ಬೆಂಗಳೂರಿನ ಕಾಲೇಜುಗಳಲ್ಲಿ ಹೈಡ್ರೋಜನ್ ಆಧಾರಿತ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಇರಿಸಿರುವುದಾಗಿ ಹೇಳಿಕೊಂಡು ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದ ಆರೋಪಿಯನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಗುರುವಾರ ಬಂಧಿಸಲಾಗಿದೆ. ಆರೋಪಿಯನ್ನು ದೀಪಂಜನ್ ಮಿತ್ರ (48) ಎಂದು ಗುರುತಿಸಲಾಗಿದೆ. ಎರಡು ಶಿಕ್ಷಣ ಸಂಸ್ಥೆಗಳು ನೀಡಿದ ದೂರಿನ ಮೇರೆಗೆ ವಿವಿ ಪುರಂ ಮತ್ತು ಹನುಮಂತನಗರ ಪೊಲೀಸ್ ಠಾಣೆಗಳ ಜಂಟಿ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ
ಅಕ್ಟೋಬರ್ 4 ರಂದು, ಬೆಂಗಳೂರಿನ ಮೂರು ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳಾದ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಿಐಟಿಯ ಪ್ರಾಂಶುಪಾಲರು ಅಕ್ಟೋಬರ್ 4 ರಂದು [email protected] ವಿಳಾಸದಿಂದ ಬೆದರಿಕೆ ಇಮೇಲ್ ಪಡೆದ ಕೆಲವೇ ಕ್ಷಣಗಳಲ್ಲಿ ದೂರು ದಾಖಲಿಸಿದ್ದರು. ಕಾಲೇಜಿನಲ್ಲಿ ಸುಧಾರಿತ ಹೈಡ್ರೋಜನ್ ಆಧಾರಿತ IED ಗಳನ್ನು ಇಡಲಾಗಿದೆ ಎಂದು ಎಂದು ಇಮೇಲ್ ಹೇಳಿಕೊಂಡಿತ್ತು. ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ
ಅದೇ ದಿನ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಂಎಸ್ ಕಾಲೇಜಿನ ಪ್ರಾಂಶುಪಾಲರು ಇದೇ ರೀತಿ ದೂರು ನೀಡಿದ್ದು, ಮತ್ತೊಂದು ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಕೂಡಲೇ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಲೋಕೇಶ್ ಬರಮಪ್ಪ ಜಗಲಸರ್ ಅವರ ನೇತೃತ್ವದಲ್ಲಿ ವಿವಿ ಪುರಂ ಮತ್ತು ಹನುಮಂತನಗರ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಎರಡೂ ಪ್ರಕರಣಗಳ ತಾಂತ್ರಿಕ ತನಿಖೆಯು ಡಾರ್ಜಿಲಿಂಗ್ ಜಿಲ್ಲೆಯ ಸಾಲಿಸ್‌ಬರಿ ಟೌನ್‌ನಲ್ಲಿರುವ ಶಂಕಿತ ವ್ಯಕ್ತಿಯನ್ನು ಬೆಟ್ಟು ಮಾಡಿತ್ತು. ಶಂಕಿತನನ್ನು ಅಕ್ಟೋಬರ್ 17 ರಂದು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿಯು ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ವಿವಿ ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಶಮೀದ್ ಪಾಷಾ, ವಿವಿ ಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧರ್ಮೇಂದ್ರ ಮತ್ತು ಅವರ ತಂಡ ಅರೋಪಿಯನ್ನು ತಾಂತ್ರಿಕ ವಿಶ್ಲೇಷಣೆಯನ್ನು ಬಳಸಿಕೊಂಡು ಪತ್ತೆ ಹಚ್ಚಿತ್ತು.
“ನಾವು ಶಂಕಿತನನ್ನು ಸಿಡಿಆರ್ ಮತ್ತು ಇಮೇಲ್ ವಿಳಾಸಗಳನ್ನು ರಚಿಸಲು ಬಳಸಿದ ರೆಫರಲ್ ಐಡಿಯನ್ನು ಬಳಸಿಕೊಂಡು ಪತ್ತೆಹಚ್ಚಿದೆವು. ಅದರ ಮೂಲಕ ಅವರು ನಕಲಿ ಬಾಂಬ್ ಬೆದರಿಕೆಗಳನ್ನು ಕಳುಹಿಸುತ್ತಿದ್ದರು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಯು ಮೈಲ್ ಕಳುಹಿಸಲು ಬಳಸಿದ HP ಲ್ಯಾಪ್‌ಟಾಪ್ ಮತ್ತು ನೋಕಿಯಾ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಯು ಇದೇ ರೀತಿಯಲ್ಲಿ ಕನಿಷ್ಠ 10 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೆಂಗಳೂರಿನಾದ್ಯಂತ ಇತರ ಶಾಲಾ-ಕಾಲೇಜುಗಳಿಗೆ ಕಳುಹಿಸಲಾದ ಬಾಂಬ್ ಬೆದರಿಕೆ ಇಮೇಲ್‌ಗಳಲ್ಲಿ ತನ್ನ ಕೈವಾಡವನ್ನು ಒಪ್ಪಿಕೊಂಡಿದ್ದಾನೆ. ಈ ಹೆಚ್ಚುವರಿ ಘಟನೆಗಳಲ್ಲಿ ಶಂಕಿತನ ಪಾತ್ರವನ್ನು ನಿರ್ಧರಿಸಲು ಅಧಿಕಾರಿಗಳು ಈಗ ತನಿಖೆಯನ್ನು ನಡೆಸುತ್ತಿದ್ದಾರೆ.
ಬಿ ಕಾಮ್ ಪದವೀಧರನಾಗಿರುವ ದೀಪಂಜನ್ ಮಿತ್ರ 2012 ರಿಂದ ನಿರುದ್ಯೋಗಿಯಾಗಿದ್ದಾನೆ. 2012ರ ವರೆಗೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಆತ, ಕಂಪ್ಯೂಟರ್ ಸೈನ್ಸ್‌ನಲ್ಲಿ ಅನೇಕ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಸಹ ಪೂರ್ಣಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ನಿರುದ್ಯೋಗಿಯಾಗಿದ್ದ ಆರೋಪಿ ಮಾನಸಿಕವಾಗಿ ತೊಂದರೆಗೀಡಾಗಿದ್ದ. ಹೀಗಾಗಿ ನಕಲಿ ಇಮೇಲ್‌ಗಳನ್ನು ಕಳುಹಿಸಿದ್ದಾನೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದಾಗ್ಯೂ, ಆರೋಪಿಯ ಚಟುವಟಿಕೆಗಳ ಸಂಪೂರ್ಣ ವ್ಯಾಪ್ತಿ ಮತ್ತು ಯಾವುದೇ ಸಂಭಾವ್ಯ ಸಹಚರರನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮುಡಾ ಕಚೇರಿ ಮೇಲೆ ಇಡಿ ದಾಳಿ | ಸಿಎಂ ಸಿದ್ದರಾಮಯ್ಯ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ
ಮುಡಾ ಕಚೇರಿ ಮೇಲೆ ಇಡಿ ದಾಳಿ | ಸಿಎಂ ಸಿದ್ದರಾಮಯ್ಯ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ


