“ತಂದೆಯಂತೆ ಮಗ” ಎಂಬುದೊಂದು ನಾಣ್ಣುಡಿ. ತಂದೆಯ ಆದರ್ಶ, ಆಕಾಂಕ್ಷೆಗಳು ಮಗನಲ್ಲಿ ಪ್ರತಿಬಿಂಬಿಸಬೇಕಾದರೆ, ತಂದೆಯು ಶಿಲೆಯನ್ನು ಸುಂದರ ಕೃತಿಯನ್ನಾಗಿಸುವ ಶಿಲ್ಪಿಯಾಗಿರಬೇಕು. ಮಗ ಹೇಳಿಕೊಟ್ಟ ವಿದ್ಯೆಗಳನ್ನೆಲ್ಲಾ ಮರುಮಾತಿಲ್ಲದೆ ನಿಷ್ಠೆಯಿಂದ ಕಲಿಯುವ ವಿದ್ಯಾರ್ಥಿಯಾಗಿರಬೇಕು. ಹೀಗಾದಾಗ ಮಾತ್ರವೇ ತಂದೆಯ ಶ್ರಮ ಸಾರ್ಥಕ, ಮಗನ ಬದುಕು ಸುಂದರ. ಬದುಕಿನ ಏರಿಳಿತಗಳನ್ನು ಏಕರೀತಿಯಿಂದ ಕಂಡು ನಾಲ್ಕು ಮಕ್ಕಳ ತಂದೆಯಾಗಿ ಎಲ್ಲರಿಗೂ ತನ್ನ ಪ್ರೀತ್ಯಾದರಗಳನ್ನು ಸಮವಾಗಿ ಹಂಚಿ-ಅವರ ಉಜ್ವಲ ಭವಿಷ್ಯವನ್ನೇ ತನ್ನ ಜೀವನದ ಧ್ಯೇಯವನ್ನಾಗಿಸಿಕೊಂಡು- ಅವರ ಕನಸು ನಿಜಕ್ಕೂ ನನಸಾದಾಗ ಅದನ್ನು ಕಾಣಲಾಗದೇ ಕಣ್ಮುಚ್ಚಿಕೊಂಡು- ಇಂದು ನಮ್ಮೆಲ್ಲರ ಮೈಮನತುಂಬಿ- ಮರೆಯಲಾಗದಂತಹ ಮಮತೆಯನ್ನು ನಮಗುಣಿಸಿ, ನಿತ್ಯ ಅವರ ಜಪ ಮಾಡುವಂತೆ ರೂಪಿಸಿದ ವ್ಯಕ್ತಿ- ನಮ್ಮ “ಅಪ್ಪಾಜಿ” ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ…..
ದಢೂತಿಯ ಆಕೃತಿ, ಗುಂಡು ಕೆನ್ನೆಗಲ್ಲಗಳು, ಮೂಗಿನಡಿಯಿಂದ ಕಿವಿಯವರೆಗೂ ಹರಡಿಕೊಂಡ ದಟ್ಟಮೀಸೆ, ಅದಕ್ಕೊಪ್ಪುವ ಹುಬ್ಬು, ವಿಶಾಲ ನಯನಗಳು- ಕೆಳಸ್ತರದ ದೃಢವಾದ ಧ್ವನಿ (Base voice) ಎಲ್ಲವೂ ಅಂದಿನ ಜನಪ್ರಿಯ ಮನರಂಜನಾ ಮಾಧ್ಯಮವಾದ ನಾಟಕಗಳಿಗೆ ಹೇಳಿಮಾಡಿಸಿದಂತಹ ನಿಲುವು. ನಿಲುವಿಗೆ ತಕ್ಕ ಅರ್ಹತೆ. ಸಂಗೀತಜ್ಞಾನ ಅನುಭವದಿಂದ ಆರ್ಜಿಸಿದ್ದೇ ಹೊರತು ಸಾಧನೆಯಿಂದ ಸಂಪಾದಿಸಿದ್ದಲ್ಲ! ಆಡುವ ಭಾಷೆಗೆ ಅಪಶಬ್ದದ ಸೋಂಕಿಲ್ಲ; ಅಲ್ಪಪ್ರಾಣ, ಮಹಾಪ್ರಾಣ, ಸಕಾರ-ಶಕಾರಗಳನ್ನು ಶುದ್ಧವಾಗಿ ಹೇಳಬೇಕು. ಅದು ಅವರ ಸಿದ್ಧಾಂತ. ಈ ಸಿದ್ಧಾಂತವನ್ನು ನಮ್ಮ ಅಪ್ಪಾಜಿಗೆ ಕಲಿಸಿಕೊಟ್ಟ ಗುರು ಅಪ್ಪಣ್ಣಪ್ಪನವರು. ನಮ್ಮ ತಂದೆಗೂ ಅವರಿಗೂ ಭಕ್ತ-ಭಗವಂತನ ಸಂಬಂಧ!… ಅವರಿಗೆ ನಮ್ಮ ಅಪ್ಪಾಜಿ ಆಚ್ಚುಮೆಚ್ಚಿನ ಶಿಷ್ಯ!.. ಅವರ ಭವಿಷ್ಯದಲ್ಲಿ ಅಪಾರ ನಂಬಿಕೆ!