ಕೇರಳದ ನಿಲಂಬೂರ್‌ನ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಬಂಡಾಯ ಶಾಸಕ ಪಿವಿ ಅನ್ವರ್ ಅವರು ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಅಕ್ಟೋಬರ್ 6ರ ಭಾನುವಾರದಂದು ‘ಡೆಮಾಕ್ರಟಿಕ್ ಮೂವ್‌ಮೆಂಟ್ ಕೇರಳ’ (ಡಿಎಂಕೆ) ಎಂಬ ತಮ್ಮ ‘ಸಾಮಾಜಿಕ ಚಳುವಳಿ’ಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.
ಆಡಳಿತ ಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಒಲವು ಹೊಂದಿರುವ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜನರು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು ಹೋಲುವ ಧ್ವಜ ಮತ್ತು ಸ್ಕಾರ್ಫ್‌ಗಳನ್ನು ಧರಿಸಿದ್ದರು. ಗಮನಾರ್ಹವಾಗಿ, ಈ ಹಿಂದೆ ಅನ್ವರ್ ಅವರು ದ್ರಾವಿಡ ಪಕ್ಷಕ್ಕೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿ ಪತ್ರ ಬರೆದಿದ್ದರು.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅನ್ವರ್, “ಪೊಲೀಸರು ಉದ್ದೇಶಪೂರ್ವಕವಾಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ನಮ್ಮ ಬೆಂಬಲಿಗರ ವಾಹನಗಳನ್ನು ತಡೆದಿದ್ದಾರೆ. ಅವರು ಸಾಧ್ಯವಾಗುವ ಎಲ್ಲಾ ರೀತಿಯಲ್ಲೂ ನಮ್ಮ ಕಾರ್ಯಕ್ರಮ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಡಿಎಂಕೆ ಪಕ್ಷದ ರಾಜ್ಯ ಪದಾಧಿಕಾರಿಗಳ ಮನೆಗೆ ಭೇಟಿ ನೀಡಿ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿರುವ ಬಗ್ಗೆ ಪ್ರಶ್ನಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ವರ್, “ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಲು ಹೋಗಿದ್ದು ರಾಜಕೀಯ ಪಕ್ಷ ಪ್ರಾರಂಭಿಸಲು ಅಲ್ಲ, ಬದಲಾಗಿ ಚಳವಳಿಗೆ ಅವರ ಆಶೀರ್ವಾದ ಪಡೆಯಲು ಎಂದಿದ್ದಾರೆ. ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅನ್ವರ್, ಡಿಎಂಕೆ ಭಾರತದಲ್ಲಿ ಅತ್ಯಂತ ಜಾತ್ಯತೀತ ಪ್ರಜಾಪ್ರಭುತ್ವ ಪಕ್ಷವಾಗಿರುವ ಕಾರಣ ನಾನು ಸ್ಟಾಲಿನ್ ಅವರನ್ನು ಭೇಟಿ ಮಾಡಲು ಹೋಗಿದ್ದೆ, ಈ ನಡುವೆ ಸಿಪಿಐ(ಎಂ)ನ ಒಬ್ಬ ವ್ಯಕ್ತಿ ಸ್ಟಾಲಿನ್ ಅವರನ್ನು ಭೇಟಿಯಾಗಿ, ನನ್ನ ವಿರುದ್ಧ ಹೇಳಿಕೆ ನೀಡುವಂತೆ ಕೋರಿದ್ದಾರೆ” ಎಂದು ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ಸ್ಟಾಲಿನ್ ಅವರು ಅನ್ವರ್ ಅವರನ್ನು ಭೇಟಿಗೆ ನಿರಾಕರಿಸಿದ್ದಾರೆ.
“ಲೋಕಸಭೆ ಚುನಾವಣೆಯ ಸಂದರ್ಭ ಕೊಯಮತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ ಅಣ್ಣಾಮಲೈ ವಿರುದ್ಧ ಸ್ಪರ್ಧಿಸಲು ಡಿಎಂಕೆ ಸಿಪಿಐನ ಸೀಟು ಕಿತ್ತುಕೊಂಡಿದ್ದಕ್ಕೆ ತ್ರಿಶೂರ್‌ನಲ್ಲಿ ಬಿಜೆಪಿ ಗೆಲುವಿಗೆ ಕೇರಳ ಮುಖ್ಯಮಂತ್ರಿಯೇ ದಾರಿ ಮಾಡಿಕೊಟ್ಟಿದ್ದಾರೆ ಎಂದು ಪಿಣರಾಯಿ ವಿಜಯನ್‌ರ ಹೆಸರನ್ನು ಉಲ್ಲೇಖಿಸದೆ ಅನ್ವರ್ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ಉಪಚುನಾವಣೆಗೆ ಬಿಜೆಪಿ ಮತ್ತು ಸಿಪಿಎಂ ನಡುವೆ ಒಳ ಒಪ್ಪಂದ ಆಗಿದೆ. ಸಿಪಿಐ(ಎಂ) ನೆರವಿನಿಂದ ಪಾಲಕ್ಕಾಡ್ ಕ್ಷೇತ್ರವನ್ನು ಬಿಜೆಪಿ ಭದ್ರಪಡಿಸಿಕೊಳ್ಳಲಿದೆ ಮತ್ತು ಚೇಲಕ್ಕರಾದಲ್ಲಿ ಬಿಜೆಪಿ ಸಿಪಿಐಎಂಗೆ ಮತ ಹಾಕಲಿದೆ” ಎಂದಿದ್ದಾರೆ. ಡಿಎಂಕೆ ಮತ್ತು ಸ್ಟಾಲಿನ್ ಅವರನ್ನು ಅನ್ವರ್ ಹಾಡಿ ಹೊಗಲಿದ್ದಾರೆ.
