ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಹಾಗೂ ಲಡಾಖ್‌ನ ಹಲವಾರು ಇತರ ಹೋರಾಟಗಾರರು ಬುಧವಾರ ಸಂಜೆ ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್‌ಘಾಟ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ, ಅವರನ್ನು ಪೊಲೀಸ್ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಬಳಿಕ ಅವರು ತಮ್ಮ ಉಪವಾಸವನ್ನು ಕೊನೆಗೊಳಿಸಲಾಗಿದೆ ಎಂದು ಹೇಳಿದರು.
ಗುಂಪು ತಮ್ಮ ಬೇಡಿಕೆಗಳನ್ನು ಪಟ್ಟಿ ಮಾಡುವ ಜ್ಞಾಪಕ ಪತ್ರವನ್ನು ಸರ್ಕಾರಕ್ಕೆ ನೀಡಿದ್ದು, ಶೀಘ್ರದಲ್ಲೇ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಲಾಗಿದೆ ಎಂದು ವಾಂಗ್ಚುಕ್ ಹೇಳಿದರು.
“ಇಂತಹ ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ಲಡಾಖ್ ಅನ್ನು ರಕ್ಷಿಸಲು ನಾವು ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ನೀಡಿದ್ದೇವೆ. ಇದರಿಂದ ಅಲ್ಲಿನ ಪರಿಸರವನ್ನು ಸಂರಕ್ಷಿಸಬಹುದು, ಸಂವಿಧಾನದ ಆರನೇ ಶೆಡ್ಯೂಲ್ ಸ್ಥಳೀಯರಿಗೆ ಸಂಪನ್ಮೂಲಗಳನ್ನು ನಿರ್ವಹಿಸುವ ಹಕ್ಕನ್ನು ನೀಡುತ್ತದೆ” ಎಂದು ವಾಂಗ್ಚುಕ್ ಮಾಧ್ಯಮಗಳಿಗೆ ತಿಳಿಸಿದರು.
“ಹಿಮಾಲಯದಲ್ಲಿ ಸ್ಥಳೀಯರು ಸಬಲೀಕರಣಗೊಳ್ಳಬೇಕು. ಏಕೆಂದರೆ, ಅವರು ಅದನ್ನು ಉತ್ತಮವಾಗಿ ಸಂರಕ್ಷಿಸಬಹುದು. ಮುಂದಿನ ದಿನಗಳಲ್ಲಿ ನಾವು ಪ್ರಧಾನಿ, ರಾಷ್ಟ್ರಪತಿ ಅಥವಾ ಗೃಹ ಸಚಿವರನ್ನು ಭೇಟಿ ಮಾಡಲಿದ್ದೇವೆ, ಇದು ಗೃಹ ಸಚಿವಾಲಯ ನಮಗೆ ನೀಡಿರುವ ಭರವಸೆಯಾಗಿದೆ” ಎಂದರು.
“ನಾವು ಲಡಾಖ್‌ಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಬೇಡಿಕೆ ಇಟ್ಟಿದ್ದೇವೆ, ಆರನೇ ಶೆಡ್ಯೂಲ್ ಕೂಡ ಅದರ ಒಂದು ಭಾಗವಾಗಿದೆ. ನಮಗೆ ಉನ್ನತ ನಾಯಕತ್ವವನ್ನು ಭೇಟಿ ಮಾಡಿಸುವ ಭರವಸೆ ನೀಡಲಾಗಿದೆ ಮತ್ತು ಸಭೆಯ ದಿನಾಂಕವನ್ನು ಒಂದೆರಡು ದಿನಗಳಲ್ಲಿ ದೃಢೀಕರಿಸಲಾಗುವುದು” ಎಂದು ವಾಂಗ್ಚುಕ್ ಹೇಳಿದರು.
ವಾಂಗ್ಚುಕ್ ಮತ್ತು ಇತರ ಎಲ್ಲ ಪಾದಯಾತ್ರಿಗಳನ್ನು ಸಂಜೆ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
“ರಾಷ್ಟ್ರೀಯ ರಾಜಧಾನಿಯ ಕೇಂದ್ರ ಭಾಗಗಳಲ್ಲಿ ಸೆಕ್ಷನ್ 163 ಅನ್ನು ವಿಧಿಸಲಾಗಿರುವುದರಿಂದ ಯಾವುದೇ ಯಾತ್ರೆಯನ್ನು ನಡೆಸುವಂತಿಲ್ಲ ಎಂಬ ಭರವಸೆಯ ನಂತರ ಅವರನ್ನು ಹೋಗಲು ಅನುಮತಿಸಲಾಗಿದೆ” ಎಂದು ಅಧಿಕಾರಿ ಹೇಳಿದರು.
