ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಪ್ರಾರಂಭಗೊಂಡು ಇಂದಿಗೆ (ಅ.7, 2024) ಒಂದು ವರ್ಷ ಪೂರ್ಣಗೊಂಡಿದೆ. ಹಲವು ವರ್ಷಗಳಿಂದ ಈ ಎರಡು ಗುಂಪುಗಳ ನಡುವೆ ಕಲಹ ಇದ್ದರೂ, ಎಡೆಬಿಡದ ಆಕ್ರಮಣ ಶುರುವಾಗಿ ಒಂದು ವರ್ಷವಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಸುದೀರ್ಘ ಸಮಯದ ಸಂಘರ್ಷದ ಮುಂದುವರೆದ ಭಾಗವಾಗಿ ಅಕ್ಟೋಬರ್ 7,2023ರಂದು ಪ್ಯಾಲೆಸ್ತೀನ್‌ನ ಗಾಝಾದ ಆಡಳಿತ ನೋಡಿಕೊಳ್ಳುತ್ತಿರುವ ಹಮಾಸ್ ಸಶಸ್ತ್ರ ಗುಂಪು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಏಕಾಏಕಿ ದಾಳಿ ನಡೆಸಿತ್ತು.
ಗಾಝಾದಿಂದ ರಾಕೆಟ್ ದಾಳಿ, ಪ್ಯಾರಚೂಟ್ ಮೂಲಕ ಇಸ್ರೇಲ್ ಭೂಪ್ರದೇಶಕ್ಕೆ ತೆರಳಿ ಗುಂಡಿನ ದಾಳಿ ಮತ್ತು ಇಸ್ರೇಲ್-ಗಾಝಾ ಗಡಿ ಬೇಲಿಯನ್ನು ದಾಟಿ ಒಳನುಗ್ಗಿ ಹಮಾಸ್ ದಾಳಿ ನಡೆಸಿತ್ತು. ಪರಿಣಾಮ 815 ನಾಗರಿಕರು, ವಿದೇಶಿಯರು ಸೇರಿದಂತೆ ಇಸ್ರೇಲ್‌ನಲ್ಲಿ 1,139 ಜನರು ಸಾವನ್ನಪ್ಪಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ಸುಮಾರು 251 ಜನರನ್ನು ಹಮಾಸ್ ಗಾಝಾಗೆ ಕರೆದಕೊಂಡು ಬಂದು ಒತ್ತೆಯಾಳಾಗಿಟ್ಟುಕೊಂಡಿತ್ತು.
ಪದೇ ಪದೇ ನಡೆಯುತ್ತಿರುವ ಇಸ್ರೇಲ್ ಆಕ್ರಮಣಕ್ಕೆ ಪ್ರತೀಕಾರವಾಗಿ ಮತ್ತು ಇಸ್ರೇಲ್‌ನಲ್ಲಿ ಬಂಧಿಯಾಗಿರುವ ಪ್ಯಾಲೆಸ್ತೀನಿಗರ ಬಿಡುಗಡೆಗಾಗಿ ದಾಳಿ ನಡೆಸಿ, ಅಲ್ಲಿನ ಜನರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದೇವೆ ಎಂದು ಹಮಾಸ್ ಹೇಳಿತ್ತು.
ಹಮಾಸ್ ದಾಳಿಯಿಂದ ಕುಪಿತಗೊಂಡ ಇಸ್ರೇಲ್, ಅಕ್ಟೋಬರ್ 8ರಂದು ಹಮಾಸ್ ಜೊತೆ ಯುದ್ದ ಘೋಷಣೆ ಮಾಡಿತ್ತು. ಅಂದಿನಿಂದ ಇಸ್ರೇಲ್ ಗಾಝಾ ಮೇಲೆ ದಾಳಿ ನಡೆಸುತ್ತಲೇ ಇದೆ. ಪರಿಣಾಮ ಇದುವರೆಗೆ ಗಾಝಾದ 41,870 ಜನರು ಸಾವನ್ನಪ್ಪಿದ್ದಾರೆ. 97,166 ಜನರು ಗಾಯಗೊಂಡಿದ್ದಾರೆ.
