ಮಂಗಳವಾರ ಉತ್ತರಾಖಂಡದ ಚಮೋಲಿ ಜಿಲ್ಲೆಯ ಗೌಚಾರ್ ಮಾರುಕಟ್ಟೆಯಲ್ಲಿ ವಿವಿಧ ಸಮುದಾಯಗಳ ಇಬ್ಬರು ಯುವಕರ ನಡುವೆ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಪ್ರಾರಂಭವಾದ ವಾಗ್ವಾದವು ಕೋಮು ಹಿಂಸಾಚಾರಕ್ಕೆ ತಿರುಗಿದೆ. ಹಿಂಸಾಚಾರದಲ್ಲಿ ಅಂಗಡಿಗಳನ್ನು ಧ್ವಂಸಗೊಳಿಸಿ, ಸೂಚನಾ ಫಲಕಗಳನ್ನು ಹಾನಿಗೊಳಿಸಲಾಗಿದೆ ಎಂದು ವರದಿಯಾಗಿದೆ. ನಾಗರಿಕರಿಗೆ ಶಾಂತ ರೀತಿಯಲ್ಲಿ ವರ್ತಿಸುವಂತೆ ಪೊಲೀಸರು ಹೇಳಿಕೊಂಡಿದ್ದರೂ, ಆ ಪ್ರದೇಶದಲ್ಲಿ ನಿಯೋಜನೆಯನ್ನು ಹೆಚ್ಚಿಸಲಾಗಿದೆ ಎಂದು ವರದಿ ಹೇಳಿದೆ. ಉತ್ತರಾಖಂಡ
“ಕರ್ಣಪ್ರಯಾಗ ಪೊಲೀಸ್ ಠಾಣಾ ವ್ಯಾಪ್ತಿಯ ಗೌಚಾರ್‌ನಲ್ಲಿರುವ ಅಂಗಡಿಯೊಂದರ ಮುಂದೆ ಸ್ಕೂಟರ್ ನಿಲ್ಲಿಸುವ ವಿವಾದದ ನಂತರ ಇಬ್ಬರು ಯುವಕರ ನಡುವೆ ಮಾರಾಮಾರಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಚಿಕಿತ್ಸೆಗಾಗಿ ಎರಡೂ ಕಡೆಯವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸ್ಥಳೀಯ ಹಿಂದೂ ವ್ಯಕ್ತಿಯೊರೊಬ್ಬರು ಮುಸ್ಲಿಂ ಅಂಗಡಿ ಮಾಲೀಕರ ಮುಂದೆ ಸ್ಕೂಟರ್ ನಿಲ್ಲಿಸುತ್ತಿದ್ದಾಗ ಮಂಗಳವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಂಗಡಿ ಮಾಲೀಕರು ವಾಹನವನ್ನು ನಿಲ್ಲಿಸದಂತೆ ವ್ಯಕ್ತಿಯನ್ನು ಕೇಳಿದಾಗ ವಾಗ್ವಾದ ಪ್ರಾರಂಭವಾಯಿತು. ಈ ವೇಳೆ ಹಿಂದೂ ವ್ಯಕ್ತಿಯನ್ನು ಥಳಿಸಲಾಗಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಪನ್ವಾರ್ ಹೇಳಿದ್ದಾರೆ.
