Homeಕರ್ನಾಟಕಬಸ್‌ನಲ್ಲಿ ಸೀಟ್, ಮೀಟರ್ ದರಕ್ಕೆ ಆಟೋ, ಚಾಲಕ-ಪ್ರಯಾಣಿಕರಿಗೆ ನೆಮ್ಮದಿ ನೆಲೆಗೊಳಿಸಲು ಸಾಧ್ಯವಿಲ್ಲವೇ?

ಬಸ್‌ನಲ್ಲಿ ಸೀಟ್, ಮೀಟರ್ ದರಕ್ಕೆ ಆಟೋ, ಚಾಲಕ-ಪ್ರಯಾಣಿಕರಿಗೆ ನೆಮ್ಮದಿ ನೆಲೆಗೊಳಿಸಲು ಸಾಧ್ಯವಿಲ್ಲವೇ?

- Advertisement -
- Advertisement -

ಇತ್ತೀಚಿಗೆ ಓಲಾ ಪ್ರಯಾಣಿಕರಿಬ್ಬರು ಹಾಗು ಓಲಾ ಆಟೋ ಚಾಲಕರೊಬ್ಬರ ನಡುವೆ ಜೋರು ಜಗಳ ನಡೆಯಿತು. ಪ್ರಯಾಣಿಕರು ಎರಡು ಆಟೋ ಬುಕ್ ಮಾಡಿ ಒಂದನ್ನು ಕ್ಯಾನ್ಸಲ್ ಮಾಡದ ಕಾರಣ, ಚಾಲಕ ಮತ್ತು ಪ್ರಯಾಣಿಕರ ಮಧ್ಯೆ ಘರ್ಷಣೆ ನಡೆಯಿತು. ಆಟೋ ಚಾಲಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಈ ಚಾಲಕರ ವಿರುದ್ಧ, ಪ್ರಯಾಣಿಕರ ಪರ ವಹಿಸಿ ಜೋರು ವಾದ-ವಿವಾದ ನಡೆಯಿತು.

ಆದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜವಾಬ್ದಾರಿ ಆದ ಸರ್ಕಾರವನ್ನು, ಸಮಸ್ಯೆಗೆ ಕಾರಣರಾದ ಓಲಾ ಉಬರ್ ತರಹದ ಆಪ್ ಕಂಪನಿಗಳನ್ನು ಯಾರೂ ಪ್ರಶ್ನಿಸುತ್ತಿಲ್ಲ.

ಇಂದು ಬೆಂಗಳೂರಿನಲ್ಲಿ ಸಾರಿಗೆ ಅತಿ ದೊಡ್ಡ ಸಮಸ್ಯೆಯಾಗಿದೆ. ವಾಹನ ದಟ್ಟಣೆ ಒಂದು ಸಮಸ್ಯೆಯಾದರೆ, ಸಾರಿಗೆ ಸೌಲಭ್ಯ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವುದು ಸಹ ಒಂದು ದೊಡ್ಡ ಸವಾಲಾಗಿದೆ. ಆಟೋ ಹಿಡಿಯುವುದು, ಬಸ್ ಸಿಗುವುದು, ಸಿಕ್ಕರೆ ಸೀಟ್ ಸಿಗುವುದು, ಮೆಟ್ರೋದಲ್ಲಿ ನೆಮ್ಮದಿಯಾಗಿ ಓಡಾಡುವುದು ಇತ್ಯಾದಿ ದುಃಸ್ವಪ್ನಗಳಾಗುತ್ತಿವೆ. ಹೋಗಲಿ ಇಷ್ಟು ಪ್ರಯಾಣಿಕರಿದ್ದಾರಲ್ಲ- ಕ್ಯಾಬ್ ಹಾಗು ಆಟೋ ಚಾಲಕರು ಖುಷಿಯಾಗಿದ್ದಾರೇನೋ ಅಂದರೆ, ಅವರೂ ಕೂಡ ಸದಾ ಟೆನ್ಷನ್, ಒತ್ತಡ ಮತ್ತು ತಲೆಬಿಸಿಯಲ್ಲಿಯೇ ಕಾಲ ದೂಡುತ್ತಾರೆ.

ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೆ ಟ್ರಾಫಿಕ್ ದಟ್ಟಣೆ ಜೊತೆಗೆ ಇನ್ನೂ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಮಕ್ಕಳು ಶಾಲಾಕಾಲೇಜುಗಳಿಗೆ ಸುಲಭವಾಗಿ ತೆರಳುವುದಕ್ಕೆ, ಜನಸಾಮಾನ್ಯರು ತಮಗೆ ಆಗತ್ಯವಿದ್ದ ಕಡೆಗೆ ಕೆಲಸಕ್ಕೆ ಹೋಗುವುದು ಕಷ್ಟವಾಗುತ್ತದೆ. ಶೀಘ್ರವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ಕಡಿಮೆ ವೆಚ್ಚದ ಸಾರಿಗೆ ವ್ಯವಸ್ಥೆ ಲಭ್ಯವಿದ್ದರೆ, ಕೆಲಸಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೆಚ್ಚುತ್ತದೆ. ಅಷ್ಟಲ್ಲದೆ ನಮ್ಮದು ಇನ್ನೂ ಪಿತೃಪ್ರಧಾನ ಸಮಾಜ- ಹೆಂಗಸರು ಹೊರಗೆ ಕೆಲಸಕ್ಕೆ ಹೋದರೂ ಸಹ, ಮನೇಲಿ ಕೂಡ ಹೆಚ್ಚಿನ ಜವಾಬ್ದಾರಿಯನ್ನು ಅವರೇ ನಿಭಾಯಿಸಬೇಕಿರುವ ವ್ಯವಸ್ಥೆ ಇದೆ. ಹೋಗಲಿ ಸಂಚಾರ ಮಾಡುವ ಸಮಯದಲ್ಲಿಯೇ ವಿಶ್ರಾಂತಿ ಪಡೆಯೋಣವೆಂದರೆ ಬಸ್‌ನಲ್ಲಿ, ಮೆಟ್ರೋದಲ್ಲಿ ಸೀಟ್ ಸಿಗುವುದು ದುರ್ಲಭ. ದಿನಕಳೆದಂತೆ ಅದು ಮರೀಚಿಕೆಯಾಗುತ್ತಿದೆ. ಯಾರೋ ಹೇಳಿದ ಹಾಗೆ, “ಬೆಂಗಳೂರಿನಲ್ಲಿ ಬಿಡಿಎ ಸೈಟ್ ಪಡೆಯಲು ಹಾಗು ಬಿಎಂಟಿಸಿಲಿ ಸೀಟ್ ಸಿಗಲು, ಎರಡಕ್ಕೂ ಅದೃಷ್ಟ ಬೇಕು”. ಹಾಗಾಗಿ ಸಂಚಾರ ಮಾಡುತ್ತಾ ವಿಶ್ರಾಂತಿ ಸಿಗುವುದು ಬಿಡಿ, ಆಯಾಸ ಇನ್ನೂ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ, ಈ ದಟ್ಟಣೆಯಲ್ಲಿ ಬಿಎಂಟಿಸಿ ಚಾಲಕರಿಗೆ, ಆಟೋ ಹಾಗು ಕ್ಯಾಬ್ ಚಾಲಕರಿಗೆ ಗಾಡಿ ಓಡಿಸುವುದು ದೈಹಿಕವಾಗಿ ಹಾಗು ಮಾನಸಿಕವಾಗಿ ಬಹಳ ಒತ್ತಡ ಉಂಟಾಗುತ್ತಿದೆ. ಆಪ್ ಕಂಪನಿಗಳ ಅಡಿಯಲ್ಲಿ ಕೆಲಸ ಮಾಡುವ ಚಾಲಕರಿಗೆ ಇನ್ನೂ ಹಲವು ರೀತಿಗಳ ತೊಂದರೆಗಳು ಸೇರಿಕೊಂಡಿವೆ. ಮುತ್ತುರಾಜ್ ಅವರ ಜೊತೆ ಆದಂತೆ ಕ್ಯಾನ್ಸಲೇಷನ್‌ದು ಒಂದು ಸಮಸ್ಯೆ ಆದರೆ, ಇನ್ನೊಂದು ಕಡೆ, ಕಂಪನಿಗಳು ಚಾಲಕರಿಂದ ಸಿಕ್ಕಾಪಟ್ಟೆ ಕಮಿಷನ್ ಕಿತ್ತುಕೊಳ್ಳುತ್ತಾರೆ; ಇಲ್ಲಸಲ್ಲದ ಕಾರಣಗಳಿಗೆ ಫೀಸ್ ಕಟ್ ಮಾಡುತ್ತಾರೆ; ಇಂತಹ ಕಂಪನಿಗಳಿಂದ ಸಮಸ್ಯೆಗಳು ಉಂಟಾದಾಗ ಅದನ್ನು ಚರ್ಚಿಸಲು ಒಂದು ಸರಿಯಾದ ವೇದಿಕೆ ಸಹ ಇಲ್ಲ. ಆಟೋ ಗ್ರಾಹಕರಿಗೆ, ಪೀಕ್ ಹವರ್‌ನಲ್ಲಿ ಆಟೋಗಳು ಸಿಗುವುದು ಕಷ್ಟ ಆಗಿದೆ- ಆಪ್‌ನಲ್ಲೂ ಸಿಗಲ್ಲ, ರೋಡ್‌ನಲ್ಲೂ ಸಿಗಲ್ಲ. ಸಿಕ್ಕಿದರೆ, ರೇಟ್ ದುಬಾರಿ ಆಗಿರುತ್ತದೆ.