ಹಮಾಸ್‌ನ ಒಂದು ದಿನದ ದಾಳಿಗೆ ಪ್ರತೀಕಾರವಾಗಿ ಒಂದು ವರ್ಷದಿಂದ ಗಾಝಾ ಮೇಲೆ ಆಕ್ರಮಣ ನಡೆಸುತ್ತಿರುವ ಇಸ್ರೇಲ್, ಗಾಝಾದ ಆಸ್ಪತ್ರೆ, ಶಾಲೆ, ಸರ್ಕಾರಿ ಕಚೇರಿಗಳು, ಮಸೀದಿ, ಮನೆಗಳು ಸೇರಿದಂತೆ ಎಲ್ಲವನ್ನೂ ನಾಶ ಮಾಡಿದೆ. ಜನರು ಅನ್ನ, ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರದಿಗಳ ಪ್ರಕಾರ, ಸಾವಿರಾರು ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಗಾಝಾದ ಅಮಾಯಕ ನಾಗರಿಕರು ತಮ್ಮ ಸ್ವಂತ ನೆಲದಲ್ಲಿ ಬದುಕುವ ಹಕ್ಕನ್ನು ಕಳೆದುಕೊಂಡಿದ್ದಾರೆ.
ವರ್ಷದ ಕಳೆದರೂ ಗಾಝಾ ಮೇಲಿನ ಇಸ್ರೇಲ್ ದಾಳಿ ನಿಂತಿಲ್ಲ. ಇತ್ತೀಚಿನ, ಅಂದರೆ ಭಾನುವಾರ (ಅ.6, 2024) ದಂದು ಗಾಝಾದ ಶಾಲೆ ಮತ್ತು ಮಸೀದಿಯನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಲೆಬನಾನ್-ಯೆಮನ್‌ಗೆ ವಿಸ್ತರಣೆಗೊಂಡ ಆಕ್ರಮಣ
ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯಲ್ಲಿ ಕೈಗೊಂಡ ಹಲವು ನಿರ್ಣಯಗಳು, ಕತಾರ್, ಯುಎಸ್‌ಎ ಮತ್ತು ಜೋರ್ಡಾನ್ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆಗಳು, ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶ ಮತ್ತು ಹಲವು ರಾಷ್ಟ್ರಗಳ ಒತ್ತಡದ ನಡುವೆಯೂ ಇಸ್ರೇಲ್ ಗಾಝಾ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿದೆ. ಜೊತೆಗೆ ತನ್ನ ಆಕ್ರಮಣವನ್ನು ಲೆಬನಾನ್, ಯೆಮನ್‌ಗೆ ವಿಸ್ತರಿಸಿದೆ.
ಹಮಾಸ್-ಇಸ್ರೇಲ್‌ನಂತೆಯೇ ಹಲವು ವರ್ಷಗಳಿಂದ ನಡೆಯುತ್ತಿರುವ ಹೆಜ್ಬುಲ್ಲಾ-ಇಸ್ರೇಲ್ ಸಂಘರ್ಷ ಉಲ್ಬಣಗೊಂಡಿದೆ. ಗಾಝಾ ಮೇಲಿನ ಆಕ್ರಮಣದ ನಡುವೆಯೇ ಲೆಬನಾನ್‌ನ ಮೇಲೆ ಗಡಿಯ ಹೊರಗಿನಿಂದ ಇಸ್ರೇಲ್ ಹಲವು ಸಣ್ಣಪುಟ್ಟ ದಾಳಿಗಳನ್ನು ನಡೆಸುತ್ತಿತ್ತು. ಆದರೆ, 2024ರ ಸೆಪ್ಟೆಂಬರ್ 17 ಮತ್ತು 18 ರಂದು ಲೆಬನಾನ್‌ನ ಸಾವಿರಾರು ಜನರ ಮೊಬೈಲ್‌ನ ಹ್ಯಾಂಡ್ ಹೆಲ್ಡ್ ಪೇಜರ್ ಮತ್ತು ವಾಕಿ-ಟಾಕಿಗಳನ್ನು ಇಸ್ರೇಲ್ ಸ್ಪೋಟಗೊಳಿಸಿತ್ತು. ಈ ಘಟನೆಯಲ್ಲಿ 42 ಜನರು ಸಾವನ್ನಪ್ಪಿದ್ದರು ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 3, 500 ಜನರು ಗಾಯಗೊಂಡಿದ್ದರು.
