ಬಾಕಿ ಕೂಲಿ ಕೇಳಿದ್ದಕ್ಕೆ ಪ್ರಬಲ ಜಾತಿಯ ಗುಂಪೊಂದು ದಲಿತ ಕಾರ್ಮಿಕನಿಗೆ ಅಮಾನುಷವಾಗಿ ಥಳಿಸಿ, ದೇಹದ ಮೇಲೆ ಉಗುಳಿ, ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಬಿಹಾರದ ಮುಝಾಫರ್‌ಪುರದಲ್ಲಿ ನಡೆದಿದೆ.
ಸಂತ್ರಸ್ತ ಮೂವರ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಮುಝಾಫರ್‌ಪುರದ ಬೋಚಹಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.
ಪ್ರಾಥಮಿಕ ತನಿಖೆಯಲ್ಲಿ ದೂರುದಾರನಿಗೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿರುವುದು ದೃಢಪಟ್ಟಿದೆ. ಆದರೆ, ದೇಹದ ಮೇಲೆ ಉಗುಳಿ, ಮೂತ್ರ ವಿಸರ್ಜಿಸಿರುವ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
“ರಮೇಶ್ ಪಟೇಲ್ ಎಂಬವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ಕಾರ್ಮಿಕ ರಿಂಕು ಮಾಂಜಿಗೆ ಸಂಬಂಧಿಸಿದ ದೂರನ್ನು ನಾವು ಸ್ವೀಕರಿಸಿದ್ದೇವೆ. ಅಕ್ಟೋಬರ್ 4 ರಂದು ನಡೆದ ಘಟನೆಯ ಬಗ್ಗೆ ಬೋಚಹಾ ಪೊಲೀಸ್ ಠಾಣೆಗೆ ಅಕ್ಟೋಬರ್ 8 ರಂದು ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ರಮೇಶ್ ಪಟೇಲ್ ಎಂಬಾತ ದೂರುದಾರ ರಿಂಕು ಮಾಂಜಿಗೆ ಜಾತಿ ನಿಂದನೆ ಮಾಡಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ” ಎಂದು ಮುಝಾಫರ್‌ಪುರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾ ಸಾಗರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ದೂರಿನ ಪ್ರಕಾರ, ಕಾರ್ಮಿಕ ರಿಂಕು ಮಾಂಜಿ ತನ್ನ ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳಾದ ರಮೇಶ್ ಪಟೇಲ್, ಅರುಣ್ ಪಟೇಲ್ ಮತ್ತು ಗೌರವ್ ಪಟೇಲ್ ಅವರನ್ನು ಅಡ್ಡಗಟ್ಟಿದ್ದಾರೆ. ಸುಖಾಸುಮ್ಮನೆ ಆತನ ಮೇಲೆ ಹಲ್ಲೆ ನಡೆಸಿ, ಉಗುಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ನೆಲಕ್ಕೆ ಕೆಡವಿ ಆರೋಪಿ ಗೌರವ್ ಪಟೇಲ್ ರಿಂಕು ದೇಹದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ವರದಿಯಾಗಿದೆ.
ರಿಂಕು ಸಿಂಗ್ ಆರೋಪಿಗಳ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ. ದುರ್ಗಾಪೂಜೆಯ ಕಾರಣ ಎರಡು ದಿನಗಳ ಬಾಕಿ ಸಂಬಳ ಕೇಳಿದ್ದ. ಈ ಕಾರಣಕ್ಕೆ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ದೂರು ದಾಖಲಿಸಿದಾಗಿನಿಂದ ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಮನೆಗೆ ಮರಳಲೂ ತುಂಬಾ ಭಯವಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿದ್ದರೂ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ. ಆದರೆ, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ರಿಂಕು ಮಾಂಜಿ ಹೇಳಿಕೊಂಡಿದ್ದಾರೆ.
ರಿಂಕು ಮಾಂಜಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದೇವೆ ಎಂದು ಬೋಚಹಾನ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ರಾಕೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡು | ಸ್ಯಾಮ್‌ಸಂಗ್ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಕೆ; 10 ಕಾರ್ಮಿಕರ ಬಂಧನ


