ಕೇಂದ್ರ ಬಿಜೆಪಿ ಸರ್ಕಾರದ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆಯನ್ನು ಸಂವಿಧಾನ ವಿರೋಧಿ ಎಂದು ಬಣ್ಣಿಸಿ, ಅದನ್ನು ಜಾರಿಗೊಳಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಕೇರಳ ವಿಧಾನಸಭೆಯು ಗುರುವಾರ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ್ ಮಂಡಿಸಿದ ನಿರ್ಣಯದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಸಲ್ಲಿಸಿದ ಪ್ರಸ್ತಾವನೆಯನ್ನು ಟೀಕಿಸಿದೆ. ಇದು “ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿ”ಯನ್ನು ಪ್ರತಿಬಿಂಬಿಸುತ್ತಿದ್ದು, ಸಾಂವಿಧಾನಿಕ ಮೌಲ್ಯಗಳಿಗೆ ವಿರೋಧವಾಗಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ” ಎಂದು ವಿವರಿಸಲಾಗಿದೆ.
“ಈ ಪ್ರಸ್ತಾಪವನ್ನು ದೇಶದ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ವೈವಿಧ್ಯತೆಯನ್ನು ನಾಶಮಾಡುವ ಕೆಟ್ಟ ತಂತ್ರವೆಂದು ಪರಿಗಣಿಸಲಾಗಿದೆ” ಎಂದು ನಿರ್ಣಯವು ಹೇಳಿದೆ.
ಸಮಿತಿಯು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಪ್ರಸ್ತಾಪಿಸಿದೆ. ನಂತರ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುವುದಾಗಿ ಯೋಜಿಸಿದೆ.
ಪ್ರಸ್ತಾವನೆಯನ್ನು ಜಾರಿಗೊಳಿಸಿದರೆ ಅಧಿಕಾರವನ್ನು ಕೇಂದ್ರೀಕರಿಸಿ ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾದ ಪ್ರಕಾರ ಏಕೀಕೃತ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ನಿರ್ಣಯವು ಎಚ್ಚರಿಸಿದೆ.
“ಪ್ರಸ್ತಾವನೆಯು ಅನುಷ್ಠಾನಗೊಂಡರೆ, ರಾಜ್ಯ ಶಾಸಕಾಂಗ ಸಭೆಗಳ ಅಧಿಕಾರವನ್ನು ದುರ್ಬಲಗೊಳಿಸುತ್ತದೆ. ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸುತ್ತವೆ, ಅವು ಅಪ್ರಸ್ತುತವಾಗುತ್ತದೆ. ಆ ಮೂಲಕ ಅಧಿಕಾರದ ವಿಕೇಂದ್ರೀಕರಣವನ್ನು ಅಡ್ಡಿಪಡಿಸುತ್ತದೆ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸುತ್ತದೆ” ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.
ಕೇವಲ ‘ವೆಚ್ಚದ ಮಸೂರ’ದ ಮೂಲಕ ಚುನಾವಣೆಗಳನ್ನು ನೋಡುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ವೆಚ್ಚವನ್ನು ಮೊಟಕುಗೊಳಿಸಲು ಮತ್ತು ಆಡಳಿತವನ್ನು ಸುಗಮಗೊಳಿಸಲು ಸರಳವಾದ ಕ್ರಮಗಳು ಲಭ್ಯವಿದೆ ಎಂದು ಅದು ಸೂಚಿಸಿದೆ.
“ಪ್ರಸ್ತಾವನೆಯು ಸಂವಿಧಾನದ ಮೂಲಭೂತ ಅಂಶವಾದ ಫೆಡರಲಿಸಂ ಅನ್ನು ಅಡ್ಡಿಪಡಿಸುತ್ತದೆ ಮತ್ತು ರಾಜ್ಯಗಳು ಅನುಭವಿಸುವ ಅಧಿಕಾರವನ್ನು ಉಲ್ಲಂಘಿಸುತ್ತದೆ. ಇದು ಸಾರ್ವಜನಿಕರ ಸಾರ್ವಭೌಮತ್ವಕ್ಕೂ ಸವಾಲೊಡ್ಡುತ್ತದೆ” ಎಂದು ನಿರ್ಣಯವನ್ನು ಮುಕ್ತಾಯಗೊಳಿಸಲಾಗಿದೆ.
ಇದನ್ನೂ ಓದಿ; ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಕಿರಿಯರ ಪ್ರತಿಭಟನೆ ಬೆಂಬಲಿಸಿ 100ಕ್ಕೂ ಹೆಚ್ಚು ಹಿರಿಯ ವೈದ್ಯರಿಂದ ರಾಜೀನಾಮೆ