ಆ ಬಳಿಕ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇಸ್ರೇಲ್ ಹೆಜ್ಬುಲ್ಲಾದ ಪರಮೋನ್ನತ ನಾಯಕ ಹಸ್ಸನ್ ನಸ್ರಲ್ಲಾ, ಹೆಜ್ಬುಲ್ಲಾದ ಸೌತ್ ಫ್ರಂಟ್‌ನ ಕಮಾಂಡರ್ ಅಲಿ ಕರ್ಕಿ, ನಸ್ರಲ್ಲಾ ಅವರ ಭದ್ರತಾ ಘಟಕದ ಮುಖ್ಯಸ್ಥ ಇಬ್ರಾಹಿಂ ಹುಸೇನ್ ಜಾಜಿನಿ, ನಸ್ರಲ್ಲಾ ಅವರ ದೀರ್ಘಾವಧಿಯ ವಿಶ್ವಾಸಾರ್ಹ ಜೊತೆಗಾರ ಮತ್ತು ಹೆಜ್ಬುಲ್ಲಾ ಚಟುವಟಿಕೆಗಳ ಸಲಹೆಗಾರ ಸಮೀರ್ ತೌಫಿಕ್ ದಿಬ್, ಹೆಜ್ಬುಲ್ಲಾದ ಫೋರ್ಸ್-ಬಿಲ್ಡ್ ಅಪ್ ಮುಖ್ಯಸ್ಥ ಅಬೇದ್ ಅಲ್-ಅಮೀರ್ ಮುಹಮ್ಮದ್ ಸಬ್ಲಿನಿ, ಹೆಜ್ಬುಲ್ಲಾದ ಫೈರ್‌ಪವರ್ ಅನ್ನು ಸಂಘಟಿಸುವ ಜವಾಬ್ದಾರಿ ಹೊತ್ತಿದ್ದ ಅಲಿ ನಾಫ್ ಅಯೌಬ್ ಅವರನ್ನು ಹತ್ಯೆ ಮಾಡಿದೆ.
ಇತ್ತೀಚಿನ, ಅಂದರೆ ಭಾನುವಾರ (ಅ.6) ಲೆಬನಾನ್ ರಾಜಧಾನಿ ಬೈರುತ್‌ನ ಆಗ್ನೇಯದಲ್ಲಿರುವ ಕಮಾತಿಯೆಹ್ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದಕ್ಕೆ ಪ್ರತೀಕಾರವಾಗಿ ಸೋಮವಾರ ಬೆಳಗ್ಗೆ ಇಸ್ರೇಲ್‌ನ ಹೈಫಾ ಮೇಲೆ ಹೆಜ್ಬುಲ್ಲಾ ದಾಳಿ ನಡೆಸಿದೆ.
ಹೆಜ್ಬುಲ್ಲಾ- ಇಸ್ರೇಲ್ ಸಂಘರ್ಷದ ನಡುವೆ ಸೆಪ್ಟೆಂಬರ್ 29ರಂದು ಇಸ್ರೇಲಿ ವಾಯುಪಡೆಯು ಯೆಮೆನ್‌ನ ಬಂದರು ನಗರಗಳಾದ ಹುದೈದ ಮತ್ತು ರಾಸ್ ಇಸಾದಲ್ಲಿನ ವಿದ್ಯುತ್ ಸ್ಥಾವರ ಮತ್ತು ಬಂದರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.
