ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳ ಫಲಿತಾಂಶ ಇಂದು (ಅ.8) ಹೊರ ಬೀಳಲಿದ್ದು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಮತದಾನ ನಡೆದರೆ, ಹರಿಯಾಣದಲ್ಲಿ ಅಕ್ಟೋಬರ್ 5 ರಂದು ಒಂದೇ ಹಂತದಲ್ಲಿ ಜನರು ಮತ ಚಲಾಯಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18 ರಂದು ಮೊದಲ ಹಂತದಲ್ಲಿ 61.38 ಶೇಕಡಾ ಮತದಾನವಾಗಿದೆ, ನಂತರ ಸೆಪ್ಟೆಂಬರ್ 25 ರಂದು ಎರಡನೇ ಹಂತದಲ್ಲಿ 57.31 ಶೇಕಡಾ ಮತ್ತು ಅಕ್ಟೋಬರ್ 1ರಂದು ಅಂತಿಮ ಹಂತದಲ್ಲಿ 65.48ರಷ್ಟು ಮತದಾನವಾಗಿದೆ.
10 ವರ್ಷಗಳ ಬಳಿಕ, 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಇದು ಮೊದಲನೆಯ ಚುನಾವಣೆಯಾಗಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯ ರದ್ದತಿಯ ಬಳಿಕ ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಇಂಡಿಯಾ ಒಕ್ಕೂಟದ ಜೊತೆಯೇ ಗುರುತಿಸಿಕೊಂಡಿರುವ ಮತ್ತೊಂದು ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಏಕಾಂಗಿಯಾಗಿ ಸ್ಪರ್ಧಿಸಿದೆ.
370ನೇ ವಿಧಿಯ ರದ್ದತಿ, ಸಂಪೂರ್ಣ ರಾಜ್ಯತ್ವದ ಮರುಸ್ಥಾಪನೆ, ನಿರುದ್ಯೋಗ ಈ ಬಾರಿಯ ಚುನಾವಣೆಯ ಪ್ರಮುಖ ವಿಷಯಗಳಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಗಂದೇರ್ಬಲ್ ಮತ್ತು ಬುದ್ಗಾಮ್‌ನಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಉಮರ್ ಅಬ್ದುಲ್ಲಾ, ಬಿಜ್‌ಬೆಹರಾದಿಂದ ಸ್ಪರ್ಧಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ, ಕುಪ್ವಾರ ಮತ್ತು ಹಂದ್ವಾರದಿಂದ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಾಜದ್ ಲೋನ್, ನೌಶೇರಾದಿಂದ ಬಿಜೆಪಿಯ ರವೀಂದರ್ ರೈನಾ, ನಗ್ರೋಟಾದಿಂದ ಬಿಜೆಪಿಯ ರಾಣಾ ಸಿಂಗ್ ದೇವೇಂದ್ರ ರೈನಾ, ಸೆಂಟ್ರಲ್ ಶಾಲ್ತೆಂಗ್‌ನಿಂದ ಕಾಂಗ್ರೆಸ್‌ನ ತಾರಿಕ್ ಹಮೀದ್ ಕರ್ರಾ ಮತ್ತು ಚನ್ನಪೋರಾದಿಂದ ಸ್ಪರ್ಧಿಸಿರುವ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ಮುಖ್ಯಸ್ಥ ಸೈಯದ್ ಮೊಹಮ್ಮದ್ ಅಲ್ತಾಫ್ ಬುಖಾರಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಹರಿಯಾಣದಲ್ಲೂ ಇಂದು ಮತ ಎಣಿಕೆ
ಹರಿಯಾಣದಲ್ಲಿ ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಶೇ.67.9ರಷ್ಟು ಮತದಾನವಾಗಿದೆ. ಇಲ್ಲಿ 2014 ರಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ವರದಾನವಾಗುವ ಸಾಧ್ಯತೆ ಇದೆ. ಬಿಜೆಪಿ ತನ್ನ ಎರಡನೇ ಅವಧಿಯ ಮಧ್ಯದಲ್ಲಿ ಹಿರಿಯ ನಾಯಕ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದು ಪಕ್ಷದಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿದೆ ಎಂದೂ ಹೇಳಲಾಗ್ತಿದೆ. ಇವೆಲ್ಲವೂ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ರೈತ ಹೋರಾಟ ಹರಿಯಾಣ ಚುನಾವಣೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯದ ರೈತ ಸಮುದಾಯಕ್ಕೆ ಬಿಜೆಪಿ ವಿರುದ್ದ ದೊಡ್ಡ ಅಸಮಾಧಾನವಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ನಡೆದ ರೈತ ಹೋರಾಟಗಳಲ್ಲಿ ಹರಿಯಾಣದ ರೈತರೇ ಮುಂಚೂಣಿಯಲ್ಲಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ರೈತ ಹೋರಾಟದ ಬಿಸಿ ತಟ್ಟಿತ್ತು.
ಈ ಬಾರಿಯ ಚುನಾವಣೆಯಲ್ಲಿ ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರದಲ್ಲಿ ಬಿಜೆಪಿಯ ಮಂಜು ಹೂಡಾ ವಿರುದ್ಧ ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ, ಲಾಡ್ವಾದಲ್ಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಮೇವಾ ಸಿಂಗ್, ಜೂಲಾನಾದಲ್ಲಿ ಕಾಂಗ್ರೆಸ್‌ನ ವಿನೇಶ್ ಫೋಗಟ್ ಮತ್ತು ಬಿಜೆಪಿಯ ಕ್ಯಾಪ್ಟನ್ ಯೋಗೇಶ್, ಬೈರಾಗಿ ಮತ್ತು ಉಚ್ಚನ ಕಾಲನ್‌ನಲ್ಲಿ ಕಾಂಗ್ರೆಸ್‌ನ ಬ್ರಿಜೇಂದ್ರ ಸಿಂಗ್ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ
ಜಮ್ಮು ಕಾಶ್ಮೀರ ಮತ್ತು ಹರಿಯಾಣ ಎರಡೂ ಕಡೆಯೂ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಒಟ್ಟು 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ 50-58 ಸ್ಥಾನಗಳೊಂದಿಗೆ ಕಾಂಗ್ರೆಸ್ ಆರಾಮದಾಯಕ ಬಹುಮತ ಪಡೆಯುವ ಸಾಧ್ಯತೆ ಇದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಹೇಳಿದರೂ, ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿವೆ. ಇಲ್ಲಿ ಲೆಫ್ಟಿನೆಂಟ್ ಗವರ್ನರ್ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಮುಂದಾಗಿರುವುದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಆದರೆ, ಐವರ ನಾಮನಿರ್ದೇಶನ ಸಂವಿಧಾನ ವಿರೋಧಿ, ಒಂದು ನಾಮನಿರ್ದೇಶನ ಮಾಡಿದರೆ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ವಿವಿಧ ಪಕ್ಷಗಳು ಎಚ್ಚರಿಕೆ ನೀಡಿವೆ.
ಇದನ್ನೂ ಓದಿ : ಜಮ್ಮು ಕಾಶ್ಮೀರ ವಿಧಾನಸಭೆಗೆ ಐವರ ನಾಮನಿರ್ದೇನಕ್ಕೆ ಮುಂದಾದ ಲೆ. ಗವರ್ನರ್ : ಕೋರ್ಟ್ ಮೆಟ್ಟಿಲೇರಿವುದಾಗಿ ಎಚ್ಚರಿಸಿದ ಪಕ್ಷಗಳು