“ಹಲ್ಲೆಗೊಳಗಾದ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದು, ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಆದಾಗ್ಯೂ, ಕೆಲವು ಸಂಘಟನೆಗಳ ಸದಸ್ಯರು ಜಮಾಯಿಸಿ ಪ್ರತಿಭಟನೆ ನಡೆಸಿದರು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ವೇಳೆ ಗುಂಪು ಗದ್ದಲವನ್ನು ಸೃಷ್ಟಿಸಿದ್ದು, ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಿ ಸೂಚನಾ ಫಲಕಗಳನ್ನು ಹಾನಿಗೊಳಿಸಿದೆ. ಮಧ್ಯಾಹ್ನ 2 ಗಂಟೆಯವರೆಗೂ ಗಲಾಟೆ ನಡೆದಿದ್ದು, ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
“ಜಗಳದ ನಂತರ, ಗೌಚಾರ್ ಔಟ್‌ಪೋಸ್ಟ್‌ನಲ್ಲಿ ಎರಡು ಸಮುದಾಯಗಳ ದೊಡ್ಡ ಗುಂಪು ಜಮಾಯಿಸಿದ್ದು, ಪ್ರದೇಶದಲ್ಲಿ ಉದ್ವಿಗ್ನತೆಗೆ ಸೃಷ್ಟಿಯಾಗಿತ್ತು. ಪೊಲೀಸರು ಎರಡೂ ಗುಂಪುಗಳನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಆರೋಪಿಗಳಾದ ರಿಜ್ವಾನ್, ಸಲ್ಮಾನ್, ಆಸಿಫ್ ಮತ್ತು 70-80 ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 115 (2), 191 (2), ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ” ಎಂದು ಚಮೋಲಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುವ್ಯವಸ್ಥೆ ಕಾಪಾಡಲು ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕೋಮು ಸೌಹಾರ್ದತೆಯನ್ನು ಎತ್ತಿಹಿಡಿಯಬೇಕು, ಸಂಯಮದಿಂದ ವರ್ತಿಸಬೇಕು ಮತ್ತು ಸಹೋದರತ್ವವನ್ನು ಉತ್ತೇಜಿಸಬೇಕು ಎಂದು ಎಸ್ಪಿ ಪನ್ವಾರ್ ನಾಗರಿಕರನ್ನು ಒತ್ತಾಯಿಸಿದ್ದಾರೆ. ಹೆಚ್ಚುವರಿಯಾಗಿ, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ಅನ್ನು ಗೌಚಾರ್‌ನಾದ್ಯಂತ ವಿಧಿಸಲಾಗಿದ್ದು, ಇದು ಶಾಂತಿಯನ್ನು ಕಾಪಾಡುವುದು ಮತ್ತು ಕಾನೂನುಬಾಹಿರ ಸಭೆಗಳನ್ನು ತಡೆಯುತ್ತದೆ.
ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿದ್ದು, ವದಂತಿಗಳನ್ನು ಹಬ್ಬಿಸದಂತೆ ಅಥವಾ ಅಶಾಂತಿಯನ್ನು ಹುಟ್ಟುಹಾಕಲು ಪ್ರಯತ್ನಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ಪ್ರಸ್ತುತ, ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ, ಅಶಾಂತಿಯನ್ನು ಪ್ರಚೋದಿಸುವ ಮತ್ತು ಕೆಲವು ಸಮುದಾಯಗಳ ನಂಬಿಕೆಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಸಂದೇಶಗಳನ್ನು ಹರಡುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರಲ್ಲಿ ಅಭದ್ರತೆ, ಭಯದ ವಾತಾವರಣ ಬೆಳೆಯುತ್ತಿದೆ. ಸಮಾಜದೊಳಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ತಮ್ಮ ಅಮೂಲ್ಯವಾದ ಬೆಂಬಲವನ್ನು ನೀಡುವಂತೆ ಚಮೋಲಿ ಪೊಲೀಸರು ಎಲ್ಲಾ ನಾಗರಿಕರನ್ನು ಕೋರುತ್ತಾರೆ ” ಎಂದು ಚಮೋಲಿ ಪೊಲೀಸರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಉತ್ತರಾಖಂಡ
ಇದನ್ನೂ ಓದಿ: ಇಶಾ ಫೌಂಡೇಶನ್ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಕಾನೂನನ್ನು ಜಾರಿಗೊಳಿಸುವಂತೆ ಕೋರಿ ಸುಪ್ರೀಂಕೋಟ್‌ಗೆ ಅರ್ಜಿ