ಇರಾನ್ -ಇಸ್ರೇಲ್ ಸಂಘರ್ಷ
ಹಮಾಸ್- ಇಸ್ರೇಲ್, ಹೆಜ್ಬುಲ್ಲಾ-ಇಸ್ರೇಲ್ ಮತ್ತು ಯೆಮನ್‌ನ ಹೌತಿ-ಇಸ್ರೇಲ್ ನಡುವಿನ ಸಂಘರ್ಷಕ್ಕೆ ಈಗ ಇರಾನ್ ಎಂಟ್ರಿಯಾಗಿದೆ. ಹೆಜ್ಬುಲ್ಲಾ ನಾಯಕ ಹಸ್ಸನ್ ನಸ್ರಲ್ಲಾ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್‌ನ ಟೆಲ್ ಅವೀವ್ ನಗರ ಮೇಲೆ ಸೆಪ್ಟೆಂಬರ್ 1ರಂದು ಇರಾನ್ ಸುಮಾರು 200ರಷ್ಟು ಕ್ಷಿಪಣಿಗಳನ್ನು ಹಾರಿ ಬಿಟ್ಟಿದೆ. ಈ ಘಟನೆಯ ಸಾವು-ನೋವುಗಳ ಬಗ್ಗೆ ಇಸ್ರೇಲ್ ಸರಿಯಾದ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ನಾವು ಇಸ್ರೇಲ್ ಪ್ರಮುಖ ವಾಯುನೆಲೆ ಮೇಲೆ ದಾಳಿ ನಡೆಸಿದ್ದೇವೆ ಎಂದು ಇರಾನ್ ಹೇಳಿಕೊಂಡಿದೆ.
ಒಟ್ಟಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ, ಈಗಲೂ ಮುಂದುವರೆಯುತ್ತಿರುವ ಇಸ್ರೇಲ್, ಹಮಾಸ್, ಹೆಜ್ಬುಲ್ಲಾ, ಹೌತಿ ಮತ್ತು ಇರಾನ್ ನಡುವಿನ ದಾಳಿ-ಪ್ರತಿ ದಾಳಿಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಅಂದಾಜು 45 ಸಾವಿರ ತಲುಪಿದೆ.
ಎಲ್ಲಾ ಗುಂಪುಗಳ ಪ್ರತಿಷ್ಠೆ, ಯುದ್ದೋನ್ಮಾದ, ಅಮೆರಿಕ-ರಷ್ಯಾದಂತಹ ಪ್ರಬಲ ರಾಷ್ಟ್ರಗಳ ಸಶ್ತ್ರಾಸ್ತ್ರ ವ್ಯಾಪಾರಕ್ಕೆ ಸಾವಿರಾರು ಜನರು ಜೀವ ಕಳೆದಕೊಂಡರು, ತಮ್ಮ ಸ್ವಂತ ನಾಡಿನಲ್ಲಿ ಬದುಕುವ ಹಕ್ಕು ಕಳೆದುಕೊಂಡರು, ಆಹಾರ-ನೀರು, ವಸತಿ-ಬಟ್ಟೆಯಂತಹ ಮೂಲಭೂತ ಸೌಲಭ್ಯಗಳಿಂದ ವಂಚಿತರಾದರು. ಸುಂದರ ನಗರಗಳು, ಆಸ್ಪತ್ರೆ, ಶಾಲೆ, ಮಸೀದಿ, ಚರ್ಚ್‌ಗಳು, ಸರ್ಕಾರಿ ಕಚೇರಿಗಳು ನಾಶವಾದವು. ಕೊನೆಗೆ ಯುದ್ಧದಿಂದ ಗಳಿಸಿದ್ದಿಷ್ಟೆ.
ಇದನ್ನೂ ಓದಿ : ಚೆನ್ನೈ: ವಾಯುಪಡೆ ಏರ್‌ಶೋ ಅವಘಡ; ಬಿಸಿಲಿನ ಝಳಕ್ಕೆ ಐವರು ಪ್ರೇಕ್ಷಕರು ಸಾವು?


