“ಹಿಂದುತ್ವ ಗುಂಪುಗಳು ಮತ್ತು ಪೋಷಕರ ಒತ್ತಡದಿಂದ ನಾನು ದೂರು ಕೊಟ್ಟಿದ್ದೆ” ಎಂದು ವಿದ್ಯಾರ್ಥಿನಿ ಹೇಳಿದ ಹೊರತಾಗಿಯೂ, ಆಕೆಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ 26 ವರ್ಷದ ಮುಸ್ಲಿಂ ಯುವಕನಿಗೆ ಉತ್ತರ ಪ್ರದೇಶದ ಬರೇಲಿಯ ಜಿಲ್ಲಾ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು scroll.in ವರದಿ ಮಾಡಿದೆ.
ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರು ಪ್ರಕರಣವನ್ನು ‘ಲವ್ ಜಿಹಾದ್’ ನ ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ. ಆದರೆ, ಈ ಪ್ರಕರಣ ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ-2020ರ ಅಡಿಯಲ್ಲಿ ದಾಖಲಿಸಲಾಗಿರಲಿಲ್ಲ ಎಂದು ವರದಿ ತಿಳಿಸಿದೆ.
“ಅಕ್ರಮ ಮತಾಂತರಕ್ಕೆ ಮತ್ತು ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಇರುವಂತಹ ಪರಿಸ್ಥಿತಿಯನ್ನು ಭಾರತದಲ್ಲಿಯೂ ಸೃಷ್ಟಿಸುವ ಉದ್ದೇಶದಿಂದ ಹಿಂದೂ ಹುಡುಗಿಯರಿಗೆ ‘ಪ್ರೀತಿ’ಯ ಆಮಿಷವೊಡ್ಡಲಾಗುತ್ತಿದೆ ಎಂದು ನ್ಯಾಯಾಧೀಶ ರವಿ ಕುಮಾರ್ ಹೇಳಿದ್ದಾರೆ. ಅಕ್ರಮ ಮತಾಂತರವು ದೇಶದ ಗಣನೀಯ ಭದ್ರತೆ, ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡುತ್ತದೆ” ಎಂದಿದ್ದಾರೆ.
ಆದರೆ, ಈ ಹಿಂದೆ ‘ಲವ್ ಜಿಹಾದ್’ ಕುರಿತಂತೆ ಸಂಸತ್ತಿಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಭಾರತೀಯ ಕಾನೂನಿನಲ್ಲಿ ಅಂತಹ ಪದವನ್ನು ವ್ಯಾಖ್ಯಾನಿಸುವ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿತ್ತು.
25 ವರ್ಷದ ಮೊಹಮ್ಮದ್ ಆಲಿಂ ಎನ್ನುವವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಅಪರಾಧಕ್ಕೆ ನೆರವಾದ ಕಾರಣ ನೀಡಿ ಆಲಿಂ ಅವರ ತಂದೆಗೆ ಕೂಡ ಎರಡು ವರ್ಷಗಳ ಜೈಲು ಶಿಕ್ಷೆ ನೀಡಲಾಗಿದೆ.
“ಆಲಿಂ ಅವರು ತಮ್ಮ ಹೆಸರನ್ನು ‘ಆನಂದ್’ ಎಂದು ಹೇಳಿ ವಿದ್ಯಾರ್ಥಿನಿಯನ್ನು ವಂಚಿಸಿದ್ದಾರೆ. ಆತ ಆನಂದ್ ಎಂದು ಗೊತ್ತಾದ ನಂತರ ವಿದ್ಯಾರ್ಥಿನಿ ದೂರು ದಾಖಲಿಸಿದ್ದರು. ಕೋಚಿಂಗ್ ಕೇಂದ್ರವೊಂದರಲ್ಲಿ ಆಲಿಂ ಅವರು ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದರು. ನಂತರ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಆಕೆ ಗರ್ಭಿಣಿಯಾದ ಬಳಿಕ ಗರ್ಭಪಾತಕ್ಕೆ ಕಾರಣವಾಗುವ ವಸ್ತುವನ್ನು ಬೆರೆಸಿದ ರಸವನ್ನು ಕುಡಿಸಿದ್ದರು” ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ವಿದ್ಯಾರ್ಥಿನಿ 2023ರಲ್ಲಿ ಆಲಿಂ ವಿರುದ್ದ ಪ್ರಕರಣ ದಾಖಲಿಸಿದ್ದಳು. ಆದರೆ, ವಿಚಾರಣೆಯ ವೇಳೆ ತನ್ನ ಆರೋಪಗಳನ್ನು ವಾಪಸ್ ಪಡೆದಿದ್ದಳು. ಆದರೆ, ಆಕೆಯ ವಾದವನ್ನು ನ್ಯಾಯಾಧೀಶ ದಿವಾಕರ್ ತಿರಸ್ಕರಿಸಿದ್ದು, ಆಕೆ ಆಲಿಂನ ಒತ್ತಡಕ್ಕೆ ಮಣಿದು ಈ ಹೇಳಿಕೆ ನೀಡಿದ್ದಾಳೆ ಎಂದಿರುವುದಾಗಿ ವರದಿಗಳು ಹೇಳಿದೆ.
ಜ್ಞಾನವಾಪಿ ಪ್ರಕರಣದಲ್ಲಿ ಆದೇಶ ನೀಡಿದ್ದರು ನ್ಯಾ.ದಿವಾಕರ್
ನ್ಯಾಯಾಧೀಶ ದಿವಾಕರ್ ಅವರು ವಾರಣಾಸಿಯಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿದ್ದಾಗ, ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋ ಚಿತ್ರೀಕರಣಕ್ಕೆ ಹಾಗೂ ವಜುಖಾನಾ ಪ್ರದೇಶ ಮುಚ್ಚಲು ಆದೇಶಿಸಿದ್ದರು.
ಇದನ್ನೂ ಓದಿ : ಕೈದಿಗಳಿಗೆ ಜಾತಿ ಆಧಾರಿತ ಕೆಲಸ ಹಂಚಿಕೆ ನಿಲ್ಲಿಸಿ, ಜೈಲು ನೋಂದಣಿಯಿಂದ ಜಾತಿ ಕಾಲಂ ಅಳಿಸಿ : ಸುಪ್ರೀಂ ಕೋರ್ಟ್