ಒಟ್ಟಾರೆ, ಈ ನಗರದಲ್ಲಿ ಸಾರಿಗೆಯಿಂದಾಗಿ ಬಹುತೇಕ ಎಲ್ಲಾ ನಾಗರಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಒತ್ತಡ ಅನುಭವಿಸುತ್ತಿದ್ದಾರೆ. ಇಲ್ಲಿ ಲಾಭ ಇರುವುದು ಆಪ್ ಕಂಪನಿಗಳಿಗೆ ಮಾತ್ರ. ಸರ್ಕಾರ ಸಮಸ್ಯೆಯ ಪರಿಹಾರಕ್ಕಾಗಿ ನೀತಿನಿರೂಪಣೆಗಳ ಬಗ್ಗೆ ಗಮನ ಕೊಡುತ್ತಿಲ್ಲ. ಅದಕ್ಕಾಗಿ ಕೆಲಸ ಮಾಡುತ್ತಿರುವುದು ಬಹಳ ಕಡಿಮೆ; ಬದಲಿಗೆ ಸರ್ಕಾರದ ನೀತಿಗಳಿಂದ ಸಮಸ್ಯೆ ಹೆಚ್ಚಾಗುತ್ತಿದೆ.

ಸಮಸ್ಯೆಯ ಮೂಲಕಾರಣವೆಂದರೆ, ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು. ಆದರೆ ಬಸ್‌ಗಳ ಸಂಖ್ಯೆ ಜನಸಂಖ್ಯೆಗೆ ಹೋಲಿಸಿದರೆ ಕಡಿಮೆ ಆಗುತ್ತಿರುವುದು! 2015ರಲ್ಲಿ ಬೆಂಗಳೂರಿನಲ್ಲಿ ಕಾರ್‌ಗಳ ಸಂಖ್ಯೆ 11.44 ಲಕ್ಷ ಆಗಿತ್ತು(1). ಮಾರ್ಚ್ 2024ರಲ್ಲಿ ಕಾರ್‌ಗಳ ಸಂಖ್ಯೆ 23.92 ಲಕ್ಷಕ್ಕೆ ಏರಿತ್ತು(2). 2017ರಲ್ಲಿ 6143 ಬಸ್‌ಗಳು(3) ರಸ್ತೆಯಲಿದ್ದರೆ, 2024ರಲ್ಲಿ ಕೇವಲ 6027 ಬಸ್‌ಗಳು(4) ರಸ್ತೆಯಲ್ಲಿವೆ! ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರಕ್ಕೆ 12000 ಬಸ್‌ಗಳಾದರೂ ಬೇಕು, ಆದರೆ ಅದರ ಅರ್ಧದಷ್ಟು ಮಾತ್ರ ಇವೆ.

ಆಯ್ಕೆಯಾಗಿ ಬರುವ ಎಲ್ಲಾ ಸರ್ಕಾರಗಳು ರಸ್ತೆಗಳನ್ನು ಅಗಲ ಮಾಡ್ತಿದ್ದಾರೆ, ಮೇಲ್ಸೇತುವೆಗಳನ್ನೂ ಕಟ್ಟುತ್ತಿದ್ದಾರೆ, ಹಳೆಯವನ್ನು ಕೆಡವಿ ಅಂಡರ್‌ಪಾಸ್ ಮಾಡುತ್ತಿದ್ದಾರೆ ಆದರೆ ಸಮಸ್ಯೆಯನ್ನ ನಿವಾರಿಸುವುದಕ್ಕೆ ಆಗಿಲ್ಲ. ಈ ರೀತಿ ಮಾಡುವದರಿಂದ ಖಾಸಗಿ ವಾಹನಗಳಿಗೆ ಪ್ರೋತ್ಸಾಹ ಸಿಗುವುದೇ ಹೊರತು, ಕಡಿವಾಣ ಹಾಕಿದಂತಾಗುವುದಿಲ್ಲ; ಇದರಿಂದ ವಾಹನ ದಟ್ಟಣೆ ಜಾಸ್ತಿ ಆಗುತ್ತದೆ. ಇಂತಹದಕ್ಕೆ ಹೆಚ್ಚೆಚ್ಚು ಪ್ರೋತ್ಸಾಹವನ್ನು ಮೊದಲು ನೀಡಿದ್ದು ಇಲ್ಲಿನ ಕಾರ್ಪೊರೇಟ್ ಕಂಪನಿಗಳು, ದೊಡ್ಡ ಮೂಲ ಸೌಕರ್ಯ ನಿರ್ಮಾಣದ ಖಾಸಗಿ ಕಂಪನಿಗಳು. ಬೆಂಗಳೂರಿನ ಮೊದಲ ಎಲಿವೇಟೆಡ್ ರೋಡ್‌ಗೆ ಒತ್ತಾಯ ಹಾಕಿದ್ದು ಇನ್ಫೋಸಿಸ್, ಬಯೋಕಾನ್‌ನಂತಹ ಕಂಪನಿಗಳು. 70- 80ರ ದಶಕದ ಪಿ.ಎಸ್.ಯುಗಳು (ಬಿಇಎಲ್, ಐಟಿಐ ಮುಂತಾದವು) ತಮ್ಮ ಕಾರ್ಮಿಕರಿಗೆ ಬಸ್ ಸಾರಿಗೆ ಸೌಲಭ್ಯ ನೀಡಿದವು. ಆದರೆ ಇನ್ಫೋಸಿಸ್, ಬಯೋಕಾನ್‌ನಂತಹ ಈಗಿನ ಕಂಪನಿಗಳು ಮೇಲ್ಸೇತುವೆ ಕೇಳುತ್ತವೆ. ಖಾಸಗಿ ಕಾರುಗಳನ್ನು ಮತ್ತು ವಾಹನ ದಟ್ಟಣೆಯನ್ನು ಪ್ರೋತ್ಸಾಹಿಸುತ್ತಿವೆ.

ಮೆಟ್ರೋ ನಮ್ಮ ಸಮಸ್ಯೆಗೆ ಪರಿಹಾರವಾಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಅದು ಸಹ ಪರಿಹಾರವಾಗಲಿಲ್ಲ. ದೆಹಲಿಯಲ್ಲಿ 300 ಕಿಲೋಮೀಟರ್‌ಗಿಂತ ಹೆಕ್ಕು ಮೆಟ್ರೋ ರೈಲು ಮಾರ್ಗವಿದೆ; ಆದರೂ ಅಲ್ಲಿ ದಟ್ಟಣೆ ಕಡಿಮೆ ಆಗಿಲ್ಲ. ಬಹಳಷ್ಟು ಬಡವರಿಗೆ ಮೆಟ್ರೋ ಖರ್ಚು ಭರಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಈಗ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ 9 ಲಕ್ಷ ಮುಟ್ಟಿದೆ(5). ಬೆಂಗಳೂರಿನ ಜನಸಂಖ್ಯೆ ಈಗ 1.3 ಕೋಟಿ. ಮೆಟ್ರೊ ಫೇಸ್ 2 ಬಂದ ನಂತರ ಸಹ ಪ್ರಯಾಣಿಕರ ಸಂಖ್ಯೆ 17 ಲಕ್ಷ ಆಗಬಹುದಷ್ಟೆ(6). ಈಗ ಮೆಟ್ರೋ ರೈಲು ಇರುವ ರೂಟ್‌ಗಳಲ್ಲಿ ದಟ್ಟಣೆಯೇನು ಕಡಿಮೆ ಆದಹಾಗೆ ಇಲ್ಲ.

ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯ ಗುರಿ ಯಾವುದಾಗಿರಬೇಕೆಂದರೆ ಅತಿಹೆಚ್ಚು ಜನರನ್ನು ಅತಿ ಸುಲಭವಾಗಿ ಒಂದು ಕಡೆ ಇಂದ ಇನ್ನೊಂದು ಕಡೆ ಕರೆದುಕೊಂಡು ಹೋಗುವುದು. ಸದ್ಯಕ್ಕೆ ಈ ಕೆಲಸವನ್ನು ಫಲಕಾರಿಯಾಗಿ ಮಾಡುತ್ತಿರುವುದು ಬಿಎಂಟಿಸಿ. ಕೇವಲ 6000 ಬಸ್‌ಗಳಲ್ಲಿ 38.4 ಲಕ್ಷ ಜನ ಓಡಾಡುತ್ತಾರೆ(7). ಇದರ ಜೊತೆಗೆ ಮಾಮೂಲಿ ರೈಲಿನಲ್ಲೂ ಸಹ ಬಹಳಷ್ಟು ಜನ ಓಡಾಡಬಹುದು. ಆದರೆ ಬರುವ ಎಲ್ಲಾ ಸರ್ಕಾರಗಳು ಬಸ್‌ಗಳ ಸಂಖ್ಯೆಯನ್ನೂ ಜಾಸ್ತಿ ಮಾಡ್ತಿಲ್ಲ, ಸಬ್ ಅರ್ಬನ್ ರೈಲನ್ನು ಸಹ ವೇಗವಾಗಿ ನಿರ್ಮಿಸುತ್ತಿಲ್ಲ.

ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ಸಮಸ್ಯೆಯ ಬಗ್ಗೆ ಏನು ಮಾಡುತ್ತಿದೆ? ಬಸ್ ಸಾರಿಗೆಗೆ ಸಂಬಂಧಪಟ್ಟಂತೆ ಹೊಸ ಬಸ್‌ಗಳನ್ನು ಖರೀದಿಸುತ್ತಿದೆ; ಆದರೆ ಬಹಳಷ್ಟು ಹಳೆ ಬಸ್‌ಗಳಿದ್ದು ಅವನ್ನು ಸ್ಕ್ರ್ಯಾಪ್ ಮಾಡಬೇಕಾಗಿದ್ದು, ಬಸ್‌ಗಳ ಸಂಖ್ಯೆ ವಾಸ್ತವದಲ್ಲಿ ಏರುತ್ತಿಲ್ಲ. ಖಾಸಗಿ ವಾಹನಗಳಿಗೆ ಕಡಿವಾಣ ಹಾಕುವುದು ಬಿಟ್ಟು ಗುತ್ತಿಗೆದಾರರಿಗೆ ಖುಷಿ ಕೊಡುವ ಟನೆಲ್ ರೋಡ್, ಎಲೆವೇಟಡ್ ಕಾರಿಡಾರ್ ಯೋಜನೆಗಳನ್ನು ತರಲು ಹೊರಟಿದ್ದಾರೆ. ಇಂತಹ ದುಬಾರಿ ಯೋಜನೆಗಳಿಂದಾಗಿ ಪರಿಸರ ನಾಶವಾಗುತ್ತದೆಯೇ ಹೊರತು ದಟ್ಟಣೆ ಕಡಿಮೆಯಾಗುವುದಿಲ್ಲ. ಟನಲ್‌ನಲ್ಲಿರುವಾಗ ವೇಗವಾಗಿ ಹೋಗಬಹುದು, ಆದರೆ ಟನೆಲ್‌ನಿಂದಾಚೆ ಬಂದಮೇಲೆ ಮತ್ತೆ ಸಿಗ್ನಲ್‌ನಲ್ಲಿ ಕಾಯಲೇಬೇಕಲ್ಲವೇ?

ಜನಸಂಖ್ಯೆ ಜಾಸ್ತಿ ಇರುವ ಇತರೆ ಡೆವೆಲಪಿಂಗ್ ದೇಶಗಳು ಏನು ಮಾಡುತ್ತಿವೆ? ಅವರೆಲ್ಲ ಕಾರ್-ಕೇಂದ್ರಿತ ವ್ಯವಸ್ಥೆಯಿಂದ ಬಸ್ ಕೇಂದ್ರಿತ ವ್ಯವಸ್ಥೆಯೆಡೆಗೆ ಹೋಗುತ್ತಿದ್ದಾರೆ. ಪಾದಚಾರಿಗಳಿಗೆ ಅನುಕೂಲ ಮಾಡುತ್ತಿದ್ದಾರೆ; ಸೈಕಲ್ ಸವಾರರಿಗೆ ಸಹ. ಅವರು ಬಸ್‌ಗಳು ವೇಗವಾಗಿ ಹೋಗಲೆಂದು ಬಸ್ ರ್‍ಯಾಪಿಡ್ ಟ್ರಾನ್ಸಿಟ್ ವ್ಯವಸ್ಥೆ ಸ್ಥಾಪಿಸುತ್ತಿದ್ದಾರೆ; ಕಾರ್ ಸವಾರರನ್ನು ನಿರುತ್ಸಾಹಗೊಳಿಸಲು ಕಾರ್ ಪಾರ್ಕಿಂಗ್‌ಗೆ ಹೆಚ್ಚಿನ ದರಗಳನ್ನು ನಿಗದಿಪಡಿಸುತಿದ್ದಾರೆ. ಇರುವ ಮೇಲ್ಸೇತುವೆಗಳನ್ನು ಕೆಡವಿ ಅಲ್ಲಿ ಪಾರ್ಕ್‌ಗಳನ್ನು ನಿರ್ಮಿಸುತ್ತಿದ್ದಾರೆ.

