“ಇಂಥ ಪರೀಕ್ಷೆ ಮಾಡ್ಲೇಬೇಕಿತ್ತಾ? ಬೆಂಕಿ ಸುಡದೇ ಇರಲು ಸಾಧ್ಯವಾ?” ಕೋಪ ಮತ್ತು ಬೇಸರದಿಂದ ಅಭಿಲಾಷ ಶೃತಿಯನ್ನು ಕೇಳಿದಳು. “ಏನ್ ಮಾಡೋಕೆ ಆಗುತ್ತೆ ನೀನೇ ಹೇಳು ಎಲ್ಲಾ ಆ ಅಗಸನಿಂದ ಆಗಿದ್ದು. ಅವನಿಗೆ ಇರುವಂತೆ ಬೇರೆಯವರಿಗೂ ಅನುಮಾನ ಇರುತ್ತೆ ಅಲ್ವ? ಹಾಗಾಗಿ ಈ ಅಗ್ನಿ ಪರೀಕ್ಷೆಯಂತೆ” ಉತ್ತರಿಸಿದಳು ಶೃತಿ.
ಸೀತೆಯ ಪಾವಿತ್ರತೆಯನ್ನು ಪರೀಕ್ಷೆ ಮಾಡಲು ಅಗ್ನಿಪರೀಕ್ಷೆಗೆ ಸಿದ್ಧತೆಗಳು ನಡೆದಿತ್ತು. ಊರಿನ ಜನರೆಲ್ಲಾ ಅಗ್ನಿ ಪರೀಕ್ಷೆ ನೋಡಲು ಸೇರಿದ್ದರು. ಅಭಿಲಾಷಳಿಗೆ ಕೋಪದಲ್ಲಿಯೇ ವಿಚಾರವೊಂದು ಹೊಳೆದಿತ್ತು, ಜನಜಾತ್ರೆಯ ಮಧ್ಯದಲ್ಲಿಯೇ ಕೂಗಿ ಹೇಳಿದಳು “ನಾನೇನು ಸೀತೆ ಅಲ್ಲ, ಎಲ್ಲಾನೂ ಒಪ್ಕಂಡು ಸುಮ್ನಿರೋಕೆ. ನನಗೂ ನನ್ನ ಗಂಡನ ಮೇಲೆ ಅನುಮಾನವಿದೆ. ಇದೇ ಅಗ್ನಿಯಲ್ಲಿ ನನ್ನ ಗಂಡನ ಪರೀಕ್ಷೆಯೂ ಆಗಲಿ” ಎಂದು ಕೂಗಿದಳು. ಸುತ್ತ ನಿಂತಿದ್ದ ಮಹಿಳೆಯರ ಮುಖ ನೋಡುತ್ತಾ ನಿಮ್ಮಲ್ಲಿ ಯಾರಿಗೂ ನಿಮ್ಮ ಗಂಡನ ಮೇಲೆ ಅನುಮಾನವಿಲ್ಲವೇ? ಎಂದು ಪ್ರಶ್ನೆ ಎಸೆದಳು. ಹಲವರು ಗಾಬರಿಯಲ್ಲಿ ಅಭಿಲಾಷಳ ಮುಖ ನೋಡುತ್ತಾ ಮೌನವಾಗಿ ನಿಂತುಬಿಟ್ಟರು, ಇನ್ನು ಕೆಲವರು ಯೋಚಿಸುತ್ತಾ ಗೊಂದಲದಲ್ಲಿದ್ದರು. ಸ್ವಲ್ಪ ದೂರದಲ್ಲೇ ನಿಂತಿದ್ದ ಅಭಿಲಾಷಳ ಗಂಡ ಮತ್ತು ಇತರ ಗಂಡಸರ ಗುಂಪು ಭಯಭೀತರಾಗಿದ್ದರು. ಅಭಿಲಾಷಳ ಸುತ್ತ ನಿಂತವರಲ್ಲಿ ಕೆಲವರು ಅವಳ ಪ್ರಶ್ನೆಗೆ “ಹೌದು ನಮಗೂ ಅನುಮಾನವಿದೆ” ಎಂದು ಹೇಳುತ್ತಿದ್ದಂತೆಯೇ ಗಂಡಸರ ಗುಂಪು ಇವರ ದನಿ ಕೇಳಿಸದ ರೀತಿಯಲ್ಲಿ ಜೋರಾಗಿ “ಜೈ ಶ್ರೀರಾಮ್” ಎಂದು ಘೋಷಣೆ ಹಾಕಲು ಶುರು ಮಾಡಿತು. ಜೈ ಶ್ರೀರಾಮ್ ಘೋಷಣೆಗೆ ದನಿಗೂಡಿಸುವ ಗಂಡಸರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.
ಘೋಷಣೆ ಕೂಗಲು ಶುರು ಮಾಡಿ ಬರೀ ಎರಡು ನಿಮಿಷ ಮಾತ್ರವಾಗಿತ್ತು. ಒಂದು ಗುಂಪಿನಿಂದ ಶುರುವಾಗಿದ್ದು ಇದೀಗ ಸುಮಾರು 15 ಬೇರೆ ಬೇರೆ ಗುಂಪುಗಳಾಗಿದೆ. ಹೋಟೆಲ್, ಅಂಗಡಿ, ಮನೆಗಳಿಗೆ ನುಗ್ಗಿ ಜೈ ಶ್ರೀರಾಮ್ ಎಂದು ಕೂಗಲು ಒತ್ತಾಯಿಸುತ್ತಿದ್ದಾರೆ. ನೋಡನೋಡುತ್ತಿದ್ದಂತೆಯೇ ಘೋಷಣೆ ಕೂಗುತ್ತಿದ್ದವರ ಕೈಗಳಲ್ಲಿ ದೊಣ್ಣೆ, ಕಲ್ಲುಗಳು ಬಂದುಬಿಟ್ಟಿವೆ. ಜೈ ಶ್ರೀರಾಮ್ ಎಂದು ಕೂಗಲು ನಿರಾಕರಿಸುವವರಿಗೆ ‘ಧರ್ಮ’ದೇಟು ಹಾಕುತ್ತಿದ್ದಾರೆ. ಕ್ಷಣಮಾತ್ರದಲ್ಲಿ ಶುರುವಾಗಿದ್ದ ಈ ಗಲಭೆಯನ್ನು ನೋಡುತ್ತಿದ್ದ ವ್ಯಕ್ತಿಯೊಬ್ಬ ಇದೇನಾಯಿತು ಎಂಬ ಅರಿವಿಲ್ಲದೆ ಆಘಾತಕ್ಕೊಳಗಾಗಿ ಏನು ಮಾಡುವುದೆಂದು ತಿಳಿಯದೆ ಎಲ್ಲವನ್ನೂ ನೋಡುತ್ತ ನಿಂತಿದ್ದ. ಈ ವ್ಯಕ್ತಿಯನ್ನು ಗಮನಿಸಿದ ಗುಂಪು ಈತನೆಡೆಗೆ ಓಡಿಬಂತು. “ಹೇಯ್ ಜೈ ಶ್ರೀರಾಮ್ ಹೇಳೋ” ಎಂದು ಗುಂಪಿನಿಂದ ಒಬ್ಬ ಗದರಿದ ಗೊಂದಲಕ್ಕೊಳಗಾದ ಆ ವ್ಯಕ್ತಿ ಗುಂಪಿನಲ್ಲಿ ಒಬ್ಬಾತ ಹಿಡಿದಿದ್ದ ದೊಣ್ಣೆಯನ್ನೇ ನೋಡುತ್ತಾ ನಿಂತ. ಗುಂಪಿನಿಂದ ಮತ್ತೊಬ್ಬ ಏನೋ ಸುಮ್ನೆ ನಿಂತಿದ್ದೀಯಾ, ಎಷ್ಟೋ ಧೈರ್ಯ ನಿನಗೆ, ಜೈ ಶ್ರೀರಾಮ್ ಹೇಳು ಎಂದು ಮುಂದಕ್ಕೆ ಬಂದ. ವ್ಯಕ್ತಿ ಇನ್ನೂ ಸುಮ್ಮನೇ ನಿಂತಿದ್ದ. ಇವನ್ಯಾರೋ ಸಾಬನೇ ಇರಬೇಕು ಕಣ್ರೋ ಅದಕ್ಕೆ ಬಾಯಿ ಬಿಡ್ತಿಲ್ಲ ಎಂದ ಇನ್ನೊಬ್ಬ “ಇಲ್ಲ, ಟೋಪಿ ಇಲ್ಲ ಗಡ್ಡ ಇಲ್ಲ, ಬಹುಶಃ ಬುದ್ಧಿಜೀವಿಯೋ, ವಿಚಾರವಾದಿಯೋ ಇರಬೇಕು ಬಿಲ್ಲು ಬಾಣ ಬೇರೆ ಇಟ್ಕೊಂಡ್ ಬಂದಿದ್ದಾನೆ, ಇಲ್ಲಿ ನಡಿಯೋ ಪವಿತ್ರವಾದ ಅಗ್ನಿಪರೀಕ್ಷೆಯನ್ನ ಕೆಡಿಸೋಕೆ ಬಂದಿರಬೇಕು. ಬಡಿರೋ ಇವ್ನಿಗೆ” ಎಂದು ಮಗದೊಬ್ಬ ಹೇಳುತ್ತಿದ್ದಂತೆಯೇ ಇಡೀ ಗುಂಪು ಥಳಿಸಲು ಶುರು ಮಾಡಿದರು. ಕಲ್ಲುದೊಣ್ಣೆಗಳಿಂದ ದಾಳಿ ಶುರುವಾಯಿತು. ದೊಡ್ಡ ಕಲ್ಲೊಂದು ಕಾಲಿನ ಮೇಲೆ ಎತ್ತಿ ಹಾಕಿದರು ಆ ವ್ಯಕ್ತಿಯ ಪಾದ ಜಜ್ಜಿಹೋಗಿತ್ತು.