“ತ್ರಿಶೂರ್ ಪೂರಂ ವೇಳೆ ಉದ್ದೇಶಪೂರ್ವಕವಾಗಿ ವಿವಾದ ಎಬ್ಬಿಸಿದ್ದು ಎಡಿಜಿಪಿ ಅಜಿತ್ ಕುಮಾರ್. ನಾನು ತ್ರಿಶೂರ್ ಪೂರಂ ಸಮಯದಲ್ಲಿ ನಡೆದ ತಂತ್ರಗಳನ್ನು ಎತ್ತಿ ತೋರಿಸಿದೆ. ಅದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದೆ. ಆದರೆ, ಎಡಿಜಿಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಿಎಂ ಸಿದ್ಧರಿರಲಿಲ್ಲ” ಎಂದು ಹೇಳಿದ್ದಾರೆ.
ತನ್ನ ಹೊಸ ಆಂದೋಲನದ ಪ್ರಣಾಳಿಕೆಯನ್ನು ಅನ್ವರ್ ಬಿಡುಗಡೆ ಮಾಡಿದ್ದು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ವಾಭಿಮಾನ ಮತ್ತು ಫೆಡರಲಿಸಂಗೆ ಒತ್ತು ನೀಡುವ ಮೂಲಕ ಡಿಎಂಕೆ ಪ್ರಣಾಳಿಕೆಗೆ ಸಾಮ್ಯತೆ ಇರುವ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಮಲಬಾರ್ ಪ್ರದೇಶವನ್ನು ದೀರ್ಘಕಾಲದಿಂದ ನಿರ್ಲಕ್ಷಿಸಲಾಗಿದೆ ಎಂದು ಪ್ರಣಾಳಿಕೆಯಲ್ಲಿ ಒತ್ತಿ ಹೇಳಿರುವ ಅನ್ವರ್ ಅವರು, ಕೇರಳದ 14 ಜಿಲ್ಲೆಗಳ ಜೊತೆಗೆ ಹೊಸ ಜಿಲ್ಲೆಯ ರಚನೆ, ಜಾತಿ ಜನ ಗಣತಿ ನಡೆಸುವುದು, ವಲಸೆ ನಿವಾಸಿಗಳಿಗೆ ಮತದಾನದ ಹಕ್ಕು ನೀಡುವುದು, ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನ, ಶಾಲಾ ಅವಧಿ ಕಡಿತಗೊಳಿಸುವುದು, ಕೃಷಿ ಬಜೆಟ್, ಕೃಷಿ ಪ್ರವಾಸೋದ್ಯಮ ಸೇರಿದಂತೆ ಹಲವು ವಿಷಯಗಳ ಭರವಸೆ ನೀಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಒನ್ ನೇಷನ್ ಒನ್ ಎಲೆಕ್ಷನ್‌ನಂತಹ ಫೆಡರಲಿಸಂ ಅನ್ನು ನಾಶಪಡಿಸುವ ಕೇಂದ್ರ ಸರ್ಕಾರದ ನೀತಿಗಳನ್ನು ಅವರು ವಿರೋಧಿಸಿದ್ದಾರೆ.
ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳನ್ನು ವಿಭಜಿಸಿ 15ನೇ ಜಿಲ್ಲೆ ರಚಿಸುವ ಪ್ರಸ್ತಾಪವನ್ನು ಅನ್ವರ್ ಮುಂದಿಟ್ಟಿದ್ದಾರೆ. ಕೇರಳ ಡೆಮಾಕ್ರಟಿಕ್ ಮೂವ್‌ಮೆಂಟ್ (ಡಿಎಂಕೆ) ರಾಜಕೀಯ ಪಕ್ಷ ಅಲ್ಲ ಎಂದಿದ್ದಾರೆ. ಆದರೆ, ಅನ್ವರ್ ಅವರು ಡಿಎಂಕೆ ಮತ್ತು ಎಂ.ಕೆ ಸ್ಟಾಲಿನ್ ಅವರನ್ನು ಹೊಗಳುವುದು ನೋಡಿದ್ರೆ, ತಮಿಳುನಾಡಿನ ಡಿಎಂಕೆಯನ್ನು ಕೇರಳಕ್ಕೆ ವಿಸ್ತರಿಸಿರುವ ಎಲ್ಲಾ ಲಕ್ಷಣ ಕಾಣುತ್ತಿದೆ.
ಇದನ್ನೂ ಓದಿ : ಬಹುಜನರಿಗೆ ಹಕ್ಕುಗಳನ್ನು ನೀಡುವ ಸಂವಿಧಾನವನ್ನು ಕಾಂಗ್ರೆಸ್ ರಕ್ಷಿಸುತ್ತದೆ : ರಾಹುಲ್ ಗಾಂಧಿ