ನಮ್ಮ ಸಂವಿಧಾನ ಸಮಾನತೆಯನ್ನು ಸಾರುತ್ತದೆ. ಆದರೆ ಇಂದು ನಮ್ಮ ರಸ್ತೆಗಳಲ್ಲಿ ಅಸಮಾನತೆ ರಾರಾಜಿಸುತ್ತಿದೆ. ಎಪ್ಪತ್ತು ಜನ ಒಂದು ಬಸ್ಸಿನಲ್ಲಿ ಹೋದರೆ ಎಷ್ಟು ರೋಡ್-ಸ್ಪೇಸ್ ಉಪಯೋಗಿಸುತ್ತಾರೆ, ಅದೇ 70 ಜನ ಕಾರ್‌ನಲ್ಲಿ ಓಡಾಡಿದರೆ ಎಷ್ಟು ರೋಡ-ಸ್ಪೇಸ್ ಉಪಯೋಗಿಸುತ್ತಾರೆ ನೀವೇ ಯೋಚಿಸಿ.

ಉಳ್ಳವರು ಎ.ಸಿ ಕಾರ್‌ನಲ್ಲಿ ಕೂತು, ದಟ್ಟಣೆ ಹಾಗು ವಾಯು ಮಾಲಿನ್ಯಕ್ಕೆ ಕಾರಣರಾಗುತ್ತಾರೆ; ಆದರೆ ಆ ಹೊಗೆಯನ್ನು ಅವರು ಸೇವಿಸುವುದಿಲ್ಲ. ಯಾವುದೇ ಮಾಲಿನ್ಯ ಮತ್ತು ವಾಹನ ದಟ್ಟಣೆಗೆ ಕಾರಣರಾಗದ ಬಸ್ ಪ್ರಯಾಣಿಕರು, ಪಾದಚಾರಿಗಳು ಅವುಗಳ ದುಷ್ಪರಿಣಾಮವನ್ನು ಹೆಚ್ಚು ಅನುಭವಿಸಬೇಕು. ಈ ಅಸಮಾನತೆ ನಿಲ್ಲಬೇಕು. ಕಾರ್-ಕೇಂದ್ರಿತ ಯೋಜನೆಗಳನ್ನು ಕೈಬಿಟ್ಟು ಬಸ್-ಕೇಂದ್ರಿತ ಯೋಜನೆಗಳು ಬರಬೇಕು.

ಗುತ್ತಿಗೆದಾರರ ಬದಲು, ಕಾರ್ಪೊರೇಟ್ ಕಂಪನಿಗಳ ಬದಲು ಜನಸಾಮಾನ್ಯರನ್ನು ಮನಸ್ಸಿನಲ್ಲಿಟ್ಟುಕೊಂಡು ವ್ಯವಸ್ಥೆಯನ್ನು ರೂಪಿಸಿದರೆ ಇದು ಸಾಧ್ಯ. ಜನಸಾಮಾನ್ಯರನ್ನು ಮಾತಾಡಿಸಿ, ಅವರ ಅಭಿಪ್ರಾಯ ಪಡೆದರೆ ಇಂತಹ ವ್ಯವಸ್ಥೆ ಸಾಧ್ಯ. ಕಾರ್ ಮಾಲೀಕರ ಆಕ್ರೋಶ ಲೆಕ್ಕಿಸದೆ, ಯಾವುದೇ ಮಾಲಿನ್ಯ-ದಟ್ಟಣೆ ಉಂಟುಮಾಡದ ಬಸ್-ಪ್ರಯಾಣಿಕರ, ಪಾದಚಾರಿಗಳ, ಸೈಕಲ್ ಸವಾರರ ಜೀವನ ಸುಲಭ ಮಾಡುವ ವ್ಯವಸ್ಥೆ ಬೇಕಿದೆ. ಅದಕ್ಕೆ ನೈಜ ಪ್ರಜಾಸತ್ತಾತ್ಮಕ ಆಡಳಿತ ಮತ್ತು ನಾಯಕತ್ವ ಬೇಕು. ಬಿಬಿಎಂಪಿ ಚುನಾವಣೆ ನಡೆಸಬೇಕು, ಬಸ್ ಪ್ರಯಾಣಿಕರನ್ನು ಮಾತಾಡಿಸಬೇಕು, ಸ್ಲಮ್ ನಿವಾಸಿಗಳನ್ನು, ಕಾರ್ಮಿಕರನ್ನು ಮಾತನಾಡಿಸಿ ಅವರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಯಬೇಕು. ಇದರ ಜೊತೆಗೆ ಆಟೋಚಾಲಕರು, ಬಿಎಂಟಿಸಿ ಕಾರ್ಮಿಕ ಸಂಘಟನೆಗಳನ್ನು ಮಾತನಾಡಿಸಿ ಅವರ ಅಭಿಪ್ರಾಯವನ್ನು ಸಹ ಪಡೆಯಬೇಕು. ಆಪ್ ಕಂಪನಿಗಳನ್ನು ನಿಯಂತ್ರಣ ಮಾಡಬೇಕು, ಅದಕ್ಕೆ ಕಾನೂನನ್ನು ಸಹ ತರಬೇಕಾಗಿದೆ. ಗಿಗ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಮಸೂದೆಯೊಂದನ್ನು ಅಧಿವೇಶನದಲ್ಲಿ ಮಂಡಿಸುವುದಾಗಿ ಹೇಳಿತು; ಆದರೆ ಅದಿನ್ನೂ ಸಾಕಾರಗೊಂಡಿಲ್ಲ. ಅದನ್ನು ಸಹ ಮಾಡಬೇಕಾಗಿದೆ.

