವ ಪತಂಗ ನಾನು
ಎನ್ನ ಇರವಿನ ಧ್ಯೇಯವಾಗಿಸು,
ವೃದ್ಧರು ದುಃಖಿತರು, ದೀನದರಿದ್ರರ ಸೇವೆಯನು.
ಹಿಡಿದೆತ್ತು ಅಂತರ್ಯಾಮಿಯೇ ನನ್ನನು ಜಗದ ಕೇಡಿನಿಂದ
ಉದ್ಧರಿಸು ಮುನ್ನಡೆಸು ಸಚ್ಚಾರಿತ್ರ್ಯದೆಡೆಗೆ

ಈ ಗೀತೆಯನ್ನು ಓದಿ, ಇದರ ಉರ್ದು ಮೂಲದ ಗಾಯನವನ್ನು ಆಲಿಸಿದ ನನಗೆ ಆಚಾರ್ಯ ಬಿ.ಎಂ.ಶ್ರೀ. ಅವರ ಇಂಗ್ಲಿಷ್ ಗೀತಗಳು ಸಂಗ್ರಹದ ಪ್ರಸಿದ್ಧ ಪದ್ಯ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ನೆನಪಾಯಿತು. ಬಿ.ಎಂ.ಶ್ರೀ ಅವರ ಸೊಗಸಿನ ಅನುವಾದದ ಮಹಿಮೆ. ಮೂಲ ಕನ್ನಡದ್ದೇ ಎನ್ನುವಷ್ಟರಮಟ್ಟಿಗೆ ಈ ಗೀತೆ ಕನ್ನಡಿಗರಲ್ಲಿ ಜನಪ್ರಿಯ. ರತ್ನಮಾಲಾ ಪ್ರಕಾಶ್ ಅವರ ಸಿರಿಕಂಠದಲ್ಲಿ ಈ ಗೀತೆಯನ್ನು ಕೇಳಿ ಧ್ಯಾನಸ್ಥ ಸ್ಥಿತಿಗೆ ಜಾರದ ಮನಸುಗಳೇ ಇರಲಾರವು. ಇಂಗ್ಲೆಂಡಿನ ಕ್ರೈಸ್ತ ಸಂತ ಜಾನ್ ಹೆನ್ರಿ ನ್ಯೂಮನ್ 1833ರಲ್ಲಿ ರಚಿಸಿದ್ದ ಪ್ರಾರ್ಥನಾ ಗೀತೆಯಿದು ಎಂಬ ಸಂಗತಿ ಈಗಲೂ ಬಹಳಷ್ಟು ಜನಕ್ಕೆ ತಿಳಿದಿಲ್ಲ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇಗರ್ಜಿಗಳಲ್ಲಿ ಇಂದಿಗೂ ಈ ಇಂಗ್ಲಿಷ್ ಗೀತೆಯನ್ನು ಹಾಡಲಾಗುತ್ತದೆ.

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು… ಎಂಬ ಪದ್ಯದ ಉರ್ದು ಮೂಲ ಹೀಗಿದೆ-

‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ/ ಝಿಂದಗೀ ಶಂಮಾ ಕೀ ಸೂರತ್ ಹೋ ಖುದಾಯಾ ಮೇರೀ/ ದೂರ್ ದುನಿಯಾ ಕಾ ಮೇರೇ ದಮ್ ಸೇ ಅಂಧೇರಾ ಹೋ ಜಾಯೇ/ ಹರ್ ಜಗಾಹ ಮೇರೀ ಚಮಕನೇ ಸೇ ಉಜಾಲಾ ಹೋ ಜಾಯೇ/ ಹೋ ಮೇರೇ ದಮ್ ಸೇ ಯೂಂ ಹೀ ಮೇರೆ ವತನ್ ಕೀ ಝೀನತ್/ ಜಿಸ್ ತರಾಹ್ ಫೂಲ್ ಸೇ ಹೋತೀ ಹೈ ಚಮನ್ ಕೀ ಝೀನತ್/ ಝಿಂದಗೀ ಹೋ ಮೇರೀ ಪರವಾನೇ ಕೀ ಸೂರತ್ ಯಾರಬ್/ ಇಲ್ಮ್ ಕೀ ಶಂಮಾ ಸೇ ಹೋ ಮುಝಕೋ ಮೊಹೋಬ್ಬತ್ ಯಾರಬ್/ ಹೋ ಮೇರಾ ಕಾಮ್ ಗರೀಬೋಂ ಕೀ ಹಿಮಾಯತ್ ಕರನಾ/ ದರದಮಂದೋ ಸೇ ಝೀಂಫೋ ಸೇ ಮೊಹೊಬ್ಬತ್ ಕರನಾ/ ಮೇರೇ ಅಲ್ಲಾಹ ಬುರಾಯೀ ಸೇ ಬಚಾನಾ ಮುಝಕೋ/ ನೇಕ ಜೋ ರಾಹ ಉಸೀ ಪೆ ಚಲಾನಾ ಮುಝಕೋ/ ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’

ಈ ಉರ್ದು ಗೀತೆಯನ್ನು ನನ್ನ ತಿಳಿವಳಿಕೆಗೆ ನಿಲುಕಿದ ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ ಓದುಗರ ಮುಂದೆ ಇರಿಸಿದ್ದೇನೆ. ಹೆಚ್ಚು ಬಲ್ಲವರು ಇನ್ನಷ್ಟು ಸೊಗಸಾಗಿ ಅನುವಾದ ಮಾಡಿಕೊಳ್ಳಬಹುದು.

ಈಗಲೂ ದೇಶದ ಲಕ್ಷಾಂತರ ಶಾಲೆಗಳಲ್ಲಿ ದಿನನಿತ್ಯ ಮತ್ತು ಸ್ವಾತಂತ್ರ್ಯೋತ್ಸವ ದಿನ ಹಾಗೂ ಗಣರಾಜ್ಯೋತ್ಸವದಂದು ಮೊಳಗುವ ಇನ್ನೊಂದು ಸುಂದರ ದೇಶಭಕ್ತಿ ಗೀತೆಯಿದೆ. ಅದು ‘ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ ಹಮಾರಾ….’

ಈ ಗೀತೆಯ ಬರೆದ ಕವಿಯೇ ‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’ (ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು…’) ಎಂಬ ಗೀತೆಯನ್ನೂ ಬರೆದಿದ್ದಾನೆ.

ಆತನ ಹೆಸರು ಅಲ್ಲಾಮ ಇಕ್ಬಾಲ್. 1902ರಲ್ಲಿ ಈ ಗೀತೆಯನ್ನು ಆತ ಬರೆದಿದ್ದ. ಸಾರೇ ಜಹಾಂ ಸೇ ಅಚ್ಛಾ ಬರೆದದ್ದು ಎರಡು ವರ್ಷಗಳ ನಂತರ 1904ರಲ್ಲಿ. ಹಿಂದೂಸ್ತಾನಿ ಬಚ್ಚೋಂ ಕಾ ಖೋಮಿ ಗೀತ್ ನ್ನು ಬರೆದದ್ದು 1905ರಲ್ಲಿ. ಈ ಕಾಲಘಟ್ಟದಲ್ಲಿ ಆತ ಅಪ್ಪಟ ಭಾರತೀಯ ರಾಷ್ಟ್ರವಾದಿಯಾಗಿದ್ದ. ಆನಂತರ ಆತ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯ ಹೋರಾಟದ ಮುಂಚೂಣಿಯಲ್ಲಿದ್ದ ಮತ್ತು ಪಾಕಿಸ್ತಾನದ ರಾಷ್ಟ್ರಕವಿ ಎನಿಸಿಕೊಂಡದ್ದು ಹೌದು. ಆದರೆ ಲಬ್ ಪೇ ಆತೀ…ಗೀತೆಯಲ್ಲಿ ಬರುವ ‘ವತನ್’ (ಜನ್ಮಭೂಮಿ) ಪದವು ಭಾರತವನ್ನೇ ಉದ್ದೇಶಿಸಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನಾವು ಇಂದಿಗೂ ಮನದುಂಬಿ ಹಾಡುವ ಸಾರೇ ಜಹಾಂ ಸೇ ಅಚ್ಛಾ ಗೀತೆಯನ್ನು ಆತ ರಚಿಸಿದ್ದು ಲಬ್ ಪೇ ಆತೀ ಬರೆದ ಎರಡು ವರ್ಷಗಳ ನಂತರ ಎಂಬುದನ್ನು ಗಮನಿಸಬೇಕು.

