ಮಹಿಳೆಯೊಬ್ಬರಿಗೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಕಂಪನಿಯಿಂದ ವಜಾಗೊಳಿಸಲಾಗಿದ್ದು, ಆತನ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ವಸ್ತ್ರಧಾರಣೆಯ ವಿಷಯವನ್ನು ಮುಂದಿಟ್ಟಕೊಂಡು ನಿಕಿತ್ ಶೆಟ್ಟಿ ಎಂಬಾತ ಪತ್ರಕರ್ತ ಶಹಬಾಝ್ ಅನ್ಸಾರ್ ಎಂಬವರ ಪತ್ನಿಗೆ ಆ್ಯಸಿಡ್ ಎರಚುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದ.
ಈ ವಿಷಯವನ್ನು ಸ್ಕ್ರೀನ್ ಶಾಟ್ ಸಹಿತ ಎಕ್ಸ್‌ನಲ್ಲಿ ಬರೆದುಕೊಂಡಿದ್ದ ಪತ್ರಕರ್ತ ಶಹಬಾಝ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದರು. ಆತನ ವಿರುದ್ದ ತಕ್ಷಣ ಕ್ರಮ ಕೈಗೊಂಡು ಯಾವುದೇ ದುರ್ಘಟನೆ ನಡೆಯದಂತೆ ತಡೆಯಿರಿ ಎಂದು ಕೋರಿದ್ದರು.
This is serious. @DgpKarnataka @CMofKarnataka @DKShivakumar . This person is threatening to throw acid on my wife's face for her choice of clothes. Please take immediate action against this person to prevent any incident from happening. pic.twitter.com/N6fxS59Kqm
— Shahbaz Ansar (@ShahbazAnsar_) October 9, 2024
ಶಹಬಾಝ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದ ಪೊಲೀಸರು, ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದರು. ಅನೇಕ ಜನರು ಶಹಬಾಝ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ನಿಕಿತ್ ಶೆಟ್ಟಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಆತ ಕೆಲಸ ಮಾಡುತ್ತಿರುವ ಕಂಪನಿಯಿಂದ ತೆಗೆದು ಹಾಕುವಂತೆ ಆಗ್ರಹಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಉಲ್ಲೇಖಿಸಿ ಚರ್ಚೆ ಹೆಚ್ಚಾಗುತ್ತಿದ್ದಂತೆ ಇನ್‌ಸ್ಟಾಗ್ರಾಂ ಮೂಲಕ ಪ್ರತಿಕ್ರಿಯಿಸಿರುವ ಇಟಿಯೋಸ್ ಸರ್ವಿಸಸ್ ಎಂಬ ನಿಕಿತ್ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿ, ಆತನನ್ನು ಕೆಲಸದಿಂದ ವಜಾಗೊಳಿಸಿ ಪೊಲೀಸ್ ದೂರು ದಾಖಲಿಸಿರುವುದಾಗಿ ತಿಳಿಸಿದೆ.
View this post on Instagram
ಕಂಪನಿಯ ಕ್ಷಿಪ್ರ ಕ್ರಮಕ್ಕೆ ಅನೇಕರು ಧನ್ಯವಾದ ಹೇಳಿದ್ದಾರೆ. ಈ ಕುರಿತು ಬರೆದುಕೊಂಡಿರುವ ಶಹಬಾಝ್ ” “ನನ್ನ ಪತ್ನಿ ಖ್ಯಾತಿ ಶ್ರೀಗೆ ಆ್ಯಸಿಡ್ ದಾಳಿಯ ಬೆದರಿಕೆ ಹಾಕಿದ್ದ ವ್ಯಕ್ತಿ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. ಕಂಪನಿಯು ತಕ್ಷಣ ಕ್ರಮಕೈಗೊಂಡು ಆತನನ್ನು ವಜಾಗೊಳಿಸಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 124 ಆ್ಯಸಿಡ್ ಸೇರಿದಂತೆ ಅದಕ್ಕೆ ಸಮನಾದ ದಾಳಿಯ ಅಪರಾಧದ ಶಿಕ್ಷೆಯ ಬಗ್ಗೆ ವಿವರಿಸುತ್ತದೆ. ಆ್ಯಸಿಡ್ ದಾಳಿಯ ಮೂಲಕ ಯಾವುದೇ ವ್ಯಕ್ತಿಗೆ ಶಾಶ್ವತ ಅಥವಾ ತೀವ್ರವಾದ ಹಾನಿ ಉಂಟು ಮಾಡಿದರೆ, ಅಪರಾಧಿಗೆ ಬಲಿಪಶುವಿನ ವೈದ್ಯಕೀಯ ವೆಚ್ಚ ಸರಿದೂಗಿಸಲು ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಬಹುದು.
ಇದನ್ನೂ ಓದಿ : ಬಿಜೆಪಿ ಆಡಳಿತಾವಧಿಯ ಕೋವಿಡ್-19 ವಂಚನೆ; ಎಸ್‌ಐಟಿ ತನಿಖೆಗೆ ಸಚಿವ ಸಂಪುಟ ಒಪ್ಪಿಗೆ


