ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ನೀಲಿ ಬಣ್ಣದ ಕುರ್ತಾ, ಪೈಜಾಮ ತೊಟ್ಟಿದ್ದ ಮಗುವಿನ ಕಾಲುಗಳನ್ನು ಹಗ್ಗದಿಂದ ಕಟ್ಟಿ, ತಲೆಕೆಳಗಾಗಿ ನೇತು ಹಾಕಲಾಗಿದೆ. ಮುಸ್ಲಿಂ ಪ್ರಾರ್ಥನೆಯ ಟೋಪಿಯನ್ನು ಧರಿಸಿರುವ ಹಲವಾರು ಹುಡುಗರು ಕುರಾನ್ ಓದುವುದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
ಭಾರತೀಯ ಮದರಸದಲ್ಲಿ ಬಾಲಕಿಯನ್ನು ಶಿಕ್ಷಿಸುತ್ತಿರುವ ರೀತಿಯನ್ನು ನೋಡಿದರೆ, ಅಲ್ಲಿನ ಕ್ರೂರತೆ ಏನು ಎಂಬುವುದು ಅರ್ಥವಾಗುತ್ತದೆ” ಎಂದು ಪ್ರತಿಪಾದಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದೇ ವಿಡಿಯೋವನ್ನು ಎಕ್ಸ್ ಖಾತೆಯ ಬಳಕೆದಾರರೊಬ್ಬರು, ಪೋಸ್ಟ್ ಮಾಡಿದ್ದು “ಇದು ಯಾವ ಶಾಲೆ ಎಂದು ನಾನು ನಿಮಗೆ ಹೇಳಬೇಕಾಗಿಲ್ಲ. ಆದರೆ ಚಿಕ್ಕ ಹುಡುಗಿಯನ್ನು ಹೀಗೆ ತಲೆಕೆಳಗಾಗಿ ಕಟ್ಟಿ ಹಾಕಿ ಹೊಡೆದಾಗ, ನಮ್ಮ ದೇಶದಲ್ಲಿ ಕಾನೂನಿನ ಭಯವಿದೆಯೇ? ಈ ತಾಲಿಬಾನಿ ಶಿಕ್ಷೆಗೆ ಕಾರಣವೆಂದರೆ, ಅವಳು ಸ್ವರ್ಗೀಯ ಪುಸ್ತಕವನ್ನು ಅರ್ಥಮಾಡಿಕೊಳ್ಳಲಿಲ್ಲ. ಅಂತಹ ಶಾಲೆಗಳನ್ನು ಭಾರತದಾತ್ಯಂತ ಸಂಪೂರ್ಣವಾಗಿ ನಿಷೇಧಿಸಬೇಕು. ಮತ್ತು ಚಿಕ್ಕ ಹುಡುಗಿಯನ್ನು ಈ ರೀತಿ ಹೊಡೆಯಲು ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಹೀಗೆ ವ್ಯಾಪಕವಾಗಿ ಹಲವಾರು ಮಂದಿ ವಿವಿಧ ಬರಹಗಳೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಹಾಗಿದ್ದರೆ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಲಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಪಾಕಿಸ್ತಾನದ ಸುದ್ದಿ ವಾಹಿನಿಯಾದ ಜಿಯೋ ನ್ಯೂಸ್ ಸುದ್ದಿ 30 ಜೂನ್ 2019ರಂದು “Rawalpindi ‘qari’ who assaulted student sent on 14-day judicial remand” ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ಈ ವರದಿಯ ಪ್ರಕಾರ ಈ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದ್ದು, ಬಾಲಕಿಯನ್ನು ತಲೆಕೆಳಗಾಗಿ ನೇತು ಹಾಕಲಾಗಿದೆ ಎಂಬುದು ಸುಳ್ಳು. ಇಲ್ಲಿ ಸಂತ್ರಸ್ಥರಾಗಿರುವುದು ಬಾಲಕ.. ಮದರಸದ ವಿದ್ಯಾರ್ಥಿಯನ್ನು ತಲೆಕೆಳಗಾಗಿ ಕಟ್ಟಿಹಾಕಿ ಹಲ್ಲೆ ನಡೆಸಿದ ಖಾರಿ ನೂರ್ ಮುಹಮ್ಮದ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ವರದಿಯಲ್ಲಿನ ಆಘಾತಕಾರಿ ಅಂಶ ಎಂದರೆ ಸಂತ್ರಸ್ಥ ಬಾಲಕ ಮತ್ತು ಆತನ ತಂದೆ ಪೊಲೀಸ್ ಠಾಣೆಯಲ್ಲಿ ಖಾರಿ ನಿರಾಪರಾಧಿ, ಇದು ತರಗತಿ ಮುಗಿದ ನಂತರ ತಮಾಷೆಗಾಗಿ ಮಾಡಿದ ವಿಡಿಯೋ ಎಂದು ಹೇಳಿಕೆಯನ್ನು ನೀಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಇನ್ನು ಇದೇ ಘಟನೆಗೆ ಸಂಬಂಧ ಪಟ್ಟಂತೆ ಗಲ್ಫ್ ಟುಡೆ ಮತ್ತು ಆರಿ ನ್ಯೂಸ್ ಕೂಡ ಈ ಬಗ್ಗೆ ವರದಿಯನ್ನು ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈಲರ್ ವಿಡಿಯೋದಲ್ಲಿರುವುದು ವಿದ್ಯಾರ್ಥಿನಿ ಅಲ್ಲ ಆತ ಬಾಲಕ ಮತ್ತು ಆತನನ್ನು ಭಾರತದ ಮದರಾಸದಲ್ಲಿ ತಲೆಕೆಳಗಾಗಿ ನೇತಹಾಕಲಾಗಿದೆ ಎಂಬುದು ಸುಳ್ಳು, ಈ ವೈರಲ್ ವಿಡಿಯೋದಲ್ಲಿನ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ನಟ ದರ್ಶನ್ ಪತ್ನಿ ದೇವರ ಮೊರೆ ಎಂದು ಒಂದು ವರ್ಷದ ಹಿಂದಿನ ಹಳೆಯ ಫೋಟೊ ಹಂಚಿಕೊಳ್ಳಲಾಗ್ತಿದೆ


