ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯದ ವಿರುದ್ದ ಪ್ರತಿಭಟಿಸಿದ ಗ್ರಾಮ ಪಂಚಾಯತ್‌ನ ಮಹಿಳಾ ಅಧ್ಯಕ್ಷೆ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ವಿಲ್ಲುಪುರಂ ಜಿಲ್ಲೆ ಗಿಂಗೀ ತಾಲೂಕಿನ ಅಣಂಗೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಗೀತಾ ಅವರು, ಅದೇ ಗ್ರಾ.ಪಂ ಉಪಾಧ್ಯಕ್ಷೆ ಚಿತ್ರಾ ಗುಣಶೇಖರನ್ ಮತ್ತು ಆಕೆಯ ಪತಿ ಸ್ಥಳೀಯ ಡಿಎಂಕೆ ಶಾಖಾ ಕಾರ್ಯದರ್ಶಿ ಗುಣಶೇಖರನ್ ಅವರ ವಿರುದ್ದ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳದ ಆರೋಪ ಮಾಡಿದ್ದಾರೆ.
ಗುಣಶೇಖರನ್ ದಂಪತಿಯ ವಿರುದ್ದ ಕ್ರಮಕ್ಕೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸಂಗೀತಾ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಅವರ ವಿರುದ್ದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಉಪಾಧ್ಯಕ್ಷೆ ಮತ್ತು ಆಕೆಯ ಪತಿಯಿಂದ ಜಾತಿ ಆಧಾರಿತ ತಾರತಮ್ಯ ಎದುರಿಸುತ್ತಿರುವುದಾಗಿ ಸಂಗೀತಾ ಕಳೆದ ಜುಲೈ ಮತ್ತು ಆಗಸ್ಟ್‌ನಲ್ಲಿ ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ಔಪಚಾರಿಕವಾಗಿ ದೂರು ಸಲ್ಲಿಸಿದ್ದರು. ಆದರೆ, ದಂಪತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಮೂರು ವರ್ಷಗಳ ಹಿಂದೆ ಪಂಚಾಯತ್ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಚಿತ್ರಾ ಮತ್ತು ಅವರ ಪತಿ ಗುಣಶೇಖರನ್ ನಿರಂತರವಾಗಿ ಅಧಿಕೃತ ಕರ್ತವ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಗೀತಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳಾ ಮೀಸಲು ಕ್ಷೇತ್ರವೆಂದು ಘೋಷಿಸಿದ ನಂತರ ಸಂಗೀತಾ ಅವರು ತಮ್ಮ ಗ್ರಾಮದ ಮೊದಲ ಇರುಳರ್ ಮಹಿಳಾ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ.
“ನೌಕರರ ಸಂಬಳ ಪಾವತಿಯನ್ನು ಅನುಮೋದಿಸಲು ಹಾಗೂ ನೀರಿನ ಪೈಪ್‌ಗಳ ಅಳವಡಿಕೆ ಮತ್ತು ರಸ್ತೆ ನಿರ್ಮಾಣಗಳಂತಹ ಮೂಲಭೂತ ಸೌಕರ್ಯಗಳಿಗೆ ಹಣಕಾಸನ್ನು ವಿನಿಯೋಗಿಸಲು ಅಗತ್ಯವಿರುವ ಡಿಜಿಟಲ್ ಪಾಸ್‌ವರ್ಡ್‌ನ್ನು ತನಗೆ ಒದಗಿಸಲು ಚಿತ್ರಾ ಮತ್ತು ಆಕೆಯ ಪತಿ ನಿರಾಕರಿಸಿದ್ದಾರೆ. ಅವರು ತನ್ನ ಬುಡಕಟ್ಟು ಗುರುತನ್ನು ಸಾರ್ವಜನಿಕ ಸಭೆಗಳಲ್ಲಿ ತನ್ನನ್ನು ನಿಂದಿಸಲು ಮತ್ತು ಅವಮಾನಿಸಲು ಬಳಸಿದ್ದಾರೆ” ಎಂದು ಸಂಗೀತಾ ಹೇಳಿದ್ದಾರೆ.
