ಮಹತ್ವದ ಬೆಳವಣಿಗೆಯೊಂದರಲ್ಲಿ ಬೇನಾಮಿ ಆಸ್ತಿ ವಹಿವಾಟುಗಳ ನಿಷೇಧ ಕಾಯ್ದೆ-1988ರ ಎರಡು ನಿಯಮಗಳು ಅಸಂವಿಧಾನಿಕ ಎಂದು ಘೋಷಿಸಿ 2022ರಲ್ಲಿ ತಾನು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದೆ.
ಕಾಯ್ದೆಯ ಸೆಕ್ಷನ್ 3(2) ಹಾಗೂ 5 ಸಮರ್ಥನೀಯವಲ್ಲ ಹಾಗೂ ಅಸಂವಿಧಾನಿಕ ಎಂದು ಆಗಿನ ಸಿಜೆಐ ಎನ್.ವಿ ರಮಣ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ 2022ರ ಆಗಸ್ಟ್‌ನಲ್ಲಿ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.
ತ್ರೀಸದಸ್ಯ ಪೀಠದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಮರು ಪರಿಶೀಲಿಸಿ ವಾಪಸ್ ಪಡೆದಿದೆ.
ತ್ರೀಸದಸ್ಯ ಪೀಠದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ 2022ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಕಾಯ್ದೆಯ ಸೆಕ್ಷನ್ 3 ಬೇನಾಮಿ ಆಸ್ತಿಗೆ ಸಂಬಂಧಿಸಿದ ವಹಿವಾಟುಗಳನ್ನು ನಿಷೇಧಿಸುತ್ತದೆ. ಸೆಕ್ಷನ್ 5 ಸ್ವಾಧೀನಪಡಿಸಿಕೊಳ್ಳಬೇಕಾದ ಬೇನಾಮಿ ಆಸ್ತಿಗೆ ಸಂಬಂಧಿಸಿದೆ.
2022ರ ತೀರ್ಪು : ಬೇನಾಮಿ ಆಸ್ತಿ ವಹಿವಾಟುಗಳ ನಿಷೇಧ ಕಾಯ್ದೆ-1988ಕ್ಕೆ 2016ರಲ್ಲಿ ತರಲಾದ ತಿದ್ದುಪಡಿಗಳನ್ನು ಪೂರ್ವಾನ್ವಯ ಮಾಡುವಂತಿಲ್ಲ ಎಂದು ಕಲ್ಕತ್ತ ಹೈಕೋರ್ಟ್ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕಾಯ್ದೆಯ ತಿದ್ದುಪಡಿಗಳು ಪೂರ್ವಾನ್ವಯ ಆಗಲಿದೆ ಎಂದು ವಾದಿಸಿತ್ತು.
ಕೇಂದ್ರ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ತಿದ್ದುಪಡಿ ಕಾಯ್ದೆಯ ಪೂರ್ವಾನ್ವಯಕ್ಕೆ ಅವಕಾಶ ಇಲ್ಲ. ಕಾಯ್ದೆ ಜಾರಿಗೆ ಬರುವ ಮುನ್ನ ನಡೆದಿರುವ ವಹಿವಾಟುಗಳಿಗೆ ಸಂಬಂಧಿಸಿ ಪ್ರಾಧಿಕಾರಗಳು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಅಥವಾ ಆರೋಪಿಗಳ ವಿರುದ್ದ ಕ್ರಿಮಿನಲ್ ವಿಚಾರಣೆ ಮುಂದುವರೆಸುವಂತಿಲ್ಲ ಎಂದು 2022ರ ಆಗಸ್ಟ್‌ನಲ್ಲಿ ತೀರ್ಪು ನೀಡಿತ್ತು.
ಇದನ್ನೂ ಓದಿ : ನಾಡಗೀತೆ ವಿವಾದ | ತಮಿಳುನಾಡು ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರಕ್ಕೆ ಸ್ಟಾಲಿನ್ ಆಗ್ರಹ


