ರಾಜ್ಯದಲ್ಲಿ ಇತ್ತೀಚೆಗೆ ಮಳೆ ಹೆಚ್ಚಾಗುತ್ತಿದ್ದಂತೆ ಡೆಂಗಿ ಸೋಂಕು ಕೂಡ ಎಲ್ಲಡೆ ಹಬ್ಬಲು ಪ್ರಾರಂಭವಾಗಿದೆ. ಇದರ ಮಧ್ಯೆ ” ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ, ಈಗಲೆ ಖರೀದಿಸಿ, ಪಪ್ಪಾಯ ಎಲೆಯ ಸಾರವನ್ನು ಒಳಗೊಂಡಿರುವ ‘CARIPILL’ ಮಾತ್ರೆಯು ಡೆಂಗಿವನ್ನು ಕೆಲವೇ ಗಂಟೆಗಳಲ್ಲಿ ಗುಣಪಡಿಸುವ ಶಕ್ತಿ ಹೊಂದಿದೆ. ‘ಅಂತಃಕರಣ’ ಇದನ್ನು ಉಚಿತವಾಗಿ ನೀಡುತ್ತಿದೆ. ಈ ಸಂದೇಶವನ್ನು ಯಾವುದೇ ಕಾರಣಕ್ಕೂ ಅಳಿಸಬೇಡಿ ಎಲ್ಲರಿಗೂ ತಲುಪುವವರೆಗೂ ಶೇರ್ ಮಾಡಿ”ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.
ಈ ಸುದ್ದಿಯನ್ನು ಓದಿದ ಹಲವು ಮಂದಿ ಪಪಾಯಿ ಸಾರವನ್ನು ಹೊಂದಿರುವ ಕ್ಯಾರಿಪಿಲ್ ನಿಜಕ್ಕೂ ಡೆಂಗಿ ಖಾಯಿಲೆಯಿಂದ ತಮ್ಮನ್ನು ಮುಕ್ತಗೊಳಿಸುತ್ತದೆ ಎಂದು ಭಾವಿಸಿದ್ದಾರೆ. ಹೀಗಾಗಿ ಕೆಲವರು ಯಾವುದೇ ವೈದ್ಯರ ಸಲಹೆಯನ್ನು ಪಡೆಯದೆ ಈ CARIPILL ಸೇವಿಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗುತ್ತದೆ.
Papaya Leaf Extract tablets required in the treatment of Dengu for increasing Blood Platlets. Please share pic.twitter.com/AT68s0SMSV
— Suchitra Krishnamoorthi (@suchitrak) September 12, 2015
ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ CARIPILL ನಿಜಕ್ಕೂ ಡೆಂಗಿ ಖಾಯಿಲೆಯನ್ನು ನಿವಾರಣೆ ಮಾಡುತ್ತದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಮಾತ್ರೆಯ ಕುರಿತು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, 12 ಆಗಸ್ಟ್ 2016ರಂದು ದ ಹೆಲ್ತ್ ಸೈಟ್.ಕಾಮ್ ಎಂಬ ವೆಬ್‌ಸೈಟ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಈ ವರದಿಯಲ್ಲಿ ಈ ಸಂಸ್ಥೆಯು ಜಾಹಿರಾತಿನಲ್ಲಿ ನೀಡಲಾದ ನಂಬರ್‌ಗೆ ಕರೆ ಮಾಡಿ ವಿಚಾರಣೆ ನಡೆಸಿದಾಗ ಈ ಮಾತ್ರೆಗೂ ಅಂತಃಕರಣ ಕ್ಲಿನಿಕ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಖಚಿತ ಪಡಿಸಿಕೊಂಡಿದೆ.

ಬಳಿಕ ಈ ಕ್ಯಾರಿಪಿಲ್ ಮಾತ್ರೆಯನ್ನು ಬೆಂಗಳೂರಿನ ಮೈಕ್ರೋ ಲ್ಯಾಬ್ಸ್ ಎಂಬ ಫಾರ್ಮಾಸ್ಯುಟಿಕಲ್ಸ್ ಕಂಪನಿಯಿಂದ ತಯಾರಿಸಲ್ಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮಾತ್ರೆಗಳು ಸಸ್ಯಶಾಸ್ತ್ರೀಯಕ್ಕೆ ಸಂಬಂಧಪಟ್ಟಿದೆ ಎಂಬುದನ್ನು ಖಚಿತ ಪಡಿಸಿಕೊಂಡ ಈ ತಂಡ, ಬಳಿಕ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್‌ನ ವೈದ್ಯಕೀಯ ವ್ಯವಹಾರಗಳ ವಿಪಿ ಡಾ ಮಂಜುಳಾ ಸುರೇಶ್ ಅವರನ್ನು ಸಂಪರ್ಕಿಸಿ ಮಾತನಾಡಿದೆ. ಇದಕ್ಕೆ ಅವರು “ಈ ಸಂದೇಶವನ್ನು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡುವ ಬಗ್ಗೆ ನಮಗೆ ತಿಳಿದಿಲ್ಲ. ಕ್ಯಾರಿಪಿಲ್ ಒಂದು ಪ್ರಿಸ್ಕ್ರಿಪ್ಷನ್ ಔಷಧವಾಗಿದೆ ಮತ್ತು ನಾವು ಅದನ್ನು ವೈದ್ಯರಿಗೆ ಮಾತ್ರ ಮಾರಾಟ ಮಾಡುತ್ತೇವೆ. ಡೆಂಗ್ಯೂವನ್ನು 48 ಗಂಟೆಗಳಲ್ಲಿ ಗುಣಪಡಿಸಬಹುದು ಎಂದು ನಾವು ಹೇಳುವುದಿಲ್ಲ. ವಾಸ್ತವವಾಗಿ, ಔಷಧವನ್ನು ಐದು ದಿನಗಳವರೆಗೆ ತೆಗೆದುಕೊಳ್ಳಬೇಕು.” ಎಂದು ದ ಹೆಲ್ತ್ ಸೈಟ್.ಕಾಮ್‌ಗೆ ಸ್ಪಷ್ಟ ಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ , CARIPILL ಮಾತ್ರೆ ಸೇವನೆಯಿಂದ ಡೆಂಗಿ ಸೋಂಕಿನಿಂದ ಕೇವಲ 48 ಗಂಟೆಗಳಲ್ಲಿ ಮುಕ್ತಿ ಪಡೆಯಬಹುದು ಎಂಬ ಪ್ರತಿಪಾದನೆ ಸುಳ್ಳಾಗಿದೆ. ಹಾಗೂ ಈ ಸಂದೇಶ 2016ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವುದರಿಂದ ಇದು ಹಳೆಯ ಮತ್ತು ಸುಳ್ಳು ಸುದ್ದಿಯಾಗಿದೆ.
ಇದನ್ನೂ ಓದಿ : FACT CHECK : ನಟ ದರ್ಶನ್ ಪತ್ನಿ ದೇವರ ಮೊರೆ ಎಂದು ಒಂದು ವರ್ಷದ ಹಿಂದಿನ ಹಳೆಯ ಫೋಟೊ ಹಂಚಿಕೊಳ್ಳಲಾಗ್ತಿದೆ