ಯಾವ ಕೋನದಿಂದ ನೋಡಿದರೂ ಲಬ್ ಪೇ ಆತೀ ಹೈ ದುವಾ….ಧಾರ್ಮಿಕ ಗೀತೆ ಅಥವಾ ಮುಸ್ಲಿಂ ಪ್ರಾರ್ಥನೆ ಅಲ್ಲ. ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ…ಮುಸ್ಲಿಂ ಪ್ರಾರ್ಥನೆಯೆಂದು ಹೇಳುವುದು ಎಷ್ಟು ವಿಕೃತವೋ, ಲಬ್ ಪೇ ಆತೀ ಹೈ ದುವಾ…ಕ್ಕೆ ಮುಸ್ಲಿಂ ಪ್ರಾರ್ಥನೆಯ ಬಣ್ಣ ಹಚ್ಚುವುದೂ ಅಷ್ಟೇ ವಿಕೃತ ಆದೀತು.

ಇಷ್ಟೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉತ್ತರಪ್ರದೇಶದ ಪೀಲೀಭೀತ್ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಅಮಾನತು ಪ್ರಕರಣ. ಮುಖ್ಯೋಪಾಧ್ಯಾಯ ಫುರ್ಖಾನ್ ಅಲಿ ಅವರು ಶಾಲೆಯಲ್ಲಿ ಮದರಸಾದ ಪ್ರಾರ್ಥನೆಯನ್ನು ಮಕ್ಕಳಿಂದ ಹಾಡಿಸುತ್ತಿದ್ದಾರೆ ಎಂಬುದಾಗಿ ವಿಶ್ವಹಿಂದು ಪರಿಷತ್ ಆರೋಪ ಮಾಡಿತ್ತು. ಅಲಿ ಅವರಿಂದ ವಿವರಣೆಯನ್ನೂ ಪಡೆಯದೆ ಜಿಲ್ಲಾಡಳಿತ ಆತನನ್ನು ಅಕ್ಟೋಬರ್ 14ರಂದು ಅಮಾನತಿನಲ್ಲಿ ಇರಿಸಿತು. ಲಬ್ ಪೇ ಆತೀ ಹೈ ದುವಾ ಗೀತೆಯು ಮದರಸಾ ಪ್ರಾರ್ಥನೆ, ಅದನ್ನು ಹಾಡಿಸುವುದು ದೇಶವಿರೋಧದ ಕೃತ್ಯ ಎಂದು ವಿ.ಹಿಂ.ಪ. ದೂರು ನೀಡಿತ್ತು.

ಪೀಲೀಭೀತ್ ಜಿಲ್ಲೆಯ ಈ ಶಾಲೆಯ ಮಕ್ಕಳು ನಿತ್ಯವೂ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ ಮತ್ತು ಸರಸ್ವತಿ ವಂದನಾ ವನ್ನೂ ವಾಚಿಸುತ್ತಿದ್ದಾರೆ, ವೋ ಶಕ್ತಿ ಹಮೇಂ ದೋ ದಯಾನಿಧೀ ಗೀತೆಯನ್ನೂ ಹಾಡುತ್ತಿದ್ದಾರೆ.