… ಅಪ್ಪಣ್ಣಪ್ಪನವರು ಆಗಾಗ ಹೇಳುತ್ತಿದ್ದುದುಂಟು- “ಪುಟ್ಸಾಮೀ, ನೀನು ತುಂಬಾ ಎತ್ತರಕ್ಕೆ ಹೋಗೋದನ್ನ ನಾನು ನೋಡ್ಬೇಕು. ನಮ್ಮೂರಲ್ಲಿ ಒಂದು ಕಾರು ಹೋಗ್ತಿದ್ದಾಗ, ಅದು ಯಾರದ್ದು ಅಂತ ಯಾರಾದರೂ ಕೇಳಿದರೆ, ಅದು ನನ್ನ ಪುಟ್ಸಾಮೀದು ಅಂತ ಹೇಳೋ ಕಾಲ ಬರುತ್ತೆ!” ಅಂತ ಅಭಿಮಾನದಿಂದ ಹೇಳ್ತಾ ಇದ್ರು!… ಅವರ ಮಾತು “ಅಪ್ಪಾಜೀ” ಕಾಲದಲ್ಲಿ ನಿಜವಾಗದಿದ್ದರೂ ನಮ್ಮ ಕಾಲದಲ್ಲಿ ಆದದ್ದಕ್ಕೆ ಬಹಳ ಸಂತೋಷಪಟ್ಟವರು ಅವರು!… ಕೆಲದಿನಗಳ ಹಿಂದೆ ಅವರು ಕಾಲವಾದರು. ಕಾಲವಾಗುವವರೆಗೂ ಆಗಾಗ ನಮ್ಮನ್ನು ಕಂಡು ಆನಂದಿಸಿ ಆಶೀರ್ವದಿಸುತ್ತಿದ್ದರು.
ಅಪ್ಪಾಜಿಯನ್ನು ಕಂಡರೆ ನನಗೇಕೋ ಮಗುವಾಗಿದ್ದಾಗಿನಿಂದಲೂ ಅಂಜಿಕೆ. ತಪ್ಪು ಮಾಡಿದಾಗಲೆಲ್ಲಾ ತಿದ್ದುವುದೇ ಅವರ ಕಾಯಕ. ಹಿರಿಯ ಮಗನನ್ನು ಹಿರಿಯ ವ್ಯಕ್ತಿಯಾಗಿ ರೂಪಿಸಬೇಕೆಂಬ ಅವರೊಂದೇ ಆಸೆ, ನನ್ನ ಮೇಲಿನ ಅಲ್ಪ ಕಠಿಣ ಶಿಕ್ಷಣಕ್ಕೆ ಕಾರಣವಾಗಿತ್ತು. ಅದೇ ನನ್ನ ಅಂಜಿಕೆಗೂ ನಾಂದಿ ಹಾಡಿತ್ತು. ನನ್ನ ಅಂಜಿಕೆ ವಿನಾಕಾರಣವಾಗಿತ್ತೇ ವಿನಃ ಸಕಾರಣವಾಗಿರಲಿಲ್ಲ. ಒಂದು ಬಾರಿ ನಾನು ದೇಹಬಾಧೆ ತೀರಿಸಲೆಂದು ಹೊಳೆಯತ್ತ ಹೊರಟಿದ್ದೆ; ಅದೇ ಸಮಯಕ್ಕೆ ಸರಿಯಾಗಿ ನಮ್ಮನೆ ಬಟ್ಟೆ ಒಗೆಯುವ ಅಗಸನ ಆಗಮನವಾಗಬೇಕೇ?… ಹೋಗುತ್ತಿದ್ದ ನನ್ನ ಹಿಂದೆಯೇ ಬಂತು ಆ ಧ್ವನಿ “ಎಲ್ಹೋಗ್ತಿದ್ದೀಯೋ?…” ಆ ಧ್ವನಿ ಕೇಳಿದಾಕ್ಷಣ ಎಲ್ಲೋ ಆಗಬೇಕಾದ್ದು ಅಲ್ಲೇ ಆಗಿಹೋಯಿತು. “ಅಗಸ ಬಂದಿದ್ದಾನೆ. ಬಟ್ಟೆ ಬಿಚ್ಚಿ ಒಗೆಯೋಕ್ಹಾಕು!…” 4 ವರ್ಷದ ಮಗು ನಾನು! ಅಪ್ಪನ ಆಜ್ಞೆಯನ್ನು ಅಲ್ಲೇ ಪಾಲಿಸಿದೆ! ಅಗಸನೂ ನನ್ನ ಚಡ್ಡಿ ಷರಟನ್ನು ಹಾಗೆಯೇ ತೆಗೆದುಕೊಂಡು ಹೊಳೆಯತ್ತ ಹೊರಟ! ಹೊಳೆಯಲ್ಲಿ ನನ್ನ ಆ ಬಟ್ಟೆಗಳನ್ನು ಅದ್ದಿ ತೆಗೆದಾಗಲೇ ಅವನಿಗೂ ಗೊತ್ತಾಗಿದ್ದು ನನ್ನ ಅವಸ್ಥೆ!