“ತಿನ್ನುವ ಬಟ್ಟಲಿಗೆ ವಿಷ ಹಾಕಿದರೂ ತಿರುಗಿ ಅವರಿಗೆ ಅಮೃತ ಬಡಿಸುವ ಧರ್ಮ ಅಂತ ಈ ಭೂಮಿಯ ಮೇಲೆ ಇದ್ದರೆ ಅದು ಸನಾತನ ಹಿಂದೂ ಧರ್ಮ ಮಾತ್ರ. ಯಾವ ಜನರು ಬಾಂಗ್ಲಾದೇಶದಲ್ಲಿ ಇಸ್ಕಾನ್ ಟೆಂಪಲ್ ಧ್ವಂಸ ಮಾಡಿದರೋ ಇಂದು ಅದೇ ಪ್ರವಾಹ ಪೀಡಿತ ಜನರಿಗೆ ಇಸ್ಕಾನ್ ಆಹಾರವನ್ನು ಬಡಿಸುವ ಮೂಲಕ ಅವರ ನೆರವಿಗೆ ಧಾವಿಸಿದೆ” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ತಿನ್ನುವ ಬಟ್ಟಲಿಗೆ ವಿಷ ಹಾಕಿದರು
ತಿರುಗಿ ಅವರಿಗೆ ಅಮೃತ ಬಡಿಸುವ ಧರ್ಮ ಅಂತ ಈ ಭೂಮಿಯ ಮೇಲೆ ಇದ್ದರೆ ಅದು ಸನಾತನ ಹಿಂದೂ ಧರ್ಮ ಮಾತ್ರ ❤
ಯಾವ ಜನರು ಬಾಂಗ್ಲಾದೇಶದಲ್ಲಿ ಇಸ್ಕಾನ್ ಟೆಂಪಲ್ ಧ್ವಂಸ ಮಾಡಿದರೋ ಇಂದು ಅದೇ ಪ್ರವಾಹ ಪೀಡಿತ ಜನರಿಗೆ ಇಸ್ಕಾನ್ ಆಹಾರವನ್ನು ಬಡಿಸುವ ಮೂಲಕ ಅವರ ನೆರವಿಗೆ ಧಾವಿಸಿದೆ. pic.twitter.com/5hnGH1xvOR— RAVI N DEVADIGA (@RAVINDEVADIGA1) August 23, 2024
ಬಾಂಗ್ಲಾ ಪ್ರವಾಹದ ಕುರಿತು ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಇತ್ತೀಚೆಗಷ್ಟೆ ನಡೆದ ಹಿಂಸಾಚಾರದಲ್ಲಿ ಕಿಡಿಗೇಡಿಗಳು ಬಾಂಗ್ಲಾದ ಖುಲ್ನಾ ವಿಭಾಗದಲ್ಲಿ ನೆಲೆಗೊಂಡಿರುವ ಮೆಹರ್‌ಪುರದಲ್ಲಿರುವ ಇಸ್ಕಾನ್ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು. ಹೀಗಿದ್ದರೂ ಇಸ್ಕಾನ್, ಪ್ರವಾಹದಲ್ಲಿ ಸಿಲುಕಿರುವ ಬಾಂಗ್ಲಾ ಪ್ರಜೆಗಳಿಗೆ ಸಹಾಯ ಮಾಡುತ್ತಿದೆ ಎಂಬ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಪ್ರವಾಹ ಪೀಡಿತ ಬಾಂಗ್ಲಾ ಜನರಿಗೆ ಇಸ್ಕಾನ್ ಸಹಾಯ ಮಾಡುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋ ಕುರಿತು ಮಾಹಿತಿ ಹುಡುಕಿದಾಗ ಇಸ್ಕಾನ್ ಬಾಂಗ್ಲಾದೇಶ ವೆಬ್‌ಸೈಟ್‌ನಲ್ಲಿ ಜೂನ್ 22, 2022 ರಲ್ಲಿ ಪ್ರಕಟವಾದ ಲೇಖನವೊಂದು ಲಭ್ಯವಾಗಿದೆ. ಇದಕ್ಕೆ ‘ಇಸ್ಕಾನ್ ಸಿಲ್ಹೆಟ್ ಪ್ರವಾಹ ಸಂತ್ರಸ್ತರ ಪರವಾಗಿ ನಿಂತಿದೆ’ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ಲಗತ್ತಿಸಿದೆ.

