“ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಯಾವುದೇ ವೈಯಕ್ತಿಕ ಕಾನೂನಿನಡಿ ಸಂಪ್ರದಾಯಗಳ ಹೆಸರಿನಲ್ಲಿ ದುರ್ಬಲಗೊಳಿಸಲು ಸಾಧ್ಯವಿಲ್ಲ. ಬಾಲ್ಯ ವಿವಾಹಗಳು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ವ್ಯಕ್ತಿಯ ಸ್ವಾತಂತ್ರ್ಯವನ್ನು ಹರಣ ಮಾಡುತ್ತವೆ” ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಅ.18) ಹೇಳಿದೆ.
ಭಾರತದಲ್ಲಿನ ವೈಯಕ್ತಿಕ ಕಾನೂನುಗಳು ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮತ್ತು ಪಾಲಕತ್ವದಂತಹ ವಿಷಯಗಳಲ್ಲಿ ವ್ಯಕ್ತಿಗಳನ್ನು ನಿಯಂತ್ರಿಸುವ ಕಾನೂನುಗಳ ಗುಂಪಾಗಿದೆ. ಅವು ಧಾರ್ಮಿಕ ಗ್ರಂಥಗಳನ್ನು ಆಧರಿಸಿವೆ. ಗೋವಾ ಮತ್ತು ಉತ್ತರಾಖಂಡಗಳು ಮಾತ್ರ ಇಂತಹ ವಿಷಯಗಳಿಗೆ ವೈಯಕ್ತಿಕ ಕಾನೂನುಗಳನ್ನು ಅನುಸರಿಸುವುದಿಲ್ಲ, ಬದಲಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಅವಲಂಬಿಸಿವೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯ ಪೀಠವು ದೇಶದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬಾಲ್ಯ ವಿವಾಹ ತಡೆಗಟ್ಟುವ ತಂತ್ರವು ವಿವಿಧ ಸಮುದಾಯಗಳಿಗೆ ಅನುಗುಣವಾಗಿರಬೇಕು. ಬಹು-ವಲಯಗಳ ಸಮನ್ವಯತೆ ಇದ್ದಾಗ ಮಾತ್ರ ಕಾನೂನು ಯಶಸ್ವಿಯಾಗುತ್ತದೆ. ಕಾನೂನು ಜಾರಿ ಅಧಿಕಾರಿಗಳ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಆಗಬೇಕು. ಸಮುದಾಯ-ಚಾಲಿತ ವಿಧಾನದ ಅಗತ್ಯವಿದೆ ಇತ್ಯಾದಿ ಮಾರ್ಗಸೂಚಿಗಳನ್ನು ಸುಪ್ರಿಂ ಕೋರ್ಟ್ ನೀಡಿದೆ.
ವೈಯಕ್ತಿಕ ಕಾನೂನುಗಳ ಮೇಲೆ ಬಾಲ್ಯ ವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) ಮೇಲುಗೈ ಸಾಧಿಸುತ್ತದೆಯೇ? ಎಂಬ ವಿಷಯವು ಸಂಸತ್ತಿನಲ್ಲಿ ಪರಿಗಣನೆಗಾಗಿ ಬಾಕಿ ಇದೆ ಎಂಬುವುದನ್ನು ನ್ಯಾಯಪೀಠ ಉಲ್ಲೇಖಿಸಿದೆ. ವೈಯಕ್ತಿಕ ಕಾನೂನುಗಳಿಗಿಂತ ಬಾಲ್ಯ ವಿವಾಹ ನಿಷೇಧ ಕಾಯ್ದೆಯೇ ಮೇಲ್ಮಟ್ಟದ್ದು ಎಂದು ಪರಿಗಣಿಸುವಂತೆ ಕೇಂದ್ರವು ಸುಪ್ರೀಂ ಕೋರ್ಟ್ಗೆ ಒತ್ತಾಯಿಸಿದೆ ಎಂಬುವುದು ಇಲ್ಲಿ ಗಮನಾರ್ಹ.
ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕಾನೂನು, ಮಕ್ಕಳ ಮೇಲೆ ವಿವಾಹದ ದೊಡ್ಡ ಸಾಮಾಜಿಕ ಹೊರೆಯನ್ನು ಹೊರಿಸುವುದನ್ನು ತಡೆಗಟ್ಟುವುದು ಮಾತ್ರವಲ್ಲದೆ, ಇದು ಆಯ್ಕೆಯ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ಉದ್ದೇಶಗಳನ್ನು ಕೂಡ ಹೊಂದಿದೆ. ಬಾಲ್ಯ ವಿವಾಹಗಳು ಮಗು ಪ್ರಬುದ್ಧ ಆಗುವ ಮೊದಲು ಸಂಗಾತಿಯ ಆಯ್ಕೆ ಮತ್ತು ಜೀವನ ಮಾರ್ಗಗಳನ್ನು ಕಸಿದುಕೊಳ್ಳುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಕೋರಿ ಸೊಸೈಟಿ ಫಾರ್ ಎನ್ಲೈಟೆನ್ಮೆಂಟ್ ಅಂಡ್ ವಾಲೆಂಟರಿ ಆಕ್ಷನ್ ಸಲ್ಲಿಸಿದ ಪಿಐಎಲ್ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.
ಇದನ್ನೂ ಓದಿ : ಮಹಿಳೆಯರ ಅಕ್ರಮ ಬಂಧನ ಆರೋಪ : ಇಶಾ ಫೌಂಡೇಶನ್ ವಿರುದ್ದದ ಪ್ರಕರಣ ವಜಾ