… ಒಂದೊಂದು ಬಾರಿ ಅದ್ದಿ ತೆಗೆದಾಗಲೂ ಚಡ್ಡಿಯಿಂದ ಹೊರಬಂದು ಹೊಳೆಯಲ್ಲಿ ತೇಲಿ ಹೋಗುತ್ತಿದ್ದುದನ್ನು ಕಂಡು ನಗುಬಂತು!.. ಮಗುವಾದ ನನ್ನ ಮೇಲೆ ಮರುಕ ಬಂತು! ಸಂಜೆ ನಮ್ಮ ಅಪ್ಪಾಜಿಯ ಬಳಿ ಈ ವಿಷಯ ಹೇಳಿದಾಗ, ಅವರೂ ಬಿದ್ದುಬಿದ್ದು ನಕ್ಕರು. ನಮ್ಮವ್ವನನ್ನು ಕರೆದು ವಿಷಯ ತಿಳಿಸಿದಾಗ, ಅವ್ವನ ಮುದ್ದುಮಗನಾದ ನನ್ನ ಪರ ವಹಿಸಿ “ಮತ್ತೇನ್ರಿ?.. ಮಕ್ಕಳನ್ನ ಮುದ್ದಿಂದ ಮಾತಾಡಿಸ್ದೆ ಗದರಿಸಿ ಹೆದರಿಸಿದ್ರೆ ಹೀಗೇ ಆಗೋದು!..” ಎಂದಾಗ ಅಪ್ಪಾಜೀ ನನ್ನನ್ನು ಬಳಿಗೆ ಕರೆದು ಕೂರಿಸ್ಕೊಂಡು ತಲೆದಡವಿ “ಇಷ್ಟಕ್ಕೆಲ್ಲಾ ಹೆದರಿಬಿಟ್ರೆ ಮುಂದಕ್ಕೆ ಬದುಕೋದಾದ್ರೂ ಹೆಂಗೆ ಕಂದಾ?.. ತಪ್ಪು ಮಾಡ್ದೋನು ಹೆದರ್ಬೇಕೇ ಹೊರ್ತು, ನೀನು ನಾವಲ್ಲ!..” ಎಂದು ಮುದ್ದಿಸಿ ಹೇಳಿದರು. ಅವರ ಅಂದಿನ ಆ ವಾಕ್ಯಗಳೇ, ನಮ್ಮ ಬಾಳಿಗೆ ದಾರಿದೀಪವಾಯ್ತು ಅದೇ ನಿಟ್ಟಿನಲ್ಲೇ ನಡೆಯುತ್ತಾ ಬಂದಿದ್ದೇವೆ ಎಂಬ ಭರವಸೆಯೂ ಇದೆಯೆಂದರೆ ಉತ್ಪ್ರೇಕ್ಷೆಯಲ್ಲ!..
ಆಪ್ಪಾಜಿಯ ಪ್ರೀತಿ-ಭೀತಿಗಳ ಮಳೆ ಬಿಸಿಲಲ್ಲಿ ಬೆಳೆಯುತ್ತಿದ್ದ ನನಗೆ ಅವ್ವನ ಅಪಾರ ಪ್ರೀತಿ ಸದಾ ಶ್ರೀರಕ್ಷೆಯಾಗಿತ್ತು. ಅವ್ವನ ಆಕ್ಕರೆಯ ಛತ್ರಿಯಡಿಯಲ್ಲಿ ತುಂಟಾಟಕ್ಕೆ ಸ್ವಾತಂತ್ರ್ಯ. ಬೇಕೆಂದೇ ಮಲಗಿದ್ದ ನಾಯಿಯನ್ನು ಒದ್ದು ಎಬ್ಬಿಸುವುದು. ಅದು ಕಚ್ಚಿದಾಗ ಆವ್ವ ಕಚ್ಚಿದ ಜಾಗಕ್ಕೆ ಆಗಿನ ಕಾಲದ ಮೂರುಕಾಸಿನ ತಾಮ್ರದ ನಾಣ್ಯವನ್ನು ಅದರ ಮೇಲಿಟ್ಟು ಬಟ್ಟೆಯಿಂದ ಕಟ್ಟುತ್ತಿದ್ದರು ನಾಯಿ ಕಚ್ಚಿದ ಜಾಗ ನಂಜಾಗದಿರಲೆಂದು! ಆದರೇನು? ಅತ್ತ ಅವ್ವ ಮರೆಯಾಗುತ್ತಿದಂತೆ ಕಟ್ಟಿದ್ದ ಬಟ್ಟೆ ಬೀದಿಗೆ!… ತಾಮ್ರದ ಕಾಸು ಕಡ್ಲೇಕಾಯಿ ಅಂಗಡಿಗೆ!.. ವಾರಕ್ಕೊಮ್ಮೆಯಾದರೂ ಈ ಘಟನೆಯ ಪುನರಾವರ್ತನೆ ಆಗುತ್ತಲೇ ಇತ್ತು!… ಅದಕ್ಕಾಗಿ ಅವ್ವನಿಗೆ ತಾಮ್ರದ ಮೂರು ಕಾಸುಗಳನ್ನು ಕಲೆ ಹಾಕುವ ಕಲೆ ಕರಗತವಾಗಿದ್ದಿತು!…
