ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ವಿಜಯಪುರ ಜಿಲ್ಲೆಯ ನಾಗಾಠಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರಿಂದ 2 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪ ಪ್ರಕರಣದಲ್ಲಿ ಇಬ್ಬರನ್ನು ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಅಥಣಿಯ ಇಂಜಿನಿಯರ್ ಸೋಮಶೇಖರ್ ನಾಯಕ್ ಹಾಗೂ ಬೆಂಗಳೂರಿನ ಬಸವೇಶ್ವರನಗರದ ನಿವಾಸಿ ವಿಜಯಕುಮಾರಿ ಬಂಧಿತರು. ಇನ್ನಿಬ್ಬರು ಆರೋಪಿಗಳಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಅಣ್ಣ ಗೋಪಾಲ ಜೋಶಿ ಹಾಗೂ ಅಜಯ್ ಜೋಶಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗೋಪಾಲ ಜೋಶಿಯವರ ಕುಟುಂಬದ ಸ್ನೇಹಿತೆ ವಿಜಯಕುಮಾರಿ ಅವರ ಮನೆಯಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಗೋಪಾಲ ಜೋಶಿಗೆ ಸೇರಿದ ಸ್ಥಳಗಳಲ್ಲೂ ಶೋಧ ನಡೆಸಿದ್ದಾರೆ.
ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ : ಪ್ರಲ್ಹಾದ್ ಜೋಶಿ
ಸುಲಿಗೆ ಪ್ರಕರಣ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಸಹೋದರರ ವಿರುದ್ದ ಎಫ್‌ಐಆರ್ ದಾಖಲಾಗಿದೆ ಎಂದು ನಿನ್ನೆ (ಅ.18) ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಪ್ರಲ್ಹಾದ್ ಜೋಶಿ, “ನನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ತಳುಕು ಹಾಕಬೇಡಿ. ನನಗೆ ವಿಜಯಲಕ್ಷಿ ಜೋಶಿ ಎಂಬ ಸಹೋದರಿಯೇ ಇಲ್ಲ” ಎಂದಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ಮೊದಲನೆಯದಾಗಿ ನನಗೆ ಯಾರೂ ಸಹೋದರಿಯರು ಇಲ್ಲ. ನನ್ನ ತಾಯಿಗೆ ಗೋಪಾಲ ಜೋಶಿ ಸೇರಿ ನಾಲ್ವರು ಮಕ್ಕಳು. ಈ ಪೈಕಿ ಒಬ್ಬರು ಈ ಹಿಂದೆಯೇ ಮೃತಪಟ್ಟಿದ್ದಾರೆ. ಸದ್ಯಕ್ಕೆ ಮೂವರು ಇದ್ದೇವೆ. ಆದರೆ, ನನ್ನ ಸಹೋದರ ಗೋಪಾಲ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ಸಂಪರ್ಕವಿಲ್ಲ” ಎಂದು ಹೇಳಿದ್ದಾರೆ.
Regarding the recent Media reports linking me to Gopal Joshi:
▫️In November 2013, I had filed a Civil suit as Plaintiff in the City Civil Court, Bangalore stating that Gopal Joshi and I are separated since 20 years (now more than 32 years)
▫️I have only 2 brothers and no… pic.twitter.com/t7GRx8mmJw
— Pralhad Joshi (@JoshiPralhad) October 18, 2024
“ಗೋಪಾಲ ಜೋಶಿ ಮಾತ್ರವಲ್ಲದೆ ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಅಫಿಡವಿಟ್‌ನಲ್ಲಿ ಆ ವಿವರ ಇದೆ” ಎಂದು ದಾಖಲೆ ತೋರಿಸಿದ್ದಾರೆ.
“ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯರೇ ಇಲ್ಲ. ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಈ ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ : ‘ಜಾತಿ ಗಣತಿ ವರದಿ ಸಧ್ಯಕ್ಕಿಲ್ಲ’ | ಸಂಪುಟ ಸಭೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿಕೆ!