“ಇರುಳರ್ ಮಹಿಳೆಯಾಗಿರುವ ನೀನು ಪಂಚಾಯತ್ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹಳಲ್ಲ” ಎಂದು ಚಿತ್ರಾ ತನ್ನನ್ನು ಬಹಿರಂಗವಾಗಿ ಅವಮಾನಿಸಿದ್ದು, ಆಡಳಿತಾತ್ಮಕ ವಿಷಯಗಳಲ್ಲಿ ತಲೆ ಹಾಕಿದರೆ ದೈಹಿಕ ಹಾನಿಯ ಬೆದರಿಕೆಯನ್ನೂ ಒಡ್ಡಿದ್ದಾರೆ” ಎಂದು ಸಂಗೀತಾ ಆರೋಪಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಗೀತಾ ದೂರಿದ್ದು, ತನಗೆ ಜೀವ ಬೆದರಿಕೆ ಇದೆ, ತೀವ್ರ ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದಿದ್ದಾರೆ ಎಂದು ವರದಿ ವಿವರಿಸಿದೆ.
ಆಗಸ್ಟ್‌ನಲ್ಲಿ ಸಂಗೀತಾ ಅವರ ದೂರಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ಸಿ ಪಳನಿ ಅವರು, ತನಿಖೆಗೆ ಆದೇಶಿಸಿದ್ದರು ಮತ್ತು ಸಂಗೀತಾ ಅವರಿಗೆ ಡಿಜಿಟಲ್ ಕೀಗೆ ಪಾಸ್‌ವರ್ಡ್ ಒದಗಿಸುವಂತೆ ಉಪಾಧ್ಯಕ್ಷೆಗೆ ಸೂಚಿಸಿದ್ದರು. ಆದರೆ, ಜಿಲ್ಲಾಧಿಕಾರಿ ಇದುವರೆಗೂ ಸಂಗೀತಾರನ್ನು ನೇರವಾಗಿ ಸಂಪರ್ಕಿಸಿಲ್ಲ ಮತ್ತು ಪರಿಸ್ಥಿತಿಯನ್ನು ಪರಿಶೀಲಿಸಿಲ್ಲ ಎಂದು ವರದಿ ತಿಳಿಸಿದೆ.
ಇದಾದ ಒಂದು ತಿಂಗಳ ನಂತರ, ಸಂಗೀತಾ ಮತ್ತೆ ಇಬ್ಬರಿಂದ ಮೌಖಿಕ ಜಾತಿ ನಿಂದನೆ ಎದುರಿಸಿದ್ದಾರೆ. “ಅವರು ತನ್ನ ಜಾತಿಯ ಹೆಸರನ್ನು ಬಳಸಿಕೊಂಡು ಕರೆ ಮಾಡುವುದನ್ನು ಮುಂದುವರೆಸಿದ್ದಾರೆ ಮತ್ತು ನರೇಗಾ ಕಾಮಗಾರಿಗಳ ತಪಾಸಣೆ ಸ್ಥಳಗಳಿಂದ ಹೊರ ಹೋಗುವಂತೆ ಒತ್ತಾಯಿಸಿದ್ದಾರೆ” ಎಂದು ಸಂಗೀತಾ ಹೇಳಿಕೊಂಡಿದ್ದಾರೆ.
ತನಗಾದ ಅನ್ಯಾಯದ ವಿರುದ್ದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದ ಸಂಗೀತಾ ಮೇಲೆಯೇ ಪೊಲೀಸರು ಬಿಎನ್‌ಎಸ್ ಕಾಯ್ದೆಯೆ ಸೆಕ್ಷನ್ 223,292 ಮತ್ತು 126(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರಿಂದ ಸೂಕ್ತ ಅನುಮತಿ ಪಡೆಯದೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಸಬಾರದು ಎಂಬ ಜಿಲ್ಲಾಧಿಕಾರಿಗಳ ಇತ್ತೀಚಿನ ಆದೇಶದನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
“ನಾವು ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ. ಸತ್ಯವನ್ನು ಪರಿಶೀಲಿಸುತ್ತೇವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಸಿವಾಚ್ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ.
ಇದನ್ನೂ ಓದಿ : ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದಾಳಿ ಹೆಚ್ಚುತ್ತಿವೆ: ಅಮೆರಿಕ ಸರ್ಕಾರದ ಆಯೋಗ