ಅಪ್ಪಾಜಿ-ಅವ್ವನ ಅಭಿಮಾನ ಆಶೀರ್ವಾದಗಳು ನನ್ನ ಮೇಲೆ ಎಷ್ಟಿತ್ತೆಂದರೆ- ಸಾವಿನ ದವಡೆಯಿಂದಲೂ ಪಾರು ಮಾಡಿಸುವ ಶಕ್ತಿಯನ್ನು ಪಡೆದಿತ್ತು!.. ನಮ್ಮ ಹಳ್ಳಿಯಲ್ಲಿ ಪಾಳುಬಿದ್ದ ಆಳವಾದ ’ಹಗೇವು’ ಒಂದಿತ್ತು. ಇದನ್ನು ಒಂದು ಕಾಲ ರಾಗಿ ತುಂಬಿಡಲು ಉಪಯೋಗಿಸುತ್ತಿದ್ದರಂತೆ. ಒಂದು ಬಾರಿ ಅದನ್ನು ಕಾಣದೇ ನಾನದರಲ್ಲಿ ಬಿದ್ದೆ.. ಆ ಕ್ಷಣದಲ್ಲಿ ತಂದೆತಾಯಿಗಳನ್ನು ನೆನೆದೆ. ನನಗರಿವಿಲ್ಲದಂತೆಯೇ ನನ್ನ ಪುಟ್ಟ ಕೈಗಳು ಹಳ್ಳದ ಅಂಚನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು. ಅಪ್ಪಾಜಿಯ ಶಕ್ತಿಯೇ ನನ್ನನ್ನು ಮೇಲೆತ್ತಿದಂತಾಗಿ, ಹೇಗೋ ಮೇಲೇರಿ ಬಂದೆ… ನಡೆದದ್ದನ್ನು ನುಡಿಯಬೇಕೆಂದೇ ಬದುಕಿ ಬಂದೆನೆಂಬ ಭಾವನೆ ಬೇರೂರಿತ್ತು. ಅಪ್ಪಾಜಿ ಅವ್ವನಿಗೆ ಹೇಳಿದೆ. ಅಪ್ಪಾಜಿ ಭಾವಪರವಶರಾಗಿ ಕಣ್ಣೀರು ಸುರಿಸುತ್ತಾ ನನ್ನನ್ನು ಎದೆಗವುಚಿಕೊಂಡರು. ಆ ಎದೆಯ ಬಿಸಿ, ಹೃದಯ ಸಾಮೀಪ್ಯಗಳ ನೆನಪು ಇಂದಿಗೂ ನನ್ನಲ್ಲಿ ಹಸುರಾಗಿಯೇ ಇದೆ!
ಅಪ್ಪಾಜಿಯ ನಾಟಕ ಜೀವನ ಆರಂಭವಾದದ್ದು “ಸೀತಪ್ಪನವರ ಕಂಪನಿ” ಎಂದು. ಅಂದಿನ ದಿನಗಳಲ್ಲಿ ಪ್ರಸಿದ್ಧವಾದ ಸಂಸ್ಥೆಯೊಂದರಲ್ಲಿ ಆಪ್ಪಾಜಿ ರಾವಣ, ಸೀತಪ್ಪನವರೇ ಸೀತೆ. ಅಂತಹ “ಸೀತೆ”ಯನ್ನು ಕಂಡಿದ್ದೇ ಇಲ್ಲ ಎಂದು ಅಪ್ಪಾಜಿಯವರು ಅವರ ಜೀವನದ ಕೊನೆಯವರೆಗೂ ಹೇಳುತ್ತಿದ್ದರು. ಸ್ತ್ರೀ ಪಾತ್ರಗಳಿಗೆ ಹೆಸರಾದವರು ಮತ್ತೊಬ್ಬರು ಶ್ರೀ ಗುರುಮೂರ್ತಪ್ಪನವರು. ಕೃಷ್ಣನ ಪಾತ್ರದಲ್ಲಿ ಸಾಕ್ಷಾತ್ ಕೃಷ್ಣನೇ ಬಂದು ಎದುರಿಗೆ ನಿಂತಂತೆ ಇರುತ್ತಿತ್ತು ಅವರ ರೂಪು. ’ಹರಿಶ್ಚಂದ್ರ’ ನಾಟಕದಲ್ಲಿ ಅವರ ’ಚಂದ್ರಮತಿ’ಯ ಪಾತ್ರ ಮನಕೆ ಆಕರ್ಷಕ, ಜನಪ್ರಿಯ. ಅಪ್ಪಾಜಿಗೆ ಗುಬ್ಬಿ ಕಂಪನಿಯಿಂದ ಆಹ್ವಾನ, ಸಂಸಾರ ಸಮೇತ ಪ್ರಯಾಣ. ನನಗಾಗ ಹನ್ನೆರಡು ವರ್ಷ. ನಾನು, ನನ್ನ ತಮ್ಮ ವರದಪ್ಪ, ತಂಗಿ ಶಾರದಮ್ಮ ಕಂಪನಿಯಲ್ಲಿ ಪಾತ್ರಧಾರಿಗಳು. ಅಂದು ಎಲ್ಲರಿಗೂ ಸೇರಿ 60ರೂ. ಸಂಬಳ. ಅಲ್ಲಿಗೇ ನನ್ನ ವಿದ್ಯೆಗೆ ಪೂರ್ಣವಿರಾಮ. ಆ ಕಾಲದಲ್ಲಿ ರಾಕ್ಷಸ ಪಾತ್ರಗಳಿಗೆ ನಟಭಯಂಕರ ಗಂಗಾಧರರಾಯರು ಪ್ರಸಿದ್ಧರು. ಒಮ್ಮೆ ಕಂಪನಿಯ ಕ್ಯಾಂಪ್ ಹಾಸನದಲ್ಲಿದ್ದಾಗ ದಿಢೀರೆಂದು ಗಂಗಾಧರರಾಯರು ಕಂಪನಿ ಬಿಟ್ಟಿದ್ದರು. ಭೀಮನ ಪಾತ್ರ ಅಂದಿನ ನಾಟಕದಲ್ಲಿ ಅವರದ್ದು. ವೀರಣ್ಣನವರಿಗೆ ಪೇಚು! ಅಪ್ಪಾಜಿಯನ್ನು ಕರೆದು “ಪುಟ್ಸಾಮೀ, (ಅವರು ಅಪ್ಪಾಜಿಯನ್ನು ಹಾಗೇ ಕರೆಯುತ್ತಿದ್ದುದು) ಈವತ್ತಿಂದ ನೀನೇ ’ಭೀಮ’ ಕಣಯ್ಯ!” ಅಂದರು. ಅವರ ಮಾತು ನೂರಕ್ಕೆ ನೂರು ಸತ್ಯವಾಯ್ತು. ’ಕುರುಕ್ಷೇತ್ರ’ದ ಭೀಮನಲ್ಲದೆ, ’ಕೃಷ್ಣಲೀಲೆ’ಯ ಕಂಸ, ’ರಾಮಾಯಣ’ದಲ್ಲಿ ರಾವಣ, ’ಪ್ರಹ್ಲಾದ’ ನಾಟಕದ ಹಿರಣ್ಯಕಶಿಪು ಅವರನ್ನು ಜನಪ್ರಿಯತೆಯ ಉತ್ತುಂಗ ಶಿಖರಕ್ಕೇರಿಸಿತು. ಅವರು “ಭೀಮ” ಮಾಡಿದ ಮೊದಲ ದಿನವಂತೂ ಎಲ್ಲರೂ ಬಾಯ ಮೇಲೆ ಬೆರಳಿಟ್ಟುಕೊಳ್ಳುವಂತಾಯ್ತು. ವೀರಣ್ಣನವರಂತೂ ಆನಂದಾಶ್ರುಗಳನ್ನು ಹರಿಸುತ್ತಾ ಅಪ್ಪಾಜಿಯನ್ನು ಆತ್ಮೀಯತೆಯಿಂದ ಅಪ್ಪಿ “ಭೇಷ್ ಪುಟ್ಸಾಮೀ, ಇಷ್ಟು ದಪ್ಪ ಶರೀರ ಇಡ್ಕೊಂಡು ಅಷ್ಟು ಮಧುರವಾದ ಶಾರೀರ ಹೇಗಯ್ಯಾ ಸಂಪಾದಿಸ್ದೆ? ನಿನ್ನ ಹಾಗೆ ಹಾಡೋವ್ರನ್ನ, ಪಾರ್ಟು ಮಾಡೋವ್ರನ್ನ ನಾನು ನೋಡೇ ಇರ್ಲಿಲ್ಲ ಬಿಡು!” ಎಂದು ಹೇಳಿದರು. ಅಂದಿನಿಂದಲೇ ಕಂಪನಿಯಲ್ಲಿ ನಮ್ಮೆಲ್ಲರ ಸ್ಥಾನ ಮೇಲಕ್ಕೇರಿತು. ತಿರುಪತಿ ತಿಮ್ಮಪ್ಪನಲ್ಲಿ ಮುಡಿ ಕೊಡುವುದಾಗಿ ಹರಸಿಕೊಂಡಿದ್ದರಿಂದ, ತಲೆ ಕೂದಲೂ ಸೊಂಪಾಗಿ ಬೆಳೆದಿದ್ದು ಗಂಟು ಹಾಕಿದಾಗ ಕಪ್ಪು ಕಾಲ್ಚೆಂಡಿನಂತೆ (Foot-ball) ಕಾಣಿಸುತ್ತಿತ್ತು. ಭಗೀರಥನ ಪಾತ್ರದಲ್ಲಿ ತಲೆಯನ್ನು ಒಂದು ಬಾರಿ ಕೊಡವಿದಾಗ ಕಟ್ಟಿದ್ದ ತಲೆ ಗಂಟು ಬಿಚ್ಚಿ, ಅಗಲವಾದ ಮೊರದಂತೆ ಹರಡಿಕೊಂಡಾಗ, ಮುಖ ತುಂಬಿದ ಮೀಸೆಯೊಂದಿಗೆ ಕಂಡಾಗ, ಇಳಿದುಬರುತ್ತಿರುವ ಗಂಗೆಯನ್ನು ಹೆಡೆಯಲ್ಲಿ ಕ್ರೋಢೀಕರಿಸಿಕೊಳ್ಳುವಂತೆ ನಿಂತ ನಿಜ ಭಗೀರಥನನ್ನು ಕಂಡಂತೆಯೇ ಆಗುತ್ತಿತ್ತು. ತಿಮ್ಮಪ್ಪನಿಗೆ ಹರಕೆಯೊಪ್ಪಿಸಿದ ಮೇಲೆ ಬೋಳುತಲೆ! “ಎಚ್ಚಮನಾಯಕ” ನಾಟಕ, ಅಪ್ಪಾಜಿಯದು ಬಾದಷಹನ ಪಾತ್ರ! ಮೋಹಿನಿಯನ್ನು ಮೋಹಿಸಿ ಇಚ್ಛೆ ವ್ಯಕ್ತಪಡಿಸುವ ದೃಶ್ಯ. ಮೋಹಿನಿಯ ಮಾತು… “ನಾನು ನಿಮ್ಮ ಮಗಳಂತಿಲ್ಲವೇ? ಮಗಳನ್ನೇ ಮೋಹಿಸುವುದು ಪಾಪವಲ್ಲವೇ?” ಎಂದಾಗ ಹಾಕಿದ್ದ ಟೋಫನ್ (wig) ತೆಗೆದು “ತೋಬಾ ತೋಬಾ!” ಎಂದು ಬೋಳು ತಲೆಯನ್ನು ಸವರಿಕೊಂಡಾಗ ಪ್ರೇಕ್ಷಕರಲ್ಲಿ ಉಕ್ಕಿ ಬರುವ ನಗುವಿನ ಅಲೆ ಅಡಗಲು ಕನಿಷ್ಠ ಐದಾರು ನಿಮಿಷಗಳಾಗುತ್ತಿದ್ದವು! ಹಾಗೆಯೇ ಅವರು ಆ ಪಾತ್ರಧಾರಿಯಾಗಿ ಹಾಡುತ್ತಿದ್ದ ’”ಅನುರಾಗದಾ…” ಎಂಬ ಹಾಡಿಗೆ ಮೂರ್ನಾಲ್ಕು ಬಾರಿ “ಒನ್ಸ್‌ಮೋರ್”ಗಳು ಬರುತ್ತಿದ್ದುವು. ನಾಟಕದ ಕಲಾವಿದರೆಲ್ಲಾ ಸೈಡ್ ವಿಂಗ್‌ಗಳಲ್ಲಿ ಜಮಾಯಿಸಿಕೊಳ್ಳುತ್ತಿದ್ದು ಅವರ ಹಾಡುಗಾರಿಕೆಯನ್ನು ತನ್ಮಯತೆಯಿಂದ ಕೇಳುತ್ತಿದ್ದರು. ಯಜಮಾನರೂ ಸಹ (ವೀರಣ್ಣನವರು) ಎಲ್ಲಿದ್ದರೂ ಆ ಹಾಡಿನ ಸಮಯಕ್ಕೆ ಒಂದು ಸೈಡ್ ವಿಂಗ್ಸ್‌ನಲ್ಲಿ ಒಂದು ಕುರ್ಚಿ ಹಾಕಿ ಕುಳಿತು ಆಲಿಸುತ್ತಿದ್ದರು. ಅವರ ಕಣ್ಣಂಚಿನಲ್ಲಿ ತುಂಬಿಕೊಳ್ಳುತ್ತಿದ್ದ ಕಣ್ಣೀರನ್ನು ನಾವೆಲ್ಲಾ ಗಮನಿಸುತ್ತಿದ್ದೆವು! ದಿ. ಹಿರಣ್ಣಯ್ಯನವರು ಬರೆದ ರಾಮಾಯಣದಲ್ಲಿ ದಶರಥನ ಪಾತ್ರ ಅಪ್ಪಾಜಿ ನಿರ್ವಹಿಸಿ “ದಿಟ್ಟ ಕಾಂತೆಯಾ..” ಎಂಬ ಕಂದಪದ್ಯವನ್ನು ಹಾಡಿ ಅಂತ್ಯವನ್ನು ತಾರಕ ಸ್ಥಾಯಿಯಲ್ಲಿ ನಿಲ್ಲಿಸಿ ಹಾಡುವಾಗ ಇಡೀ ಪ್ರೇಕ್ಷಕವೃಂದವೇ ಎರಡು ನಿಮಿಷಗಳು ಚಪ್ಪಾಳೆ ಹೊಡೆದು ಅಪ್ಪಾಜಿಯನ್ನು ತಮ್ಮ ಅಭಿಮಾನದ ನಟನನ್ನಾಗಿಸಿಕೊಂಡಿದ್ದರು. ಇಷ್ಟಾಗಿ ಅಪ್ಪಾಜಿಗೇನೂ ಶಾಸ್ತ್ರೀಯ ಸಂಗೀತ ಪಾಠವಾಗಿರಲಿಲ್ಲ! ಎಲ್ಲವೂ ಅನುಭವ, ಆಸಕ್ತಿ, ಶ್ರದ್ಧೆ, ಶಿಸ್ತು, ಸಂಯಮ. ಶಿರಹಟ್ಟಿ ನಾಟಕ ಕಂಪನಿಯ ಮರಾಠಿ ಹಾಡುಗಳ ಸತತ ಅಭ್ಯಾಸ, ಸ್ವರಜ್ಞಾನಾರ್ಜನೆ! ಅಪ್ಪಾಜಿಯ ಆ ಗುಣಗಳೇ ಇಂದು ನನ್ನಲ್ಲೂ ಸ್ವಲ್ಪ ಮೈಗೂಡಿದೆ. ಅದು ಅವರ ಮಾರ್ಗದರ್ಶನದ ಫಲ!
