ಜಾಮಿ ಗಣತಿ ವರದಿ ಸೇರಿದಂತೆ ಹಲವು ವಿಚಾರಗಳು ತೀರ್ಮಾನವಾಗಬೇಕಿದ್ದ ಶುಕ್ರವಾರದ ಸಚಿವ ಸಂಪುಟ ಸಭೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ರಾಜ್ಯದಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿದ್ದ ಜಾತಿ ಗಣತಿ ಚರ್ಚೆಯ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರು ಮತ್ತಷ್ಟು ಮುಂದೂಡಿದ್ದಾರೆ.
ಜಾತಿ ಗಣತಿಯನ್ನು ವಿರೋಧಿಸುತ್ತಿರುವ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರನ್ನು ಸಮಾಧಾನ ಮಾಡುವವರೆಗೆ ವರದಿಯ ಬಿಡುಗಡೆಯನ್ನು ತಡೆಹಿಡಿಯಲಾಗುತ್ತದೆ ಎಂದು ತಿಳಿದುಬಂದಿದೆ. “ಆದ್ದರಿಂದ ಅಕ್ಟೋಬರ್ 25 ರ ಕ್ಯಾಬಿನೆಟ್ ಸಭೆಯಲ್ಲಿ ಜಾತಿ ಗಣತಿ ವರದಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ” ಎಂದು ಮೂಲವೊಂದು ತಿಳಿಸಿದೆ ಎಂದು TNIE ವರದಿ ಹೇಳಿದೆ. ಅದಾಗ್ಯೂ, ಮತ್ತೊಂದೆಡೆ ವರದಿ ಬಿಡುಗಡೆಗಾಗಿ ಅಹಿಂದ ಸಮುದಾಯಗಳು ಒತ್ತಾಯಿಸುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ನಡುವೆ, ಎಸ್‌ಸಿ ಒಳ ಮೀಸಲಾತಿ ಮತ್ತು ಪಂಚಮಸಾಲಿ ಲಿಂಗಾಯತರನ್ನು 2ಎಗೆ ಸೇರಿಸುವ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿದೆ. ಅಷ್ಟೆಅಲ್ಲದೆ, ಚನ್ನಪಟ್ಟಣ, ಸಂಡೂರು, ಶಿಗ್ಗಾಂವ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು, ಹಾಗಾಗಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ತಡೆ ಹಿಡಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ ಎಸ್‌ಸಿ ಒಳ ಮೀಸಲಾತಿ ವರ್ಗೀಕರಣ ಜಾರಿಗೆ ಒತ್ತಾಯಿಸಿ ಎಸ್‌ಸಿ ಎಡ ಸಮುದಾಯ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. 2ಎ ವಿಚಾರವಾಗಿ ಶುಕ್ರವಾರ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಪಂಚಮಸಾಲಿ ಲಿಂಗಾಯತ ಸಮುದಾಯದ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ.
ವೀರಶೈವ ಲಿಂಗಾಯತ ಸಮುದಾಯದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ, ಎಸ್.ಎಸ್.ಮಲ್ಲಿಕಾರ್ಜುನ್, ಶರಣಪ್ರಕಾಶ ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಒಕ್ಕಲಿಗರ ಸಮುದಾಯದ ರಾಮಲಿಂಗಾ ರೆಡ್ಡಿ, ಎನ್.ಚಲುವರಾಯಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಡಾ.ಎಂ.ಸಿ.ಸುಧಾಕರ್ ಅವರನ್ನು ಒಳಗೊಂಡು ಜಾತಿ ಗಣತಿ ಬಿಡುಗಡೆಯ ಪರಿಣಾಮಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲು ಸಿದ್ದರಾಮಯ್ಯ ಮುಂದಾಗಿದ್ದರು.
ವರದಿಗೆ ಸಂಬಂಧಿಸಿದಂತೆ ಸಂಪುಟದ ಇತ್ತೀಚಿನ ಚರ್ಚೆಗಳ ನಂತರ, ಪ್ರಬಲ ಲಿಂಗಾಯತ ಸಮುದಾಯವು ಅತೃಪ್ತಿ ವ್ಯಕ್ತಪಡಿಸಿದ್ದು, ವರದಿಯನ್ನು “ಅವೈಜ್ಞಾನಿಕ” ಎಂದು ಬಣ್ಣಿಸಿದೆ. ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಮುದಾಯದ ಪ್ರಮುಖರು ಅಕ್ಟೋಬರ್ 22 ರಂದು ವರದಿಯ ಶಿಫಾರಸುಗಳ ಅನುಷ್ಠಾನದ ಕಾನೂನು ಮತ್ತು ಸಾಮಾಜಿಕ ಪರಿಣಾಮಗಳನ್ನು ಪರಿಶೀಲಿಸುವ ಸಭೆಯನ್ನು ಘೋಷಿಸಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ವರದಿಯಲ್ಲಿನ ಅಂಶಗಳನ್ನು ಅನುಷ್ಠಾನಕ್ಕೆ ತಂದರೆ ಸಮುದಾಯವು ಗಮನಾರ್ಹ ಅನನುಕೂಲಗಳನ್ನು ಎದುರಿಸಬೇಕಾಗುತ್ತದೆ. “ಈ ವರದಿಯನ್ನು ಜಾರಿಗೆ ತಂದರೆ ಸಮುದಾಯವು ಕಳೆದುಕೊಳ್ಳುತ್ತದೆ” ಎಂದು ಪ್ರಸನ್ನ ಹೇಳಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಅಕ್ರಮ ಬಂಧನ ಆರೋಪ : ಇಶಾ ಫೌಂಡೇಶನ್ ವಿರುದ್ದದ ಪ್ರಕರಣ ವಜಾ


