ಹೈದರಾಬಾದ್‌ನ ಗನ್ ಪಾರ್ಕ್‌ನಲ್ಲಿರುವ ತೆಲಂಗಾಣ ಹುತಾತ್ಮರ ಸ್ಮಾರಕದ ಆವರಣದಲ್ಲಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಇರಿಸಲು ತೆಲಂಗಾಣ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ, ಸಾಯಿಬಾಬಾ ಅವರ ಕುಟುಂಬ ಸದಸ್ಯರು ಮತ್ತು ಹೋರಾಟಗಾರರು ಪಟ್ಟುಹಿಡಿದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ನಂತರ, ಸಾಯಿಬಾಬಾ ಅವರ ದೇಹ ಹೊತ್ತ ಆಂಬ್ಯುಲೆನ್ಸ್ ಅನ್ನು ಗನ್ ಪಾರ್ಕ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಇರಿಸಲಾಯಿತು.
“ಹುತಾತ್ಮರ ಸ್ಮಾರಕದ ಒಳಗೆ ಯಾವುದೇ ಮೃತದೇಹಗಳನ್ನು ಇರಿಸಲು ಅನುಮತಿಸುವುದಿಲ್ಲ ಎಂದು ಪೊಲೀಸರು ನಮಗೆ ತಿಳಿಸಿರಲಿಲ್ಲ. ತೆಲಂಗಾಣ ಚಳವಳಿಗೆ ಸಾಯಿಬಾಬಾ ಅವರು ನೀಡಿದ ಕೊಡುಗೆಗಾಗಿ ನಾವು ಅವರಿಗೆ ಗೌರವ ಸಲ್ಲಿಸಲು ಬಯಸಿದ್ದೆವು” ಎಂದು ದಮನ ವಿರೋಧಿ ವೇದಿಕೆಯ ಸಂಚಾಲಕ ಕೆ ರವಿಚಂದರ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹುತಾತ್ಮರ ಸ್ಮಾರಕದಲ್ಲಿ ಸಾಯಿಬಾಬಾ ಅವರ ಪಾರ್ಥಿವ ಶರೀರ ಇರಿಸಲು ಪೊಲೀಸರು ಅನುಮತಿ ನಿರಾಕರಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
“ರಾಹುಲ್ ಗಾಂಧಿಯವರೇ ನೀವು ಜನರನ್ನು ಮರುಳು ಮಾಡುತ್ತಿರುವ ‘ಮೊಹಬ್ಬತ್ ಕಿ ದುಕಾನ್’ ಇದೆನಾ? ನಾಚಿಕೆಗೇಡಿನ ದ್ವಂದ್ವ ನೀತಿ! ನಿಮ್ಮ ಪಕ್ಷದ ರೇವಂತ್ ರೆಡ್ಡಿ ಅವರ ಸೂಚನೆ ಮೇರೆಗೆ ತೆಲಂಗಾಣ ಪೊಲೀಸರು ಪ್ರೊಫೆಸರ್ ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನಲ್ಲಿರುವ ತೆಲಂಗಾಣ ಹುತಾತ್ಮರ ಸ್ಮಾರಕದಲ್ಲಿ ಇಡುವುದನ್ನು ತಡೆದಿದ್ದಾರೆ” ಎಂದು ತೆಲಂಗಾಣ ಮಾಜಿ ಡಿಜಿಟಲ್ ಮೀಡಿಯಾ ನಿರ್ದೇಶಕ ಕೊನಾಥಮ್ ದಿಲೀಪ್ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
“ಸಾಯಿಬಾಬಾ ಅವರ ಕುಟುಂಬ ಸದಸ್ಯರು, ನಾಗರಿಕ ಸಮಾಜದ ಮುಖಂಡರು ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತರು ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂಬ್ಯುಲೆನ್ಸ್‌ನಲ್ಲೇ ಸಾಯಿಬಾಬಾ ಅವರ ಪಾರ್ಥಿವ ಶರೀರ ಇಟ್ಟು ಗೌರವ ಸಲ್ಲಿಸಲಾಯಿತು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ಸಾಯಿಬಾಬಾ ಅವರ ದೇಹವನ್ನು ಗನ್ ಪಾರ್ಕ್‌ನಿಂದ ಮೌಲಾ ಅಲಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಯಿತು” ಎಂದು ದಿಲೀಪ್ ತಿಳಿಸಿದ್ದಾರೆ.
Is this the Mohabbat Ki Dukaan you keep fooling people about @RahulGandhi Ji?
Shameless double standards!
The Telangana police under the instructions of your party colleague Revanth Reddy have stopped Professor Saibaba’s body from being placed at the Telangana Martyrs' Memorial… pic.twitter.com/kbypcDvIdG
— Konatham Dileep (@KonathamDileep) October 14, 2024
ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ, ಮಾನವಹಕ್ಕುಗಳ ಹೋರಾಟಗಾರ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರು ಹೈದರಾಬಾದ್‌ನ ನಿಝಾಮ್ ವೈದ್ಯಕೀಯ ವಿಜ್ಞಾನ ಆಸ್ಪತ್ರೆ (ನಿಮ್ಸ್)ಯಲ್ಲಿ ಶನಿವಾರ ನಿಧನರಾಗಿದ್ದಾರೆ. ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಅವರು ರಾತ್ರಿ 8.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.
ಸಾಯಿಬಾಬಾ ಅವರ ದೇಹವನ್ನು ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಸರ್ಕಾರಿ ಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲು ಅವರ ಕುಟುಂಬ ನಿರ್ಧರಿಸಿದೆ.
ಮಾವೋವಾದಿಗಳೊಂದಿಗೆ ಸಂಪರ್ಕ ಪ್ರಕರಣದಲ್ಲಿ ಸಾಯಿಬಾಬಾ ಮತ್ತು ಇತರ ಐವರಿಗೆ ಶಿಕ್ಷೆಯನ್ನು ರದ್ದುಗೊಳಿಸಿ ಕಳೆದ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತೀರ್ಪು ನೀಡಿತ್ತು.
ಇದನ್ನೂ ಓದಿ : ಪ್ರೊ. ಜಿಎನ್ ಸಾಯಿಬಾಬಾ ಅವರ ಇಚ್ಛೆಯಂತೆ ಆಸ್ಪತ್ರೆಗೆ ದೇಹದಾನ ಮಾಡಿದ ಕುಟುಂಬ