ತಮ್ಮ ಮುಖ್ಯೋಪಾಧ್ಯಾಯರನ್ನು ಈ ಶಾಲೆಯ ಮಕ್ಕಳು ಬಹುವಾಗಿ ಪ್ರೀತಿಸುತ್ತಿದ್ದರು. ಯಾಕೆಂದರೆ ಆತನೂ ಮಕ್ಕಳನ್ನು ಅಕ್ಕರೆಯಿಂದ ಕಾಣುತ್ತಿದ್ದರು. ತಮ್ಮ ಸಂಬಳದ ಹಣ ಖರ್ಚು ಮಾಡಿ ಶಾಲೆಯ ಅಭಿವೃದ್ಧಿ ಮಾಡಿದ್ದರು. ಮಧ್ಯಾಹ್ನದ ಬಿಸಿಯೂಟದ ತರಕಾರಿಗೆ ತಾವೇ ಹಣ ನೀಡುತ್ತಿದ್ದರು. ಹೀಗಾಗಿ ತಮ್ಮ ಅಚ್ಚುಮೆಚ್ಚಿನ ಮೇಷ್ಟ್ರನ್ನು ಅಮಾನತಿನಲ್ಲಿ ಇರಿಸಿರುವ ಕ್ರಮವನ್ನು ಮಕ್ಕಳು ಪ್ರತಿಭಟಿಸಿದ್ದಾರೆ. ಕಳೆದ ಶುಕ್ರವಾರ ಶಾಲಾಮೈದಾನದಲ್ಲಿ ಸೇರಿದ್ದ ಮಕ್ಕಳು ಸಾಲುಗಳಲ್ಲಿ ನಿಂತು ಕೂಗಿದ ಘೋಷಣೆ- ದೇಶದ ರಕ್ಷಣೆ ಯಾರು ಮಾಡ್ತಾರೆ? ನಾವು ಮಾಡ್ತೇವೆ. ಹೇಗೆ ಮಾಡ್ತೇವೆ? ತನುವಿನಿಂದ ಮಾಡ್ತೇವೆ, ಮನಸಿನಿಂದ ಮಾಡ್ತೇವೆ, ಧನದಿಂದ ಮಾಡ್ತೇವೆ.

ಹತ್ತು ನಿಮಿಷ ಘೋಷಣೆ ಕೂಗಿ ಮನೆಯತ್ತ ಹೊರಟವು ಮಕ್ಕಳು. ತಮ್ಮ ಮೇಷ್ಟ್ರು ವಾಪಸು ಬರುವವರೆಗೆ ತಾವೂ ಶಾಲೆಗೆ ಬರುವುದಿಲ್ಲ ಎಂದವು. ಲಬ್ ಪೇ ಆತೀ ಹೈ ಗೀತೆಯನ್ನು ಹಾಡುವಂತೆ ಮತ್ತು ಹಾಡಿಸುವಂತೆ ನಾವೇ ಮೇಷ್ಟ್ರನ್ನ ಕೇಳಿಕೊಂಡೆವು. ದಿನ ಬಿಟ್ಟು ದಿನ ಹಾಡಲು ಅವರು ನಮಗೆ ಅನುಮತಿ ಕೊಟ್ಟರು ಎಂದು ಮಕ್ಕಳು ತಿಳಿಸಿವೆ. ಹಾಜರಾತಿ 150ರಿಂದ ಐದು ಹತ್ತಕ್ಕೆ ತಗ್ಗಿದೆ.

ತನ್ನ ತಪ್ಪಿನ ಅರಿವಾದಂತಿರುವ ಸರ್ಕಾರ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಅಲಿಯ ಅಮಾನತನ್ನು ಮಾನವೀಯತೆಯ ಆಧಾರದ ಮೇಲೆ ರದ್ದು ಮಾಡಲಾಗಿದೆ ಎಂದಿದೆ. ಆದರೆ ಅವರನ್ನು ಬೇರೆ ಶಾಲೆಗೆ ವರ್ಗ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...