ಬೆಂಗಳೂರು ನಗರದ ಪ್ರಯಾಣಿಕರಿಗೆ, ಚಾಲಕರಿಗೆ ಒಂದು ನೆಮ್ಮದಿಯುಳ್ಳ, ನ್ಯಾಯಯುತವಾದ ಸಾರಿಗೆ ಕಲ್ಪಿಸಲು ಸಾಧ್ಯವಿದೆ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ. ಆ ಇಚ್ಛಾಶಕ್ತಿ ತಾನಾಗೇ ಬರುವ ಸಾಧ್ಯತೆಗಳು ಕಡಿಮೆ. ಜನಸಾಮಾನ್ಯರು ಧ್ವನಿ ಎತ್ತಬೇಕು. ಬೀದಿಗಿಳಿದು ನ್ಯಾಯ ಕೇಳಬೇಕು.

  1. https://bangaloremirror.indiatimes.com/bangalore/cover-story/no-wonder-we-re-choking-1-6k-vehicles-added-to-city-daily/articleshow/50288622.cms
  2. https://transport.karnataka.gov.in/storage/pdf-files/BNGDATAAPRL24.pdf
  3. https://timesofindia.indiatimes.com/city/bengaluru/as-private-vehicles-surpass-1cr-mark-bmtc-fleet-size-shrinks/articleshow/109483667.cms
  4. https://www.moneycontrol.com/news/india/brand-bengaluru-caught-between-dk-shivakumars-vanity-projects-and-citys-crumbling-infra-12807854.html
  5. https://www.thehindu.com/news/cities/bangalore/namma-metro-hits-record-917365-riders-on-august-14-amid-growing-concerns-of-overcrowding-in-bengaluru-trains/article68528263.ece
  6. https://pib.gov.in/newsite/PrintRelease.aspx?relid=102853
  7. https://timesofindia.indiatimes.com/city/bengaluru/bmtc-bus-ridership-increases-by-33-in-bengaluru/articleshow/112535746.cms
ವಿನಯ್ ಕೂರಗಾಯಲ ಶ್ರೀನಿವಾಸ

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ನೊಂದಿಗೆ ವ್ಯವಹಾರ ನಡೆಸುವ ರಾಷ್ಟ್ರಗಳ ಮೇಲೆ ಶೇ. 25 ಸುಂಕ ವಿಧಿಸಿದ ಟ್ರಂಪ್

ಇರಾನ್ ಜೊತೆ ವ್ಯಾಪಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಜ.12) ಘೋಷಿಸಿದ್ದಾರೆ. "ತಕ್ಷಣದಿಂದಲೇ ಜಾರಿಗೆ ಬರುವಂತೆ, ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವ್ಯವಹಾರ...

ಮಂಗಳೂರು | ಬಾಂಗ್ಲಾದೇಶಿಯೆಂದು ಆರೋಪಿಸಿ ವಲಸೆ ಕಾರ್ಮಿಕನ ಮೇಲೆ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಬಾಂಗ್ಲಾದೇಶಿ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಯತ್ನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರಿನ ಕಾವೂರು ಪೊಲೀಸರು ಸೋಮವಾರ (ಜ.12)...

