ಕಾಂಗ್ರೆಸ್ ಅನ್ನು ಬೇಜವಾಬ್ದಾರಿ ಪಕ್ಷ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ, ಹಿಂದೂಗಳನ್ನು ವಿಭಜಿಸಲು ಮತ್ತು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಲು ಬಯಸುತ್ತಿರುವ “ದ್ವೇಷವನ್ನು ಹರಡುವ” ಕಾರ್ಖಾನೆ ಎಂದು ಬುಧವಾರ ಹೇಳಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿ ಯೋಜನೆಯನ್ನು ಆನ್‌ಲೈನ್ ಮೂಲಕ ಉದ್ಘಾಟಿಸುವ ವೇಳಿ ಈ ಹೇಳಿಕೆ ನೀಡಿರುವ ಅವರ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ”ರಾಜಕೀಯ ಭಾಷಣ” ಮಾಡಿದ್ದಾರೆ ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮೋದಿ ಈ ಹೇಳಿಕೆಗಳ ವಿರುದ್ಧ ತಿರುಗೇಟು ನೀಡಿರುವ ಕಾಂಗ್ರೆಸ್, ತೆರಿಗೆದಾರರ ಹಣವನ್ನು “ರಾಜಕೀಯ ಭಾಷಣ” ದಲ್ಲಿ ತೊಡಗಿಸಿಕೊಳ್ಳಬಾರದು ಎಂದು ಹೇಳಿದೆ. ರಾಜಕೀಯ ಭಾಷಣ ಮಾಡಲು ಮತ್ತು ಪ್ರತಿಪಕ್ಷಗಳ ಮೇಲೆ ದಾಳಿ ಮಾಡಲು ಪ್ರಧಾನಿ ಮೋದಿ ಸರ್ಕಾರಿ ವೇದಿಕೆ ಮತ್ತು ಸರ್ಕಾರಿ ಕಾರ್ಯಕ್ರಮವನ್ನು ಏಕೆ ಬಳಸಬೇಕು? ಎಂದು ಕೇಳಿದೆ.
ಇದನ್ನೂಓದಿ: ರಾಹುಲ್ ಗಾಂಧಿ ಪೌರತ್ವ ವಿವಾದ: ದಾಖಲೆ ಸಲ್ಲಿಸಲು ಸುಬ್ರಮಣಿಯನ್ ಸ್ವಾಮಿಗೆ ಸಮಯಾವಕಾಶ ನೀಡಿದ ದೆಹಲಿ ಹೈಕೋರ್ಟ್
ಬುಧವಾರ ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ದೇಶದ ಮನಸ್ಥಿತಿಯನ್ನು ತೋರಿಸುತ್ತದೆ. “ಮಹಾರಾಷ್ಟ್ರದಲ್ಲಿ ಕೂಡಾ ನಾವು ದೊಡ್ಡ ಗೆಲುವು ಪಡೆಯಬೇಕು” ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಅಧಿಕಾರ ಪಡೆಯಲು ಮಹಾರಾಷ್ಟ್ರವನ್ನು ದುರ್ಬಲಗೊಳಿಸಲು ಬಯಸಿದೆ, ಆದರೆ ಆಡಳಿತಾರೂಢ ಮಹಾಯುತಿಯು ರಾಜ್ಯವನ್ನು ಬಲಪಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಯೋಜನೆಗಳ ಈ ರೀತಿಯ ತ್ವರಿತ ಅಭಿವೃದ್ಧಿಯನ್ನು ಮಹಾರಾಷ್ಟ್ರ ಹಿಂದೆಂದೂ ಕಂಡಿರಲಿಲ್ಲ ಎಂದು ಪ್ರತಿಪಾದಿಸಿದ ಮೋದಿ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ಅದೇ ವೇಗ ಇತ್ತು ಎಂದು ಹೇಳಿದ್ದಾರೆ. “ಕಾಂಗ್ರೆಸ್ ಬೇಜವಾಬ್ದಾರಿ ಪಕ್ಷವಾಗಿದ್ದು, ಅದು ದ್ವೇಷವನ್ನು ಹರಡುವ ಕಾರ್ಖಾನೆಯಾಗಿದೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಮತ್ತು ಪರಂಪರೆಯ ಬಗ್ಗೆ ಕಾಳಜಿಯಿಲ್ಲ, ಆದರೆ ನಾವು ಎರಡಕ್ಕೂ ಗಮನ ಹರಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಅಭಿವೃದ್ಧಿಯೊಂದಿಗೆ ವಿಕ್ಷಿತ್ ಭಾರತ್ ನಮ್ಮ ಗುರಿಯಾಗಿದೆ. ಕಾಂಗ್ರೆಸ್ ಮುಸ್ಲಿಮರಲ್ಲಿ ಭಯವನ್ನು ಹುಟ್ಟುಹಾಕುತ್ತದೆ ಮತ್ತು ಅವರನ್ನು ತನ್ನ ಮತಬ್ಯಾಂಕ್ ಆಗಿ ಪರಿವರ್ತಿಸುತ್ತದೆ. ಅದು ಹಿಂದೂಗಳನ್ನು ವಿಭಜಿಸಲು ಮತ್ತು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಲು ಬಯಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂಓದಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಎಎಪಿ
ಪ್ರಧಾನಿಯವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು “ರಾಜಕೀಯ ಭಾಷಣ ಮಾಡಲು ಮತ್ತು ಪ್ರತಿಪಕ್ಷಗಳ ಮೇಲೆ ದಾಳಿ ಮಾಡಲು ಪ್ರಧಾನಿ ಕಚೇರಿಯು ಸರ್ಕಾರಿ ವೇದಿಕೆ ಮತ್ತು ಸರ್ಕಾರಿ ಕಾರ್ಯಕ್ರಮವನ್ನು ಏಕೆ ಬಳಸಬೇಕು?” ಎಂದು ಕೇಳಿದ್ದಾರೆ.
“ತೆರಿಗೆದಾರರ ಹಣವನ್ನು ರಾಜಕೀಯ ಭಾಷಣದಲ್ಲಿ ತೊಡಗಿಸಿಕೊಳ್ಳಲು ಬಳಸಬಾರದು. ಅದಕ್ಕಾಗಿ ಅವರು ಬಿಜೆಪಿಯ ವೇದಿಕೆಯನ್ನು ಬಳಸಬೇಕು” ಎಂದು ಪವನ್ ಖೇರಾ ಹೇಳಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಹಾರಾಷ್ಟ್ರದಲ್ಲಿ 7,600 ಕೋಟಿ ರೂ.ಗಿಂತ ಹೆಚ್ಚಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆನ್‌ಲೈನ್ ಮೂಲಕ ಶಂಕುಸ್ಥಾಪನೆ ಮಾಡಿದ್ದಾರೆ.
ವಿಡಿಯೊ ನೋಡಿ: ದಲಿತರಿಗೆ ಅಧಿಕಾರ ಸಿಕ್ಕಾಗ ಕೇಳುವಷ್ಟು ಪ್ರಶ್ನೆಗಳನ್ನು ಬೇರೆಯವರಿಗೆ ಸಿಕ್ಕಾಗ ಕೇಳಲ್ಲ: ಹೆಚ್.ಡಿ. ಉಮಾಶಂಕರ