ಸೋನಮ್ ವಾಂಗ್ಚುಕ್ ಅವರನ್ನು ಬವಾನಾ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು ಮತ್ತು ಇತರ ‘ಪಾದಯಾತ್ರಿಗಳು’ ದೆಹಲಿ-ಹರಿಯಾಣ ಗಡಿಯಲ್ಲಿ ಇತರ ಮೂರು ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿತ್ತು.
ರಾತ್ರಿ 9.30 ರ ಸುಮಾರಿಗೆ ರಾಜ್‌ಘಾಟ್‌ವರೆಗೆ ಎಲ್ಲರನ್ನು ಪೊಲೀಸ್ ಸಿಬ್ಬಂದಿ ಬಸ್‌ಗಳಲ್ಲಿ ಕರೆದೊಯ್ಯಲಾಯಿತು. ನಂತರ, ವಾಂಗ್‌ಚುಕ್ ಮತ್ತು ಇತರ ಎಲ್ಲ ಪಾದಯಾತ್ರಿಗಳಿಗೆ ಮನೆಗೆ ಹೋಗಲು ಅನುಮತಿಸಲಾಯಿತು.
ಸರ್ಕಾರವನ್ನು ಭೇಟಿಯಾಗಲು ವಾಂಗ್ಚುಕ್ ಇನ್ನೂ ಕೆಲವು ದಿನಗಳ ಕಾಲ ದೆಹಲಿಯಲ್ಲಿ ಉಳಿಯಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲೇಹ್ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್‌ನ ಪ್ರತಿನಿಧಿಗಳೊಂದಿಗೆ 15 ದಿನಗಳಲ್ಲಿ ಮಾತುಕತೆ ಪುನರಾರಂಭವಾಗಲಿದೆ ಎಂದು ಅವರಿಗೆ ಭರವಸೆ ನೀಡಲಾಗಿದೆ ಎಂದು ವಾಂಗ್ಚುಕ್ ಹೇಳಿದರು.
ವಾಂಗ್ಚುಕ್ ಅವರು ಒಂದು ತಿಂಗಳ ಹಿಂದೆ ಲೇಹ್‌ನಿಂದ ಪ್ರಾರಂಭವಾದ ‘ದೆಹಲಿ ಚಲೋ ಪಾದಯಾತ್ರೆ’ಯನ್ನು ಮುನ್ನಡೆಸುತ್ತಿದ್ದರು. ಕೇಂದ್ರಾಡಳಿತ ಪ್ರದೇಶಕ್ಕೆ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ರಕ್ಷಣೆ ನೀಡುವಂತೆ ಒತ್ತಾಯಿಸಿ ದೆಹಲಿಗೆ ಮೆರವಣಿಗೆ ನಡೆಸುತ್ತಿದ್ದ ಲಡಾಖ್‌ನಿಂದ ಸುಮಾರು 170 ಜನರನ್ನು ಸೋಮವಾರ ರಾತ್ರಿ ದೆಹಲಿಯ ಸಿಂಘು ಗಡಿಯಲ್ಲಿ ಬಂಧಿಸಲಾಯಿತು. ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದ ನಂತರ ಅವರು ಉಪವಾಸ ಮುಷ್ಕರ ಆರಂಭಿಸಿದ್ದರು.
ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕೆ ಒತ್ತಾಯಿಸಿ, ಅದನ್ನು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಸೇರಿಸಲು ಆಂದೋಲನವನ್ನು ಮುನ್ನಡೆಸುತ್ತಿರುವ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಈ ಮೆರವಣಿಗೆಯನ್ನು ಆಯೋಜಿಸಿದೆ. ಲಡಾಖ್‌ಗೆ ಸಾರ್ವಜನಿಕ ಸೇವಾ ಆಯೋಗ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳ ಜೊತೆಗೆ ಆರಂಭಿಕ ನೇಮಕಾತಿ ಪ್ರಕ್ರಿಯೆಗೆ ಬೇಡಿಕೆ ಇಟ್ಟಿವೆ.
ಇದನ್ನೂ ಓದಿ; ಕುಕಿ ಬಂಡುಕೋರರಿಂದ ಅಪಹರಣಕ್ಕೊಳಗಾದ ಇಬ್ಬರು ಮೈತೆಯಿ ಯುವಕರ ಬಿಡುಗಡೆ


