ಗಾಝಾದ ಉತ್ತರ ಭಾಗದಲ್ಲಿರುವ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಶುಕ್ರವಾರ (ಅ.18) ರಾತ್ರಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 33 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
“ಒಟ್ಟು 33 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ” ಎಂದು ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮೂದ್ ಬಾಸ್ಸಲ್ ಹೇಳಿದ್ದಾರೆ. ಜಬಾಲಿಯಾದ ತಾಲ್-ಅಲ್-ಝಾತರ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದು, 70 ಜನರು ಗಾಯಗೊಂಡಿದ್ದಾರೆ ಎಂದು ಅಲ್-ಅವ್ದ್ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಈ ನಡುವೆ, ಇಂದು (ಅ.19, ಶನಿವಾರ) ಮುಂಜಾನೆ ಇಸ್ರೇಲಿ ಪಡೆಗಳು ಉತ್ತರ ಗಾಝಾದ ಪಟ್ಟಣವಾದ ಬೀಟ್ ಲಾಹಿಯಾದಲ್ಲಿರುವ ಇಂಡೋನೇಷ್ಯಾದ ಆಸ್ಪತ್ರೆಯನ್ನು ಸುತ್ತುವರೆದು ಶೆಲ್ ದಾಳಿ ನಡೆಸಿವೆ ಎಂದು ಗಾಝಾದ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
“ಇಸ್ರೇಲಿ ಟ್ಯಾಂಕ್‌ಗಳು ಆಸ್ಪತ್ರೆಯನ್ನು ಸಂಪೂರ್ಣವಾಗಿ ಸುತ್ತುವರೆದಿವೆ, ವಿದ್ಯುತ್ ಕಡಿತಗೊಳಿಸಿವೆ ಮತ್ತು ಆಸ್ಪತ್ರೆಯ ಮೇಲೆ ಶೆಲ್ ದಾಳಿ ನಡೆಸಿವೆ. ಫಿರಂಗಿಗಳೊಂದಿಗೆ ಎರಡನೇ ಮತ್ತು ಮೂರನೇ ಮಹಡಿಗಳನ್ನು ಗುರಿಯಾಗಿಸಿಕೊಂಡಿವೆ” ಎಂದು ಆಸ್ಪತ್ರೆಯ ನಿರ್ದೇಶಕ ಮರ್ವಾನ್ ಸುಲ್ತಾನ್ ಹೇಳಿದ್ದಾರೆ.
ಇಸ್ರೇಲ್ ಸೇನೆ ಆಸ್ಪತ್ರೆಯ ಮೇಲಿನ ಮಹಡಿಗಳನ್ನು ಗುರಿಯಾಗಿಸಿಕೊಂಡಿದೆ. ಅಲ್ಲಿ ವೈದ್ಯಕೀಯ ಸಿಬ್ಬಂದಿಯ ಜೊತೆಗೆ 40ಕ್ಕೂ ಹೆಚ್ಚು ರೋಗಿಗಳು ಮತ್ತು ಗಾಯಾಳುಗಳು ಇದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಕ್ಟೋಬರ್ 6 ರಿಂದ ಜಬಾಲಿಯಾ ಸೇರಿದಂತೆ ಉತ್ತರ ಗಾಝಾದಲ್ಲಿ ಇಸ್ರೇಲ್ ಹೊಸ ಆಕ್ರಮಣ ಪ್ರಾರಂಭಿಸಿದೆ. ಅಲ್ಲಿ ಪುನಃ ಗುಂಪುಗೂಡುತ್ತಿರುವ ಹಮಾಸ್ ಹೋರಾಟಗಾರರನ್ನು ಗುರಿಯಾಗಿಸಿಕೊಂಡಿದೆ. ಪರಿಣಾಮ, ಈಗಾಗಲೇ ನೂರಾರು ಜನರು ಮೃತಪಟ್ಟಿದ್ದಾರೆ. ಕಳೆದ ಒಂದು ವರ್ಷದ ಆಕ್ರಮಣದಿಂದ ತತ್ತರಿಸಿರುವ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉತ್ತರ ಗಾಝಾದಲ್ಲಿ ಇಸ್ರೇಲ್ ಹೊಸದಾಗಿ ಆಕ್ರಮಣ ನಡೆಸುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಏಜೆನ್ಸಿ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ : ನ್ಯಾಯಾಲಯಕ್ಕೆ ಹಾಜರುಪಡಿಸದ ಪೊಲೀಸರು | ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಎಲ್ಗರ್ ಪರಿಷತ್ ಪ್ರಕರಣದ ಬಂಧಿತರು