ವೆಬ್‌ಸೈಟ್‌ನಲ್ಲಿ ಲಭ್ಯವಾದ ವರದಿಯ ಪ್ರಕಾರ, ‘ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಸಿಲ್ಹೆಟ್ ಮತ್ತು ಸುನಮ್‌ಗಂಜ್‌ನಲ್ಲಿ ಪ್ರವಾಹದಿಂದ ಪರಿಸ್ಥಿತಿ ಗಂಭೀರವಾಗಿದೆ. ಸರ್ಕಾರ ವಿವಿಧೆಡೆ ಪರಿಹಾರ ವಿತರಣೆ ಮಾಡಿದರೂ ಹಲವರಿಗೆ ಕೈತುಂಬ ಆಹಾರ ಸಿಕ್ಕಿಲ್ಲ. ಪ್ರವಾಹ ಸಂತ್ರಸ್ತರ ಮನೆಗಳಿಗೆ ತೆರಳಿ ಸಾಧ್ಯವಾದಷ್ಟು ಆಹಾರ ನೆರವು ನೀಡುತ್ತಿದ್ದೇವೆ. ಸಿಲ್ಹೆಟ್ ನಗರದ ಹೊರತಾಗಿ, ಸಮೀಪದ ಉಪಜಿಲಾಗಳಲ್ಲಿ ಪ್ರತಿದಿನ 3-4 ಸಾವಿರ ಜನರಿಗೆ ಬೇಯಿಸಿದ ಆಹಾರವನ್ನು ವಿತರಿಸಲಾಗುತ್ತದೆ. ಆಹಾರದ ಜೊತೆಗೆ, ಇಸ್ಕಾನ್ ಬಟ್ಟೆಗಳು, ಅಗತ್ಯ ಔಷಧಗಳು, ನೀರು ಶುದ್ಧೀಕರಣಕ್ಕಾಗಿ ಮಾತ್ರೆಗಳು ಮತ್ತು ವೈದ್ಯಕೀಯ ಆರೈಕೆಯಂತಹ ಇತರ ಅಗತ್ಯ ಸಹಾಯವನ್ನು ವಿತರಿಸುತ್ತದೆ. ಪ್ರವಾಹ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಇಸ್ಕಾನ್ ಪ್ರವಾಹ ಸಂತ್ರಸ್ತರ ಪಕ್ಕದಲ್ಲಿರುತ್ತದೆ’ ಎಂದು ವರದಿಯಲ್ಲಿದೆ.
ಹಾಗೆಯೆ ಜೂನ್ 20, 2022 ರಂದು Iskcon Youth Forum, Sylhet ಫೇಸ್ಬುಕ್ ಖಾತೆಯಲ್ಲಿ ‘ಇದು ಅನ್ನವಲ್ಲ ಕೋಟ್ಯಾಂತರ ರೂಪಾಯಿಗಳ ಸಂಪತ್ತು. ಸ್ವಲ್ಪ ಆಹಾರಕ್ಕಾಗಿ ಜನರು ಎಷ್ಟು ಚಡಪಡಿಸುತ್ತಾರೆ ನೋಡಿ. ಪ್ರವಾಹ ಸಂತ್ರಸ್ತರ ಪಕ್ಕದಲ್ಲಿ ಇಸ್ಕಾನ್ ಸಿಲ್ಹೆಟ್. ನೀವೂ ಮುಂದೆ ಬನ್ನಿ’ ಎಂಬ ಅಡಿಬರಹದೊಂದಿಗೆ ಇದೇ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.
ಸಂಕೀರ್ತನ್ ಫೆಸ್ಟ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿಯೂ ಜೂನ್ 20, 2022 ರಂದು ಇದೇ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ‘ಇಸ್ಕಾನ್ ಸಿಲ್ಹೆಟ್ ಮತ್ತು ಸಂಕೀರ್ತನ್ ಫೆಸ್ಟ್ ಸಿಲ್ಹೆಟ್-ಸುನಮ್‌ಗಂಜ್‌ನಲ್ಲಿನ ಪ್ರವಾಹ ಪೀಡಿತರಿಗೆ ಸಹಾಯ ಮಾಡುತ್ತಿರುವುದು’ ಎಂಬ ಶೀರ್ಷಿಕೆ ನೀಡಿದೆ. ಹೀಗಾಗಿ ಬಾಂಗ್ಲಾದೇಶದ ಇತ್ತೀಚಿನ ಗಲಭೆಯಲ್ಲಿ ಕಿಡಿಗೇಡಿಗಳು ಇಸ್ಕಾನ್ ದೇವಾಲಯಕ್ಕೆ ಹಾನಿ ಮಾಡಿದ್ದರೂ, ಇಸ್ಕಾನ್ ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದೆ ಎಂಬುದು ಸುಳ್ಳು ಎಂದು ವಿಡಿಯೋ ಆಧರಿಸಿ ಸೌತ್‌ಚೆಕ್ ವೆಬ್‌ಸೈಟ್ ವರದಿ ಮಾಡಿದೆ.
ಒಟ್ಟಿನಲ್ಲಿ , ಬಾಂಗ್ಲಾದೇಶದಲ್ಲಿ 2022ರಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಅಲ್ಲಿನ ಜನ ತೊಂದರೆ ಅನುಭವಿಸುವಂತಾಗಿತ್ತು. ಆಗ ಸಿಲ್ಹೆಟ್ ಪ್ರವಾಹ ಸಂತ್ರಸ್ತರಿಗೆ ಇಸ್ಕಾನ್ ಸಹಾಯ ಮಾಡುತ್ತಿರುವ ವಿಡಿಯೋವನ್ನು 2024ರದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ಬಾಹ್ಯಾಕಾಶದಿಂದ ಜಿಗಿದು ಭೂಮಿ ತಲುಪಿದ ವಿಜ್ಞಾನಿ ಆಸ್ಟ್ರೇಲಿಯಾದವರಲ್ಲ!