ಕೆಲಕಾಲ ನಮ್ಮ ಸಂಸಾರ ಶೇಷಕಲಾ ಕಲಾಮಂಡಲಿಯ ಕೃಪಾಶಯದಲ್ಲೂ ಇದ್ದಿತು. ಶ್ರೀಕಂಠಮೂರ್ತಿ ಎಂಬ ನಾಯಕ ನಟರು ಆಗಿನ ಕಾಲಕ್ಕೆ ಬಹಳ ಪ್ರಸಿದ್ಧರು ಹಾಗೂ ಜನಪ್ರಿಯರು. ನನಗೆ ನಾಯಕ ನಟನಾಗಿ ನಟಿಸುವ ಅವಕಾಶ ಬಂದಾಗ ನನ್ನ ನಟನೆಯನ್ನು ಅಪ್ಪಾಜಿ ಕಂಡು ನನ್ನನ್ನು ಕರೆದು “ಕಂದಾ, ನಿನ್ನ ನಾರದನ ಪಾತ್ರ ಕಂಡೆ ಚೆನ್ನಾಗಿತ್ತು. ಆದರೆ ನಿನ್ನ ಅಭಿನಯ ಕಂಡಾಗ ಶ್ರೀಕಂಠಮೂರ್ತಿಗಳನ್ನು ಅನುಕರಿಸುತ್ತಿದ್ದೀಯ ಅನ್ನಿಸಿತು! ಆದು ಬೇಡ. ನಿನ್ನ ಸ್ವಂತಿಕೆ ಇರಲಿ. ನಟನೆಯಾಗಲಿ, ಹಾಡುಗಾರಿಕೆಯಾಗಲಿ ನೀನು ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದೀಯೋ ಆತನನ್ನೇ ತನ್ಮಯತೆಯಿಂದ ಧ್ಯಾನಿಸಿ, ಅನುಭವಿಸಿ, ಅಭಿನಯಿಸು. ಅದರಲ್ಲಿ ಸಾರ್ಥಕತೆ ಕಾಣುವೆ. ಎಂದೂ ಸುಳ್ಳು ಹೇಳದಿರು, ಯಾರಿಗೂ ಮೋಸ ಮಾಡದಿರು, ಕಂಡವರ ಕಾಸಿಗೆ ಆಸೆ ಪಡದಿರು, ಬೇರೆಯವರ ಭಾಗ್ಯ ಕಂಡು ಅಸೂಯೆ ಪಡದಿರು. ಹೀಗೆ ಮಾಡಿದಾಗ ಮಾತ್ರ ಆ ಪರಮಾತ್ಮ ನಿನ್ನ ಜೊತೆಯಲ್ಲೇ ಇರುತ್ತಾನೆ. ಕೈ ಹಿಡಿದು ನಡೆಸುತ್ತಾನೆ!” ಎಂಬ ತಮ್ಮಲ್ಲಿ ಆಳವಾಗಿ ರೂಢಿಸಿಕೊಂಡಿದ್ದ ಅನುಭವಾಮೃತವನ್ನು ನನಗೆ ಸಿಂಪಡಿಸಿದರು. ಅವರ ಪ್ರತಿಪದವೂ ಇಂದೂ ನನ್ನ ಕಿವಿಯಲ್ಲಿ ಮೊಳಗುತ್ತಲೇ ಇದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದು, ಅವರ ಧ್ಯೇಯಗಳನ್ನೇ ನನ್ನ ಜೀವನದಲ್ಲೂ ರೂಢಿಸಿಕೊಂಡು ಬರುತ್ತಿರುವುದರಿಂದಲೇ ಇಂದು ಈ ’ರಾಜಕುಮಾರ’ ನಿಮ್ಮ ಮುಂದೆ ನಿಲ್ಲಲು, ನಟಿಸಲು ಕಾರಣ! ನಿಮ್ಮ ಅಭಿಮಾನದ ಮಹಾಪೂರವನ್ನು ಪಡೆಯಲು ಅರ್ಹನನ್ನಾಗಿಸಿದ ಹೂರಣ!