ದೂರದಿಂದ ಇದನ್ನು ಗಮನಿಸಿದ ಮಹಿಳೆಯೊಬ್ಬಳು ಗಲಾಟೆ ನಡೆಯುತ್ತಿದ್ದ ಗುಂಪಿನತ್ತ ಓಡಿಬಂದಳು. ಅಯ್ಯೋ ಇವರು ನನ್ನ ಗಂಡ ಬಿಟ್ಟುಬಿಡಿ ಎಂದು ಗೋಳಾಡಿದಳು. ಗುಂಪು ಮಾತ್ರ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಲೇ ಥಳಿಸುತ್ತಿದ್ದರು. ಆಗ ಆ ಮಹಿಳೆ “ಅಯ್ಯೋ ಇವರೇ ಶ್ರೀರಾಮ ನನ್ನ ಗಂಡ, ನಾನು ಸೀತೆ. ನಿಮ್ಮ ಕಾಲಿಗೆ ಬೀಳ್ತೀನಿ ನನ್ನ ಗಂಡ ರಾಮನನ್ನು ಬಿಟ್ಟುಬಿಡಿ” ಎಂದು ಕೂಗಿದಳು. ಹೌದು ಅವರು ರಾಮನನ್ನೇ ಬಡಿಯುತ್ತಿದ್ದರು! ಎಲ್ಲರೂ ಗಾಬರಿಯಾಗಿ ನಿಂತುಬಿಟ್ಟರು. ಒಬ್ಬ ಮಾತ್ರ ಮೈಮೇಲೆ ದೇವರು ಬಂದವರಂತೆ ಜೈ ಶ್ರೀರಾಮ ಎಂದು ಅರಚಿಕೊಳ್ಳುತ್ತಾ ದೊಣ್ಣೆಯಿಂದ ರಾಮನಿಗೆ ಹೊಡೆಯುತ್ತಲೇ ಇದ್ದ. ಗುಂಪಿನವರು ಅವನನ್ನು ಎಳೆದು ಇವರೇ ಶ್ರೀರಾಮ ಬಿಡು ಎಂದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಅವನನ್ನ ಎಲ್ಲರೂ ಸೇರಿ ಎತ್ತಿಕೊಂಡು ನಡೆದರು. ಅವನು ಹುಚ್ಚು ಹಿಡಿದವನಂತೆ ಜೈ ಶ್ರೀರಾಮ್ ಎಂದು ಅರಚಿಕೊಳ್ಳುತ್ತಲೇಯಿದ್ದ. ತನ್ನ ಗುಂಪಿನ ಸದಸ್ಯರ ಬಟ್ಟೆಗಳನ್ನೆಲ್ಲಾ ಹರಿದುಹಾಕುತ್ತಿದ್ದ.
ದಾರಿಹೋಕರ ಸಹಾಯದಿಂದ ಸೀತೆ ರಾಮನನ್ನು ಆಸ್ಪತ್ರೆಗೆ ಸೇರಿಸಿದಳು ಇಲ್ಲಿ (ಭೂಲೋಕದಲ್ಲಿ) ಬದುಕುವುದು ಕಷ್ಟ, ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ವೈದ್ಯರು ಸಲಹೆ ನೀಡಿದರು. ಸೀತೆ ರಾಮನನ್ನು ಕೈಲಾಸಕ್ಕೆ ಕರೆದುಕೊಂಡುಹೋದಳು. ಇಂದಿಗೂ ಗುಂಪುಗಳು ಜೈ ಶ್ರೀರಾಮ್ ಎಂದು ರಾಮನ ಹೆಸರಲ್ಲಿ ನರಮಾನವರ ಮೇಲೆ ಹೊಡೆಯುವ ಒಂದೊಂದು ಏಟುಗಳು ಕೈಲಾಸದ ಆಸ್ಪತ್ರೆಯಲ್ಲಿ ದಾಖಲಾಗಿರುವ ರಾಮನ ಮೈ ಮೇಲೆ ಪವಾಡದ ರೀತಿಯಲ್ಲಿ ಬೀಳುತ್ತಿದೆ. ಹಾಗಾಗಿ ರಾಮ ಗುಣಮುಖವಾಗದೆ ಆಸ್ಪತ್ರೆಯಲ್ಲಿಯೇ ನರಳುತ್ತಿದ್ದಾನೆ.



ಸೂಪರ್.