ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಮಾತ್ರ ಹಿಂಪಡೆದಿಲ್ಲ. ರೈತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಕೈಗೊಂಡಿದ್ದ ಪ್ರತಿಭಟನೆಯ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಇಂದು (ಅ.14) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆ ಮಾಡಿದ್ದೇವೆ. ನ್ಯಾಯಾಲಯ ಒಪ್ಪಿದರೆ ಪ್ರಕರಣ ರದ್ದಾಗಲಿದೆ. ಇಲ್ಲವಾದರೆ ಮುಂದುವರೆಯಲಿದೆ” ಎಂದು ಹೇಳಿದ್ದಾರೆ.
“ನಮ್ಮ ಮುಂದೆ 56 ಪ್ರಕರಣಗಳು ಬಂದಿದ್ದವು. ಆ ಪೈಕಿ 43 ಅನ್ನು ವಾಪಸ್ ಪಡೆದಿದ್ದೇವೆ. ಇವುಗಳಲ್ಲಿ ಬರೀ ಅಲ್ಪಸಂಖ್ಯಾತರದ್ದೇ ಇವೆಯಾ? ರೈತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರ ಪ್ರಕರಣಗಳಿವೆ. ಹುಬ್ಬಳ್ಳಿ ಪ್ರಕರಣವನ್ನು ಮಾತ್ರ ಹಿಂಪಡೆದಿದ್ದರೆ, 43 ಪ್ರಕರಣಗಳೂ ಅಲ್ಪಸಂಖ್ಯಾತರಿಗೆ ಸೇರಿದ್ದಾಗಿದ್ದರೆ ಬಿಜೆಪಿಯವರ ಆರೋಪವನ್ನು ಒಪ್ಪಿಕೊಳ್ಳಬಹುದಿತ್ತು” ಎಂದಿದ್ದಾರೆ.
“ಯಾವುದೇ ಪ್ರಕರಣವನ್ನು ವಾಪಸ್ ಪಡೆಯಬೇಕಾದರೆ, ಅದಕ್ಕೊಂದು ಪ್ರಕ್ರಿಯೆ ಇದೆ. ಸುಳ್ಳು ಕೇಸ್ ಹಾಕಿದ್ದಾರೆ, ಪೂರಕವಾದ ಸೆಕ್ಷನ್ ಹಾಕಿಲ್ಲ, ನಡೆದಿರುವ ಘಟನೆಯೇ ಬೇರೆ ದಾಖಲಿಸಿರುವ ಕೇಸ್ ಬೇರೆ ಎಂದು ಆರೋಪಿಸಿ ಮನವಿ ಕೊಟ್ಟಿರುತ್ತಾರೆ. ಅದನ್ನು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸುತ್ತದೆ. ಸಾಮಾನ್ಯವಾಗಿ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ಮಾಡಿರುತ್ತಾರೆ. ನಮಗೆ ಬರುವ ಮನವಿಗಳನ್ನು ಇಲಾಖೆಗೆ ಕಳುಹಿಸುತ್ತೇವೆ. ಅವರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಸಾಕ್ಷ್ಯ ಸಂಗ್ರಹಣೆಯಲ್ಲಿ ಆದ ಲೋಪದೋಷಗಳನ್ನು ಪರಿಶೀಲಿಸಿ ಸಂಪುಟ ಉಪ ಸಮಿತಿ ಮುಂದೆ ತರುತ್ತಾರೆ” ಎಂದು ತಿಳಿಸಿದ್ದಾರೆ.
“ಸಂಪುಟ ಉಪ ಸಮಿತಿ ಪ್ರಕರಣಗಳ ಬಗ್ಗೆ ಚರ್ಚಿಸುತ್ತದೆ. ಹುಬ್ಬಳ್ಳಿ ಪ್ರಕರಣದಲ್ಲೂ ಮನವಿ ಕೊಟ್ಟಿದ್ದರು. ಅಷ್ಟೊಂದು ಜನರ ಮೇಲೆ ಪ್ರಕರಣ ದಾಖಲಿಸುವ ಅಗತ್ಯವಿಲ್ಲ ಎಂಬುವುದು ಚರ್ಚೆಯಾಗಿ ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದಿದ್ದಾರೆ.
“ನಮ್ಮ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ನ್ಯಾಯಾಲಯ ಒಪ್ಪಿದರೆ ಮಾತ್ರ ಪ್ರಕರಣ ವಾಪಸ್ ಪಡೆಯಲು ಸಾಧ್ಯ, ಇಲ್ಲವಾದರೆ ಮುಂದುವರೆಯಲಿದೆ” ಎಂದು ಹೇಳಿದ್ದಾರೆ.
“ಬಿಜೆಪಿ ಸರ್ಕಾರ ಇರುವಾಗಲೂ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲೂ ಇದನ್ನು ಮಾಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದ ಬಳಿಕ, ಅವರ ವಿರುದ್ದದ ಪ್ರಕರಣವನ್ನು ಅವರೇ ವಾಪಸ್ ಪಡೆದಿದ್ದರು. ಬಿಜೆಪಿಯವರ ಯಾರ ಮೇಲೆ ಆಪಾದನೆ ಹೊರಿಸುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಬಿಜೆಪಿ ಬೆಂಬಲಿತ ಸಂಘಟನೆಗಳಿಂದ ಸನ್ಮಾನ