ಅಪ್ಪಾಜಿ ನುಡಿದಂತೆಯೇ ನಡೆಯಬಲ್ಲ ಶಕ್ತಿಯುಳ್ಳ ವ್ಯಕ್ತಿ ನನಗಾಗ 17-18 ವರ್ಷಗಳ ಪ್ರಾಯ. ನಾಟಕಗಳಲ್ಲಿ ಅಪ್ಪಾಜಿಯ ಪಾತ್ರಗಳೇ ಪ್ರಮುಖ ಆಕರ್ಷಣೆ. ಆದರೂ ಆಗ ಅವರಿಗೆ ನೀಡುತ್ತಿದ್ದ ಸಂಬಳ ಕೇವಲ 70 ರೂಪಾಯಿ. ಇತರ ಅನೇಕರಿಗೆ ಇನ್ನೂರರಿಂದ ಮುನ್ನೂರು! ನನಗೇಕೋ ಅಸಮಾಧಾನವಾಯಿತು. ಧೈರ್ಯಮಾಡಿ ಅಪ್ಪಾಜಿಯನ್ನು ಕೇಳಿಯೇ ಬಿಟ್ಟೆ, “ಅಪ್ಪಾಜಿ, ಸಂಬಳದಲ್ಲಿ ನಮಗೇಕೆ ಈ ತಾರತಮ್ಯ? ನಾವು ಮಾಡಿದ ಪಾಪವೇನು? ಅವರು ಮಾಡಿದ ಪುಣ್ಯವೇನು?” ಎಂದಾಗ ಅಪ್ಪಾಜಿ ಕೊಂಚ ವಿಚಲಿತರಾಗಿ “ಮುತ್ರಾಜೂ, ಇದೇ ಮೊದಲು, ಇದೇ ಕೊನೆ. ಈ ಅಲ್ಪಬುದ್ಧಿ ಬಿಟ್ಟುಬಿಡು! ಇದು ಎಂದೂ ನಿನ್ನ ಹತ್ತಿರ ಕೂಡಾ ಸುಳಿಯಬಾರದು!.. ದೇವರು ನಮ್ಮ ಪಾಲಿಗೆ ಏನು ಕೊಟ್ಟಿದ್ದಾನೋ ಅದನ್ನೇ ದೊಡ್ಡದು ಅಂತ ತಿಳ್ಕೊಬೇಕು! ಕಡುಬಡತನ ಕಾಡುತ್ತಿದ್ದರೂ ಅದರಲ್ಲೇ ತೃಪ್ತಿ ಸಂತೋಷ ಸುಖ ಕಾಣಬೇಕು!… ನಮ್ಮ ಕಷ್ಟಗಳಿಗೆ ದೇವರನ್ನೇ ಆಗಲಿ, ಬೇರೆ ಯಾರನ್ನೇ ಆಗಲಿ ದೂಷಿಸಬಾರದು! ಪಾಲಿಗೆ ಬಂದದ್ದು ಪಂಚಾಮೃತ! ಇನ್ನೊಬ್ಬರು ಚೆನ್ನಾಗಿದ್ದಾರೆ ಎಂದರೆ ಅವರು ’ಯೋಗಿ’…. ನಾವು ಕಷ್ಟಸ್ಥಿತಿಯಲ್ಲಿದ್ದೇವೆ ಎಂದರೆ, ನಾವು ’ಜೋಗಿ’!.. ಯೋಗಿ ಪಡೆದದ್ದು ಯೋಗಿಗೆ, ಜೋಗಿ ಪಡೆದದ್ದು ಜೋಗಿಗೆ!” ಎಂದು ನನಗೆ ಜ್ಞಾನೋದಯ ನೀಡಿದರು. ಈ ಅಮರ ಸಂದೇಶವನ್ನೇ ನಮ್ಮ “ಸಮಯದ ಗೊಂಬೆ” ಚಿತ್ರದ ಕಡೆಯ ವಾಕ್ಯವಾಗಿ ನುಡಿದೆ. ಅದು ನನ್ನ ನುಡಿಗಳಲ್ಲ, ನನ್ನ ಪಿತೃ-ಗುರು-ದೈವ ಅಪ್ಪಾಜಿಯದು!… ಅಂತಹ “ಅಪ್ಪಾಜಿ”ಯನ್ನು ಪಡೆದ ನಾನು ಧನ್ಯ.
ಈ ಬರಹವನ್ನು ಅಕ್ಟೋಬರ್ 1996ರಲ್ಲಿ ಪ್ರಕಟವಾಗಿದ್ದ, ಬೆಳ್ಳಿತೆರೆ-61 (ಸಂಪಾದಕ: ಜಿ.ಎಂ.ಆರ್. ಆರಾಧ್ಯ) ಸಂಚಿಕೆಯಿಂದ ಆಯ್ದುಕೊಳ್ಳಲಾಗಿದೆ.