ಬಿಜೆಪಿ ನಿಯೋಗದಿಂದ ಕರ್ನಾಟಕ ರಾಜ್ಯಪಾಲರ ಭೇಟಿ: ‘ದ್ವೇಷ ಭಾಷಣ ತಡೆ’ ಮಸೂದೆಗೆ ಒಪ್ಪಿಗೆ ನೀಡದಂತೆ ಮನವಿ

ಬೆಂಗಳೂರು: ದ್ವೇಷ ಭಾಷಣ ಮಸೂದೆಯನ್ನು"ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿ" ಮತ್ತು "ರಾಜಕೀಯ ಸೇಡಿನ ಸಾಧನ" ಎಂದು ಕರೆದಿರುವ ಬಿಜೆಪಿ ನಾಯಕರ ನಿಯೋಗವು ಸೋಮವಾರ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ...

ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣ : ಪಿಯು ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯಲ್ಲಿ 2026ರ ಜನವರಿ 3ರಂದು ರಾತ್ರಿ ನಡೆದ ಮಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಳಾ ಕುಶಾಲಪ್ಪ (34) ಅವರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರಂಭದಲ್ಲಿ, ಫ್ಲ್ಯಾಟ್‌ಗೆ ಬೆಂಕಿ...

ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಾಮಾಜಿಕ ಮಾಧ್ಯಮದಲ್ಲಿ 200-500 ರೂ.ಗೆ ಮಾರಾಟ: ಆರು ಶಿಕ್ಷಕರು, ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಜಾಹೀರಾತು ಮಾಡಿ ಖಾಸಗಿ ಸಂದೇಶಗಳ ಮೂಲಕ 200 ರಿಂದ...

ಕರೂರ್ ಕಾಲ್ತುಳಿತ : ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ನಟ ವಿಜಯ್

ಕರೂರ್ ಕಾಲ್ತುಳಿತ ಘಟನೆಗೆ ಸಂಬಂಧಪಟ್ಟಂತೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಸೋಮವಾರ (ಜ.12) ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಚಾರ್ಟರ್ಡ್ ವಿಮಾನದಲ್ಲಿ...

ಜೂನ್‌ ಅಂತ್ಯದೊಳಗೆ ಜಿಬಿಎ ವ್ಯಾಪ್ತಿಯ ಪಾಲಿಕೆಗಳಿಗೆ ಚುನಾವಣೆ : ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜ.12) ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಸುಪ್ರೀಂ ಕೋರ್ಟ್ ನಲ್ಲಿ ಮಮತಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ ಇಡಿ

ನವದೆಹಲಿ: ಐ-ಪಿಎಸಿ ವಿರುದ್ಧದ ಬಹು-ರಾಜ್ಯ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅಡ್ಡಿಪಡಿಸಿದ, ಸಾಕ್ಷ್ಯಗಳನ್ನು ತಿರುಚಿದ ಮತ್ತು ನಾಶಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್...

ಭಾರತಕ್ಕಿಂತ ಯಾವುದೇ ಪಾಲುದಾರ ದೇಶ ಮುಖ್ಯವಲ್ಲ, ವ್ಯಾಪಾರ ಮಾತುಕತೆ ಪುನರಾರಂಭ: ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್

"ವಾಷಿಂಗ್ಟನ್‌ಗೆ ಭಾರತಕ್ಕಿಂತ ಅಗತ್ಯವಾದ ದೇಶ ಇನ್ನೊಂದಿಲ್ಲ ಮತ್ತು ಎರಡೂ ಕಡೆಯವರು ವ್ಯಾಪಾರ ಒಪ್ಪಂದವನ್ನು ದೃಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಸೋಮವಾರ ಹೇಳಿದ್ದಾರೆ. ಅಮೆರಿಕ ರಾಯಭಾರ ಕಚೇರಿಯ ನೌಕರರು...

ಬಿಷಪ್ ಫ್ರಾಂಕೊ ಮುಲಕ್ಕಲ್ ಅತ್ಯಾಚಾರ ಪ್ರಕರಣ : ಒಂಬತ್ತು ವರ್ಷಗಳ ಬಳಿಕ ಮೌನ ಮುರಿದ ಸಂತ್ರಸ್ತೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿಕೆ

ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ದದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಕ್ರೈಸ್ತ ಸನ್ಯಾಸಿನಿ ಒಂಬತ್ತು ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದು, ಫ್ರಾಂಕೊ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದಕ್ಕೆ ನಾನು ದಂಗಾಗಿದ್ದೇನೆ. ನ್ಯಾಯಕ್ಕಾಗಿ...